ಬೆಂಗಳೂರು; ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ಸರ್ಕಾರಿ ಖರಾಬು, ಗೋಮಾಳ ಜಮೀನುಗಳನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಿ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಹೊರಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಪದ್ಮಶ್ರೀ ಮತ್ತು ನಾಡೋಜ ಪುರಸ್ಕೃತ ಪ್ರೊ ಕೆ ಎಸ್ ನಿಸಾರ್ ಅಹ್ಮದ್ ಅವರ ಸ್ಮರಣಾರ್ಥ ಸ್ಥಾಪಿತವಾಗಿರುವ ನಿಸ್ಸಾರ್ ಇನ್ಸಿಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್‌ಗೆ ಯಾವುದೇ ರಿಯಾಯಿತಿ ನೀಡದೆಯೇ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಿ 38.59 ಲಕ್ಷ ರುಗ.ಳನ್ನು ಜಮೆ ಮಾಡಿಕೊಂಡಿದೆ.
ಈ ಒಟ್ಟು ಮೊತ್ತದಲ್ಲಿ ಶೇ.75ರಷ್ಟನ್ನು ಹಿಂದಿರುಗಿಸಬೇಕು ಎಂದು ಟ್ರಸ್ಟ್ ಸಲ್ಲಿಸಿದ್ದ ಮನವಿಯನ್ನು ಬದಿಗೆ ಸರಿಸಿರುವ ಸರ್ಕಾರವು ಶೇ.75ರಷ್ಟು ಮೊತ್ತವನ್ನು ಹಿಂದಿರುಗಿಸಿದರೆ ನಷ್ಟವಾಗಲಿದೆ ಎಂಬ ಕಾರಣವನ್ನು ಮುಂದಿರಿಸಿ ಹಿಂದಿರುಗಿಸಲು ನಿರಾಕರಿಸಿದೆ.
ನಿಸಾರ್ ಇನ್ಸಿಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ (ರಿ)ಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಮೋಟ್ಲೂರು ಗ್ರಾಮದ ಸರ್ವೆ ನಂಬರ್ 18ರಲ್ಲಿ ಮಂಜೂರು ಮಾಡಿರುವ 2-20 ಎಕರೆ ಜಮೀನಿನ ಮೊತ್ತವನ್ನು ಪರಿಷ್ಕರಿಸುವ ಸಂಬಂಧ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯಲ್ಲಿ ಈ ಅಂಶವಿದೆ. ಸಚಿವ ಸಂಪುಟದ ಟಿಪ್ಪಣಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಮೋಟ್ಲೂರು ಗ್ರಾಮದ ಸರ್ವೆ ನಂಬರ್ 18ರಲ್ಲಿ 2-20 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 223(1)(i)(2) ಅನ್ವಯ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ನಿಸಾರ್ ಇನ್ಸಿಟಿಟ್ಯೂಟ್ ಎಜುಕೇಷನ್ ಟ್ರಸ್ಟ್‌ಗೆ ಮಂಜೂರು ಮಾಡಿತ್ತು. ಈ ಸಂಬಂಧ 2021ರ ಜೂನ್ 22ರಂದು ಅಧಿಕೃತ ಜ್ಞಾಪನ ಹೊರಡಿಸಿತ್ತು.
ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ಇದೇ ಸರ್ಕಾರವು ಪ್ರಚಲಿತ ಮಾರುಕಟ್ಟೆ ಮೌಲ್ಯದ ಶೇ. 25ರಷ್ಟು ದರ ನಿಗದಿಪಡಿಸಿ ಮಂಜೂರು ಮಾಡಿತ್ತು. ಆದರೆ ನಿಸಾರ್ ಇನ್ಸಿಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್‌ಗೆ ಜಮೀನು ಮಂಜೂರಾತಿ ಸಂಬಂಧ ಯಾವುದೇ ರಿಯಾಯಿತಿ ದರ ನೀಡಿರಲಿಲ್ಲ. ಹೀಗಾಗಿ ಟ್ರಸ್ಟ್ ಪ್ರಚಲಿತ ಮಾರುಕಟ್ಟೆ ಮೌಲ್ಯವಾದ 38,59,000 ರು.ಗಳನ್ನು ಸರ್ಕಾರದ ಖಾತೆಗೆ ಜಮೆ ಮಾಡಿತ್ತು.
ಆ ನಂತರ ಸಂಸ್ಥೆಯವರು ಶೈಕ್ಷಣಿಕ ಬೆಳವಣಿಗಾಗಿ ಪಾವತಿಸಿರುವ ಮೊತ್ತದಲ್ಲಿ ಶೇ.25ರಷ್ಟನ್ನು ಮಾತ್ರ ಸರ್ಕಾರಕ್ಕೆ ಉಳಿಸಿಕೊಂಡು ಉಳಿದ ಶೇ.75ರಷ್ಟು ಮೊತ್ತವನ್ನು ಸಂಸ್ಥೆಗೆ ಹಿಂದಿರುಗಿಸಬೇಕು ಎಂದು ಕೋರಿದ್ದರು. ಆದರೆ ಈ ಮನವಿಯನ್ನು ಪುರಸ್ಕರಿಸದ ಕಂದಾಯ ಇಲಾಖೆಯು ಸಚಿವ ಅಶೋಕ್ ಅವರ ಗಮನಕ್ಕೆ ತಂದಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕಂದಾಯ ಇಲಾಖೆಯ ಸಮರ್ಥನೆ ಏನು?
ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 223(1)(i)(2) ಅನ್ವಯ ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಯಮಗಳಂತೆ ಪಾವತಿಸಿರುವ ಮೊತ್ತವನ್ನು ಹಿಂದಿರುಗಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶಗಳಿಲ್ಲ ಎಂದು ಕಂದಾಯ ಇಲಾಖೆ ನಿಲುವು ತಳೆದಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅಷ್ಟೆ ಅಲ್ಲ, 2020ರ ಜೂನ್ 5ರಂದು ಸಂಸ್ಥೆಯು ಪಾವತಿಸಿರುವ 38,59,000 ರು.ಗಳಲ್ಲಿ ಶೇ.75ರಷ್ಟನ್ನು ಸಂಸ್ಥೆಗೆ ಹಿಂದಿರುಗಿಸಿದಲ್ಲಿ ಸರ್ಕಾರಕ್ಕೆ 28,94,250 ರು. ನಷ್ಟವಾಗಲಿದೆ,’ ಎಂದು ಇಲಾಖೆಯು ಟಿಪ್ಪಣಿಯಲ್ಲಿ ವಿವರಿಸಿದೆ.
ಆರ್ಥಿಕ ಇಲಾಖೆಯು ಸಹ ಟ್ರಸ್ಟ್‌ನಿಂದ ಪಾವತಿಸಿಕೊಂಡಿರುವ ಪೂರ್ಣ ಮೊತ್ತವನ್ನು ಸರ್ಕಾರದ ಸಂಚಿತ ನಿಧಿಗೆ ಜಮೆ ಮಾಡಬೇಕು ಎಂದು 2022ರ ಮೇ 7ರಂದು ತನ್ನ ಅಭಿಪ್ರಾಯ ತಿಳಿಸಿತ್ತು. ‘ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 223(1)(i)(2) ಅನ್ವಯ ನಿಸಾರ್ ಇನ್ಸಿಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್‌ನಿಂದ ಪಾವತಿಸಿಕೊಂಡಿರುವ ಪೂರ್ಣ ಮೊತ್ತವನ್ನು ಸರ್ಕಾರದ ಸಂಚಿತ ನಿಧಿಗೆ ಜಮೆ ಮಾಡಬೇಕು,’ ಎಂದು ಕಂದಾಯ ಇಲಾಖೆಗೆ ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಬೆಂಗಳೂರು ನಗರ ಜಿಲ್ಲೆ, ಬಳ್ಳಾರಿ, ಹೊಸಪೇಟೆ, ಕಲ್ಬುರ್ಗಿ, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಸರ್ಕಾರಿ ಖರಾಬು, ಗೋಮಾಳ ಜಮೀನುಗಳನ್ನು ಸಂಘ ಪರಿವಾರದ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೋತ್ಥಾನ ಟ್ರಸ್ಟ್, ಜನಸೇವಾ ಟ್ರಸ್ಟ್, ಜನಸೇವಾ ವಿಶ್ವಸ್ಥ ಮಂಡಳಿಗೆ ಪ್ರಚಲಿತ ಮಾರುಕಟ್ಟೆ ಮತ್ತು ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದರ ನಿಗದಿಪಡಿಸಿ ಮಂಜೂರು ಮಾಡಿದೆ.
ಶೇ.25ರಷ್ಟು ದರ ನಿಗದಿಪಡಿಸಿದ್ದ ಕಾರಣ ಸರ್ಕಾರಕ್ಕೆ ಬಹುಕೋಟಿಗಳಷ್ಟು ನಷ್ಟವಾಗಿದೆ. ಆದರೂ ರಾಜ್ಯ ಬಿಜೆಪಿ ಸರ್ಕಾರವು ರಿಯಾಯಿತಿ ದರದಲ್ಲಿ ಜಮೀನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.