ಪರಿಶಿಷ್ಟ ಉಪಯೋಜನೆ;ಪಶುಸಂಗೋಪನೆ ಇಲಾಖೆಯು ಸಂವಿಧಾನಕ್ಕೆ ವಿರುದ್ಧವಾಗಿದೆಯೆಂದ ವರದಿ

ಬೆಂಗಳೂರು; ಪರಿಶಿಷ್ಟ ಜಾತಿ, ಪರಿಶಿಷ್ಟ ಉಪಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಜಾನುವಾರು, ಮನೆ ನಿರ್ಮಾಣ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಳಕೆ ಮಾಡದೆಯೇ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಅದೇ ರೀತಿ ಕೃಷಿ ವಿಶ್ವವಿದ್ಯಾಲಯಗಳು ಸೇರಿದಂತೆ ಇನ್ನಿತರೆ ಬಹುತೇಕ ವಿಶ್ವವಿದ್ಯಾಲಯಗಳು ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷರಾಗಿರುವ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಆರೋಪಿಸಿದೆ.

 

2021-22ನೇ ಸಾಲಿಗೆ ಸಂಬಂಧಿಸಿದಂತೆ ಸಮಿತಿಯು ವಿಧಾನಮಂಡಲಕ್ಕೆ 2022ರ ಸೆ.21ರಂದು ಸಲ್ಲಿಸಿರುವ ಐದನೇ ವರದಿಯಲ್ಲಿಇಲಾಖೆಯು ಹೇಗೆ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದೆ.
ಪರಿಶಿಷ್ಟರ ಕಲ್ಯಾಣಕ್ಕೆ ಸಾವಿರಾರು ಕೋಟಿ ರು ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರವು ಈಚೆಗಷ್ಟೇ ಜಾಹೀರಾತು ನೀಡುವ ಮೂಲಕ ಹೆಮ್ಮೆಯಿಂದ ಬೀಗಿದ್ದ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷರಾಗಿರುವ ಸಮಿತಿಯು ಸಲ್ಲಿಸಿರುವ ವರದಿಯು ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿದೆ.

 

‘ಇಲಾಖೆಯು ಎಸ್‌ಸಿ ಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ನಿಗದಿಯಾಗಿರುವ ಅನುದಾನದಲ್ಲಿ ರಾಸುಗಳನ್ನು ಕೊಡಿಡುವುದು ಅಥವಾ ಮನೆಗಳನ್ನು ಕಟ್ಟಿಸುವುದು ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ಬಳಕೆ ಮಾಡದಿರುವುದು, ರೈತರ ಅರ್ಥಿಕ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಬದಲಾಗಿ 5 ರು.ಗಳ ಇನ್ಸೆಂಟಿವ್‌ ನೀಡುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ನಿರ್ವಹಣೆ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ದಾರಿತಪ್ಪಿಸುವಂತಹ ಕೆಲಸವಾಗುತ್ತಿದೆ,’ ಎಂದು ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.

 

ಪರಿಶಿಷ್ಟ ಜಾತಿಯಲ್ಲಿ 2.71 ಲಕ್ಷ ಫಲಾನುಭವಿಗಳಿದ್ದಾರೆ. ಎಸ್‌ಸಿಪಿ ಮತ್ತು ಎಸ್‌ಟಿಪಿ ಯೋಜನೆಯಡಿಯಲ್ಲಿ ಇಷ್ಟೂ ಸಂಖ್ಯೆಯಲ್ಲಿರುವ ಫಲಾನುಭವಿಗಳಿಗೆ ರಾಸುಗಳನ್ನು ಹಂಚಿಕೆ ಮಾಡಬೇಕಿತ್ತು. ಇದರಿಂದ ಮಹಿಳಾ ರೈತರು ಹಾಲು ಮಾರಾಟ ಮಾಡುವುದನ್ನು ಉತ್ತೇಜಿಸಬಹುದಿತ್ತು. ಆದರೆ ಈ ಯೋಜನೆಯಡಿಯಲ್ಲಿನ ಅನುದಾನವನ್ನು ಬಳಕೆ ಮಾಡದೆಯೇ ಉಳಿಕೆಯಾಗಿರುವ 248 ಲಕ್ಷ ರು.ಗಳನ್ನು ಬಳಸಿಕೊಂಡಿಲ್ಲ. ಬದಲಿಗೆ ಈ ಹಣವನ್ನು ಆಡಳಿತ ಭವನ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ ಎಂದು ಸಮಿತಿಯು ಆಕ್ಷೇಪಿಸಿದೆ.

 

ಅದೇ ರೀತಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಮೀಸಲಾತಿ ಕ್ಷೇತ್ರಗಳಾದ ಕೋಲಾರ, ಚಾಮರಾಜನಗರ, ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಗಮನವನ್ನು ಹರಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಇನ್ನು, ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರೆ ಸಾಂಪ್ರದಾಯಿಕ ಸ್ವರೂಪದ ಬಹುತೇಕ ವಿಶ್ವವಿದ್ಯಾಲಯಗಳು ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಆಪಾದಿಸಿರುವ ಸಮಿತಿಯು ಅನುದಾನ ದುರ್ಬಳಕೆ ಮಾಡಿಕೊಂಡ ವಿಶ್ವವಿದ್ಯಾಲಯಗಳ ಅಧಿಕಾರಿ, ನೌಕರರ ವಿರುದ್ಧ ಯಾವುದೇ ಕ್ರಮವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ಅನುದಾನ ದುರುಪಯೋಗಪಡಿಸಿಕೊಂಡಿರುವ ವಿವಿಗಳ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989ರ ನಿಯಮ 4ರ ಅಡಿ ಜೈಲು ಶಿಕ್ಷೆ ದಂಡನೆ ವಿಧಿಸಬೇಕು ಮತ್ತು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಕುರಿತ ಸಂಪೂರ್ಣ ವರದಿಯನ್ನು ನಿಗದಿತ ಅವಧಿಯಲ್ಲಿ ಒದಗಿಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

 

2019-20, 2020-21, 2021-22 ನೇ ಸಾಲಿನಲ್ಲಿ ಉಪಯೋಜನೆಯಡಿಯಲ್ಲಿ ಬಿಡುಗಡೆ ಮಾಡಿದ್ದ ಒಟ್ಟು ಅನುದಾನದಲ್ಲಿ 9.35 ಕೋಟಿ ರು.ಗಳನ್ನು ವಿಶ್ವವಿದ್ಯಾಲಯಗಳು ಬಳಕೆ ಮಾಡಿಕೊಂಡಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts