ಕಿದ್ವಾಯಿ ಆಸ್ಪತ್ರೆ ಜಮೀನಿಗೆ ಶೇ.50ರ ದರ, ರಾಷ್ಟ್ರೋತ್ಥಾನಕ್ಕೆ ಶೇ.25 ರಿಯಾಯಿತಿ; ಉಚಿತ ಮಂಜೂರೇಕಿಲ್ಲ?

photo credit-vaarthabharati

ಬೆಂಗಳೂರು; ಸಂಘ ಪರಿವಾರದ ಅಂಗಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ದರದ ಶೇ.25ರಷ್ಟು ದರದಲ್ಲಿ ನಿಯಮಬಾಹಿರವಾಗಿ ಸರ್ಕಾರಿ ಖರಾಬು, ಗೋಮಾಳ ಮಂಜೂರು ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಉಚಿತವಾಗಿ ಜಮೀನು ನೀಡದೇ ಶೇ.50ರಷ್ಟು ದರ ವಿಧಿಸಿರುವುದು ಇದೀಗ ಬಹಿರಂಗವಾಗಿದೆ.

 

ಮೈಸೂರು ತಾಲೂಕಿನ ಇಲವಾಲ ಗ್ರಾಮದಲ್ಲಿ 1 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಬೇಕು ಎಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿರುವ ಬೆನ್ನಲ್ಲೇ ಇದೇ ಇಲವಾಲ ಹೋಬಳಿಯಲ್ಲಿ ಕಿದ್ವಾಯಿ ಗಂಥಿ ಸಂಸ್ಥೆಗೆ ಶೇ.50ರಷ್ಟು ದರ ವಿಧಿಸಿರುವುದು ಮುನ್ನೆಲೆಗೆ ಬಂದಿದೆ.

 

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 125ರಲ್ಲಿ 29.00 ಎಕರೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಖರಾಬಿನಲ್ಲಿರುವ 18 ಎಕರೆ ಜಮೀನನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಉಚಿತವಾಗಿ ಮಂಜೂರು ಮಾಡಲು ಇನ್ನೂ ಅನುಮತಿ ನೀಡಿಲ್ಲ. ಬದಲಿಗೆ ಮಾರುಕಟ್ಟೆ ಮೌಲ್ಯದ ಶೇ. 50ರಷ್ಟು ದರ ವಿಧಿಸಿ ಮಂಜೂರು ಮಾಡಿದೆ. ಇದನ್ನು ರದ್ದುಪಡಿಸಿ ಉಚಿತವಾಗಿ ಮಂಜೂರು ಮಾಡಿ ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಯು ಕಂದಾಯ ಇಲಾಖೆಗೆ ಹಲವು ಬಾರಿ ಪತ್ರಗಳನ್ನು ಬರೆದರೂ ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

 

ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜ್ಯೋತಿಪ್ರಕಾಶ್‌ ಅವರು 2022ರ ಸೆ.28ರಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಿದ್ವಾಯಿ ಗಂಥಿ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಒಂದು ಸರ್ಕಾರಿ ಸ್ವಾಯತ್ತ ಸಂಸ್ಥೆ. ಈ ರೀತಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಸ್ವಾಯತ್ತ ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ನಡೆಯುತ್ತಿದ್ದು, ಯಾವುದೇ ಮೌಲ್ಯ ನಿಗದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಇಲವಾಲದಲ್ಲೂ ಉಚಿತವಾಗಿ ಜಮೀನು ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಕೋರಿದೆ.

 

ಪತ್ರದಲ್ಲೇನಿದೆ?

 

ಕಿದ್ವಾಯಿ ಗಂಥಿ ಸಂಸ್ಥೆಯು ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ದೇಶದ ಹೆಮ್ಮೆಯ ಸಂಸ್ಥೆ. ಕಿದ್ವಾಯಿ ಸಂಸ್ಥೆಯು ಪ್ರತಿ ವರ್ಷ ಸುಮಾರು 4.5 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಸಂಸ್ಥೆಗೆ ಬರುವ ಹೆಚ್ಚಿನ ರೋಗಿಗಳು ಬಡತನ ರೇಖೆಗಿಂತ ಕೆಳಗಿನವರಾಗಿದ್ದಾರೆ.

 

ಮೈಸೂರು ಜಿಲ್ಲೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ 125ರಲ್ಲಿ 18 ಎಕರೆ ಜಮೀನನ್ನು ಮಾರುಕಟ್ಟೆ ಮೌಲ್ಯದ ಶೇ.50ರಷ್ಟು ವಿಧಿಸಿ ಕಿದ್ವಾಯಿ ಸಂಸ್ಥೆಗೆ ಮಂಜೂರು ಮಾಡಿರುವುದನ್ನು ರದ್ದುಪಡಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಜಮೀನನ್ನು ಸಂಶೋಧನಾ ಘಟಕ ನಿರ್ಮಾಣದ ಉದ್ದೇಶಕ್ಕಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರಂತೆ ಉಚಿತವಾಗಿ ಮಂಜೂರು ಮಾಡಬೇಕು. ಮತ್ತು ಇದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಪತ್ರದಲ್ಲಿ ಕೋರಿದ್ದಾರೆ.

 

ರಾಜ್ಯದ ವಿವಿಧೆಡೆ ಗೋಮಾಳವನ್ನು ಮಂಜೂರು ಮಾಡಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್‌ ಮೈಸೂರು ತಾಲೂಕಿನ ಇಲವಾಲ, ಚಾಮರಾಜನಗರ, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಅಂದಾಜು 20 ಎಕರೆ ವಿಸ್ತೀರ್ಣದ ಗೋಮಾಳದ ಮೇಲೆ ಕಣ್ಣು ಹಾಕಿದೆ. . ಬಹುಕೋಟಿ ರು. ಬೆಲೆಬಾಳುವ ಜಮೀನುಗಳನ್ನು ಮಾರುಕಟ್ಟೆ ಬೆಲೆಯ ಶೇ.25ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡಿಸಿಕೊಳ್ಳಲು ಸರ್ಕಾರದ ಮೇಲೆ ಸತತವಾಗಿ ಒತ್ತಡ ಹೇರುತ್ತಿದೆ ಎಂದು ತಿಳಿದು ಬಂದಿದೆ.

 

‘ರಾಷ್ಟ್ರೋತ್ಥಾನ ಪರಿಷತ್‌ನ ವಿವಿಧ ಪ್ರಸ್ತಾವನೆಗಳು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಬಾಕಿ ಇದ್ದು ಸದರಿ ಪ್ರಸ್ತಾವನೆಗಳನ್ನು ಕೂಡಲೇ ಜಿಲ್ಲಾಧಿಕಾರಿಯವರಿಂದ ಪಡೆದು ತುರ್ತಾಗಿ ಪಡೆದು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಮುಖ್ಯಮಂತ್ರಿಯವರು ನಿರ್ದೇಶಿಸಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಿದ್ದರು.

 

ಚಾಮರಾಜನಗರ ಯಡಪರೆ ಗ್ರಾಮ, ಚಿಕ್ಕಮಗಳೂರಿನ ಹಿರೇಮಗಳೂರು ಗ್ರಾಮದಲ್ಲಿ 8 ಎಕರೆ, ಮೈಸೂರು ತಾಲೂಕಿನ ಇಲವಾಲ ಗ್ರಾಮದಲ್ಲಿ 1 ಎಕರೆ, ಹೊಸಪೇಟೆಯಲ್ಲಿ 6 ಎಕರೆ, ಮಂಡ್ಯದ ಬಿ ಹೊಸೂರು ಗ್ರಾಮದಲ್ಲಿ ಒಟ್ಟು 5-20 ಎಕರೆ, ಯಾದಗಿರಿ ಜಿಲ್ಲೆಯ ಮರನಾಳ ಗ್ರಾಮದಲ್ಲಿ 5 ಎಕರೆ, ಆನೇಕಲ್‌ ತಾಲೂಕಿನಲ್ಲಿ 1-33 ಎಕರೆ ಸೇರಿದಂತೆ ಒಟ್ಟು 21 ಎಕರೆ ಜಮೀನು ಮಂಜೂರಾತಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ ಸರ್ಕಾರದ ಮೇಲೆ ಒತ್ತಡ ಹೇರಿದೆ.

 

ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿಯಲ್ಲಿ 9 ಎಕರೆ ವಿಸ್ತೀರ್ಣದ ಗೋಮಾಳವನ್ನು ಮಂಜೂರು ಮಾಡಿ ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಮಾರುಕಟ್ಟೆಯಲ್ಲಿ ಅಂದಾಜು 9 ಕೋಟಿಗೂ ಅಧಿಕ ಬೆಲೆಬಾಳುತ್ತಿದ್ದರೂ ರಾಷ್ಟ್ರೋತ್ಥಾನ ಪರಿಷತ್‌ಗಾಗಿ ಮಾರುಕಟ್ಟೆ ಬೆಲೆಯಲ್ಲಿನ ಶೇ.25ರಷ್ಟು ರಿಯಾಯಿತಿ ದರದಲ್ಲಿ ಜಮೀನು ಮಂಜೂರು ಮಾಡಿರುವ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಸಂಘ ನಿಷ್ಠೆ ಮೆರೆದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts