ಸಾವಿರ ಕೋಟಿ ನಷ್ಟದಲ್ಲಿದ್ದರೂ ಹೊಸ ಬಸ್‌ಗಳ ಖರೀದಿಗೆ ಒಲವು; ಕಲ್ಯಾಣ ಕರ್ನಾಟಕ ಸಾರಿಗೆ ಎಂಡಿ ಪತ್ರ ಬಹಿರಂಗ

ಬೆಂಗಳೂರು; ಕಳೆದ 2 ಆರ್ಥಿಕ ವರ್ಷಗಳಿಂದ ಒಂದು ಸಾವಿರ ಮುನ್ನೂರ ಹದಿನೆಂಟು ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿರುವ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಹೊಸ ಬಸ್‌ಗಳ ಖರೀದಿಗೆ ಮುಂದಾಗಿದೆ. ಮೋಟಾರು ವಾಹನ ತೆರಿಗೆ ಬಾಬ್ತಿನಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದ್ದ 472.53 ಕೋಟಿ ರು. ಮೊತ್ತ ಬಾಕಿ ಉಳಿಸಿಕೊಂಡಿದ್ದರೂ ಹೊಸ ಬಸ್‌ಗಳ ಖರೀದಿಗಾಗಿ ಒಲವು ವ್ಯಕ್ತಪಡಿಸಿರುವ ನಿಗಮವು ಇದಕ್ಕಾಗಿ ಬ್ಯಾಂಕ್‌ ಸಾಲಕ್ಕೆ ಮೊರೆಯಿಟ್ಟಿದೆ.

 

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಸಂಬಂಧ 2022ರ ಮೇ 29ರಂದೇ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಮೋಟಾರು ವಾಹನ ತೆರಿಗೆ ಬಾಕಿ ಮೊತ್ತವನ್ನು ಸರ್ಕಾರದ ಬಂಡವಾಳವನ್ನಾಗಿ ಪರಿವರ್ತಿಸಲು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2022-23ನೇ ಸಾಲಿಗೆ ಹೊಸ ಬಸ್‌ಗಳ ಖರೀದಿ ವಿಚಾರವನ್ನು ಪ್ರಸ್ತಾವಿಸಿದೆ.

 

‘ಪ್ರಸ್ತುತ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಹಾಗೂ ಸಂಸ್ಥೆಯ 2021ರ ಮಾರ್ಚ್‌ 31ರ ಅಂತ್ಯಕ್ಕೆ 952.59 ಕೋಟಿ ರು. ಸಂಚಿತ ನಷ್ಟ , 2021-22ನೇ ಸಾಲಿನಲ್ಲಿಯೂ ಸಹ 365.92 ಕೋಟಿ ಸೇರಿ ಒಟ್ಟಾರೆ 1,318.51 ಕೋಟಿ ರು. ನಷ್ಟವಾಗಿರುವ ಅಂದಾಜಿದೆ. ಇದರಿಂದ ನಿಗಮದ ಅರ್ಥಿಕ ಪರಿಸ್ಥಿತಿ ಗಂಭೀರವಾಗಿರುತ್ತದೆ. ಈ ರೀತಿಯಾಗಿ ನಷ್ಟ ಅನುಭವಿಸುತ್ತಿರುವುದರಿಂದ ನಿಗಮದ ನೆಟ್‌ವರ್ತ್ ಮತ್ತು ಕ್ರೆಡಿಟ್‌ ರೇಟಿಂಗ್‌ನಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿ ಋಣಾತ್ಮಕವಾಗಿದೆ. ಇದರಿಂದ ವಾಹನ ಖರೀದಿಗಾಗಿ ನಿಗಮಕ್ಕೆ ಬ್ಯಾಂಕ್‌ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ನಿಗಮದ ಪ್ರಸ್ತಾಪಿತ ಹಣಕಾಸಿನ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಸುಧಾರಿಸಿಕೊಳ್ಳಲು ಹಾಗೂ 2022-22ನೇ ವರ್ಷದಲ್ಲಿ ಖರೀದಿಸಬೇಕಾದ ವಾಹನಗಳಿಗಾಗಿ ಬ್ಯಾಂಕ್‌ ಸಾಲ ಪಡೆಯುವುದು ತೀರಾ ಅನಿರ್ವಾಯವಾಗಿದೆ. ಕಳೆದ 3 ವರ್ಷಗಳಿಂದ ವಾಹನಗಳನ್ನು ಖರೀದಿ ಮಾಡಿಲ್ಲ,’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

 

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಇಲ್ಲಿಯವರೆಗೂ ಬ್ರೇಕ್-ಈವನ್‌ ಸಾಧಿಸಿಲ್ಲ. ಲೆಕ್ಕಪತ್ರಗಳಲ್ಲಿ ಸರ್ಕಾರಕ್ಕೆ ಪಾವತಿಸಬೇಕು ಎಂದು ತೋರಿಸಿರುವ ಮೋಟಾರು ವಾಹನ ತೆರಿಗೆ ಮೊತ್ತ 472.53 ಕೋಟಿ ರು. ಮೊತ್ತವನ್ನು ಸಂಸ್ಥೆಯಲ್ಲಿ ಷೇರು ಬಂಡವಾಳವನ್ನಾಗಿ ಪುಸ್ತಕ ಹೊಂದಾಣಿಕೆ (ಬುಕ್‌ ಅಡ್ಜಸ್ಟಮೆಂಟ್‌) ಮೂಲಕ ಪರಿವರ್ತಿಸಬೇಕು. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಪರಿಣಾಮ ಆಗುವುದಿಲ್ಲ. ಬದಲಾಗಿ ಸರ್ಕಾರದ ಹೂಡಿಕೆ ಸಂಸ್ಥೆಯಲ್ಲಿ ಹೆಚ್ಚಾಗಲಿದೆ ಎಂದೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ.

 

‘ನಿಗಮದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ ಮೋಟಾರು ವಾಹನ ತೆರಿಗೆ ಪಾವತಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ 2019-20ನೇ ಅಂತ್ಯಕ್ಕೆ ಸರ್ಕಾರಕ್ಕೆ ಪಾವತಿಸಬೇಕಾದ ಮೋಟಾರು ತೆರಿಗೆ ಬಾಕಿ 472.53 ಕೋಟಿ ರು ಮೊತ್ತವನ್ನು ಹೊಂದಾಣಿಕೆ ಮಾಡಿ ಸರ್ಕಾರದ ಬಂಡವಾಳವನ್ನಾಗಿ ಪರಿವರ್ತಿಸಬೇಕು,’ ಎಂದು ಪ್ರಸ್ತಾವನೆಯಲ್ಲಿ ಕೋರಿದ್ದಾರೆ.

 

ನಿಗಮವು ಇಲ್ಲಿಯವರೆಗೂ ಲಾಭ-ನಷ್ಟ ರಹಿತವಾಗಿ ಮುನ್ನೆಡೆದಿದೆ. 2017-18ನೇ ಸಾಲಿನವರೆಗೆ ಖರ್ಚು ತೋರಿಸಿ ಹೊಣೆಗಾರಿಕೆ ಅಳವಡಿಸಿಕೊಂಡಿದೆ. 2018-19 ಮತ್ತು 2019-20ನೇ ಸಾಲಿನಲ್ಲಿಯೂ ನಿಗಮವು ಮೋಟಾರು ವಾಹನ ತೆರಿಗೆ ಎಂದು ಕ್ರಮವಾಗಿ 77.36 ಕೋಟಿ ಹಾಗೂ 79.04 ಕೋಟಿ ಹೊಣೆಗಾರಿಕೆಯನ್ನು ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಂಡಿದೆ.

 

ಈ ಅವಧಿಯಲ್ಲಿ ಸರ್ಕಾರವು ಸಂಸ್ಥೆಗೆ ಪಾವತಿಸಬೇಕಾಗಿದ್ದ ವಿವಿಧ ರಿಯಾಯಿತಿ ಪಾಸುಗಳ ವೆಚ್ಚ ಮರುಭರಿಕೆ ಮೊತ್ತದಲ್ಲಿ ಮೋಟಾರು ವಾಹನ ತೆರಿಗೆ ಮೊತ್ತ ಕ್ರಮವಾಗಿ 76.88 ಕೋಟಿ ಮತ್ತು 82.66 ಕೋಟಿಯಂತೆ ಕಡಿತ ಮಾಡಿಕೊಂಡಿದೆ. 2018-19ನೇ ಸಾಲಿನಲ್ಲಿ 0.48ಕೋಟಿ ಕಡಿಮೆ ಮೊತ್ತ ಮತ್ತು 2019-20ನೇ ಸಾಲಿನಲ್ಲಿ 3.62 ಕೋಟಿ ಹೆಚ್ಚಿನ ಮೊತ್ತ ಮೋಟಾರು ವಾಹನ ತೆರಿಗೆ ಮೊತ್ತ ಎಂದು ಕಡಿತ ಮಾಡಿರುವುದು ಪ್ರಸ್ತಾವನೆಯಿಂದ ಗೊತ್ತಾಗಿದೆ.

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಳೆದ 5 ವರ್ಷಗಳಲ್ಲಿ (2018-19ರಿಂದ 2021-22) 1,324.90 ಕೋಟಿ ರು. ಸಾಲ ಪಡೆದಿದೆ. ಇದರಲ್ಲಿ ಬಸ್‌ಗಳ ಖರೀದಿಗಾಗಿ ಕೆಯುಐಡಿಎಫ್‌ಸಿಯಿಂದ 146.35 ಕೋಟಿ ರು. ಸಾಲ ಎತ್ತಿದೆ. ಅಲ್ಲದೆ ಬಸ್‌ಗಳ ಖರೀದಿಗಾಗಿ ಸರ್ಕಾರದ ಸಾಲ ಮೇಲುಸ್ತುವಾರಿ ಯೋಜನೆಯಡಿ ಕೆಯುಐಡಿಎಫ್‌ಸಿಯಿಂದ ಪಡೆದಿದ್ದು ಈ ಸಾಲದ ಅಸಲು ಮತ್ತು ಬಡ್ಡಿ ಪಾವತಿಗಾಗಿ ಸರ್ಕಾರದಿಂದ 225.50 ಕೋಟಿ ರು. ಅನುದಾನ ಪಡೆದಿದೆ. ಇದಲ್ಲದೇ ಬಸ್‌ಗಳ ಖರೀದಿಗಾಗಿಯೇ 2018-19ರಲ್ಲಿ ಕೆನರಾ ಬ್ಯಾಂಕ್‌ನಿಂದ 19.95 ಕೋಟಿ ರು.ಗಳನ್ನು ಸಾಲ ಪಡೆದಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಅಧಿವೇಶನದಲ್ಲಿ ಮಾಹಿತಿ ಒದಗಿಸಿದ್ದರು.

SUPPORT THE FILE

Latest News

Related Posts