ಟಾಟಾ ಐರನ್‌ ಸ್ಟೀಲ್‌ ಕಂಪನಿ ಸೇರಿ 15 ಕೈಗಾರಿಕೆಗಳಿಗೆ ಬೀಗ; 2,086 ಮಂದಿಗೆ ಉದ್ಯೋಗ ನಷ್ಟ

ಬೆಂಗಳೂರು; ಕಚ್ಚಾ ಮಾಲಿನ ಕೊರತೆ, ಹಣಕಾಸಿನ ತೊಂದರೆ, ಕಬ್ಬಿನ ಬಾಕಿ ಬಿಲ್‌ ಪಾವತಿ ಮಾಡದಿರುವುದು, ಯೋಗ್ಯ ದರದಲ್ಲಿ ಕಚ್ಚಾ ವಸ್ತು ದೊರೆಯದಿರುವುದು ಸೇರಿದಂತೆ ಇನ್ನಿತರೆ ಕಾರಣಗಳನ್ನು ಮುಂದಿರಿಸಿಕೊಂಡು ಟಾಟಾ ಐರನ್‌ ಸ್ಟೀಲ್‌ ಕಂಪನಿ ಸೇರಿದಂತೆ ಕಳೆದ 3 ವರ್ಷಗಳಲ್ಲಿ ಒಟ್ಟು 15 ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳು ರಾಜ್ಯದಲ್ಲಿ ಮುಚ್ಚಿ ಹೋಗಿವೆ. ಇದರಿಂದಾಗಿ ಒಟ್ಟು 2,086 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

 

ವಿಧಾನಪರಿಷತ್‌ನ ಟಿ ಎ ಶರವಣ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ (197)ಗೆ ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರು ಈ ಸಂಬಂಧ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

ಆಡಳಿತ ಮಂಡಳಿಯಲ್ಲಿ ಬದಲಾವಣೆ, ಘಟಕದ ವಿಸ್ತರಣೆ, ಹಾನಿ ಸಂಭವಿಸಿರುವುದು, ರೈತರ ಕಬ್ಬಿನ ಬಾಕಿ ಬಿಲ್‌ ಪಾವತಿ ಮಾಡದೇ ಇರುವುದು, ಹಣಕಾಸಿನ ತೊಂದರೆ, ಇತರೆ ತಾಂತ್ರಿಕ/ಹಣಕಾಸು, ಕಚ್ಛಾ ಮಾಲಿನ ಕೊರತೆ, ಹಣಕಾಸಿನ ಮುಗ್ಗಟ್ಟು, ಕಚ್ಚಾ ವಸ್ತು ಯೋಗ್ಯ ದರದಲ್ಲಿ ಮತ್ತು ಅವಶ್ಯಕ ಪ್ರಮಾಣದಲ್ಲಿ ದೊರೆಯದಿರುವುದು, ಎಕಾನಾಮಿಕ್‌ ವಯಬಲಿಟಿ ಇಲ್ಲದೇ ಕಾರ್ಮಿಕರಿಗೆ ಸಂಬಳ ಕೊಡದಲು ಸಾಧ್ಯವಾಗದೇ ಕಾರ್ಮಿಕರು ರಾಜೀನಾಮೆ ನೀಡಿರುವುದು, ಆರ್ಥಿಕನಷ್ಟ, ನಿರ್ವಹಣೆ ಮತ್ತು ಆಂತರಿಕ ಸಮಸ್ಯೆಗಳು ಕೈಗಾರಿಕೆಗಳು ಮುಚ್ಚಲು ಕಾರಣ ಎಂದು ವಿವರಣೆ ನೀಡಿದ್ದಾರೆ.

 

 

ಮುಚ್ಚಿ ಹೋಗಿರುವ ಕೈಗಾರಿಕೆಗಳ ಪಟ್ಟಿ

 

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಜಾ ಸೀಮೆಂಟ್ಸ್‌ ಪ್ರೈ ಲಿ., ರೈತರ ಸಹಕಾರಿ ಸಕ್ಕರೆ ಕಾಖಾfನೆ, ಸಾವರಿನ್‌ ಇಂಡಸ್ಟ್ರೀಸ್‌ ಕಂಪನಿಯು ಆಡಳಿತ ಮಂಡಳಿಯಲ್ಲಿ ಬದಲಾವಣೆ ಮತ್ತು ಘಟಕದ ವಿಸ್ತರಣೆ ಕೈಗೊಂಡಿರುವುದರಿಂದ ಮುಚ್ಚಿ ಹೋಗಿವೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸ್ಯಾನ್‌ ಸಿಲ್ಕ್‌ ಲಿ, ಟಾಟಾ ಐರನ್‌ ಸ್ಟೀಲ್‌ ಕಂಪನಿ, ತೇಜಕಮಲ್‌ ಫಾರ್ಮಾಸ್ಯುಟಿಕಲ್ಸ್‌, ವೆಲ್‌ ಫ್ಯಾಬ್‌ ಟೆಕ್ನೋಲಜಿ ಪ್ರೈ ಲಿ., ಕ್ಯಾಡ್ಜೀಸ್‌ ಇಂಡಿಯಾ ಪ್ರೈ ಲಿ., ಹಣಕಾಸಿನ ತೊಂದರೆಯಿಂದಾಗಿ ಬಾಗಿಲು ಮುಚ್ಚಿವೆ. ಈ ಪೈಕಿ ತೇಜಕಮಲ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು ಮುಚ್ಚಿರುವುದಕ್ಕೆ ನಿಖರವಾದ ಮಾಹಿತಿಯೇ ಲಭ್ಯವಿಲ್ಲ ಎಂದು ಸರ್ಕಾರ ಉತ್ತರಿಸಿದೆ.

 

ಕಚ್ಚಾ ಮಾಲಿನ ಕೊರತೆಯನ್ನು ಮುಂದಿರಿಸಿಕೊಂಡು ಚಿತ್ರದುರ್ಗದ ಎಂಟೈರ್‌ ಸೆರಾಮಿಕ್ಸ್‌, ಹಣಕಾಸಿನ ಮುಗ್ಗಟ್ಟು ಮತ್ತು ಎನ್‌ಸಿಎಲ್‌ಟಿಯಲ್ಲಿ ಪ್ರಕರಣವನ್ನು ಮುಂದಿರಿಸಿಕೊಂಡು ದಕ್ಷಿಣ ಕನ್ನಡದ ಜೆಬಿಎಫ್‌ ಪೆಟ್ರೋಕೆಮಿಕಲ್ಸ್‌ ಲಿ., ಕಚ್ಚಾ ವಸ್ತು ಯೋಗ್ಯ ದರದಲ್ಲಿ ದೊರೆತಿಲ್ಲ ಎಂಬ ಕಾರಣಕ್ಕಾಗಿ ಗದಗ್‌ನ ದಿ ಫಾರ್ಮರ್ಸ್‌ ಕೋ ಆಫ್‌ ಸ್ಪಿನ್ನಿಂಗ್‌ ಮಿ ಲಿ., ಎಕಾನಾಮಿಕ್‌ ವಯಬಲಿಟಿ ಇಲ್ಲದೇ ಕಾರ್ಮಿಕರಿಗೆ ಸಂಬಳ ಕೊಡಲು ಸಾಧ್ಯವಾಗದೇ ದಿ ಗದಗ್‌ ಕೋ ಆಫ್‌ ಟೆಕ್ಸ್‌ಟೈಲ್ಸ್‌ ಮಿಲ್‌ ಹುಲಿಕೋಟಿ, ತಾಂತ್ರಿಕ ಕಾರಣಗಳಿಂದಾಗಿ ಕೋಲಾರದ ಗ್ಸಾಕೋಸ್ಮಿತಿಕ್ಲೈನ್‌ ಫಾರ್ಮಾಸ್ಯುಟಿಕಲ್ಸ್‌,, ನಿರ್ವಹಣೆ ಮತ್ತು ಆಂತರಿಕ ಸಮಸ್ಯೆಗಳ ಕಾರಣಗಳಿಂದಾಗಿ ರಾಮನಗರದ ಟೆಕೋಯ್‌ ರಬ್ಬರ್‌ ಆಟೋಪಾರ್ಟ್ಸ್‌ ಇಂಡಿಯಾ ಪ್ರೈ ಲಿ., ಮುಚ್ಚಿ ಹೋಗಿವೆ ಎಂದು ಸಚಿವರು ಉತ್ತರದಲ್ಲಿ ವಿವರಣೆ ನೀಡಿದ್ದಾರೆ.

 

ಅದೇ ರೀತಿ ರಾಜ್ಯದಲ್ಲಿ 695 ಬೃಹತ್‌ ಕೈಗಾರಿಕೆಗಳಿಂದ 5,05,883 ಮತ್ತು 1274 ಮಧ್ಯಮ ಕೈಗಾರಿಕೆಗಳಿಂದ 3,01,984 ಸೇರಿ ಒಟ್ಟು 8,07,867 ಜನರಿಗೆ ಉದ್ಯೋಗ ದೊರಕಿಸಿದೆ.

Your generous support will help us remain independent and work without fear.

Latest News

Related Posts