ಠೇವಣಿದಾರರಿಗೆ ವಂಚಿಸುವ ಆರೋಪಿಗಳ ಕೃತ್ಯ ಜಾಮೀನುರಹಿತ ಅಪರಾಧ; ತಿದ್ದುಪಡಿ ವಿಧೇಯಕ

ಬೆಂಗಳೂರು; ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರಿಗೆ ವಂಚನೆ ಮಾಡುವ ಬ್ಯಾಂಕ್‌, ಸಂಸ್ಥೆಗಳ ಮುಖ್ಯಸ್ಥರು, ನಿರ್ದೇಶಕರ ವಿರುದ್ಧದ ಪ್ರಕರಣಗಳಲ್ಲಿನ ಅಪರಾಧವು ಇನ್ನು ಮುಂದೆ ಜಾಮೀನು ರಹಿತ ಎಂದು ಪರಿಗಣಿತವಾಗಲಿದೆ.

 

ಹಾಗೆಯೇ ಈ ಅಪರಾಧವನ್ನು ಹೊರತುಪಡಿಸಿ ದಂಡ ಪ್ರಕ್ರಿಯೆ ಸಂಹಿತೆ 1973ರ ಅಡಿಯಲ್ಲಿ ಯಾವ ವಿಚಾರಣೆಗಾಗಿ ದೋಷಾರೋಪಿಸಲಾಗಿದೆಯೋ ಆ ಅಪರಾಧದ ಅಧಿ ವಿಚಾರಣೆಯನ್ನು ನಡೆಸಲು ವಿಶೇಷ ನ್ಯಾಯಾಲಯ ಅಥವಾ ಯಾವುದೇ ಇತರೆ ವಿಶೇಷ ನ್ಯಾಯಲಯಕ್ಕೆ ಅಧ್ಯಾದೇಶದ ಮೂಲಕ ಅಧಿಕಾರ ನೀಡಲಿದೆ.

 

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕುರಿತಂತೆ 2020 ಮತ್ತು 2021ರಲ್ಲಿ ಹಿಂದೆ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದ ಸರ್ಕಾರ ಇದೀಗ ವಿಧೇಯಕದ 9 ಮತ್ತು 10ನೇ ಪ್ರಕರಣಕ್ಕೆ ತಿದ್ದುಪಡಿ ತರಲಿದೆ. ಅಪರಾಧಗಳ ಸಂಜ್ಞೆಯತೆ ಮತ್ತು ಪ್ರಕರಣಗಳನ್ನು ವಿಲೀನಗೊಳಿಸುವುದಲ್ಲದೆ ಈ ಅಧಿನಿಯಮದಡಿಯಲ್ಲಿ ಅಪರಾಧವು ಸಂಜ್ಞೆಯತೆ ಮತ್ತು ಜಾಮೀನುರಹಿತವಾಗಿರತಕ್ಕದ್ದು ಎಂಬ ಅಂಶವನ್ನು ಸೇರ್ಪಡೆಗೊಳಿಸಿ ಮತ್ತೊಂದು ತಿದ್ದುಪಡಿ ತರಲು ಮುಂದಾಗಿದೆ. ವಿಧಾನಸಭೆಯಲ್ಲಿ ಇಂದು ನಡೆಯಲಿರುವ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಧೇಯಕವನ್ನು ಮಂಡಿಸಲಿದ್ದಾರೆ. ಈ ವಿಧೇಯಕದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004ನ್ನು ಮತ್ತಷ್ಟು ತಿದ್ದುಪಡಿ ತರಲು ಹೊರಟಿರುವ ಸರ್ಕಾರವು ತಿದ್ದುಪಡಿ ವಿಧೇಯಕ 2022ರ ಕರಡು ಸಿದ್ಧತೆಯೂ ಅಂತಿಮ ಹಂತದಲ್ಲಿದೆ. ಅಲ್ಲದೆ ಈ ವಿಷಯವು ತುರ್ತು ಸ್ವರೂಪದಲ್ಲಿರುವ ಕಾರಣ ಮತ್ತು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದ ಕಾರಣ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಅಧ್ಯಾದೇಶ, 2022ನ್ನು ಹೊರಡಿಸಲಿದೆ.

 

2020 ಮತ್ತು 2021ರ ವಿಧೇಯಕದ 9ನೇ ಪ್ರಕರಣದಲ್ಲಿ ಅಪರಾಧಗಳ ಸಂಜ್ಞೆ ಮತ್ತು ಪ್ರಕರಣಗಳನ್ನು ವಿಲೀನಗೊಳಿಸುವ ಅಧಿಕಾರವನ್ನು ನೀಡಿರಲಿಲ್ಲ. ಇದೀಗ 2022ರಲ್ಲಿ ಈ ಅಂಶವನ್ನು ಸೇರ್ಪಡೆಗೊಳಿಸಿದೆಯಲ್ಲದೆ ಇಂತಹ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗದಂತೆ ನೋಡಿಕೊಳ್ಳಲು ಇದನ್ನು ಜಾಮೀನುರಹಿತ ಅಪರಾಧ ಎಂದು ತಿದ್ದುಪಡಿ ಮಾಡಲಿದೆ.

 

‘ವಂಚನೆ ಉದ್ಧೇಶದ ಬೇಪಾವತಿಗೆ ಸಂಬಂಧಿಸಿದಂತೆ ಅದೇ ಆರೋಪಿತ ವ್ಯಕ್ತಿ ಅಥವಾ ಹಣಕಾಸು ಸಂಸ್ಥೆ ವಿರುದ್ಧ ಜಿಲ್ಲೆಯ ಅಥವಾ ಕಮಿಷನರೇಟ್‌ನ ಒಂದು ಪೊಲೀಸ್‌ ಠಾಣೆಯಲ್ಲಿ ಅಥವಾ ಹಲವು ಪೊಲೀಸ್‌ ಠಾಣೆಗಳಲ್ಲಿ ಅಥವಾ ರಾಜ್ಯದ ಹಲವು ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಥಮ ವರ್ತಮಾನ ವರದಿಗಳು ದಾಖಲಾಗಿದ್ದಲ್ಲಿ ಮತ್ತು ಆ ನಂತರದಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿಗಳನ್ನು ಮೊದಲಿನ ಪ್ರಕರಣದೊಂದಿಗೆ ವಿಲೀನಗೊಳಿಸಲು ಆದೇಶಿಸಬಹುದು, ಸಾಮಾನ್ಯ ತನಿಖೆಯನ್ನು ಕೈಗೊಳ್ಳಲು ಆದೇಶಿಸಬಹುದು. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಬಹುದು ಎಂದು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ ದಂಡ ಪ್ರಕ್ರಿಯೆ ಸಂಹಿತೆ 1973ರ 173ನೇ ಪ್ರಕರಣದ ಅಡಿಯಲ್ಲಿ ಒಂದೇ ಅಂತಿಮ ವರದಿಯನ್ನು ಮೊದಲು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿದ ಅಧಿಕಾರ ವ್ಯಾಪ್ತಿಯೊಳಗಿನ ವಿಶೇಷ ನ್ಯಾಯಾಲಯದ ಮುಂದೆ ದಾಖಲಿಸಬಹುದು. ಹಾಗೂ ಅದನ್ನು ವಿಶೇಷ ನ್ಯಾಯಾಲಯವು ಅಥವಾ ಅಂತ ಅಪರಾಧದ ಅಧಿವಿಚಾರಣೆಗೆ ಹೆಸರಿಸಲಾದ ಯಾವುದೇ ಇತರೆ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಬಹುದು. ಹಾಗೆಯೇ ಈ ಅಧಿನಿಯಮದಡಿಯಲ್ಲಿನ ಅಪರಾಧವನ್ನು ಸಂಜ್ಞೆಯ ಮತ್ತು ಜಾಮೀನುರಹಿತವೆಂದು ಪರಿಗಣಿಸಲಿದೆ ಎಂದು ತಿದ್ದುಪಡಿ ವಿಧೇಯಕದಲ್ಲಿ ಸೇರ್ಪಡೆಗೊಳಿಸಿರುವುದು ಗೊತ್ತಾಗಿದೆ.

 

10ನೇ ಪ್ರಕರಣದಲ್ಲಿಯೂ ತಿದ್ದುಪಡಿ ತರಲಿದ್ದು 4ನೇ ಅಂಶವನ್ನು ಸೇರ್ಪಡೆಗೊಳಿಸಲಿದೆ. ‘ಅಪರಾಧದ ಅಧಿವಿಚಾರಣೆಯನ್ನು ನಡೆಸುವಾಗ ವಿಶೇಷ ನ್ಯಾಯಾಲಯವು ಈ ಅಧಿನಿಯಮದಡಿಯಲ್ಲಿನ ಅಪರಾಧವನ್ನು ಹೊರತುಪಡಿಸಿ ದಂಡ ಪ್ರಕ್ರಿಯೆ ಸಂಹಿತೆ 1973 ಅಡಿಯಲ್ಲಿ ಯಾವ ವಿಚಾರಣೆಗಾಗಿ ದೋಷಾರೋಪಿಸಲಾಗಿದೆಯೋ ಆ ಅಪರಾಧದ ಅಧಿವಿಚಾರಣೆಯನ್ನು ಸಹ ನಡೆಸಬಹುದು,’ ಎಂಬ ಅಂಶವನ್ನು ಸೇರಿಸಲಾಗಿದೆ.

 

2021ರಲ್ಲಿ ತಂದಿದ್ದ ತಿದ್ದುಪಡಿ ವಿಧೇಯಕ 9ನೇ ಪ್ರಕರಣದಲ್ಲಿ ಅಪರಾಧ ನಿರ್ಣಯವಾದ ಮೇಲೆ 3 ವರ್ಷಗಳಿಗೆ ಕಡಿಮೆಯಿಲ್ಲದ ಮತ್ತು ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ವಾಸ, 10 ಲಕ್ಷ ರು.ವರೆಗೆ ಕಡಿಮೆ ಇರದ ಮತ್ತು ಅದನ್ನು 50 ಕೋಟಿವರೆಗೆ ಜುಲ್ಮಾನೆ ವಿಧಿಸಲು ಅವಕಾಶವಿತ್ತು. ಅಂಥ ಹಣಕಾಸು ಸಂಸ್ಥೆಯು ಸಹ 5 ಲಕ್ಷ ರು.ವರೆಗೆ ಜುಲ್ಮಾನೆ, ಚಂದಾದಾರ ಅಥವಾ ಸದಸ್ಯನಿಂದ ಸಂಗ್ರಹಿಸಿದ ಒಟ್ಟು ನಿಧಿಗಳ ಮೊತ್ತದ ಎರಡುಪಟ್ಟು ಇವುಗಳಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ಜುಲ್ಮಾನೆ ರೂಪದಲ್ಲಿ ವಿಧಿಸಬಹುದಾಗಿತ್ತು.

the fil favicon

SUPPORT THE FILE

Latest News

Related Posts