ಬೆಂಗಳೂರು; ಆಮಿಷ, ಬಲವಂತ ಮತ್ತು ಒತ್ತಾಯದ ಮತಾಂತರ ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ವಿಧೇಯಕಕ್ಕೆ ರಾಜ್ಯಪಾಲರು ಸೆ. 28ರಂದು ಒಪ್ಪಿಗೆ ನೀಡಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರವು 2022ರ ಸೆ.30ರಂದು ಅಧಿಸೂಚನೆಯನ್ನೂ ಹೊರಡಿಸಿದೆ. ಅಧಿಸೂಚನೆಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2022 ಇದಕ್ಕೆ 202ರ ಸೆಪ್ಟಂಬರ್ 28ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದೆ,’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಸಂಖ್ಯಾಬಲದ ಕೊರತೆ ಕಾರಣ ವಿಧಾನಪರಿಷತ್ತಿನಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿರಲಿಲ್ಲ. ಹೀಗಾಗಿ, ಈ ಬಗ್ಗೆ ರಾಜ್ಯ ಸರ್ಕಾರ ಕಳೆದ ಮೇ ನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಸುಗ್ರೀವಾಜ್ಞೆಯ ಅವಧಿ ಆರು ತಿಂಗಳು ಮಾತ್ರ ಇದ್ದದ್ದರಿಂದ ಅಷ್ಟರೊಳಗೆ ಉಭಯ ಸದನಗಳಲ್ಲಿ ಮತ್ತೊಮ್ಮೆ ಮಂಡಿಸಿ ಅಂಗೀಕಾರ ಪಡೆಯಬೇಕಿತ್ತು.
ಮತಾಂತರ ನಿಷೇಧ ವಿಧೇಯಕ ಜಾರಿಗೊಳಿಸಲು ಸುಗ್ರೀವಾಜ್ಞೆಗೆ ಅಂತಿಮ ಸ್ವರೂಪ ನೀಡಿದ ಸರ್ಕಾರ
ವಿಧಾನಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸ್ಪಷ್ಟಬಹುಮತ ಸಾಧಿಸಿರುವ ಹಿನ್ನೆಲೆಯಲ್ಲಿ ಈಗ ವಿಧೇಯಕಕ್ಕೆ 2022ರ ಸೆಪ್ಟಂಬರ್‌ನಲ್ಲಿ ನಡೆದ ವಿಧಾನಪರಿಷತ್‌ನಲ್ಲಿ ಧ್ವನಿ ಮತದ ಮುಖಾಂತರ ಒಪ್ಪಿಗೆ ದೊರೆತಿತ್ತು.
ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮತಾಂತರ ನಿಷೇಧ ವಿಧೇಯಕ ಮಂಡಿಸುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ನಾಂದಿ ಹಾಡಿತು. ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಬಿಲ್‌ನ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಯ್ದೆಯಲ್ಲೇನಿದೆ?
ಬಲವಂತ, ಆಮಿಷ ಮತ್ತು ಮದುವೆಯಾಗುವ ಭರವಸೆ ನೀಡಿ ನಡೆಸುವ ಮತಾಂತರಕ್ಕೆ ನಿಷೇಧ
ಮತಾಂತರಗೊಂಡ ವ್ಯಕ್ತಿಯ ಮನೆಯವರು, ಆಪ್ತರು ದೂರು ನೀಡಿದರೆ ಎಫ್‌ಐಆರ್ ದಾಖಲು
ಬಲವಂತದ ಮತಾಂತರಕ್ಕೆ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರು.ವರೆಗೆ ದಂಡ
ಮತಾಂತರವಾಗಲು ಮುಂದಾಗಿರುವ ವ್ಯಕ್ತಿ 2 ತಿಂಗಳು ಮೊದಲು ಜಿಲ್ಲಾಧಿಕಾರಿಗೆ ತಿಳಿಸಬೇಕು
ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು
ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಇಲಾಖೆ ವಿಚಾರಣೆ ನಡೆಸಬೇಕು
ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವನ್ನು ನೀಡಲಾಗಿದೆ.