ಜಗದೀಶ್‌ ಕಾರಂತ ವಿಚಾರಣೆಗೆ ಪೂರ್ವಾನುಮತಿ ನೀಡಲು ಸಹಮತ; ದ್ವೇಷ ಭಾಷಣ ಆರೋಪ ದೃಢ

ಬೆಂಗಳೂರು; ಕಳೆದ ಐದು ವರ್ಷಗಳ ಹಿಂದೆ ಪುತ್ತೂರಿನ ಕಸ್ಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯ ಜಗದೀಶ್‌ ಕಾರಂತ್‌ ವಿವಾದಾತ್ಮಕ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡಬಹುದು ಎಂದು ಕಾನೂನು ಅಧಿಕಾರಿಗಳು ಸರ್ಕಾರಕ್ಕೆ ಅಭಿಪ್ರಾಯ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಜಗದೀಶ್‌ ಕಾರಂತ್‌ ಅವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ವಿಧಾನಪರಿಷತ್‌ ನ ಸದಸ್ಯ ಎನ್‌ ರವಿಕುಮಾರ್‌ ಮತ್ತಿತರರು ಸರ್ಕಾರದ ಮೇಲೆ ಒತ್ತಡ ಹೇರಿರುವ ಬೆನ್ನಲ್ಲೇ ಪುತ್ತೂರಿನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡಲು ಕಾನೂನು ಅಧಿಕಾರಿಗಳು ಸಮ್ಮತಿ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ. ಈ ಕುರಿತು ‘ದಿ ಫೈಲ್‌’ಗೆ ಕೆಲ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ಕಾನೂನು ಅಧಿಕಾರಿಯ ಅಭಿಪ್ರಾಯವಿದು

 

ಪ್ರಸ್ತುತ ಪ್ರಕರಣದ ಸಂಪೂರ್ಣ ಕಡತ, ಮಂಗಳೂರು ಪಶ್ಚಿಮ ವಲಯದ ಡಿಜಿ/ಐಜಿಪಿ, ಅವರು ಸಲ್ಲಿಸಿದ್ದ ಪ್ರಸ್ತಾವನೆಗಳು, ದೋಷಾರೋಪಣೆ ಪಟ್ಟಿ ಹಾಗೂ ಇತರ ದಾಖಲಾತಿಗಳನ್ನು ಇಲಾಖೆಯು ಪರಿಶೀಲಿಸಿದೆ. ಪ್ರಕರಣದ ಪರಿಷ್ಕೃತ ಪ್ರಸ್ತಾವನೆ, ದೋಷಾರೋಪಣೆ ಪಟ್ಟಿಯೊಂದಿಗೆ ವಿವಾದಿತ ಭಾಷಣದ ಆಡಿಯೋ, ವಿಡಿಯೋ ಚಿತ್ರೀಕರಣಗಳನ್ನೊಳಗೊಂಡ ಸಿ. ಡಿ. ಯನ್ನು ಪರಿಶೀಲಿಸಲಾಯಿತು.

 

ಆರೋಪಿತನು ಪ್ರತಿಭಟನಾ ಸಭೆಯಲ್ಲಿ ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿರುವುದು ಕಂಡುಬಂದಿರುತ್ತದೆ. ತನಿಖಾಧಿಕಾರಿಗಳೂ ಸಲ್ಲಿಸಿರುವ ಪುನರ್‌ ನಿವೇದನೆಯ ಆಧಾರದಲ್ಲಿ ಹಾಗೂ ದೋಷಾರೋಪಣೆ ಪಟ್ಟಿಯೊಂದಿಗೆ ಸಲ್ಲಿಸಿರುವ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಐಪಿಸಿ ಕಲಂ 153(ಎ) 505(1)(ಬಿ) 505(2), 189, 504 ಅಡಿಯಲ್ಲಿ ಆರೋಪಿತ ವಿರುದ್ಧದ ಆರೋಪಗಳು ದೃಢಪಟ್ಟಿದೆ.

 

ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸಿಆರ್‌ಪಿಸಿ ಕಲಂ 196(1) ಮತ್ತು 196(1ಎ) ಅಡಿ ಸರ್ಕಾರವು ಪೂರ್ವಾನುಮತಿ ನೀಡಬಹುದು ಎಂದು ಹಿರಿಯ ಕಾನೂನು ಅಧಿಕಾರಿ ಅವರು 2022ರ ಸೆ.15ರಂದು ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಟಿಪ್ಪಣಿ ಹಾಳೆಯಲ್ಲಿದೆ ವಿವಾದಿತ ಭಾಷಣದ ಸಾರಾಂಶ

 

ಪುತ್ತೂರು ತಾಲೂಕು ಕಸ್ಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿ ಪುತ್ತೂರು ಹಿಂದೂ ಜಾಗರಣಾ ವೇದಿಕೆಯು ಸಂಪ್ಯ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಬ್ದುಲ್‌ ಖಾದರ್‌, ಚಂದ್ರ ಮತ್ತು ರುಕ್ಮಯ್ಯ ಅವರ ವಿರುದ್ಧ 2017ರ ಸೆ.15ರಂದು ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು.

 

ಆರೋಪಿಯು ಆ ಸಂದರ್ಭದಲ್ಲಿ ‘ ನೀನು ಮುಸಲ್ಮಾನನಾಗಿ ನಡೆದುಕೊಳ್ಳುವುದಾದರೆ ನೀನು ಎಸ್‌ಡಿಪಿಐ ಏಜೆಂಟನಾಗಿ ವರ್ತಿಸುವುದಾದರೆ, ನೀನು ಪಿಎಫ್‌ಐ ಏಜೆಂಟನಾಗಿ ವರ್ತಿಸುವುದಾದರೆ, ಗೋ ರಕ್ಷಕರನ್ನು ಶಿಕ್ಷಿಸುವ ಮುಸ್ಲೀಮನಾಗುವುದಾದರೆ ನಾನು ಹಿಂದೂವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ನಿನಗೆ ಹುಚ್ಚು ನಾಯಿಯಂತೆ ಯಾಕೆ ಅಟ್ಟಾಡಿಸಬಾರದು. ಈ ಪುತ್ತೂರಿನಲ್ಲಿ ನೀನು ಹೇಗೆ ಡ್ಯೂಟಿ ಮಾಡುತ್ತೀಯಾ, ಈಶ್ವರಮಂಗಲಕ್ಕೆ ನೀನು ಹೇಗೆ ಬರುತ್ತೀಯಾ ಎಂದು ಬೆದರಿಸಿ ನಮ್ಮ ಹೋರಾಟದ ಕಿಚ್ಚು ಆರಿಸುವುದು ಸಾಧ್ಯವಿಲ್ಲ.

 

ನಮಗೆ ಅಡ್ಡ ಬರುವ ಪೊಲೀಸರನ್ನು ಬೆನ್ನು ಹತ್ತಿ ನಮ್ಮನಮ್ಮ ಊರುಗಳಲ್ಲಿ ಬಗ್ಗು ಬಡಿಯುವುದು ಅಬ್ದುಲ್ಲಾಗಳು, ರಫೀಕ್‌ಗಳು, ಹಂಝುಗಳು, ಲವ್‌ ಲವ್‌ ಎಂದು ಕೆಲಸ ಮಾಡುತ್ತದೆ. ಹಿಂದೂ ಯುವತಿಯನ್ನು ಮುಸ್ಲಿಂ ಯುವಕರು ಮೊಬೈಲ್‌ ಮೂಲಕ ದುರ್ಬಳಕೆಮಾಡಿಕೊಳ್ಳಾತರೆಂತ ಅರ್ಥ ಬರುವಂತೆ ಮಾತನಾಡಿ ಹಿಂದೂ ಯುವಕರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟಿ ಪ್ರಚೋದಿಸಿರುತ್ತಾರೆ.

 

ಇವರು ಪೊಲೀಸ್ ಅಧಿಕಾರಿಯಾಗಿಯೂ ಇವರು ಇಸ್ಲಾಂ ಧರ್ಮದ ಕೆಲಸ ಮಾಡುತ್ತಾರೆ. ನಾವೆಲ್ಲಾ ಜಾಗೃತ ಹಿಂದೂ ಸಮಾಜದವರು ಎಂದು ಸೇರಿದ ಸಾರ್ವಜನಿಕರಿಗೆ ಹೇಳುತ್ತಾ ಪೊಲೀಸ್‌ ಅಧಿಕಾರಿ ಖಾದರ್‌ನ ತಲೆಯನ್ನು ಯಾಕೆ ಬೋಳಿಸಬಾರದು, ಕತ್ತೆಯ ಮೇಲೆ ಯಾಕೆ ಮೆರವಣಿಗೆ ಮಾಡಬಾರದು, ಕಲ್ಲು ಯಾಕೆ ಹೊಡೆಯಬಾರದು ಎಂದು ದನದ ವಿಚಾರವಾಗಿ ಬೇವರ್ಸಿ ಖಾದರ್‌ ಎಂದೂ ಸಾರ್ವಜನಿಕರಿಗೆ ಪ್ರಚೋದನಾತ್ಮಕವಾಗಿ ಮಾತನಾಡಿದರು.

 

 

ಅಲ್ಲಿ ಸೇರಿದ್ದ ನೂರಾರು ಜನರಿಗೆ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ಎಎಸ್‌ಐ ಅಬ್ದುಲ್‌ ಖಾದರ್‌, ಪೊಲೀಸರಾದ ಚಂದ್ರ ಮತ್ತು ರುಕ್ಮಯ್ಯ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಅವರ ಮೇಲೆ ಹಲ್ಲೆ ಎಸಗುವಂತಹ ಅಪರಾಧ ಎಸಗಲು ಪ್ರೇರಣೆ ನೀಡುತ್ತಿದ್ದರು. ಇದರ ಜತೆ ಅಧಿಕಾರಿಗಳ ಪೈಕಿ ಎಸ್‌ ಐ ಅಬ್ದುಲ್‌ ಖಾದರ್‌ ಅವರು ಮುಸ್ಲೀಂರಾಗಿದ್ದು ಹಿಂದೂಗಳ ವಿರೋಧಿಗಳು ಎಂಬರ್ಥದಲ್ಲಿ ಸೇರಿದ ಜನರಲ್ಲಿ ದ್ವೇಷ ಉಂಟಾಗುವಂತೆ ಮಾಡಿ ಈ ಮೂಲಕ ಗಲಭೆಯನ್ನುಂಟು ಮಾಡುವ ದುರುದ್ದೇಶದಿಂದ ಪ್ರಚೋದನಾತ್ಮಕವಾಗಿ ಮಾತನಾಡಿದ್ದರು.

 

ಈ ರೀತಿಯ ಪ್ರಚೋದನಾತ್ಮಕ ಮಾತುಗಳಲ್ಲಿ ಪ್ರೇರಣೆಗೊಂಡ ಹಿಂದೂ ಜಾಗರಣಾ ವೇದಿಕೆಯ ನೂರಾರು ಜನರು ಕೈ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿ ಸ್ವಾಗತಿಸಿ ಹೇಳಿದಂತೆ ಅಪರಾಧ ಎಸಗಲು ಸಿದ್ಧರೆನ್ನುವಂತೆ ತನ್ನ ನಡವಳಿಕೆಯನ್ನು ತೋರ್ಪಡಿಸಿದರು. ಆರೋಪಿಯು ತನ್ನ ಭಾಷಣದ ಮೂಲಕ ಸರ್ಕಾರಿ ಕರ್ತವ್ಯದಲ್ಲಿರುವ ಪಿಎಸ್‌ಐ ಅಬ್ದುಲ್‌ ಖಾದರ್‌, ಪೊಲೀಸರಾದ ಚಂದ್ರ ಮತ್ತು ರುಕ್ಮಯ್ಯ ಇವರ ಪ್ರಾಮಾಣಿಕ ಹಾಗೂ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡುವ ಪ್ರಯತ್ನ ಮಾಡಿದರು.

 

ಈ ಮೂಲಕ ಅವರ ವಿರುದ್ಧ ಹಾಗೂ ಪಿಎಸ್‌ಐ ಅಬ್ದುಲ್‌ ಖಾದರ್‌ ಅವರ ವೈಯಕ್ತಿಕ ಧರ್ಮ ಇಸ್ಲಾಂನ್ನು ಗುರಿಯಾಗಿಸಿ ಸೇರಿದ ಜನರಲ್ಲಿ ಇಸ್ಲಾಂ ಧರ್ಮದಲ್ಲಿ ದ್ವೇಷ ಉಂಟಾಗುವಂತೆ ಹಾಗೂ ಹಲ್ಲೆಯಂತಹ ಅಪರಾಧ ಎಸಗಲು ಪ್ರೇರೇಪಿಸುವ , ಗಲಭೆ ಎಸಗುವಂತಹ ಪ್ರೋತ್ಸಾಹಿಸುವ ರೀತಿಯಲ್ಲಿ ಅವಹೇಳನಕಾರಿಯಾಗಿ ಭಾಷಣ ಮಾಡಿ ನಿಂದಿಸಿ ಸಾರ್ವಜನಿಕ ಸೌಹಾರ್ದತೆಗೆ ಭಂಗ ತಂದು ಜನರು ಭಯಭೀತರಾಗುವ ಅಪರಾಧ ಎಸಗಿರುತ್ತಾರೆ ಎಂಬ ಸುದೀರ್ಘವಾಗಿ ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts