ಬೆಂಗಳೂರು; ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆಯನ್ನು ಒಪ್ಪಿದ್ದ ಬಿಜೆಪಿ ಸರ್ಕಾರದ ಮುಖವಾಡವನ್ನು ಬೇರೆಲ್ಲಾ ಮುಖ್ಯವಾಹಿನಿಗಳಿಗಿಂತಲೂ ‘ದಿ ಫೈಲ್’ ಮೊದಲೇ ಹೊರಗೆಳೆದಿತ್ತು. ಜೆಡಿಎಸ್ ಶಾಸಕಾಂಗ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿಧಾನಸಭೆ ಅಧಿವೇಶನದಲ್ಲಿಯೂ ‘ದಿ ಫೈಲ್’ ವರದಿಯ ಅಂಶಗಳು ಮತ್ತು ದಾಖಲಾತಿಗಳನ್ನೇ ಪ್ರಸ್ತಾಪಿಸಿ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು ಎಂದು ಸದನದಲ್ಲಿ ಒತ್ತಾಯಿಸಿದರು.
ಹೆಚ್ ಡಿ ಕುಮಾರಸ್ವಾಮಿ ಅವರು ಕಳೆದ ಒಂದು ವಾರದಿದಂದಲೂ ಬಿಜೆಪಿ ಸರ್ಕಾರದ ಒಬ್ಬ ಸಚಿವರ ಅಕ್ರಮವನ್ನು ದಾಖಲೆ ಸಮೇತ ಹೊರಗೆಡವುತ್ತೇನೆ ಎಂದು ಗುಟುರು ಹಾಕಿದ್ದರು. ಆದರೆ ಎಲ್ಲಿಯೂ ಸಚಿವನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಈ ಸಚಿವರು ಯಾರಿರಬಹುದು ಎಂದು ಕುತೂಹಲದಿಂದ ಬೆನ್ನೆತ್ತಿದ್ದ ‘ದಿ ಫೈಲ್’ ತನಿಖಾ ತಂಡಕ್ಕೆ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್‌ಗೆ ಸಂಬಂಧಿಸಿದ ದಾಖಲೆಗಳು, ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಿರ್ಣಯದ ಪ್ರತಿಗಳು ಲಭ್ಯವಾದವು.
ಟ್ರಸ್ಟ್ ಡೀಡ್ ತಿದ್ದುಪಡಿ ಸಂಬಂಧದ ದಾಖಲೆ, ಟಿಪ್ಪಣಿ ಹಾಳೆಗಳನ್ನು ಪರಿಶೀಲಿಸಿದಾಗ ಹೆಚ್ ಡಿ ಕುಮಾರಸ್ವಾಮಿ ಅವರು ಈ ಪ್ರಸ್ತಾವನೆಯನ್ನು ಒಪ್ಪಿರಲಿಲ್ಲ ಮತ್ತು ಸೂಕ್ತ ಮತ್ತು ಸಮರ್ಥನೀಯ ಅಂಶಗಳನ್ನು ಮುಂದಿರಿಸಿ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡಿದ್ದರು. ಆ ನಂತರ ಅಧಿಕಾರಕ್ಕೇರಿದ ಒಂದೇ ಒಂದು ವರ್ಷದ ಅಂತರದಲ್ಲಿ ಇದೇ ಪ್ರಸ್ತಾವನೆಯನ್ನು ಮರುಮಂಡಿಸಲಾಗಿತ್ತು. ಅಲ್ಲದೆ ಯಡಿಯೂರಪ್ಪ ಅವರ ಅಧಿಕಾರಾವಧಿ ಕೊನೇ ದಿನಗಳಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಅನುಮೋದನೆ ಪಡೆದುಕೊಂಡಿದ್ದರು.
ಈ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ‘ದಿ ಫೈಲ್’ 2022ರ ಸೆ.22ರ ರಾತ್ರಿ 12.00ಕ್ಕೆ ವರದಿ ಪ್ರಕಟಿಸಿತು.
ಬಿಎಂಎಸ್ ಶಿಕ್ಷಣ ದತ್ತಿ; ಹೆಚ್‌ಡಿಕೆ ತಿರಸ್ಕರಿಸಿದ್ದ ಟ್ರಸ್ಟ್‌ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಅನುಮೋದನೆ
ಸಂಜೆ ಹೊತ್ತಿಗೆ ಇದೇ ಪ್ರಕರಣವನ್ನು ಹೆಚ್ ಡಿ ಕುಮಾರಸ್ವಾಮಿ ಅವರು ಸದನದಲ್ಲಿ ಬಹಿರಂಗಪಡಿಸಿದರು. ಇದರ ಕುರಿತು ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಅಶ್ವಥ್‌ನಾರಾಯಣ್ ಅವರ ಮಧ್ಯೆ ಆರೋಪ, ಪ್ರತ್ಯಾರೋಪಗಳು ನಡೆದವು. ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಜೆಡಿಎಸ್ ಈಗಲೂ ಒತ್ತಡವನ್ನು ಸದನದಲ್ಲಿಯೇ ಮುಂದುವರೆಸಿದೆ. ಸದ್ಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಆಡಳಿತರೂಢ ಸರ್ಕಾರ, ಕಾಂಗ್ರೆಸ್‌ನ ಪ್ರತಿಪಕ್ಷ ನಾಯಕರೊಂದಿಗೆ ಸಭೆ ನಡೆಯುತ್ತಿದೆ.
ಸುಮಾರು ಅರ್ಧ ಗಂಟೆ ನಂತರ ಸಭೆ ನಡೆದ ನಂತರವೂ ಸರ್ಕಾರವು ತನಿಖೆಗೆ ಒಪ್ಪಿಲ್ಲ. ಹೀಗಾಗಿ ಸದನದಲ್ಲಿ ಜೆಡಿಎಸ್ ತನ್ನ ಪಟ್ಟನ್ನು ಸಡಿಸಲಿಸದೇ ಸದನದ ಬಾವಿಗಿಳಿದು ಧರಣಿಯನ್ನು ಮುಂದುವರೆಸಿದೆ. ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ಮುಂದುವರೆದಿದೆ. ಗದ್ದಲ ಮುಂದುವರೆದ ಪರಿಣಾಮ ಸದನವನ್ನು ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಹೀಗಾಗಿ ಬಿಎಂಎಸ್ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.