ಬಿಎಂಎಸ್‌ ಶಿಕ್ಷಣ ದತ್ತಿ; ಹೆಚ್‌ಡಿಕೆ ತಿರಸ್ಕರಿಸಿದ್ದ ಟ್ರಸ್ಟ್‌ಡೀಡ್‌ ತಿದ್ದುಪಡಿ ಪ್ರಸ್ತಾವನೆಗೆ ಅನುಮೋದನೆ

ಬೆಂಗಳೂರು; ಅಂದಾಜು 2,000 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್‌ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿ ಹಾಗೂ ಅಜೀವ ಟ್ರಸ್ಟಿಯ ನೇಮಕಾತಿಯ ಪ್ರಸ್ತಾವನೆಯನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ತಿರಸ್ಕೃತಗೊಳಿಸಿದ್ದರೂ ಹಾಲಿ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಇದೇ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು ಎಂಬುದು  ಇದೀಗ ಬಹಿರಂಗವಾಗಿದೆ.

 

ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ನಡೆದಿರುವ ಪ್ರಕ್ರಿಯೆಗಳು ಕಾನೂನುಬಾಹಿರ ಪ್ರಕ್ರಿಯೆಗಳಾಗಿವೆ ಎಂದು ಹಲವು ಪುರಾವೆಗಳೊಂದಿಗೆ ಬೆಂಗಳೂರಿನ ಕಾನೂನು ಸಲಹೆಗಾರ ಸಂಸ್ಥೆ ಜಿ ಕೆ ಅಸೋಸಿಯೇಟ್ಸ್‌ ಸೇರಿದಂತೆ ಹಲವು ಸಾರ್ವಜನಿಕರು ಸರ್ಕಾರಕ್ಕೆ ಸಲ್ಲಿಸಿದ್ದ ದೂರುಗಳನ್ನು ಕಡೆಗಣಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಲ್ಲದೇ ಇದೇ ಶಿಕ್ಷಣ ದತ್ತಿಗೆ ಅಜೀವ ಟ್ರಸ್ಟಿ ನೇಮಕಾತಿ ಪ್ರಸ್ತಾವನೆ ಸಂಬಂಧ ಟ್ರಸ್ಟ್‌ ಡೀಡ್‌ ತಿದ್ದುಪಡಿ ಪ್ರಸ್ತಾವನೆಗೆ ಹಿಂದಿನ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕಾನೂನುಬಾಹಿರವಾಗಿದೆ ಎಂದು ತಿರಸ್ಕರಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಿದ್ದರು. ಆದರೆ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಇದನ್ನು ಬದಿಗೆ ಸರಿಸಿ ಅನುಮೋದಿಸಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೆ ಹೆಚ್‌ ಡಿ ಕುಮಾರಸ್ವಾಮಿ ಅವರು ತಿರಸ್ಕರಿಸಿದ್ದ ಕಡತದಲ್ಲಿ ಹಲವಾರು ಸಾರ್ವಜನಿಕರು ಸಲ್ಲಿಸಿದ್ದ ಆಕ್ಷೇಪಣೆಗಳು, ದಾಖಲಾತಿಗಳು, ಯಡಿಯೂರಪ್ಪ ಅವರಿಂದ ಅನುಮೋದನೆ ಪಡೆದುಕೊಂಡ ಕಡತದಲ್ಲಿ ಮರೆಮಾಚಲಾಗಿದೆ ಎಂದು ತಿಳಿದು ಬಂದಿದೆ.

 

ಬಿಎಂಎಸ್‌ ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿ ಪ್ರಸ್ತಾವನೆಗೆ ಸಂಬಂಧಿಸಿದಂತೆ 2018ರಲ್ಲಿಯೇ ಕಡತ (ED 124TEC 2018) ಸೃಷ್ಟಿಯಾಗಿತ್ತು. ಇದೇ ಕಡತದಲ್ಲಿ ಪ್ರಸ್ತಾವನೆಯು ಕಾನೂನುಬಾಹಿರವಾಗಿದೆ ಎಂದು ಲಿಖಿತ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಹಿಂದಿನ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಪ್ರಸ್ತಾವನೆ ತಿರಸ್ಕರಿಸಿದ್ದ ಹೆಚ್‌ಡಿಕೆ

 

ತಿರಸ್ಕರಿಸಲು ಕಾರಣವೇನು?

 

ಬಿಎಂಎಸ್‌ ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿ ಅನುಮೋದಿಸುವ ವಿಚಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಕಂಡಿಕೆ 71ರಿಂದ 79ರವರೆಗಿನ ಆದೇಶದಲ್ಲಿ ಪರಿಶೀಲನೆ ನಡೆಸಿ ತಿದ್ದುಪಡಿಗಳನ್ನು ತಿರಸ್ಕರಿಸಲು ಆದೇಶಿಸಿದ್ದರು. ಇದಕ್ಕೆ ಅವರು ನೀಡಿದ್ದ ಕಾರಣಗಳನ್ನು  ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

 

ಡೋನರ್‌ ಟ್ರಸ್ಟಿ ರಾಗಿಣಿ ನಾರಾಯಣ್‌ ಮತ್ತು ಅವರ ನಂತರ ಡೋನರ್‌ ಟ್ರಸ್ಟಿ ಸ್ಥಾನಕ್ಕೆ ನಾಮಕರಣ ಮಾಡಲ್ಪಡುವ ಯಾವುದೇ ಕುಟುಂಬದ ಸದಸ್ಯರು ತಮ್ಮ ಇಡೀ ಜೀವನಾವಧಿಯಲ್ಲಿ ದತ್ತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬೇಕೆಂದು ತಿದ್ದುಪಡಿಯಿಂದ ನಿಗದಿಮಾಡಲಾಗುತ್ತಿದೆ. ದತ್ತಿಯ ಮೂಲ ದಾಖಲೆ ಕಂಡಿಕೆ V(x)ರಂತೆ ಟ್ರಸ್ಟಿಗಳು ಸೂಕ್ತ ವ್ಯಕ್ತಿಯನ್ನು ಆಡಳಿತದ ನಿರ್ವಹಣೆಗಾಗಿ ಕಾರ್ಯದರ್ಶಿ ಸ್ಥಾನದಲ್ಲಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದ್ದು ಟ್ರಸ್ಟೀಗಳ ಅಧಿಕಾರವನ್ನು ಶಾಶ್ವತವಾಗಿ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ.

 

 

ಡೋನರ್‌ ಟ್ರಸ್ಟಿಯವರ ಕುಟುಂಬದಿಂದ ನೇಮಕವಾಗುವ ಯಾವುದೇ ವ್ಯಕ್ತಿಯ ವಯಸ್ಸು ಮತ್ತು ಅರ್ಹತೆಯನ್ನು ಲಕ್ಷಿಸದೇ ದತ್ತಿಯ ಸದಸ್ಯ ಕಾರ್ಯದರ್ಶಿ ಪದವಿಯನ್ನು ನಿರ್ವಹಿಸುವವರಾಗುತ್ತಾರೆ. ಇದರಿಂದ ಸಾರ್ವಜನಿಕ ದತ್ತಿಯ ರೂಪದಲ್ಲಿರುವ ಬಿಎಂಎಸ್‌ ಶಿಕ್ಷಣ ದತ್ತಿಯ ನಿರ್ವಹಣೆಯ ಅಧಿಕಾರ ಸೂತ್ರವನ್ನು ಒಂದೇ ಕುಟುಂಬದಲ್ಲಿ ಕೇಂದ್ರೀಕರಿಸಲಾಗುತ್ತದೆ. ಇದರಿಂದ ಡೋನರ್‌ ಟ್ರಸ್ಟಿ ಸ್ಥಾನದ ಅಧಿಕಾರವು ಹೆಚ್ಚುವುದಲ್ಲದೇ ಮೂಲ ದತ್ತಿಯಲ್ಲಿ ಅಡಕವಾಗಿರುವ ಇತರ ಟ್ರಸ್ಟಿಗಳ ಅಧಿಕಾರವನ್ನು ಕುಂಠಿತಗೊಳಿಸಿದಂತಾಗುತ್ತದೆ.

 

ಮೂಳ ಡೋನರ್‌ ಟ್ರಸ್ಟಿ ಹಾಗೂ ಅವರ ಪತ್ನಿಯ ನಂತರ ಡೋನರ್‌ ಟ್ರಸ್ಟಿ ಪದವಿಗೆ ನಾಮಕರಣ ಮಾಡುವ ಅಧಿಕಾರವನ್ನು ಕುಟುಂಬದ ಇತರರು ಪಡೆಯುವಂತೆ ತಿದ್ದುಪಡಿ ಮಾಡುವುದರಿಂದ ಮೇಲ್ಕಂಡಂತೆ ಒಂದೇ ಕುಟುಂಬದ ವ್ಯಕ್ತಿಯಲ್ಲಿ ಅಧಿಕಾರ ಕೇಂದ್ರೀಕೃತವಾಗುವ ಪರಂಪರೆ ಮುಂದುವರೆಯುತ್ತದೆ.

 

ದತ್ತಿನ ಸದ್ಯದ ರಚನೆಯಂತೆ ಡೋನರ್‌ ಟ್ರಸ್ಟಿಯಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಇತರ ಮೂರು ಟ್ರಸ್ಟಿಗಳ ನಾಮನಿರ್ದೇಶನ ಆಗಬೇಕಾಗುತ್ತದೆ. ಈಗ ಸೂಚಿಸಿರುವ ತಿದ್ದುಪಡಿಯ ಪ್ರಕಾರ ಸದ್ಯದ ಡೋನರ್‌ ಟ್ರಸ್ಟಿಯಿಂದ ಯಾವುದೇ ಒಬ್ಬ ವ್ಯಕ್ತಿಯನ್ನು ಅಜೀವ ಟ್ರಸ್ಟಿಯನ್ನಾಗಿ ನಾಮನಿರ್ದೇಶನ ಮಾಡಬಹುದಾಗಿದೆ ಮತ್ತು ಅಂತಹ ಅಜೀವ ಟ್ರಸ್ಟಿಯು ಯಾವುದೇ ವ್ಯಕ್ತಿಯ್ನು ತನ್ನ ನಂತರ ಅಜೀವ ಟ್ರಸ್ಟಿಯಾಗಿ ನೇಮಿಸಬಹುದಾಗಿದ್ದು ಅಂತಹ ಮುಂದಿನ ಅಜೀವ ಟ್ರಸ್ಟಿಗಳು ಸಹ ತಮ್ಮ ಸ್ಥಾನಕ್ಕೆ ಯಾವುದೇ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದಾಗಿರುತ್ತದೆ.

 

ಈ ತಿದ್ದುಪಡಿಯು ಸದ್ಯದ ದತ್ತಿಯ ರಚನೆಯಲ್ಲಿ ಡೋನರ್‌ ಟ್ರಸ್ಟಿ ಮತ್ತು ಸರ್ಕಾರದ ಹೊರತಾಗಿ ಮೂರನೇ ವ್ಯಕ್ತಿಯೊಬ್ಬರಿಗೆ ಶಾಶ್ವತವಾದ ಟ್ರಸ್ಟಿ ಸ್ಥಾನವನ್ನು ಕಲ್ಪಿಸುತ್ತದೆ. ಇಂತಹ ಮೂಲಭೂತ ಬದಲಾವಣೆಯನ್ನು ಮಾಡಲು ಕಾರಣಗಳೇನು ಎಂದು ಪ್ರಸ್ತಾವನೆಯಲ್ಲಿ ತಿಳಿಸಿರುವುದಿಲ್ಲ. ಆದ್ದರಿಂದ ದತ್ತಿಯ ಸಮರ್ಪಕ ಆಡಳಿತಕ್ಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿತ್ತು.

 

ಪ್ರಸ್ತಾವಿತ ತಿದ್ದುಪಡಿಯಂತೆ ಅಜೀವ ಟ್ರಸ್ಟಿಯಾಗಿ ಯಾವ ಕಾರಣಗಳಿಗಾಗಿ ಯಾವ ವ್ಯಕ್ತಿಯನ್ನು ನೇಮಿಸಲು ಉದ್ದೇಶಿಸಿದೆಯೆಂಬ ಬಗ್ಗೆ ದತ್ತಿಯ ನಡವಳಿಕೆಯಲ್ಲಿ ಮಾಹಿತಿ ಇಲ್ಲದಿರುವುದರಿಂದ ಮೇಲ್ಕಂಡ ತಿದ್ದುಪಡಿಯನ್ನು ಅನುಮೋದಿಸಲು ಸಮರ್ಥನೆ ಇರುವುದಿಲ್ಲ. ಇದರಿಂದ ದತ್ತಿಯನ್ನು ಶಾಶ್ವತವಾಗಿ ಮೂರನೇ ವ್ಯಕ್ತಿಗಳಿಗೆ ವರ್ಗಾಯಿಸಲು ಅಥವಾ ಲಾಭದ ಉದ್ದೇಶಕ್ಕಾಗಿ ಪರಭಾರೆ ಮಾಡಲು ಅವಕಾಶವಾಗುತ್ತದೆ.

 

ಸದ್ಯದ ದತ್ತಿಯ ರಚನೆಯಲ್ಲಿ ಡೋನರ್‌ ಟ್ರಸ್ಟಿಯವರ ನೇರ ವಂಶಿಕರು ಲಭ್ಯವಿಲ್ಲದಿರುವಾಗ ಸರ್ಕಾರದವರೇ ಎಲ್ಲಾ ಟ್ರಸ್ಟಿಗಳನ್ನು ನೇಮಕ ಮಾಡಲು ಇರುವ ಅವಕಾಶವನ್ನು ಪ್ರಸ್ತಾವಿತ ತಿದ್ದುಪಡಿಗಳಿಂದ ಸಂಪೂರ್ಣವಾಗಿ ಕೈಬಿಡಲು ಉದ್ದೇಶಿಸಿರುವುದರಿಂದ ದತ್ತಿಯ ಆಡಳಿತದಲ್ಲಿ ಸರ್ಕಾರದ ಪಾತ್ರವನ್ನು ಗಣನೀಯವಾಗಿ ಮತ್ತು ಶಾಶ್ವತವಾಗಿ ಮೊಟಕುಗೊಳಿಸಿದಂತಾಗುತ್ತದೆ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿತ್ತು.

 

ಮುಖ್ಯಮಂತ್ರಿಗಳ ಆದೇಶದಂತೆ ಟ್ರಸ್ಟ್‌ನ ಡೋನರ್‌ ಟ್ರಸ್ಟಿಯಾಗಿರುವ ರಾಗಿಣಿ ನಾರಾಯಣ್‌ ಅವರಿಗೆ ಸರ್ಕಾರದಿಂದ ಹಿಂಬರಹ ನೀಡಿ ಈ ತಿದ್ದುಪಡಿಗಳನ್ನು ಸರ್ಕಾರವು ತಿರಸ್ಕರಿಸಿದೆಯಂದು (ದಿನಾಂ ಕ 1.1.2019) ತಿಳಿಸಿತ್ತು ಎಂಬುದು ಟಿಪ್ಪಣಿಹಾಳೆಯಿಂದ ತಿಳಿದು ಬಂದಿದೆ.

 

ಆದರೆ ಈ ಕಡತಕ್ಕೆ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರ ಅವಧಿಯಲ್ಲಿ ಕಾನೂನು ಇಲಾಖೆಯು ಸಕಾರಾತ್ಮಕ ಅಭಿಪ್ರಾಯ ನೀಡಿತ್ತು.  ‘2018ರ ಮಾರ್ಚ್‌ 10ರ ಸಭೆಯ್ಲಿ ಅಂಗೀಕರಿಸಿದ ತಿದ್ದುಪಡಿಗಳಲ್ಲಿದ್ದ ಅನೇಕ ಆಕ್ಷೇಪಾರ್ಹ ಅಂಶಗಳನ್ನು ಹೊರತುಪಡಿಸಿ ಈಗ ಕೇವಲ ಒಂದು ತಿದ್ದುಪಡಿಯನ್ನು ಮಾತ್ರ (7-6-2019) ಟ್ರಸ್ಟ್‌ನ ಸಭೆಯಲ್ಲಿ ಅಂಗೀಕರಿಸಿರುವುದರಿಂದ ಈ ತಿದ್ದುಪಡಿಯನ್ನು ಅಂದರೆ ‘the donor trustee has the right to appoint a life trustee and empowers the life trustee to appoint his /her successor’ ಎಂಬ ತಿದ್ದುಪಡಿಯನ್ನು ಅನುಮೋದಿಸಿದಲ್ಲಿ ಸರ್ಕಾರದ ಅಧಿಕಾರಿಗಳಿಗೆ ಯಾವುದೇ ಚ್ಯುತಿ ಉಂಟಾಗುವುದಿಲ್ಲವೆಂದು ಭಾವಿಸಲಾಗಿದೆ ಎಂದ ಕಾನೂನು ಇಲಾಖೆಯು ಅಭಿಪ್ರಾಯ ನೀಡಿತ್ತು.

 

ಇದನ್ನಾಧರಿಸಿ ತಿದ್ದುಪಡಿಗೆ ಸರ್ಕಾರದ ಅನುಮೋದನೆ ನೀಡಬಹುದು ಎಂದು ಅಭಿಪ್ರಾಯಪಟ್ಟು ಮುಖ್ಯಮಂತ್ರಿಗಳ ಆದೇಶವನ್ನು ಡಾ ಸಿ ಎನ್ ಅಶ್ವಥ್‌ನಾರಾಯಣ್‌ ಅವರು ಕೋರಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಇದಾದ ನಂತರ ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ ಅವರು ಅನುಮೋದನೆ ನೀಡಿದ್ದರು.

 

ಹಿಂದಿನ ಸಿಎಂ ಬಿಎಸ್‌ವೈ ಅನುಮೋದಿಸಿರುವ ಪ್ರತಿ

ಆ ನಂತರ ಕೂಡಲೇ ಆದೇಶವನ್ನು ಹೊರಡಿಸುವುದು ಎಂದು ಡಾ ಸಿ ಎನ್ ಅಶ್ವಥ್‌ನಾರಾಯಣ್‌ ಅವರು ಟಿಪ್ಪಣಿ ಹೊರಡಿಸಿದ್ದರು.

 

ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಕುಮಾರನಾಯಕ್‌ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹಾಲಿ ಉಪ ಕಾರ್ಯದರ್ಶಿ ವೆಂಕಟೇಶಯ್ಯ (ಹಿಂದಿನ ಅಧೀನ ಕಾರ್ಯದರ್ಶಿ) ಕಡತದಲ್ಲಿದ್ದ ಲಿಖಿತ ಆಕ್ಷೇಪಣೆಗಳನ್ನು ಕಸದಬುಟ್ಟಿಗೆ ಎಸೆದಿದ್ದರು. ಅಲ್ಲದೆ 2019ರಲ್ಲಿ (ED 124TEC P1 2018) ಕಡತವನ್ನು ತೆರೆದಿದ್ದರು. ಹಾಗೆಯೇ ಈ ಕಡತವನ್ನು 2020ರ ಮಾರ್ಚ್‌ 17ರಂದು ಉನ್ನತ ಶಿಕ್ಷಣ ಸಚಿವರ ಕಚೇರಿಗೆ ರವಾನಿಸಲಾಗಿತ್ತು.  ಬಳಿಕ ಒಂದು ವರ್ಷದ ನಂತರ ಅಂದರೆ ಯಡಿಯೂರಪ್ಪ ಅವರ ಅಧಿಕಾರದ ಕೊನೆಯ ದಿನಗಳಲ್ಲಿ ಈ ಕಡತಕ್ಕೆ ( ED 124TEC P1 2018) ಅನುಮೋದನೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ 2021ರ ಮಾರ್ಚ್‌ 31ರಂದು ಡಾ ಬಿ ಎಸ್‌ ರಾಗಿಣಿ ನಾರಾಯಣ್‌ ಅವರಿಗೆ ಪತ್ರವನ್ನೂ ಬರೆಯಲಾಗಿತ್ತು.

 

ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿಗಾಗಲೀ, ಟ್ರಸ್ಟಿಗಳ ನೇಮಕಾತಿಯಾಗಲೀ ಮಾಡಲು ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಈ ವಿಷಯಗಳು ಸಿವಿಲ್‌ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗಿದ್ದರೂ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಕಾರ್ಯವ್ಯಾಪ್ತಿ ಮೀರಿ ಅಧಿಕಾರ ದುರ್ಬಳಕೆಪಡಿಸಿಕೊಂಡು ಸಾರ್ವಜನಿಕ ದತ್ತಿಯನ್ನು ಖಾಸಗಿ ದತ್ತಿಯನ್ನಾಗಿ ಪರಿವರ್ತಿಸಲು ನೆರವಾಗಿರುವುದು (ಸರ್ಕಾರದ ಪತ್ರ ED 128 TEC 2018, 31-03-2021) ಮೇಲ್ನೋಟಕ್ಕೆ ಕಂಡು ಬಂದಿದೆ.  ಹಾಗೆಯೇ ಈ ಪತ್ರದ ಬಗ್ಗೆ ಹಲವಾರು ಲಿಖಿತ ದೂರುಗಳಿದ್ದರೂ ಸರ್ಕಾರವು ಇದುವರೆಗೂ ಯಾವುದೇ ಕ್ರಮತೆಗೆದುಕೊಳ್ಳದಿರುವುದು ಅಚ್ಚರಿ ಮೂಡಿಸಿದೆ.

 

ಬಿಎಂಎಸ್‌ ಶಿಕ್ಷಣ ದತ್ತಿ ಅಡಿಯಲ್ಲಿರುವ ಎರಡು ಅನುದಾನಿತ ಸಂಸ್ಥೆಗಳಿಗೆ ಸರ್ಕಾರವು 1952ರಿಂದ ಇಲ್ಲಿಯವರೆಗೆ ಸುಮಾರು 800 ಕೋಟಿ ರು ಗೂ ಅಧಿಕ ಅನುದಾನ ನೀಡಿದೆ ಎಂದು ತಿಳಿದು ಬಂದಿದೆ.  ಹೈಕೋರ್ಟ್‌ (ಮೊಕದ್ದಮೆ ಸಂಖ್ಯೆ RFA 788/2009) ಮಾಡಿದ್ದ ಆದೇಶದ ಪ್ರಕಾರ ಬಿಎಂಎಸ್‌ ಶಿಕ್ಷಣ ದತ್ತಿಗೆ ಟ್ರಸ್ಟಿಗಳ ನೇಮಕಾತಿ ಬಗ್ಗೆ ನಿರ್ದಿಷ್ಟ ನಿಯಮಾವಳಿಗಳನ್ನು ಸೂಚಿಸಿದೆ. ಮತ್ತು ಬಿಎಂಎಸ್‌ ಶಿಕ್ಷಣ ದತ್ತಿಯು ಆದಾಯ ತೆರಿಗೆ ಇಲಾಖೆಯಿಂದ 80 ಜಿ ವಿನಾಯಿತಿ ಹೊಂದಿರುವುದರಿಂದ ಯಾವುದೇ ಟ್ರಸ್ಟ್ ಡೀಡ್‌ಗೆ ತಿದ್ದುಪಡಿಯಾಗಲೀ ಅಥವಾ ಟ್ರಸ್ಟಿಗಳ ನೇಮಕಾತಿಯಾಗಲೀ ಆದಾಯ ತೆರಿಗೆ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಇದನ್ನು ಪಡೆದಿಲ್ಲ ಎಂದು ಗೊತ್ತಾಗಿದೆ.

 

ಅಲ್ಲದೆ ಈ ಪ್ರಕರಣಕ್ಕೆ ಅನುಮೋದನೆ ಪಡೆಯುವ ಪ್ರಕ್ರಿಯೆಯಲ್ಲಿ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರ ಕಚೇರಿಯು ಸೂಕ್ತ ಕಾನೂನು ಸಲಹೆ ನೀಡುವ ನಿಟ್ಟಿನಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸುಮಾರು 2,000 ಕೋಟಿ ರು.ಗಿಂತಲೂ ಹೆಚ್ಚು ಸಂಪತ್ತು ಇರುವ (ಭೂಮಿ ಮತ್ತು ಕಟ್ಟಡಗಳು) ಬಡವರ ನೆರವಿಗೆ ಸ್ಥಾಪಿತವಾದ ಸಾರ್ವಜನಿಕ ಶಿಕ್ಷಣ ದತ್ತಿಯನ್ನು ಕಬಳಿಸಲು ದುಷ್ಟ ಶಕ್ತಿಗಳು ಹೊಂಚು ಹಾಕುತ್ತಿವೆ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆಯು ಹೊರಡಿಸಿರುವ ಪತ್ರವನ್ನು ರದ್ದುಗೊಳಿಸಬೇಕು. ಬಿಎಂಎಸ್‌ ಶಿಕ್ಷಣ ದತ್ತಿಯಲ್ಲಿ ಇರುವ ಸರ್ಕಾರದ ನಾಮನಿರ್ದೇಶಿತ ಟ್ರಸ್ಟಿಯನ್ನೂ ತನಿಖೆಗೊಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

the fil favicon

SUPPORT THE FILE

Latest News

Related Posts