ಗಡಿ ಜಿಲ್ಲೆಗಳಲ್ಲಿನ ಪ್ರೌಢಶಾಲೆಗಳಲ್ಲೂ ಅಕ್ರಮ ನೇಮಕಾತಿ; ಸಿಐಡಿ ತನಿಖೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಹೊಸ ಪಟ್ಟಿ

ಬೆಂಗಳೂರು; ಸರ್ಕಾರಿ ಪ್ರೌಢಶಾಲೆಗಳ ಹಿರಿಯ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಹಲವು ಅಭ್ಯರ್ಥಿಗಳಿಗೆ ವಾಮಮಾರ್ಗದಲ್ಲಿ ನೇಮಕ ಆದೇಶ ನೀಡಿ ಅಕ್ರಮ ಎಸಗಿರುವ ಪ್ರಕರಣವನ್ನು ಸಿಐಡಿ ತನಿಖೆಗೊಳಪಡಿಸಿರುವ ಬೆನ್ನಲ್ಲೇ ರಾಜ್ಯದ ಗಡಿ ಜಿಲ್ಲೆಗಳಲ್ಲಿನ ಪ್ರೌಢಶಾಲೆಗಳಲ್ಲೂ ಅಕ್ರಮ ನೇಮಕಾತಿ ನಡೆದಿರುವುದು ಪತ್ತೆಯಾಗಿದೆ. ಅಲ್ಲದೆ ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಆಪಾದಿಸಲಾಗಿರುವ  ಮತ್ತಷ್ಟು ಶಿಕ್ಷಕರ ಹೆಸರುಗಳು ಬಹಿರಂಗವಾಗಿದೆ.

 

ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮವನ್ನು ಹೊರಗೆಳೆದಿದ್ದ ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಮುಖ್ಯಮಂತ್ರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ, ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದರು. ಇದೀಗ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸರ್ಕಾರಕ್ಕೆ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.

 

ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯು ಮೊದಲು ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದ ಬೆಂಗಳೂರು ವಿಭಾಗದ ಸಹನಿರ್ದೇಶಕ ಕಚೇರಿಇಯ ಪ್ರಥಮದರ್ಜೆ ಸಹಾಯಕ ಕೆ ಎಸ್‌ ಪ್ರಸಾದ್‌ ಈಗಾಗಲೇ ಸಿಐಡಿ ಕಸ್ಟಡಿಯಲ್ಲಿರುವ ಬೆನ್ನಲ್ಲೇ ರಾಜ್ಯದ ಗಡಿ ಭಾಗಗಳಲ್ಲಿಯೂ ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಆಪಾದಿಸಲಾಗಿರುವ ಶಿಕ್ಷಕರ ಪಟ್ಟಿಯು ಮುನ್ನೆಲೆಗೆ ಬಂದಿದೆ.

 

ತುಮಕೂರು, ವಿಜಯಪುರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರೌಢಶಾಲೆಗಳಲ್ಲಿ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಹೆಸರುಗಳ ಪಟ್ಟಿಯನ್ನು ನೀಡಿದ್ದ ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯು ಇದೀಗ ರಾಜ್ಯದ ಗಡಿ ಜಿಲ್ಲೆಗಳಲ್ಲಿಯೂ ಇಂತಹ ಅಕ್ರಮ ನೇಮಕಾತಿಗಳು ನಡೆದಿವೆ ಎಂಬುದನ್ನು ಬಯಲುಗೊಳಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಸಂಬಂಧ ಲಿಖಿತ ದೂರು ಸಲ್ಲಿಸಿದೆ.

 

ಕೋಲಾರ ಜಿಲ್ಲೆಯೊಂದರಲ್ಲೇ 9 ಮಂದಿ ಶಿಕ್ಷಕರು ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯು ಸರ್ಕಾರಕ್ಕೆ ಪಟ್ಟಿಯನ್ನು ಒದಗಿಸಿದೆ. ಈ ಶಿಕ್ಷಕರ ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಶಿಕ್ಷಕರ ಹೆಸರುಗಳಿಲ್ಲ. ಇದು ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ದೈಹಿಕ ಶಿಕ್ಷಣ, ಆಂಗ್ಲಭಾಷೆ, ಹಿಂದಿ, ಸಮಾಜ ವಿಜ್ಞಾನ ವಿಭಾಗದಲ್ಲಿ ಈ ಶಿಕ್ಷಕರು ಅಕ್ರಮವಾಗಿ ನೇಮಕಾತಿಯಾಗಿದ್ದಾರೆ ಎಂದು ವೇದಿಕೆಯು ಗುರುತರವಾಗಿ ಆರೋಪಿಸಿದೆ.

 

ವೇದಿಕೆಯು ನೀಡಿರುವ ಪಟ್ಟಿ ಇಲ್ಲಿದೆ

 

 

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರವೀಂದ್ರ ದೊಡ್ಡಮನಿ (ದೈಹಿಕ ಶಿಕ್ಷಕ) ಇದೇ ಶಾಲೆಯ ದುರುಗಮ್ಮ (ಆಂಗ್ಲಭಾಷೆ), ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಟೋಪು ರಾಥೋಡ್‌ (ಹಿಂದಿ ಸಹ ಶಿಕ್ಷಕ) ಇವರು 2012-13ನೇ ಸಾಲಿನಲ್ಲಿ ಅಕ್ರಮವಾಗಿ ನೇಮಕವಾಗಿದ್ದಾರೆ. ಈ ಶಿಕ್ಷಕರ ಹೆಸರುಗಳು ನೇಮಕಾತಿಯ ಪಟ್ಟಿಯಲ್ಲೇ ಇಲ್ಲ ಎಂದು ವೇದಿಕೆಯು ಆಪಾದಿಸಿದೆ.

 

ಅದೇ ರೀತಿ 2014-15ನೇ ಸಾಲಿನಲ್ಲಿ ನೇಮಕಾತಿ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ನೇಮಕವಾಗಿರುವ ಸಹ ಶಿಕ್ಷಕರ ಪಟ್ಟಿಯನ್ನೂ ಒದಗಿಸಿದೆ.

 

 

ಕೋಲಾರ ಜಿಲ್ಲೆಯ ಬಂಗಾರಪೇಟೆಯ ದೋಣಿಮಡಗು ಶಾಲೆಯ ಕುಮಾರ್‌ ರಾಥೋಡ್‌ (ಸಮಾಜ ವಿಜ್ಞಾನ), ಇದೇ ಶಾಲೆಯ ಸಿದ್ದನಗೌಡ ಕರಡ್ಡಿ (ಆಂಗ್ಲಭಾಷೆ), ತೊಪ್ಪನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶರಣಪ್ಪ ಬಿರಾದಾರ (ಸಮಾಜ ವಿಜ್ಞಾನ), ದೊಡ್ಡಪೊನ್ನುಂಡಹಳ್ಳಿಯಲ್ಲಿ ಮಂಜುನಾಥ ಲಾಳಸಂಗಿ (ದೈಹಿಕ ಶಿಕ್ಷಕ) ಬಂಗಾರಪೇಟೆಯ ದೊಡ್ಡೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವೀರೇಶ್‌ ಬಂಗಾರಿ (ಸಮಾಜ ವಿಜ್ಞಾನ), ಗುಲ್ಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುತ್ತಣ್ಣ ಆರ್‌ ಗೌಡರ್‌ (ದೈಹಿಕ ಶಿಕ್ಷಕ) ಅಕ್ರಮವಾಗಿ ನೇಮಕವಾಗಿದ್ದಾರೆ. ಈ ಶಿಕ್ಷಕರ ಹೆಸರುಗಳು 2014-15ನೇ ಸಾಲಿನ ನೇಮಕಾತಿ ಪಟ್ಟಿಯಲ್ಲಿ ಇಲ್ಲ ಎಂದು ವೇದಿಕೆಯು ಆರೋಪಿಸಿದೆ.

 

 

‘ಈ ಶಿಕ್ಷಕರ ಅಕ್ರಮ ನೇಮಕಾತಿಯನ್ನು ಈ ಕೆಳಕಂಡ ಅಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯವಿದೆ. ಮಂಜೂರಾದ ಹುದ್ದೆಗಳಿಗೆ ಎದುರಾಗಿ ಎಷ್ಟು ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಭರ್ತಿಯಾಗದೇ ಉಳಿಕೆಯಾಗಿರುವ ಹುದ್ದೆಗಳನ್ನು ಸರ್ಕಾರಕ್ಕೆ ಮರಳಿಸಿರುವ ಸಂಖ್ಯೆ ಪತ್ತೆಯಾಗಬೇಕಿದೆ. ಉಳಿಕೆಯಾದ ಹುದ್ದೆಗಳನ್ನು ಯಾವ ದಿನಾಂಕದಂದು ಮತ್ತು ವರ್ಷದಂದು ಮರಳಿಸಲಾಗಿದೆ ಎಂಬುದನ್ನು ಕಂಡು ಹಿಡಿಯಬೇಕಿದೆ.,’ ಎಂದು ಸರ್ಕಾರಕ್ಕೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

 

 

ಅದೇ ರೀತಿ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಬೌದ್ಧಿಕ ಪರಿಜ್ಞಾನ ಮತ್ತು ಪಾಠ ಪ್ರವಚನ ಪರಿಶೀಲನೆ ನಡೆಸಬೇಕು ಮತ್ತು ಈ ಸಂಬಂಧ ಸೂಕ್ತ ಪರೀಕ್ಷೆಯನ್ನು ನಡೆಸಬೇಕು. ಇಂತಹ ಅಕ್ರಮ ನೇಮಕಾತಿಗಳು ರಾಜ್ಯದ ಗಡಿ ಜಿಲ್ಲೆಗಳಲ್ಲಿಯೇ ನಡೆದಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ರಾಜ್ಯದ ಗಡಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಮೇಲ್ಕಂಡ ಅವಧಿಯಲ್ಲಿ ನೇಮಕವಾಗಿರುವ ಶಿಕ್ಷಕರ ನೇಮಕಾತಿಯನ್ನು ತನಿಖೆಗೊಳಪಡಿಸಬೇಕು.

 

 

ಈ ಶಿಕ್ಷಕರು ಕಾಲಕಾಲಕ್ಕೆ ಪಡೆದಿರುವ ಬಡ್ತಿ, ವೇತನ, ಸೇವಾ ಹಿರಿತನ ಪಟ್ಟಿಯಲ್ಲಿ ಹೇಗೆ ಸೇರ್ಪಡೆಗೊಳಿಸಲಾಗಿದೆ ಎಂದು ಪರಿಶೀಲನೆಗೊಳಪಡಿಸಬೇಕು. ಈ ಶಿಕ್ಷಕರು ಪಡೆದಿರುವ ಪದವಿ ಪ್ರಮಾಣ ಪತ್ರಗಳನ್ನು ಸೂಕ್ತ ತನಿಖೆಗೊಳಪಡಿಸಬೇಕು. ಅಲ್ಲದೆ ಫೋರೆನ್ಸಿಕ್‌ ಮೂಲಕ ತನಿಖೆಗೊಳಪಡಿಸಬೇಕು ಎಂದೂ ವೇದಿಕೆಯು ಆಗ್ರಹಿಸಿದೆ.

 

 

ನವೀನ್ ಕುಮಾರ್ ಬಿ.ಎನ್ ಸಹ ಶಿಕ್ಷಕರು (ಕೆ.ಪಿ.ಎಸ್ ಅಮೃತೂರು, ಕುಣಿಗಲ್ ತಾಲ್ಲೂಕು ಸಿದ್ರಾಮಪ್ಪ ಬಿರಾದಾರ ಸಹ ಶಿಕ್ಷಕರು (ಹತ್ತಳ್ಳಿ ಹಿರಿಯ ಪ್ರಾಥಮಿಕ ಶಾಲೆ,ವಿಜಯಪುರ ಜಿಲ್ಲೆಯ ಚಡಚಣ ತಾಲೂಕು), ಮಹೇಶ್ ಸುಸಲಾದಿ ಸಹ ಶಿಕ್ಷಕರು, (ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ) , ದೇವೇಂದ್ರ ನಾಯಕ ಸಹ ಶಿಕ್ಷಕರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದ್ದನ್ನು ಸ್ಮರಿಸಬಹುದು. ಈ ಕುರಿತು ‘ದಿ ಫೈಲ್’ 2022ರ ಜುಲೈ 5ರಂದೇ ವರದಿ ಪ್ರಕಟಿಸಿತ್ತು.

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ; ಆಯ್ಕೆಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ವಾಮಮಾರ್ಗದಲ್ಲಿ ಆದೇಶ?

 

‘ಈ ಅಭ್ಯರ್ಥಿಗಳೆಲ್ಲ ಈ ಹಿಂದೆ 2014-2015 ಸಾಲಿನಲ್ಲಿ ಪ್ರಾಥಮಿಕ ಹಾಗೂ ಹಿರಿಯ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇವರುಗಳು ಬೆಂಗಳೂರು ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ ಇವರ ಹೆಸರು ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ. ಬೆಂಗಳೂರು ವಿಭಾಗದ ಸಹ ನಿರ್ದೇಶಕರಾಗಿದ್ದ ಡಿಕೆ ಶಿವಕುಮಾರ್ (ಈಗ ನಿವೃತ್ತ) ದ್ವಿತೀಯ ದರ್ಜೆ ಸಹಾಯಕ ಪ್ರಸಾದ್ ಇವರು ಅಕ್ರಮ ನೇಮಕಕ್ಕೆ ಸಹಕರಿಸು ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ.

 

ಬಿಜಾಪುರ ಮೂಲದ ರಾಚಯ್ಯ ಹಿರೇಮಠ, ಇವರು ಮಧ್ಯವರ್ತಿಯಾಗಿದ್ದಾರೆ,’ ಎಂದು ಪತ್ರದಲ್ಲಿ ಆರೋಪಿಸಿದ್ದರು. ಈ ಪೈಕಿ ದ್ವಿತೀಯ ದರ್ಜೆ ಸಹಾಯಕ ಪ್ರಸಾದ್‌ ಎಂಬಾತನನ್ನು ಶಿಕ್ಷಣ ಇಲಾಖೆಯು ಈಗಾಗಲೇ ಅಮಾನತುಗೊಳಿಸಿರುವುದನ್ನು ಸ್ಮರಿಸಬಹುದು. ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಪ್ರಕರಣವನ್ನು ಹೆಚ್ಚಿನ ತನಿಖೆಗೊಳಪಡಿಸಲು ಸರ್ಕಾರವು ಸಿಐಡಿಗೆ ವರ್ಗಾಯಿಸಿತ್ತು.

‘ದಿ ಫೈಲ್‌’-ವಾರ್ತಾಭಾರತಿ ವರದಿ ಪರಿಣಾಮ; ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ ಸಿಐಡಿಗೆ ವರ್ಗಾವಣೆ

 

ಅಕ್ರಮ ನಡೆದಿರುವುದು ಹೇಗೆ?

 

ನೇಮಕಾತಿ ಸಂಬಂಧ ಮೊದಲು ಪ್ರಕಟಿಸುವ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇರುವುದಿಲ್ಲ. ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆಯ್ಕೆ ಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳು ಯಾವುದೋ ಕಾರಣದಿಂದ ಕೆಲಸಕ್ಕೆ ಹಾಜರಾಗದೇ ಇರುವ ಕಾರಣಕ್ಕೆ ಈ ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಖಾಲಿಯಾದ ಹುದ್ದೆಗಳಗೆ ಇವರು cut of percentage ಇರುವ ಅಭ್ಯರ್ಥಿಗಳನ್ನು ಪಟ್ಟಿಮಾಡಿ ನೇಮಕ ಮಾಡಿಕೊಳ್ಳದೇ ನೇಮಕಾತಿಯನ್ನು ಮುಂದೂಡುತ್ತಾರೆ. ಇದು ವರ್ಷಗಟ್ಟಲೇ ಹೀಗೆಯೇ ಮುಂದುವರೆಯುತ್ತದೆ ಎಂದು ವೇದಿಕೆಯು ಪತ್ರದಲ್ಲಿ ವಿವರಿಸಿದೆ.

 

ಆ ನಂತರದ ದಿನಗಳಲ್ಲಿ ಹಿಂದೆ ನಡೆದಿದ್ದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಈ ಜಾಲವು ಸಂಪರ್ಕಿಸುತ್ತದೆ. ಇಂತಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಆಯ್ಕೆಯಾಗಲು ನಿಗದಿತ ಅಂಕಗಳು ಪಡೆಯದಿದ್ದರೂ ಲಕ್ಷಾಂತರ ರುಪಾಯಿ ಲಂಚ ಪಡೆದು ಇವರಿಗೆ ಮೂಲ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವೆರಿಫಿಕೇಶನ್ ಪತ್ರ ಕಳಿಸಿಕೊಟ್ಟಿದ್ದಾರೆ. ಆ ನಂತರ ಮೇಲಾಧಿಕಾರಿಗಳ ಗಮನಕ್ಕೆ ತರದೆಯೇ ನೇಮಕಾತಿ ಆದೇಶ ನೀಡಿದ್ದಾರೆ ಎಂದು ವೇದಿಕೆಯು ಪತ್ರದಲ್ಲಿ ಆರೋಪಿಸಿದೆ.

 

ಇದಾದ ನಂತರ ಖಾಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ನೇಮಕಾತಿ ಆದೇಶ ನೀಡಿದ್ದಾರೆ. ಆದರೆ ನೇಮಕಾತಿ ನಿಯಮದ ಪ್ರಕಾರ ಮೊದಲನೇ ಆಯ್ಕೆ ಪಟ್ಟಿಯಲ್ಲಿ ನೇಮಕಾತಿ ಆಗದಿರುವ ಅಭ್ಯರ್ಥಿಗಳಿಗೆ ಕಟ್ ಆಫ್ ಪರ್ಸೆಂಟೇಜ್ ಎಷ್ಟಕ್ಕೆ ನಿಲ್ಲಿಸಲಾಗಿದೆಯೋ ಅದರ ಕೆಳಗಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಈ ಎರಡನೇ ಪಟ್ಟಿಯಲ್ಲಿ ಹೆಸರು ಪ್ರಕಟಿಸಿ ನೇಮಕಾತಿ ಆದೇಶ ನೀಡಬೇಕು. ಇಲ್ಲದಿದ್ದರೆ ಖಾಲಿ ಹುದ್ದೆಗಳನ್ನು ಸರ್ಕಾರಕ್ಕೆ ಮರು ಹಿಂದಿರುಗಿಸಬೇಕು. ಆದರೆ ಇಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಹಣ ಪಡೆದು ಅಕ್ರಮವಾಗಿ ನೇಮಕ ನಡೆಸಲಾಗಿದೆ ಎಂದು ವೇದಿಕೆಯು ಆಪಾದಿಸಿದೆ.

the fil favicon

SUPPORT THE FILE

Latest News

Related Posts