ಮುರುಘಾಮಠದ ಆಸ್ತಿ ದುರುಪಯೋಗ; ನಿವೃತ್ತ ಸಿ ಜೆ ನೇತೃತ್ವದಲ್ಲಿ ಸಮಿತಿ ರಚನೆಗೆ ಪತ್ರ

ಬೆಂಗಳೂರು; ಶಾಲಾ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಚಿತ್ರದುರ್ಗದ ಶ್ರೀ ಮುರುಘಾರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಬಂಧನದಲ್ಲಿರುವುದರಿಂದ ಶ್ರೀಮಠದ ಸಾವಿರಾರು ಕೋಟಿ ರು. ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಆರ್‌ ಯತ್ನಾಳ ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗಮನಕ್ಕೆ ತಂದಿದ್ದಾರೆ.

 

ಈ ಕುರಿತು 2022ರ ಸೆ.16ರಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶ್ರೀ ಮಠದ ಸಮಸ್ತ ಆಡಳಿತ ಮತ್ತು ದೈನಂದಿನ ವ್ಯವಹಾರಗಳ ಸುಗಮ ಕಾರ್ಯಚಟುವಟಿಕೆಗಳಿಗೆ ಅನುವಾಗುವಂತೆ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಾತ್ಕಾಲಿಕವಾಗಿ ಮೇಲುಸ್ತುವಾರಿ ಸಮಿತಿ ರಚಿಸಲು ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

 

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಯತ್ನಾಳ ಬರೆದಿರುವ ಪತ್ರದ ಪ್ರತಿ

 

ಪತ್ರದಲ್ಲೇನಿದೆ?

 

ಶ್ರೀ ಮಠದ ಸಾವಿರಾರು ನೌಕರರು ಸಂಬಳ, ಸಾರಿಗೆಯ ಖರ್ಚಿಗಾಗಿ ಮತ್ತು ಜೀವನ ನಿರ್ವಹಣೆಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು, ಬ್ಯಾಂಕ್‌ಗಳು ಸೇರಿದಂತೆ ಎಸ್‌ಜೆಎಂ ವಿದ್ಯಾಸಂಸ್ಥೆಯ ಅಧೀನದಲ್ಲಿ ರಾಜ್ಯದ ವಿವಿಧೆಡೆ ಇರುವ ನೂರಾರು ಘಟಕಗಳ ನಿತ್ಯದ ಆಡಳಿತಕ್ಕೆ ಪಾರ್ಶ್ವವಾಯು ಹೊಡೆದಂತಾಗುತ್ತದೆ.

 

ಶಿವಮೂರ್ತಿ ಮುರುಘಾ ಶರಣರು ಪೀಠದಲ್ಲಿ ಮುಂದುವರಿಯುವುದು ಶ್ರೀಮಠದ ಘನ ಪರಂಪರೆಯಗೆ ಕಳಂಕ ತರುವಂತಹ ಸಂಗತಿಯಾಗಿರುತ್ತದೆ. ಆದ್ದರಿಂದ ಶ್ರೀ ಶಿವಮೂರ್ತಿ ಶರಣರು ಈ ಕೂಡಲೇ ಸ್ವಇಚ್ಛೆಯಿಂದ ಪೀಠತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ಪದಚ್ಯುತಗೊಳಿಸುವ ಕಾನೂನುಬದ್ಧ ಪ್ರಕ್ರಿಯೆಗೆ ನಾಡಿನ ಭಕ್ತ ಸಮೂಹ ಮುಂದಾಗಲು ನಿರ್ದೇಶಿಸಬೇಕು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿದ್ದಾರೆ.

 

‘ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠದ ಹಾಲಿ ಕಾರ್ಯದರ್ಶಿ ಶ್ರೀ ವಸ್ತ್ರದಮಠ ಅವರು ಶಿವಮೂರ್ತಿ ಮುರುಘಾ ಶರಣರ ಏಕಪಕ್ಷೀಯ ನೇಮಕವಾಗಿರುತ್ತದೆ. ಇವರ ನೇಮಕದಿಂದ ಸ್ಥಳೀಯ ಭಕ್ತ ಸಮೂಹ ಅಸಮಾಧಾನಗೊಂಡಿದ್ದಾರೆ. ಈಗಿನ ಸಂದಿಗ್ಧ ಸಮಯದಲ್ಲಿ ಶ್ರೀ ಮಠದ ಸಾವಿರಾರು ನೌಕರರು ಸಂಬಳ, ಸಾರಿಗೆಯ ಖರ್ಚಿಗಾಗಿ ಮತ್ತು ಜೀವನ ನಿರ್ವಹಣೆಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು, ಬ್ಯಾಂಕ್‌ಗಳು ಸೇರಿದಂತೆ ಎಸ್‌ಜೆಎಂ ವಿದ್ಯಾಸಂಸ್ಥೆಯ ಅಧೀನದಲ್ಲಿ ರಾಜ್ಯದ ವಿವಿಧೆಡೆ ಇರುವ ನೂರಾರು ಘಟಕಗಳ ನಿತ್ಯದ ಆಡಳಿತಕ್ಕೆ ಪಾರ್ಶ್ವವಾಯು ಹೊಡೆದಂತಾಗುತ್ತದೆ. ಶ್ರೀಮಠದ ಸಾವಿರಾರು ಕೋಟಿ ರು. ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

 

ಶ್ರೀ ಜಗದ್ಗುರು ಮರುಘರಾಜೇಂದ್ರ ಬೃಹನ್ಮಠದ ಸಮಸ್ತ ವ್ಯವಹಾರದ ಸುಗಮ ಆಡಳಿತ ನಿರ್ವಹಣೆಗಾಗಿ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವೀರ ಶೈವ ಲಿಂಗಾಯತ ಸಮಜಾದ ಐವರು ಪ್ರಮುಖರ ಉನ್ನತ ಮಟ್ಟದ ಮೇಲುಸ್ತುವಾರಿ ಸಮಿತಿ ಕೂಡಲೇ ನೇಮಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ಈ ಸಮಿತಿಯು ಶ್ರೀ ಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರಗಳು, ಧಾರ್ಮಿಕ ಚಟುವಟಿಕೆಗಳಿಗೆ ಅಗತ್ಯವಾದ ನಿರ್ಧಾರ ಕೈಗೊಳ್ಳಲು ತಾತ್ಕಾಲಿಕ ಅಧಿಕಾರ ಹೊಂದಿರಬೇಕು. ಮೂರು ತಿಂಗಳ ಒಳಗಾಗಿ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈ ಸಮಿತಿಯೇ ನೆರವೇರಿಸಬೇಕು. ಈ ಕುರಿತು ಸಮಿತಿ ಕೈಗೊಳ್ಳುವ ಎಲ್ಲಾ ಕಾನೂನು ರೀತಿಯ ತೀರ್ಮಾನಕ್ಕೆ ಮಠದ ಸಮಸ್ತ ಸಮೂಹ ಬದ್ಧವಾಗಿರಬೇಕು ಎಂದು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

the fil favicon

SUPPORT THE FILE

Latest News

Related Posts