ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ನೈಜ ವರದಿ ಸಲ್ಲಿಸಲು ಪ.ಜಾತಿ, ಪ.ಪಂಗಡ ಆಯೋಗ ನಿರ್ದೇಶನ

ಬೆಂಗಳೂರು; ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ವರದಿಯನ್ನು ತಕ್ಷಣವೇ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ನಿರ್ದೇಶನ ನೀಡಿದೆ.

 

ಇದೇ ಪ್ರಕರಣವನ್ನು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ನೋಟೀಸ್‌ ನೀಡಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ನೀಡಿರುವ ನಿರ್ದೇಶನವು ಮಹತ್ವ ಪಡೆದುಕೊಂಡಿದೆ. ಆಯೋಗ ನೀಡಿರುವ ನಿರ್ದೇಶನದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಅಪ್ರಾಪ್ತ ಬಾಲಕಿಯರ ಪೈಕಿ ಒಬ್ಬ ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಪ್ರಕಟಣೆ ಹೊರಡಿಸಿತ್ತು. ಇದೀಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ನೀಡಿರುವ ನಿರ್ದೇಶನವು ಮಹತ್ವ ಪಡೆದುಕೊಂಡಿದೆ.

 

ನಿರ್ದೇಶನದಲ್ಲೇನಿದೆ?

 

‘ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ಪರಿಶಿಷ್ಟ ಜಾತಿಯ ಅಪ್ತಾಪ್ತ ಬಾಲಕಿಯ ಮೇಲಿನ ಲೈಂಗಿಕ ಪ್ರಕರಣದಲ್ಲಿ ಮಠದ ಸ್ವಾಮೀಜಿ ಮತ್ತುಇ ಇತರರ ವಿರುದ್ಧ ದೂರು ದಾಖಳಾಗಿರುವಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಆದ್ದರಿಂದ ಈ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾಗಿರುವ ಬಗ್ಗೆ ಕೈಗೊಂಡಿರುವ ನೈಜ ವರದಿಯನ್ನುಕೂಡಲೇ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನಸೂಚಿತ ಬುಡಕಟ್ಟುಗಳ ಆಯೋಗಕ್ಕೆ ತುರ್ತಾಗಿ ಸಲ್ಲಿಸಬೇಕು,’ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನಸೂಚಿತ ಬುಡಕಟ್ಟುಗಳ ಆಯೋಗವು 2022ರ ಸೆ.1ರಂದು ನಿರ್ದೇಶಿಸಿದೆ.

 

ಆಯೋಗವು ನೀಡಿರುವ ನಿರ್ದೇಶನದ ಪ್ರತಿ

 

ಪೋಕ್ಸೋ ಕಾಯ್ದೆಯಡಿ ಮುರುಘಾ ಶರಣರ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಪೊಲೀಸ್‌ ಇಲಾಖೆಯು ಮೀನಮೇಷ ಎಣಿಸುತ್ತಿದ್ದರೆ ಅತ್ತ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

 

ಪ್ರಕರಣ ಕುರಿತಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌ ಅವರಿಗೆ ನೋಟೀಸ್‌ ನೀಡಿತ್ತು. ಎಫ್‌ಐಆರ್‌ ದಾಖಲಾದ ದಿನದಿಂದ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಕುರಿತು 7 ದಿನದೊಳಗೆ ವಿವರವಾದ ಮಾಹಿತಿಯೊಂದಿಗೆ ಉತ್ತರಿಸಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಿತ್ತು.

 

ಲೈಂಗಿಕ ದೌರ್ಜನಕ್ಕೆ ಒಳಗಾಗಿದ್ದಾರೆ ಎನ್ನಲಾಗಿರುವ ಅಪ್ತಾಪ್ತ ಬಾಲಕಿಯರಿಂದ ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸರು ವಿಳಂಬ ಮಾಡಿದ್ದರು. ಎಫ್‌ಐಆರ್‌ ದಾಖಲಾಗಿ 48 ಗಂಟೆಗಳ ನಂತರ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಬೆಳವಣಿಗೆ ನಡುವೆಯೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೀಡಿರುವ ನೋಟೀಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಚಾಟಿ ಬೀಸಿದಂತಾಗಿತ್ತು.
ಅಪ್ರಾಪ್ತ ಮಕ್ಕಳ ಮೇಲೆ ತೀವ್ರ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಗುರುತರ ಆರೋಪಗಳಿದ್ದರೂ ಪ್ರಕರಣದ ಒಂದನೆ ಆರೋಪಿ ಮುರುಘಾ ಶರಣರನ್ನು ಬಂಧಿಸುವಲ್ಲಿನ ವೈಫಲ್ಯತೆ ಮಾತ್ರವಲ್ಲದೇ ನ್ಯಾಯವನ್ನು ಅತಿ ಕೆಟ್ಟದಾಗಿ ಅವಹೇಳನ ಮಾಡಿರುವ ಗಂಭೀರ ಆರೋಪಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸರು ಗುರಿಯಾಗಿದ್ದರು.

 

ಈ ಅಪರಾಧಗಳು ಜಾಮೀನುರಹಿತವಾದ ಸಂಜ್ಞೇಯ ಅಪರಾಧಗಳಾಗಿವೆ. ಅಲ್ಲದೆ ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು ಅವರಿಂದ ಬೆದರಿಕೆಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಬಲ್ಲ ಪ್ರಭಾವಿಗಳಾಗಿದ್ದಾರೂ ಆರೋಪಿಗಳನ್ನು ಬಂಧಿಸದೇ ಇರುವುದಕ್ಕೆ ಜನವಾದಿ ಸೇರಿದಂತೆ ಇನ್ನಿತರೆ ಮಹಿಳಾ ಸಂಘಟನೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜಂಟಿ ಮನವಿ ಸಲ್ಲಿಸಿದ್ದರು.

 

‘ಮೈನರ್ ಮಕ್ಕಳ ಮೇಲೆ ತೀವ್ರ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಅವರ ಮೇಲೆ ಇದ್ದಾಗ್ಯೂ ಸಹ ಅವರನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದು ನ್ಯಾಯದ ಅತಿಕೆಟ್ಟ ಅವಹೇಳನವಾಗಿದೆ. ಈ ಅಪರಾಧಗಳು ಜಾಮೀನುರಹಿತವಾದ ಸಂಜ್ಞೇಯ ಅಪರಾಧಗಳಾಗಿವೆ; ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು ಅವರಿಂದ ಬೆದರಿಕೆಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಬಲ್ಲ ಪ್ರಭಾವಿಗಳಾಗಿದ್ದಾರೆ,’ ಎಂದು ಮನವಿಯಲ್ಲಿ ಸಂಘಟನೆಗಳು ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts