ಲೈಂಗಿಕ ದೌರ್ಜನ್ಯ ಆರೋಪ; ಮಠದಲ್ಲಿಯೇ ಮುರುಘಾ ಶ್ರೀಗಳ ಬಂಧಿಸಿದ ಜಿಲ್ಲಾ ಪೊಲೀಸರು

photo credit;thenewsminute

ಬೆಂಗಳೂರು; ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯರಿಬ್ಬರಿಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರವಾದ ಆರೋಪದಡಿಯಲ್ಲಿ ರಾಜ್ಯದ ಪ್ರಭಾವಿ ಲಿಂಗಾಯತ ಸಮುದಾಯದ ಮುರುಘಾ ಮಠದ ಪೀಠಾಧೀಪತಿ ಡಾ ಶಿವಮೂರ್ತಿ ಮುರುಘಾ ಶರಣರನ್ನು ಕಡೆಗೂ ಚಿತ್ರದುರ್ಗದ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

 

ಶಾಲಾ ಬಾಲಕಿಯರಿಬ್ಬರು ನೀಡಿದ್ದ ಹೇಳಿಕೆ ಆಧರಿಸಿ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣದಡಿಯಲ್ಲಿ ಮುರುಘಾ ಶರಣರನ್ನು ಒಂದನೇ ಆರೋಪಿಯನ್ನಾಗಿಸಿ ಪ್ರಕರಣದ ದಾಖಲಿಸಲಾಗಿತ್ತು. ಅಲ್ಲದೇ ಇವರೊಂದಿಗೆ ವಸತಿ ನಿಲಯದ ಮೇಲ್ವಿಚಾರಕಿ ಸೇರಿದಂತೆ ಮತ್ತಿತರರನ್ನೂ ಪ್ರಕರಣದಲ್ಲಿ ಇತರೆ ಆರೋಪಿಗಳನ್ನಾಗಿಸಲಾಗಿತ್ತು.

 

ಪೋಕ್ಸೋ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದರೂ ಒಂದನೇ ಆರೋಪಿ ಮುರುಘಾ ಶರಣರನ್ನು ಬಂಧಿಸಿರಲಿಲ್ಲ. ಶರಣರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ವಿಳಂಬ ಮಾಡಿದ್ದರಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೂ ಮುರುಘಾ ಶರಣರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನ್ಯಾಯಾಲಯದ ಮುಂದೆ ನಾಳೆ (ಸೆ.2) ಬರಲಿದೆ.

 

ಅಲ್ಲದೆ ಇಡೀ ಪ್ರಕರಣವನ್ನು ಹೊರ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎಚ್‌ ವಿಶ್ವನಾಥ್‌ ಕೂಡ ಮುರುಘಾ ಶರಣರನ್ನು ಬಂಧಿಸದೇ ಇದ್ದಿದ್ದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

 

ಈ ಬೆಳವಣಿಗೆ ನಡುವೆಯೇ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟೀಸ್‌ ಕೂಡ ನೀಡಿತ್ತು.

 

ಈ ಎಲ್ಲಾ ಬೆಳವಣಿಗೆಗಳಿಂದ ಮುಜುಗರಕ್ಕೊಳಗಾದ ಜಿಲ್ಲಾ ಪೊಲೀಸರು ರಾತ್ರಿ 10ರ ಸುಮಾರಿಗೆ ಮುರುಘಾ ಶರಣರನ್ನು ವಶಕ್ಕೆ ತೆಗೆದುಕೊಂಡರು. ಅವರನ್ನು ಮಠದಲ್ಲಿಯೇ ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts