ಐಎಎಸ್‌ ತಿವಾರಿ ಅಸಹಜ ಸಾವು ಪ್ರಕರಣ; ಸಿಬಿಐಗೆ ಬರೆದಿದ್ದ ಗೌಪ್ಯ ಪತ್ರ ಬಹಿರಂಗ

photo credit;deccanhearlad

ಬೆಂಗಳೂರು; ಉತ್ತರಪ್ರದೇಶದ ಲಖನೌದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ ಕರ್ನಾಟಕದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರು ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಯಾವುದೇ ಹಗರಣಗಳನ್ನು ಗುರುತಿಸಿರಲಿಲ್ಲ ಮತ್ತು ಈ ಕುರಿತು ಯಾವುದೇ ಚರ್ಚೆಯನ್ನೂ ಮಾಡಿರಲಿಲ್ಲ ಎಂದು ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಗಳು ಸಿಬಿಐಗೆ ಮಾಹಿತಿ ಒದಗಿಸಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

 

 

ದೊಡ್ಡಬಳ್ಳಾಪುರದಲ್ಲಿ ನಡೆದ ಜನೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಅಸಹಜ ಸಾವಿನ ಕುರಿತು ಪ್ರಸ್ತಾಪಿಸಿ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದರು. ಇದರ ಬೆನ್ನಲ್ಲೇ  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿದ್ದ ಯಾವುದೇ ಹಗರಣದ ಕುರಿತು ಅನುರಾಗ್‌ ತಿವಾರಿ ಅವರು ಸರ್ಕಾರದೊಂದಿಗೆ ಚರ್ಚೆ ನಡೆಸಿರಲಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ.

 

ಅನುರಾಗ್‌ ತಿವಾರಿ ಅವರ ಸಾವಿನ ಕುರಿತು ಮಾಹಿತಿ ಕೇಳಿ ಸಿಬಿಐ 2018ರ ಏಪ್ರಿಲ್‌ 4ರಂದು ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಈ ಸಂಬಂಧ 2018ರ ಆಗಸ್ಟ್‌ 4ರಂದು ಮುಖ್ಯ ಕಾರ್ಯದರ್ಶಿ ಸಿಬಿಐನ ಇನ್ಸ್‌ಪೆಕ್ಟರ್‌ ಪುರನ್‌ ಕುಮಾರ್‌ ಅವರಿಗೆ ಗೌಪ್ಯ ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗೌಪ್ಯ ಪತ್ರದಲ್ಲೇನಿದೆ?

 

ಮುಖ್ಯ ಕಾರ್ಯದರ್ಶಿ 2018ರ ಆಗಸ್ಟ್‌ 4ರಂದು ಸಿಬಿಐ ಇನ್ಸ್‌ಪೆಕ್ಟರ್‌ಗೆ ಪತ್ರ ಬರೆದಿದ್ದರು. ಆಹಾರ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆಯ ವ್ಯವಸ್ಥಾಪಕ ನಿರ್ದೆಶಕರಾಗಿದ್ದ ಅವಧಿಯಲ್ಲಿ (2017 ಜನವರಿ 1ರಿಂದ 2017ರ ಮೇ 17ರವರೆಗೆ) ಬೃಹತ್‌ ಪ್ರಮಾಣದಲ್ಲಿ ನಡೆದಿದೆ ಎನ್ನಲಾಗಿದ್ದ ಭ್ರಷ್ಟಾಚಾರ ಪ್ರಕರಣ ಕುರಿತು ಪತ್ರ ವ್ಯವಹಾರ ನಡೆಸಿದ್ದರೇ ಮತ್ತು ತಮ್ಮ ಜೀವಕ್ಕೆ ಬೆದರಿಕೆ ಇತ್ತು ಎಂದು ಸರ್ಕಾರದ ಜತೆ ತಿವಾರಿ ಪತ್ರ ವ್ಯವಹಾರ ನಡೆಸಿದ್ದರೇ ಎಂದು ಸಿಬಿಐ ಮಾಹಿತಿ ಕೇಳಿತ್ತು.

 

ಅಲ್ಲದೆ ಈ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರ ವಿರುದ್ಧ ತಿವಾರಿ ಅವರು ಯಾವುದಾದರೂ ದೂರು ಸಲ್ಲಿಸಿದ್ದರೇ ಎಂದು ಮಾಹಿತಿ ಕೇಳಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ‘ಇಲ್ಲ’ ಎಂದಷ್ಟೇ ಮಾಹಿತಿ ಒದಗಿಸಿದ್ದರು.

ಹಾಗೆಯೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತ ಅನುರಾಗ್‌ ತಿವಾರಿ ಅವರು ತಮ್ಮ ಅವಧಿಯಲ್ಲಿ ಯಾವುದೇ ಹಗರಣಗಳನ್ನು ಗುರುತಿಸಿರುವುದಿಲ್ಲ. ಮತ್ತು ಕಚೇರಿಯ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಯಾವುದೇ ಹಗರಣಗಳ ಬಗ್ಗೆ ಚರ್ಚೆ ಮಾಡಿರುವುದಿಲ್ಲ ಹಾಗೂ ಅಂತಹ ಯಾವುದೇ ಟಿಪ್ಪಣಿ ತಯಾರಿಸಿರುವುದಿಲ್ಲ ಎಂದು ಇಲಾಖೆಯ ಹೆಚ್ಚುವರಿ ನಿರ್ದೇಶಕರು ಆಯುಕ್ತರಿಗೆ ಪತ್ರ ಬರೆದಿದ್ದರು.

 

 

ಉತ್ತರ ಪ್ರದೇಶದ ಲಖನೌದಲ್ಲಿರುವ ವಿಐಪಿ ಅತಿಥಿ ಗೃಹದ ಹೊರಗೆ ಅನುರಾಗ್ ತಿವಾರಿ ಅವರ ದೇಹ ಪತ್ತೆಯಾಗಿತ್ತು. ಮೃತದೇಹದ ಮರಣೋತ್ತರ ವರದಿಯಲ್ಲಿ ಆಸ್ಪಿಕ್ಸಿಯಾದ ಕಾರಣ ಈ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಮೃತರ ಕುಟುಂಬದವರು ಒತ್ತಡ ಹಾಕಿದ್ದ ಕಾರಣ ಐಎಎಸ್ ಅಧಿಕಾರಿಯ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು. ಅಷ್ಟೇ ಅಲ್ಲದೆ ಐಪಿಸಿ ಸೆಕ್ಷನ್ 302ರ ಅನುಸಾರ ಅಪರಿಚಿತ ಅಪರಾಧಿಯ ವಿರುದ್ಧ ಲಖನೌ ಪೋಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು

 

ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ಕರ್ನಾಟಕದ ಬೀದರ್‌ನಲ್ಲಿ ತನಿಖೆ ನಡೆಸಿತ್ತು. ಅಲ್ಲದೆ ಸಾವಿನ ತನಿಖೆಯನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ದಳ(ಎಸ್ಐಟಿ) ಕೈಗೆತ್ತಿಕೊಂಡಿತ್ತು. ತಿವಾರಿ ಅವರ ಸಾವಿನ ತನಿಖೆ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಫೋನ್ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿದ್ದ ಯೋಗಿ ಆದಿತ್ಯನಾಥ್‌ ಅವರು ತನಿಖೆ ತೀವ್ರಗೊಳಿಸಲು ಸೂಚಿಸಿದ್ದರು.

 

ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ಬೆಂಬಲವಿರುವ ಸಾವಿರಾರು ಕೋಟಿ ರುಪಾಯಿ ಹಗರಣ ಬಯಲಿಗೆಳೆಯಲು ಐಎಎಸ್ ಅಧಕಾರಿ ಅನುರಾಗ್ ತಿವಾರಿ ಸಜ್ಜಾಗಿದ್ದರು ಎಂದು ಉತ್ತರ ಪ್ರದೇಶ ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಅಲ್ಲಿನ ವಿಧಾನಸಭೆಯಲ್ಲಿ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಕರ್ನಾಟಕ ಸರ್ಕಾರ ತಳ್ಳಿ ಹಾಕಿತ್ತು.

 

ತಿವಾರಿ ಅವರು ಕರ್ನಾಟಕ ಕೇಡರ್‌ನಲ್ಲಿ ಸೇವೆಯಲ್ಲಿದ್ದರು. ಆದರೆ ಅವರ ಶವ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಹೀಗಾಗಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಸಾವಿನ ಹಿಂದೆ ಆಹಾರ ಧಾನ್ಯ ಕಳ್ಳಸಾಗಣೆ ಮಾಫಿಯಾದ ಕೈವಾಡವಿರುವ ಶಂಕೆಯೂ ಕೇಳಿ ಬರುತ್ತಿದೆ. ಹೀಗಾಗಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದರಿಂದ ಸಿಬಿಐ ತನಿಖೆ ಅಗತ್ಯವಿದೆ,’ ಎಂದು ಶೋಭಾ ಕರಂದ್ಲಾಜೆ ಅವರು ಹೇಳಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts