ಅಂಬೇಡ್ಕರ್‌ ಸ್ಕೂಲ್‌ ಅಫ್ ಎಕನಾಮಿಕ್ಸ್‌ ವಿವಿ; ಒಳಾಂಗಣ ವಿನ್ಯಾಸದ ತುಂಡುಗುತ್ತಿಗೆ ಹಿಂದಿದೆಯೇ ಅಕ್ರಮ?

photo credit-thebengalurulive

ಬೆಂಗಳೂರು; ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯದ ಸುಂದರೀಕರಣ, ಲ್ಯಾಂಡ್‌ ಸ್ಕೇಪಿಂಗ್‌, ಕಟ್ಟಡಗಳ ಒಳಾಂಗಣ ವಿನ್ಯಾಸ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಪೀಸ್‌ ವರ್ಕ್ ಮಾದರಿಯಲ್ಲಿ ನೀಡಲು ಮುಂದಾಗಿರುವ ಸರ್ಕಾರವು ಅಕ್ರಮಕ್ಕೆ ದಾರಿಮಾಡಿಕೊಟ್ಟಿದೆ.

 

ಕರ್ನಾಟಕ ಪಾರದರ್ಶಕತೆ ನಿಯಮ 1999ರ ನಿಯಮ 4 ರಡಿ (ಇ-4) 2 ಕೋಟಿ ರು. ಮೀರದಂತೆ ಕಾಮಗಾರಿಯನ್ನು ವಹಿಸಲು ಅವಕಾಶವಿದೆ. ಆದರೀಗ ಈ ಕಾಯ್ದೆಯನ್ನೂ ಉಲ್ಲಂಘಿಸಲು ಹೊರಟಿರುವ ಸರ್ಕಾರವು ನಿಗದಿತ ಮಿತಿಯನ್ನೂ ಮೀರಿ ಕಾಮಗಾರಿಯನ್ನು ಕ್ರಿಡಿಲ್‌ಗೆ ವಹಿಸಲು ನಿರ್ಧರಿಸಿರುವುದರ ಹಿಂದೆ ಕಮಿಷನ್‌ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

 

 

ನಿಗದಿತ ಅವಧಿಯೊಳಗೆ ಅಂದಾಜುಪಟ್ಟಿ ಸಲ್ಲಿಸದೇ ಇದ್ದರೂ ಕಾಮಗಾರಿ ಪೂರ್ಣಗೊಂಡ ನಂತರ ಕಾಮಗಾರಿಗೆ ಘಟನೋತ್ತರ ಅನುಮೋದನೆ ಪಡೆದು ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ವಿಶ್ವವಿದ್ಯಾಲಯವು ಮುಂದಾಗಿರುವುದು ಸಂದೇಹಕ್ಕೆ ಆಸ್ಪದಕ್ಕೆ ಕಾರಣವಾಗಿದೆ.

 

ಕಾಮಗಾರಿಗಳಿಗೆ ಒಂದೇ ಬಾರಿ ಅನುಮೋದನೆ ನೀಡದೇ ಎರಡು ಬಾರಿ ಕಾಮಗಾರಿ ನಡೆಸುವುದರಿಂದ ಇದು ಆಕ್ಷೇಪಣೆಗೆ ಒಳಗಾಗಲಿದೆ ಎಂಬ ತಿಳಿವಳಿಕೆಯನ್ನು ಸರ್ಕಾರವು ಮರೆತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ ನಾರಾಯಣ್‌ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

 

ಪ್ರಕರಣದ ವಿವರ

 

ವಿಶ್ವವಿದ್ಯಾಲಯದ ವಿವಿಧ ಕಾಮಗಾರಿಗಳಿಗೆ ವಿವಿಧ ಆದೇಶಗಳಲ್ಲಿ ಒಟ್ಟಾರೆ 182. ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. (ಆದೇಶ ಸಂಖ್ಯೆ; ED 466 UBV 2017 DATED 17.03.2018) ಈ ಪೈಕಿ ಲ್ಯಾಂಡ್‌ ಸ್ಕೇಪ್‌, ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 18.17 ಕೋಇಟ ರು. ರು.ಗಳಿಗೆ (ಆದೇಶ ಸಂಖ್ಯೆ ED 33 UBV 2021 DATED 17.03.2021) ನೀಡಲಾಗಿತ್ತು. ಅಲ್ಲದೆ ಈ ಅಂದಾಜನ್ನು ಪರಿಷ್ಕರಿಸಿದ್ದ ಅಧಿಕಾರಿಗಳು ಪುನ 4.30 ಕೋಟಿ ರು. ಅನುಮೋದನೆ ಪಡೆದುಕೊಂಡಿದ್ದರು. ಇದರಲ್ಲಿ ಲ್ಯಾಂಡ್‌ ಸ್ಕೇಪಿಂಗ್‌ ಕಾಮಗಾರಿಗಾಗಿ 18, 82, 800 ರು. ಎಂದು ನಿಗದಿಪಡಿಸಿದ್ದರು ಎಂಬುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.

 

ಆದರೆ ಅಧಿಕಾರಿಗಳು ಪುನಃ ವಿಶ್ವವಿದ್ಯಾಲಯದ ಸುಂದರೀಕರಣ ಮತ್ತು ಲ್ಯಾಂಡ್‌ ಸ್ಕೇಪಿಂಗ್‌ಗಾಗಿ 80,00,000 ರು. (ಆದೇಶ ಸಂಖ್ಯೆ; ED 126 HPU 2021(1) DATED 10.04.2022) ನಿಗದಿಗೊಳಿಸಿದ್ದರು. ಇದಕ್ಕೆ ಅನುಮೋದನೆ ಪಡೆಯುವ ಸಂಬಂಧ ಲೆಕ್ಕಾಧಿಕಾರಿಗಳಿಗೆ ಕಡತ ಸಲ್ಲಿಸಿದ್ದ ಅಧಿಕಾರಿಗಳು 1,21,00,000 ಮೊತ್ತಕ್ಕೆ ಮತ್ತು ಲ್ಯಾಂಡ್‌ ಸ್ಕೇಪಿಂಗ್‌ಗಾಗಿ ಅಂದಾಜು 20.36 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಣೆ ನೀಡಿದ್ದರು.

 

ಒಂದೇ ಕಾಮಗಾರಿಗೆ ನಾಲ್ಕು ಬಾರಿ ಆದೇಶಗಳನ್ನು ಹೊರಡಿಸಲಾಗಿದೆ. ಇದರಲ್ಲಿ ಲ್ಯಾಂಡ್‌ ಸ್ಕೇಪಿಂಗ್‌ ಕಾಮಗಾರಿಗಳು ಪ್ರತ್ಯೇಕವಾಗಿವೆಯೇ ಎಂಬ ಕುರಿತು ಕಡತದಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ ಮತ್ತು ಇದನ್ನು ದೃಢೀಕರಿಸಿರಲಿಲ್ಲ ಎಂಬ ಅಂಶವು ಲಭ್ಯವಿರುವ ದಾಖಲೆಯಿಂದ ಗೊತ್ತಾಗಿದೆ.

 

‘ಸುಂದರೀಕರಣ ಮತ್ತು ಲ್ಯಾಂಡ್‌ ಸ್ಕೇಪಿಂಗ್‌ಗಾಗಿ 80,00,000 ನಿಗದಿಗೊಳಿಸಿ ಕ್ರಿಡಿಲ್‌ಗೆ ನೀಡಿದ್ದು ಮತ್ತೇ ಪ್ರಸ್ತುತ 1,21,00.000 ಮೊತ್ತ ಲ್ಯಾಂಡ್‌ ಸ್ಕೇಪಿಂಗ್‌ ಅಳವಡಿಸಿ ಸುಂದರೀಕರಣಗೊಳಿಸಲು ಕ್ರಿಡಿಲ್‌ಗೆ ನೀಡಿದ್ದು ಒಂದೇ ಬಾರಿ ಅನುಮೋದನೆ ನೀಡದೇ 2 ಬಾರಿ ಕಾಮಗಾರಿ ನೀಡಿರುವುದರಿಂದ ಮುಂದೆ Spilt of work ಎಂದು ಆಡಿಟ್‌ ಸಮಯದಲ್ಲಿ ಆಕ್ಷೇಪಣೆ ವ್ಯಕ್ತವಾಗುವುದಿಲ್ಲವೇ,’ ಎಂದು ಲೆಕ್ಕಾಧಿಕಾರಿಗಳು ಪ್ರಶ್ನಿಸಿರುವುದು ತಿಳಿದು ಬಂದಿದೆ.

 

ಅಷ್ಟೇ ಅಲ್ಲ ‘ಎರಡು ಕಾಮಗಾರಿಯನ್ನು ಕ್ರಿಡಿಲ್‌ಗೆ ನೀಡಿದ್ದು 2 ಕಾಮಗಾರಿಯನ್ನು ಒಗ್ಗೂಡಿಸಿದ್ದಲ್ಲಿ 2.01 ಕೋಟಿ ರು. ಆಗಲಿದ್ದು ಕ್ರಿಡಿಲ್‌ಗೆ ಕೆಟಿಪಿಪಿ ನಿಯಮ 1999ರ ನಿಯಮ 4ರ ಅಡಿ (ಇ-4) ಅವಕಾಶದನ್ವಯ 2 ಕೋಟಿ ಮೀರದಂತೆ ಕಾಮಗಾರಿಯನ್ನು ವಹಿಸಲು ಮಾತ್ರ ಅವಕಾಶವಿದೆ. ನಿಗದಿತ ಮಿತಿಯನ್ನು ಮೀರಿ ಕಾಮಗಾರಿಯನ್ನು ವಹಿಸಿದಂತೆ ಅಗುವುದಿಲ್ಲವೇ ಎಂಬ ಬಗ್ಗೆ ಪರಿಶೀಲಿಸಬೇಕು,’ ಎಂದು 2022ರ ಸೆ.3ರಂದು ಲೆಕ್ಕಾಧಿಕಾರಿಗಳು ಟಿಪ್ಪಣಿಯಲ್ಲಿ ನಮೂದಿಸಿದ್ದರು ಎಂದು ಗೊತ್ತಾಗಿದೆ.

 

ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯವು ಲ್ಯಾಂಡ್‌ ಸ್ಕೇಪಿಂಗ್‌ ಮತ್ತು ಸುಂದರೀಕರಣಗೊಳಿಸುವ ಕಾಮಗಾರಿಗೆ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು 2022ರ ಮಾರ್ಚ್‌ 18ರಂದೇ ಕ್ರಿಡಿಲ್‌ಗೆ ಸೂಚಿಸಿತ್ತು. ಆದರೆ ನಾಲ್ಕು ತಿಂಗಳ ನಂತರ ಅಂದರೆ 2022ರ ಜುಲೈ 7ರಂದು ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಮಂಜೂರಾತಿಗೆ ಸಲ್ಲಿಸಲಾಗಿತ್ತು.

 

ವಿಶ್ವವಿದ್ಯಾಲಯವು ನಿಗದಿತ ಕಾರ್ಯಕ್ರಮದ ಸಾಕಷ್ಟ ಅವಧಿಯ ಪೂರ್ವದಲ್ಲೇ ಅಂದಾಜು ಪಟ್ಟಿಯನ್ನು ಸಲ್ಲಿಸಲು ಕೋರಿದ್ದರೂ ಕ್ರಿಡಿಲ್‌ ಸಂಸ್ಥೆಯು ನಿಗದಿತ ಕಾರ್ಯಕ್ರಮದ ನಂತರ ಅಂದಾಜು ಪಟ್ಟಿಯನ್ನು ಸಲ್ಲಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

‘ನಿಗದಿತ ಅವಧಿಯೊಳಗೆ ಅಂದಾಜು ಪಟ್ಟಿ ಸಲ್ಲಿಸದೇ ಆ ನಂತರ ಸಲ್ಲಿಸಿದ್ದ ಅಂದಾಜು ಪಟ್ಟಿಯಲ್ಲಿ 8,11,942 ರು. ಮೊತ್ತವನ್ನು 9 ತಿಂಗಳ ನಿರ್ವಹಣೆಗಾಗಿ ಅಂದಾಜಿಸಿತ್ತು. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿಗೆ ಘಟನೋತ್ತರ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡುವುದಾದಲ್ಲಿ 9 ತಿಂಗಳ ನಿರ್ವಹಣೆಗಾಗಿ ನಿಗದಿಪಡಿಸಿದ ಮೊತ್ತವನ್ನು ಮುಂಗಡವಾಗಿ ಪಾವತಿಸುವುದು ಸೂಕ್ತವೇ,’ ಎಂದು ಲೆಕ್ಕಾಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts