ಲೋಕಾಯುಕ್ತರ ನೇಮಕ; ದಲಿತ ನ್ಯಾಯಮೂರ್ತಿಗಳಿಗೆ ದೊರಕದ ಅವಕಾಶ, ಲಿಂಗಾಯತ ಸಮುದಾಯದ ಓಲೈಕೆ?

ಬೆಂಗಳೂರು; ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರಿಂದ ತೆರವಾಗಿದ್ದ ಲೋಕಾಯುಕ್ತ ಸ್ಥಾನಕ್ಕೆ ದಲಿತ ಮತ್ತು ಹಿಂದುಳಿದ ವರ್ಗದ ಸಮುದಾಯದ ನ್ಯಾಯಮೂರ್ತಿಗಳನ್ನು ನೇಮಿಸಲು ಅವಕಾಶಗಳಿದ್ದರೂ ಈ ಬಾರಿಯೂ ಅವರಿಗೆ ಸ್ಥಾನ ದೊರಕಿಲ್ಲ. ಲೋಕಾಯುಕ್ತ ಸಂಸ್ಥೆ ಸ್ಥಾಪನೆಯಾದ ವರ್ಷದಿಂದಲೂ ಪ್ರಬಲ ಸಮುದಾಯಗಳಿಗೆ ಸೇರಿರುವ ನ್ಯಾಯಮೂರ್ತಿಗಳನ್ನೇ ನೇಮಿಸುವ ಮೂಲಕ ದಲಿತ ಮತ್ತು ಹಿಂದುಳಿದ ವರ್ಗದ ಸಮುದಾಯಗಳಿಗೆ ಸೇರಿದ ನ್ಯಾಯಮೂರ್ತಿಗಳನ್ನು ಲೋಕಾಯುಕ್ತ ಹುದ್ದೆಯಿಂದಲೇ ದೂರವಿರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ನೂತನ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಧಾನಸಭೆ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕರು, ಸಭಾಪತಿ, ಸಭಾಧ್ಯಕ್ಷ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ ಎಸ್ ಪಾಟೀಲ್‌ ಅವರನ್ನು ನೇಮಿಸಲು ಸಾಮೂಹಿಕವಾಗಿ ಶಿಫಾರಸ್ಸು ಮಾಡಿದ್ದರು ಎಂಬುದು ‘ದಿ ಫೈಲ್‌’ ಪಡೆದಿರುವ ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ಬಿ ಎಸ್‌ ಪಾಟೀಲ್‌ ಅವರು ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸ್ಥಾನಕ್ಕೆ ದಲಿತ ಅಥವಾ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಗಳನ್ನು ನೇಮಿಸಲು ಅವಕಾಶಗಳಿದ್ದವು. ಆದರೆ ಲಿಂಗಾಯತ ಸಮುದಾಯದವರನ್ನು ಓಲೈಸುವ ಉದ್ದೇಶದಿಂದಲೇ ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ ಎಸ್‌ ಪಾಟೀಲ್‌ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಎಡಗೈ ಸಮುದಾಯಕ್ಕೆ ಸೇರಿರುವ ಹಿಮಾಚಲ ಪ್ರದೇಶದ ಉಚ್ಛ ನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಎಲ್‌ ನಾರಾಯಣಸ್ವಾಮಿ (ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು) ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರಾದರೂ ಇದೇ ಶಿಫಾರಸ್ಸಿನ ಪಟ್ಟಿಯಲ್ಲಿ ಬಿ ಎಸ್‌ ಪಾಟೀಲ್‌ ಅವರ ಹೆಸರೂ ಕೂಡ ಇದೆ.

 

ಬಿ ಎಸ್‌ ಪಾಟೀಲ್‌ ಅವರ ಹೆಸರನ್ನು ಪ್ರತಿಪಕ್ಷ ನಾಯಕರಿಬ್ಬರೂ ಶಿಫಾರಸ್ಸು ಮಾಡಿರುವುದರ ಹಿಂದೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡರೊಬ್ಬರು ಪಾತ್ರ ವಹಿಸಿದ್ದರು ಎಂದು ಗೊತ್ತಾಗಿದೆ.

 

ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಿತುರಾಜ್‌ ಅವಸ್ಥಿ, ವಿಧಾನಸಭೆ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕರು, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರೂ ಸಹ ಬಿ ಎಸ್‌ ಪಾಟೀಲ್‌ ಅವರ ಹೆಸರನ್ನೇ ಶಿಫಾರಸ್ಸು ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಮಾಡಿದ್ದ ಶಿಫಾರಸ್ಸು ಪಟ್ಟಿಯಲ್ಲಿ ಬಿ ಎಸ್ ಪಾಟೀಲ್ ಅವರ ಹೆಸರು ಮೊದಲನೇ ಕ್ರಮಾಂಕದಲ್ಲಿತ್ತು. ಉಳಿದಂತೆ ಅಶೋಕ್‌ ಹಿಂಚಗೇರಿ ಮತ್ತು ಎಡಗೈ ಸಮುದಾಯಕ್ಕೆ ಸೇರಿರುವ ಎಲ್‌ ನಾರಾಯಣಸ್ವಾಮಿ ಅವರ ಹೆಸರು ಮೂರನೇ ಕ್ರಮಾಂಕದಲ್ಲಿತ್ತು.

 

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಮಾಡಿದ್ದ ಶಿಫಾರಸ್ಸು ಪ್ರತಿ

 

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳಿಸಿದ್ದ ಶಿಫಾರಸ್ಸು ಪಟ್ಟಿಯಲ್ಲಿ ಎಲ್ ನಾರಾಯಣಸ್ವಾಮಿ ಅವರ ಹೆಸರು ಮೊದಲನೇ ಕ್ರಮಾಂಕದಲ್ಲಿದ್ದರೆ ಬಿ ಎಸ್‌ ಪಾಟೀಲ್‌ ಅವರ ಹೆಸರು ಎರಡನೇ ಕ್ರಮಾಂಕದಲ್ಲಿತ್ತು.

 

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಶಿಫಾರಸ್ಸಿನ ಪ್ರತಿ

 

ಉಳಿದವರು ಕೇವಲ ಬಿ ಎಸ್‌ ಪಾಟೀಲ್‌ ಅವರೊಬ್ಬರ ಹೆಸರನ್ನೇ ಶಿಫಾರಸ್ಸು ಮಾಡಿದ್ದರು.

 

ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿಫಾರಸ್ಸು ಪ್ರತಿ

 

ಈ ಎಲ್ಲರೂ ಕಳಿಸಿದ್ದ ಶಿಫಾರಸ್ಸು ಪಟ್ಟಿಯಲ್ಲಿಯೂ ಬಿ ಎಸ್ ಪಾಟೀಲ್‌ ಅವರ ಹೆಸರು ಇದ್ದದ್ದರಿಂದ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಅನುಮೋದಿಸಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ವಿಧಾನಪರಿಷತ್‌ನ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರ ಶಿಫಾರಸ್ಸಿನ ಪ್ರತಿ

 

ಉಪ ಲೋಕಾಯುಕ್ತರಾಗಿದ್ದ ಬಿ ಎಸ್ ಪಾಟೀಲ್‌ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಿಸಿರುವುದರಿಂದ ಉಪ ಲೋಕಾಯುಕ್ತ ಹುದ್ದೆಯೂ ಖಾಲಿಯಾಗಿದೆ. ಉಪ ಲೋಕಾಯುಕ್ತರ ನೇಮಕ ಪ್ರಕ್ರಿಯೆ ಆರಂಭವಾಗಿದೆಯಾದರೂ ಇನ್ನು ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಹೀಗಾಗಿ ಉಪ ಲೋಕಾಯುಕ್ತರ ಪರಿಧಿಯಲ್ಲಿ ಒಟ್ಟು 5,985ಕ್ಕೂ ಹೆಚ್ಚು ದೂರು ಪ್ರಕರಣಗಳು ಮತ್ತು 2,405 ಇಲಾಖೆ ಪ್ರಕರಣಗಳು ಮುಂದಿನ ಪ್ರಕ್ರಿಯೆಗಾಗಿ ಬಾಕಿ ಉಳಿದಂತಾಗಿದೆ.

 

ಕರ್ನಾಟಕದಲ್ಲಿ ಲೋಕಾಯುಕ್ತ ಸ್ಥಾಪನೆಯಾಗಿದ್ದ ವರ್ಷದಲ್ಲಿ ಅಂದರೆ 1986ರಲ್ಲಿ ಎ ಡಿ ಕೋಶಾಲ್‌ ಅವರು (1986-1991) ಮೊದಲ ಲೋಕಾಯುಕ್ತರಾಗಿದ್ದರು. ಆ ನಂತರ ರಬೀಂದ್ರನಾಥ (1991-1996), 1996-2001ರವರೆಗೆ ಅಬ್ದುಲ್‌ ಹಕೀಮ್‌, 2001ರಿಂದ 2006ರವರೆಗೆ ಎನ್‌ ವೆಂಕಟಾಚಲ, 2006ರಿಂದ 2011ರವರೆಗೆ ಸಂತೋಷ್‌ ಹೆಗ್ಡೆ, 2011 ಆಗಸ್ಟ್‌ 3ರಿಂದ ಸೆ.2011ರವರೆಗೆ ಶಿವರಾಜ್‌ ಪಾಟೀಲ್‌, 2013ರ ಫೆ.14ರಿಂದ 2015ವರೆಗೆ ವೈ ಭಾಸ್ಕರರಾವ್‌, 2017ರ ಜನವರಿ 28ರಿಂದ 2022ರ ಜನವರಿವರೆಗೆ ಪಿ ವಿಶ್ವನಾಥ್ ಶೆಟ್ಟಿ ಅವರು ಕರ್ನಾಟಕ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

 

ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಪ್ರಕರಣ 3(2)(ಎ) ಅನ್ವಯ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ವಿಧಾನಸಭೆಯ ಸಭಾಧ್ಯಕ್ಷ, ವಿಧಾನಪರಿಷತ್‌ನ ಸಭಾಪತಿ, ಪ್ರತಿಪಕ್ಷ ನಾಯಕರುಗಳೊಂದಿಗೆ ಸಮಾಲೋಚಿಸಿ ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಸೂಕ್ತ ಹೆಸರನ್ನು ಶಿಫಾರಸ್ಸು ಮಾಡಲಾಗುತ್ತದೆ.

the fil favicon

SUPPORT THE FILE

Latest News

Related Posts