ಸಚಿವ ಶ್ರೀರಾಮುಲುವಿಗೆ ಸರ್ಕಾರಿ ಜಮೀನು ನೋಂದಣಿ ಪ್ರಕರಣ; 6 ವರ್ಷದ ನಂತರ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು; ಅಧಿಕಾರ ದುರುಪಯೋಗಪಡಿಸಿಕೊಂಡು ಕಚೇರಿಯಲ್ಲಿ ಸೃಷ್ಟಿಸಿದ್ದ ಸುಳ್ಳು ದಾಖಲಾತಿಗಳನ್ನೇ ನೈಜವೆಂದು ನಂಬಿಸಿ ಸರ್ಕಾರಿ ಜಮೀನನ್ನು ಸೇರಿಸಿ 11.38 ಎಕರೆಗೂ ಅಧಿಕ ವಿಸ್ತೀರ್ಣದ ಜಮೀನನ್ನು ಹಾಲಿ ಸಚಿವ ಬಿ ಶ್ರೀರಾಮುಲು ಅವರಿಗೆ ಹೆಸರಿಗೆ ನೋಂದಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ಶ್ರೀರಾಮುಲು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ ಶಿವಪ್ಪ (ಆಪಾದಿತ-1) ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು 6 ವರ್ಷದ ಬಳಿಕ ಕಡೆಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಲೋಕಾಯುಕ್ತ ನ್ಯಾಯಾಲಯದ ನಿರ್ದೇಶನದ ಮೇರೆಗೆ ಲೋಕಾಯುಕ್ತ ಪೊಲೀಸರು (09/2013) ಕಲಂ 406, 409, 420, 447, 465, 468, 471 120(ಬಿ) ರೆ/ವಿ 34 ಐಪಿಸಿ ಹಾಗೂ 13(1)(ಡಿ) ರೆ/ವಿ 13(2) ಪಿಸಿ ಆಕ್ಟ್ ಹಾಗೂ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ 73, 192(ಎ) ರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಹಾಲಿ ಸಚಿವ ಬಿ ಶ್ರೀರಾಮುಲು ಅವರನ್ನು ಪ್ರಕರಣದಲ್ಲಿ ಆರನೇ ಆಪಾದಿತರನ್ನಾಗಿಸಲಾಗಿದೆ ಎಂದು ತಿಳಿದು ಬಂದಿದೆ.

 

2016ರಲ್ಲೇ ಅಂತಿಮ ತನಿಖಾ ವರದಿ ಸಲ್ಲಿಸಿದ್ದರೂ ಲೋಕಾಯುಕ್ತ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿರಲಿಲ್ಲ. ಈ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಕಳೆದ ಐದಾರು ವರ್ಷಗಳಿಂದಲೂ ಕುಂಟನೆಪವೊಡ್ಡಿದ್ದರು. ಕಳ್ಳಾಟ ನಡೆಸುತ್ತಲೇ ವಿಳಂಬ ತಂತ್ರ ಅನುಸರಿಸಿದ್ದ ಲೋಕಾಯುಕ್ತ ಪೊಲೀಸರು 2022ರ ಏಪ್ರಿಲ್‌ 18ರಂದೇ 82ನೇ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿಯನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಪ್ರಕರಣದ ವಿವರ

 

ಬಳ್ಳಾರಿಯ ಕೌಲ್‌ ಬಜಾರ್ ಬಳಿಯ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ಸರ್ವೆ ನಂಬರ್‌ 597/ಬಿ2ಎ1ರ ಪೈಕಿ 3.50 ಎಕರೆ ಜಮೀನು ಹಂಪಮ್ಮ ಎಂಬುವರು ಹಿಡುವಳಿ ಮಾಲೀಕರಾಗಿದ್ದರು. ಅದೇ ರೀತಿ ಸರ್ವೆ ನಂಬರ್‌ 597/ಬಿ2ಎ3 ರ ಪೈಕಿ 4.00 ಎಕರೆ ವಿಸ್ತೀರ್ಣ ಜಮೀನಿಗೆ ದ್ರಾಕ್ಷಾಯಣಮ್ಮ ಅವರು ಮಾಲೀಕರಾಗಿದ್ದರೆ, ಸರ್ವೆ ನಂಬರ್‌ 597/ಬಿ2ಎ1ಎ1ರ ಪೈಕಿ 0-50 ಸೆಂಟ್ಸ್‌ ಜಮೀನಿಗೆ ಖಂಡೋಜಿರಾವ್‌ ಎಂಬುವರು ಮಾಲೀಕರಾಗಿದ್ದರು. ಹಾಗೆಯೇ ಸರ್ವೇ ನಂಬರ್‌ 597/ಬಿ2ಎ1ಎ1ರ ಪೈಕಿ 2.88 ಎಕರೆ ಜಮೀನು ಬಾಪಟ್ಲ ಬಾಪುರಾವ್‌ ಅವರ ಹೆಸರಿನಲ್ಲಿತ್ತು. ಸರ್ವೆ ನಂಬರ್‌ 597/ಬಿ2ಎ1ಎ2ರ ಪೈಕಿ 0.50 ಸೆಂಟ್ಸ್‌ ಜಮೀನು ಡಿ ಲಕ್ಷ್ಮಿದೇವಿ, ಎಂ ರುಕ್ಮೀಣಮ್ಮ, ಎ ಪಿ ಮೋಹನ ವೇಲು ಮೊದಲಿಯಾರ್‌ ಎಂಬುವರ ಹೆಸರಿನಲ್ಲಿತ್ತು.

 

ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿ ಪ್ರತಿ

 

ಈ ಜಮೀನುಗಳನ್ನು ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳಾದ ಕೃಷ್ಣಮೂರ್ತಿ, ಪುರಂದರ, ಭಾಗ್ಯಲಕ್ಷ್ಮಿ, ಪರಿಮಳದೇವಿ, ದಿವಂಗತ ಎ ದಿವಾಕರ್‌ ಅವರ ಪತ್ನಿ ಎ ಆಶಾಲತಾ, ಇವರ ಮಕ್ಕಳಾದ ಎ ವಿ ಎಸ್‌ ಪ್ರಸಾದ್‌, ಎ ಬಿ ಎಸ್‌ ಚಕ್ರವರ್ತಿ, ಎ ಹಿಮಬಿಂದು, ಎ ಕುಮುದಿನಿ ಅವರ ಹೆಸರಿಗೆ ಅಂದಿನ ಸಹಾಯಕ ಆಯುಕ್ತ ಆರ್‌ ವೆಂಕಟೇಶಲು (ಆಪಾದಿತ 2) ಎಂಬವರು ಕಾನೂನು ರೀತಿ ಸಕಾರಾತ್ಮಕವಲ್ಲದ ಮ್ಯುಟೇಷನ್‌ ಮಾಡಿ ಪಹಣಿಗಳನ್ನು ಹೊರಡಿಸಿದ್ದರು ಎಂಬುದು ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿಯಿಂದ ತಿಳಿದು ಬಂದಿದೆ.

 

 

ಸಚಿವ ಬಿ ಶ್ರೀರಾಮಲು ಅವರು ಸರ್ವೆ ಲೆಕ್ಕ ದಾಖಲೆಗಳಲ್ಲಿ ಮತ್ತು ಆರ್‌ ಟಿ ಸಿ ಗಳಿಗೆ ತಕ್ಕಂತೆ ವಿಸ್ತೀರ್ಣ ಸರಿ ಇಲ್ಲ. ಜಮೀನುಗಳ ಸ್ಥಳ ಪರಿಶೀಲನೆ ನಡೆಸಿ ಉಳಿದ ವಿಸ್ತೀರ್ಣವನ್ನು ತನ್ನ ಹೆಸರಿನಲ್ಲಿ ಪಟ್ಟಾ ಬದಲಾವಣೆ ಮಾಡಿ ನಕಾಶೆ ತಯಾರಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಇದನ್ನಾಧರಿಸಿ ಆಗಿನ ತಹಶೀಲ್ದಾರ್ ಶಶಿಧರ ಬಗಲಿ ಅವರು ‘ಶ್ರೀರಾಮುಲು ಅವರಿಗೆ ಸಹಕರಿಸುವ ದುರುದ್ದೇಶದಿಂದಲೇ ತಮ್ಮ ಕಚೇರಿಯಲ್ಲೇ ಸುಳ್ಳು ಪಹಣಿ ಸೃಷ್ಟಿಸಿ ಅವನ್ನೇ ನೈಜವೆಂದು ಬಿಂಬಿಸಲಾಗಿತ್ತು’ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಇದನ್ನಾಧರಿಸಿಯೇ ಅಂದಿನ ತಹಶೀಲ್ದಾರ್‌ ಆಗಿದ್ದ ಶಶಿಧರ ಬಗಲಿ ಅವರು (ಆಪಾದಿತ -3) ಕಂದಾಯ ನಿರೀಕ್ಷಕ ವೀರೇಶ್‌ ಬಾಬು (ಆಪಾದಿತ -4) ಅವರ ಜತೆ ಸೇರಿಕೊಂಡು ಮತ್ತು ತಮ್ಮ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡು ಅಂದಿನ ಶಾಸಕರೂ ಆಗಿದ್ದ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದಲೇ ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳ ಹೆಸರಿನಲ್ಲಿ ಹಕ್ಕು ಬದಲಾವಣೆ ಮಾಡಿ ಪಹಣಿಗಳನ್ನು ಮಾಡಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

 

ಶ್ರೀರಾಮುಲು ಅವರಿಗೆ ಸಹಕರಿಸಿದ್ದಾರೆ ಎಂದು ಆರೋಪಕ್ಕೀಡಾಗಿದ್ದ ಆಗಿನ ತಹಶೀಲ್ದಾರ್‌ ಶಶಿಧರ್‌ ಬಗಲಿ(ಆರೋಪಿ 3) ಅವರ ವಿರುದ್ಧ ವಿಚಾರಣೆಗೆ ಸರ್ಕಾರ, 2017ರ ಮೇ 39 ರಂದು ಅನುಮತಿ ನೀಡಿತ್ತು. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು 8 ಮಂದಿಯನ್ನು ಆರೋಪಿಗಳನ್ನಾಗಿಸಿದ್ದಾರೆ. ಡಿ.ಶಿವಪ್ಪ, ಬಳ್ಳಾರಿಯ ಹಿಂದಿನ ಅಸಿಸ್ಟಂಟ್‌ ಕಮಿಷನರ್‌ ವೆಂಕಟೇಶಲು, ಹಿಂದಿನ ತಹಶೀಲ್ದಾರ್‌ ಶಶಿಧರ್‌ ಬಗಲಿ, ಕಂದಾಯ ಅಧಿಕಾರಿ ವೀರೇಶ್‌ ಬಾಬು, ಭೂ ದಾಖಲೆಗಳ ಉಪ ನಿರ್ದೇಶಕ ನಾರಾಯಣಸ್ವಾಮಿ ಆರೋಪಿ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

 

ಲೋಕಾ ಪೊಲೀಸರ ಕಾಲಹರಣ

 

ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರಲಿಲ್ಲ. ದೋಷಾರೋಪಣೆ ಪಟ್ಟಿ ಸಲ್ಲಿಸಲು ವಿಧಾನಸಭೆ ಅಧ್ಯಕ್ಷರ ಅನುಮತಿ ಬೇಕಾಗಿದೆ ಎಂಬ ನೆಪ ಹೂಡಿ ವಿಚಾರಣೆ ಪ್ರಕ್ರಿಯೆಯನ್ನೇ ಮುಂದೂಡಿದ್ದರು.

 

ಶ್ರೀರಾಮುಲು ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮತ್ತು ವಿಚಾರಣೆ ಪ್ರಕ್ರಿಯೆ ಮುಂದುವರೆಸಲು ಅನುಮತಿ ನೀಡುವುದಕ್ಕೆ 13 ಮತ್ತು 15ನೇ ವಿಧಾನಸಭೆಯ ಸಭಾಧ್ಯಕ್ಷರು ಸಕ್ಷಮ ಪ್ರಾಧಿಕಾರವಲ್ಲ. ಹೀಗಾಗಿ ಲೋಕಾಯುಕ್ತ ಪೊಲೀಸರು ಸಭಾಧ್ಯಕ್ಷರ ಅನುಮತಿ ಆದೇಶಕ್ಕೆ ಕಾಯದೆ ನೇರವಾಗಿ ಮುಂದಿನ ಕ್ರಮವನ್ನು ಕೈಗೊಳ್ಳಬಹುದು,’ ಎಂದು ಹಿಂದಿನ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಅವರು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ 2019ರ ಜೂನ್‌ 20ರಂದೇ ಲಿಖಿತ ಅಭಿಪ್ರಾಯ ಕೊಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಅವರು 2018ರ ಸೆ.26ರಂದೂ ಇದೇ ಅಭಿಪ್ರಾಯವನ್ನೇ ನೀಡಿದ್ದರು.

 

ಹೀಗಾಗಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ಯಾರು ನೀಡಬೇಕು ಎಂಬ ಬಗ್ಗೆ ಲೋಕಾಯುಕ್ತ ಪೊಲೀಸರಲ್ಲಿ ಗೊಂದಲವಿತ್ತು. ಲೋಕಸಭೆ ಸಚಿವಾಲಯ ಮತ್ತು ವಿಧಾನಸಭೆ ಸಚಿವಾಲಯ ಶ್ರೀರಾಮುಲು ಅವರ ವಿಚಾರಣೆಗೆ ಅನುಮತಿ ನೀಡುವುದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡೂ ಸಚಿವಾಲಯಗಳು ನುಣುಚಿಕೊಂಡಿದ್ದವು. ಇದೇ ಗೊಂದಲವನ್ನು ಮುಂದಿಟ್ಟುಕೊಂಡಿದ್ದ ಲೋಕಾಯುಕ್ತ ಪೊಲೀಸರೂ ಕಾಲಹರಣ ಮಾಡಿದ್ದರು.

 

ಈ ಮಧ್ಯೆ ಸ್ಪಷ್ಟತೆ ಪಡೆಯುವ ಸಂಬಂಧ ಲೋಕಾಯುಕ್ತ ಪೊಲೀಸ್‌ ವಿಭಾಗ ಕಾನೂನು ವಿಭಾಗಕ್ಕೆ ಪತ್ರ ಬರೆದು ಅಭಿಪ್ರಾಯ ಕೋರಿತ್ತು. ಈ ವಿಭಾಗವೂ ಸ್ಪಷ್ಟ ಅಭಿಪ್ರಾಯ ನೀಡದ ಕಾರಣ ಲೋಕಾಯುಕ್ತ ಪೊಲೀಸರು ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಪತ್ರ ಬರೆದು ಅನುಮತಿ ಕೋರಿದ್ದರು. ರಮೇಶ್‌ಕುಮಾರ್‌ ಕೂಡ ಅನುಮತಿ ನೀಡುವ ಮುನ್ನ ಅಡ್ವೋಕೇಟ್‌ ಜನರಲ್‌ ಕಚೇರಿ ಕದ ತಟ್ಟಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts