ಬೆಂಗಳೂರು; ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿ 48 ಗಂಟೆ ಕಳೆದರೂ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಶಾಲಾ ಬಾಲಕಿಯರ ಹೇಳಿಕೆ ದಾಖಲಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೆಕ್ಷನ್ 164 ಹೇಳಿಕೆಯನ್ನು ವಿಳಂಬವಾಗಿ ಪಡೆದ ಕಾರಣಕ್ಕೇ ಪೋಕ್ಸೋ ಅಡಿಯಲ್ಲಿಯೇ ಆರೋಪಿತನಾಗಿದ್ದ ಚಿತ್ರದುರ್ಗದ ಶಿಕ್ಷಕನೋರ್ವನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಮುರುಘಾ ಶರಣರ ಪ್ರಕರಣದಲ್ಲಿಯೂ ಇದು ಪುನರಾವರ್ತಿತವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡ ನಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲದ ಕಾರಣ ಈ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಜಿಲ್ಲಾ ಪೊಲೀಸರು ಅನುಸರಿಸಿರುವ ವಿಳಂಬ ತಂತ್ರಗಾರಿಕೆಯು ಪರೋಕ್ಷವಾಗಿ ಮುರುಘಾ ಶರಣರಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮುರುಘಾ ಶ್ರೀಗಳ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಿದೆ. ಡಾ ಶಿವಮೂರ್ತಿ ಶರಣರು ಸೋಮವಾರದಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವುದಕ್ಕೆ ಪೊಲೀಸರು ಅನುಸರಿಸಿರುವ ವಿಳಂಬ ತಂತ್ರಗಾರಿಕೆಯೇ ಮೂಲ ಕಾರಣ ಎಂದು ಕಾನೂನು ತಜ್ಞರು, ಸಾಮಾಜಿಕ ಹೋರಾಟಗಾರರು ಶಂಕೆ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದ ಚಿತ್ರದುರ್ಗ ಶಾಲಾ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯ ತಾಯಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದ.
ಅಪ್ರಾಪ್ತರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿಯೇ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದ್ದು ಇದರಡಿಯಲ್ಲಿ ಆರೋಪಿಗಳ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಲಬಹುದು. ಈ ಕಾಯ್ದೆಯ ಸೆಕ್ಷನ್ 438 ಅಡಿಯಲ್ಲಿ ಯಾವುದೇ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಆದರೂ ಆರೋಪಿ ಶಿಕ್ಷಕನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
164 ಹೇಳಿಕೆ ಪಡೆಯಲು ವಿಳಂಬ
ಸರ್ಕಾರಿ ವಕೀಲರ ವಾದವನ್ನು ಒಪ್ಪದ ನ್ಯಾಯಪೀಠವು ಪೋಕ್ಸೋ ಕಾಯ್ದೆಯ ನಿಯಮಗಳ ಅನುಸಾರ ದೂರು ದಾಖಲಾದ ತಕ್ಷಣ ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಮೇ ತಿಂಗಳಲ್ಲಿಯೇ ದೂರು ದಾಖಲಾಗಿದ್ದರೂ, ದೂರುದಾರ ಪೋಷಕರು ಮತ್ತು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾದ ಆರು ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಸೆಕ್ಷನ್ 164ರ ಅಡಿಯಲ್ಲಿ ಏಕೆ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿತ್ತು.
ಇದಕ್ಕೆ ಸರ್ಕಾರಿ ವಕೀಲರು ನೀಡಿದ್ದ ಉತ್ತರದಿಂದ ತೃಪ್ತವಾಗದ ನ್ಯಾಯಪೀಠವು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ದೂರು ದಾಖಲಾದ ನಂತರವೂ ಶಿಕ್ಷಕ ತನ್ನ ಕರ್ತವ್ಯದಲ್ಲಿ ಮುಂದುವರಿದಿದ್ದ. ಆತನನ್ನು ಬಂಧಿಸಲು ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಅವರನ್ನು ಬಂಧಿಸುವ ಅನಿವಾರ್ಯತೆಯಿಲ್ಲ. ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದರಿಂದ ತನಿಖೆಗೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ತೀರ್ಪು ನೀಡಿದ್ದನ್ನು ಸ್ಮರಿಸಬಹುದು.
ಆರೋಪಿ ನಿರೀಕ್ಷಣಾ ಜಾಮೀನು ಪಡೆದ 15 ದಿನಗಳಲ್ಲಿ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು. ಆರೋಪಿ 1 ಲಕ್ಷ ರೂ. ಬಾಂಡ್ ಮತ್ತು ಎರಡು ಶ್ಯೂರಿಟಿಗಳನ್ನು ಒದಗಿಸಬೇಕು. ಮತ್ತು ತನಿಖೆಗೆ ಸಹಕರಿಸಬೇಕು ಎಂದು ತೀರ್ಪು ನೀಡಿತ್ತು.
ಚಿತ್ರದುರ್ಗದ ಪ್ರಕರಣವೇನು?
ಚಿತ್ರದುರ್ಗದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಇದ್ದಕ್ಕಿದ್ದ ಹಾಗೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಳು. ಈ ಕುರಿತು ಆಕೆಯ ಪೋಷಕರು ವಿಚಾರಿಸಿದಾಗ, ಆಕೆ ತನ್ನ ಮೇಲೆ ಶಾಲೆಯ ಸಹಾಯಕ ಶಿಕ್ಷಕನೋರ್ವ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ತನಗಷ್ಟೇ ಅಲ್ಲದೆ, ಬೇರೆ ವಿದ್ಯಾರ್ಥಿಗಳಿಗೆ ಕೂಡ ಇದೇ ರೀತಿ ತೊಂದರೆ ನೀಡುತ್ತಿದ್ದಾರೆ ಎಂಬ ವಿಷಯ ತಿಳಿಸಿದ್ದಳು.
ಪಾಠ ಮಾಡುವ ನೆಪದಲ್ಲಿ ಶಿಕ್ಷಕ ತನ್ನ ಕೆನ್ನೆ ಹಿಂಡುವುದು, ಎದೆ, ಸೊಂಟವನ್ನು ಗಿಲ್ಲುವ ಮೂಲಕ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆ ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಳು. ಈಕೆಯ ತಾಯಿ ಶಾಲೆಗೆ ಭೇಟಿ ನೀಡಿ ಆಕೆಯ ಸ್ನೇಹಿತೆಯರನ್ನು ವಿಚಾರಿಸಿದಾಗ, ಅವರು ಕೂಡ ಇದೇ ಅನುಭವ ಹಂಚಿಕೊಂಡಿದ್ದರು. ಆಕ್ರೋಶಗೊಂಡ ಪೋಷಕರು ಶಾಲೆಗೆ ಭೇಟಿಯಾಗಿ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಆದರೆ, ಶಾಲಾ ಆಡಳಿತ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಆರು ವಿದ್ಯಾರ್ಥಿಗಳು ಕೂಡ ತಮಗಾದ ಕಹಿ ಅನುಭವಗಳನ್ನು ಉಲ್ಲೇಖಿಸಿದ್ದರು.
ಚಿತ್ರದುರ್ಗದ ಮುರುಘಾ ಶರಣರ ವಿರುದ್ಧವೂ ಶಾಲಾ ಬಾಲಕಿಯರಿಬ್ಬರು ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತು ದೂರು ಸಲ್ಲಿಸಿದ್ದರು. ಈ ಸಂಬಂಧ ಮೈಸೂರಿನ ನಜರಾಬಾಧ್ ಪೊಲೀಸ್ ಠಾಣೆಯಲ್ಲಿ ಮುರುಘಾ ಶರಣರು ಸೇರಿದಂತೆ ಇನ್ನಿತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಾಲಾ ಶಿಕ್ಷಕನನ್ನು ಬಂಧಿಸಿಯೂ ಇರಲಿಲ್ಲ ಮತ್ತು ವಿದ್ಯಾರ್ಥಿಗಳಿಂದ ಸೆಕ್ಷನ್ 164 ಹೇಳಿಕೆಯನ್ನು ದಾಖಲಿಸಿಕೊಂಡಿರಲಿಲ್ಲ. ಪೊಲೀಸರ ಈ ಕ್ರಮದಿಂದಾಗಿಯೇ ಆರೋಪಿಗೆ ಹೈಕೋರ್ಟ್‌ನಿಂದಲೇ ಸುಲಭವಾಗಿ ಜಾಮೀನು ದೊರೆತ್ತಿತ್ತು. ಅಪ್ರಾಪ್ತೆಯರ ರಕ್ಷಣೆಗೆಂದು ರಚಿಸಲಾಗಿರುವ ಪೋಕ್ಸೋ ಕಾಯ್ದೆಯ ಆರೋಪಿಯೋರ್ವನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು ಚರ್ಚೆಗೆ ಗ್ರಾಸವಾಗಿದ್ದನ್ನು ಸ್ಮರಿಸಬಹುದು.