ಬೆಂಗಳೂರು; ಅಶೋಕ ಸ್ತಂಭದಲ್ಲಿರುವ ಸಿಂಹಗಳನ್ನು ಒಳಗೊಂಡ ರಾಷ್ಟ್ರೀಯ ಲಾಂಛನವನ್ನು ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ಕಚೇರಿಗಳ ಕಟ್ಟಡದ ಮೇಲೆ ಪ್ರದರ್ಶಿಸುವ ಸಂಬಂಧ ರಾಜ್ಯ ಬಿಜೆಪಿ ಸರ್ಕಾರವು ಸ್ಪಷ್ಟನೆ ಬಯಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರ ಲಾಂಛನದ ಸ್ವರೂಪವನ್ನು ತಿರುಚಿದೆ ಎಂದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರವು 2022ರ ಆಗಸ್ಟ್ 23ರಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ರಾಜ್ಯ ಸರ್ಕಾರದ ಜಿಲ್ಲಾ ಮ್ಯಾಜಿಸ್ಟ್ರೇಟ್/ಕಮಿಷನರ್ ಕಚೇರಿ ಕಟ್ಟಡಗಳ ಮೇಲೆ ಪ್ರದರ್ಶಿಸಲು ಸ್ಪಷ್ಟನೆ ಬಯಸಿದೆ. ಭಾರತೀಯ ರಾಜ್ಯ ಲಾಂಛನ (ನಿಯಂತ್ರಣ) ಅಧಿನಿಯಮ ಪ್ರಕಾರ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಗಳ ಮೇಲೆ ಪ್ರದರ್ಶಿಸಬಹುದೇ ಇಲ್ಲವೇ, ಭಾರತದ ರಾಜ್ಯ ಲಾಂಛನ (ಬಳಕೆಯ ನಿಯಂತ್ರಣ) ಅಧಿನಿಯಮ 2007ರ ತಿದ್ದುಪಡಿ ಅಧಿಸೂಚನೆ, ಭಾರತದ ರಾಜ್ಯ ಲಾಂಛನ (ಬಳಕೆಯ ನಿಯಂತ್ರಣ) ಅಧಿನಿಯಮ 2010ರಂತೆ ಅಥವಾ ಕೇಂದ್ರ ಸರ್ಕಾರದ ಸಚಿವಾಲಯವು ಮಾಡಿರುವ ನಿಯಮಗಳನ್ನು ಅನುಸರಿಸಬೇಕೇ ಎಂಬ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.
2007ರ ಅಧಿನಿಯಮದಲ್ಲೇನಿದೆ?
ಸಾರ್ವಜನಿಕ ಕಟ್ಟಡಗಳ ಮೇಲೆ ಪ್ರದರ್ಶನ ಕುರಿತು ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸಿದೆ.
(1) ಲಾಂಛನವನ್ನು ರಾಷ್ಟ್ರಪತಿ ಭವನ, ಸಂಸತ್ ಭವನ, ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವಾಲಯದ ಕಟ್ಟಡಗಳಂತಹ ಅತ್ಯಂತ ಪ್ರಮುಖ ಸಾರ್ವಜನಿಕ ಕಟ್ಟಡಗಳ ಮೇಲೆ ಪ್ರದರ್ಶಿಸಬಹುದು.
(2) ಲಾಂಛನವನ್ನು ರಾಜ್ ಭವನ ಅಥವಾ ರಾಜ್ ನಿವಾಸ್ ಮತ್ತು ಲಾಂಛನವನ್ನು ಅಳವಡಿಸಿಕೊಂಡ ಅಥವಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಲಾಂಛನದಲ್ಲಿ ಲಾಂಛನವನ್ನು ಅಳವಡಿಸಿರುವ ರಾಜ್ಯಗಳ ಅಥವಾ ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಶಾಸಕಾಂಗ, ಉಚ್ಚ ನ್ಯಾಯಾಲಯಗಳು ಮತ್ತು ಸಚಿವಾಲಯದ ಕಟ್ಟಡಗಳಲ್ಲಿ ಪ್ರದರ್ಶಿಸಬಹುದು. .
(3) ಲಾಂಛನವನ್ನು ವಿದೇಶದಲ್ಲಿರುವ ಭಾರತದ ರಾಜತಾಂತ್ರಿಕ ಮಿಷನ್ ಆವರಣದಲ್ಲಿ ಪ್ರದರ್ಶಿಸಬಹುದು ಮತ್ತು ಮಿಷನ್‌ಗಳ ಮುಖ್ಯಸ್ಥರು ತಮ್ಮ ಮಾನ್ಯತೆ ಪಡೆದ ದೇಶಗಳಲ್ಲಿನ ತಮ್ಮ ನಿವಾಸಗಳಲ್ಲಿ ಲಾಂಛನವನ್ನು ಪ್ರದರ್ಶಿಸಬಹುದು.
(4) ಲಾಂಛನವನ್ನು ವಿದೇಶದಲ್ಲಿ ಭಾರತದ ದೂತಾವಾಸಗಳು ಆಕ್ರಮಿಸಿಕೊಂಡಿರುವ ಕಟ್ಟಡಗಳ ಮೇಲೆ ಅದರ ಪ್ರವೇಶ ದ್ವಾರಗಳಲ್ಲಿ ಮತ್ತು ಅವರ ಮಾನ್ಯತೆ ಪಡೆದ ದೇಶಗಳಲ್ಲಿ ಕಾನ್ಸುಲರ್ ಹುದ್ದೆಗಳ ಮುಖ್ಯಸ್ಥರ ನಿವಾಸಗಳಲ್ಲಿ ಪ್ರದರ್ಶಿಸಬಹುದು.
ಭಾರತದ ರಾಷ್ಟ್ರ ಲಾಂಛನದ ವಿವರಣೆ ಮತ್ತು ವಿನ್ಯಾಸದ ಕುರಿತು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ 2005ರಲ್ಲೂ ಜಾರಿಗೆ ತರಲಾಗಿತ್ತು. ಇದರ ಪ್ರಕಾರ ಯಾರೇ ವ್ಯಕ್ತಿಯು ನಿಯಮಿಸಬಹುದಾದಂಥ ಪ್ರಕರಣಗಳಲ್‌ಲಿ ಮತ್ತು ಅಂಥ ಷರತ್ತುಗಳನ್ನು ಹೊರತುಪಡಿಸಿ, ಯಾವುದೇ ವ್ಯಾಪಾರ, ವ್ಯವಹಾಋ, ಅಜೀವಿಕೆ ಅಥವಾ ವೃತ್ತಿಯ ಉದ್ದೇಶಕ್ಕಾಗಿ ಅಥವಾ ಯಾವುದೇ ಪೇಟೆಂಡ್ ಹಕ್ಕು ಸ್ವಾಮ್ಯದಲ್ಲಿ ಅಥವಾ ಯಾವುದೇ ವ್ಯಾಪಾರ ಚಿಹ್ನೆಯಲ್ಲಿ ಅಥವಾ ವಿನ್ಯಾಸದಲ್ಲಿ ಲಾಂಛನವನ್ನು ಬಳಸತಕ್ಕದ್ದಲ್ಲ ಎಂದಿದೆ.
ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್ ಭವನದ ಕಟ್ಟಡದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದ ಲಾಂಛನದಲ್ಲಿರುವ ಸಿಂಹಗಳು ಕೆರಳಿದ ರೂಪದಲ್ಲಿದ್ದವು. ಆದರೆ ಅಶೋಕ ಸ್ತಂಭದಿಂದ ಆಯ್ಕೆ ಮಾಡಿಕೊಳ್ಳಲಾಗಿರುವ ಲಾಂಛನದಲ್ಲಿರುವ ಸಿಂಹಗಳು ಘನಗಂಭೀರ ಭಾವದಲ್ಲಿದ್ದವು. ಈ ಕುರಿತು ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.