ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲಕ್ಷಾಂತರ ರುಪಾಯಿ ವಸೂಲಿ, ಅಕ್ರಮ ಹಣವರ್ಗಾವಣೆ ಆರೋಪ

ಬೆಂಗಳೂರು; ರಾಜ್ಯದ ಪ್ರತಿಷ್ಟಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಒಡೆತನದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಮಧ್ಯವರ್ತಿಗಳ ಮೂಲಕ ಕಾನೂನುಬಾಹಿರವಾಗಿ ಲಕ್ಷಾಂತರ ರುಪಾಯಿಗಳನ್ನು ಸಂಗ್ರಹಿಸುತ್ತಿವೆ ಎಂಬ ದೂರುಗಳು ಸಲ್ಲಿಕೆಯಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಸೀಟು ದೊರಕದೇ ವಂಚನೆಗೊಳಾಗುತ್ತಿದ್ದಾರೆ.

 

2022-23ನೇ ಶೈಕ್ಷಣಿಕ ವರ್ಷದಲ್ಲಿಯೂ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಎನ್‌ಆರ್‌ಐ ಕೋಟಾ ಮತ್ತು ಆಡಳಿತ ಮಂಡಳಿ ಕೋಟಾದಡಿಯಲ್ಲಿನ ಸೀಟುಗಳನ್ನು ಲಕ್ಷಾಂತರ ರುಪಾಯಿಗಳಿಗೆ ಮಾರಾಟ ಮಾಡುತ್ತಿವೆ. ಈ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದೆ ಎಂದು ಜಿ ಕೆ ಅಸೋಸಿಯೇಟ್ಸ್‌ನ ರಮೇಶ್‌ನಾಯಕ್ ಮತ್ತಿತರರು ದಾಖಲೆ ಸಮೇತ ಸಲ್ಲಿಸಿರುವ ದೂರುಗಳನ್ನು ಕಸದಬುಟ್ಟಿಗೆ ಎಸೆದಿದೆ. ಅಲ್ಲದೆ  ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್‌ನಾರಾಯಣ್‌ ಅವರು ಸಹ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಸೀಟ್‌ ಮ್ಯಾಟ್ರಿಕ್ಸ್‌, ಕಾಮೆಡ್‌ ಕೆ, ಆಡಳಿತ ಮಂಡಳಿ ಕೋಟಾದ ಸೀಟು ಹಂಚಿಕೆ, ಬೋಧನಾ ಶುಲ್ಕ ಸಂಗ್ರಹದ ಬಗ್ಗೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮತ್ತು ಎಐಸಿಟಿಯು ಹಲವು ಸುತ್ತೋಲೆ, ಅಧಿಸೂಚನೆಗಳನ್ನು ಹೊರಡಿಸಿದ್ದರೂ ಯಾವುದನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಜಿ ಕೆ ಅಸೋಸಿಯೇಟ್ಸ್‌ನ ರಮೇಶ್‌ ನಾಯಕ್‌ ಮತ್ತಿತರರು ಪ್ರವೇಶಾತಿ ಮೇಲ್ವಿಚಾರಣೆ ಸಮಿತಿ ಮತ್ತು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಜುಲೈ 28ರಂದು ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಖಾಸಗಿ ಕಾಲೇಜುಗಳಲ್ಲಿ ಸೀಟುಗಳಿಗೆ ಪ್ರವೇಶ ನೀಡುವ ಸಂಬಂಧ ಮಧ್ಯವರ್ತಿಗಳು ಅಂತರ್ಜಾಲದಲ್ಲಿ ಜಾಹೀರಾತು ನೀಡುತ್ತಿದ್ದಾರೆ. ಸೀಟು ಹಂಚಿಕೆ ಸಂಬಂಧ ಅರ್ಹತಾ ಪಟ್ಟಿ ತಯಾರಿಸದೇ ಮತ್ತು ಪ್ರಕಟಿಸದೆಯೇ ಮಧ್ಯವರ್ತಿಗಳ ಮೂಲಕ ಕ್ಯಾಪಿಟೇಷನ್‌ ಶುಲ್ಕವನ್ನೂ ಸಂಗ್ರಹಿಸುತ್ತಿದೆ. ಆಡಳಿತ ಮಂಡಳಿ ಮತ್ತು ಎನ್‌ಆರ್‌ಐ ಕೋಟಾದಡಿಯಲ್ಲಿ ಲಭ್ಯವಿರುವ ಸೀಟುಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದು ರಮೇಶ್‌ನಾಯಕ್‌ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ರಮೇಶ್‌ನಾಯಕ್‌ ಅವರು ಇ-ಮೈಲ್‌ ಮೂಲಕ ಸಲ್ಲಿಸಿರುವ ದೂರಿನ ಪ್ರತಿ

 

ಎಂ ಎಸ್‌ ರಾಮಯ್ಯ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಆರ್‌ ವಿ ಇಂಜಿನಿಯರಿಂಗ್ ಕಾಲೇಜು, ಸರ್‌ ಎಂ ವಿಶ್ವೇಶ್ವರಾಯ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬಿಎನ್‌ಎಂ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಯಾನಂದ ಸಾಗರ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಬೆಂಗಳೂರು ಇನ್ಸಿಟಿಟ್ಯುಟ್‌ ಆಫ್‌ ಟೆಕ್ನಾಲಜಿ, ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಅಫ್‌ ಟೆಕ್ನಾಲಜಿ, ಮೈಸೂರು, ಅಚಾರ್ಯ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಪಿಇಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜುಗಳ ಹೆಸರುಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಅರ್ಹತಾ ಪಟ್ಟಿ ಪ್ರಕಟಿಸದೆಯೇ ಏಜೆಂಟರ ಮೂಲಕ ಮತ್ತು ನೇರವಾಗಿ ಟ್ರಸ್ಟಿಗಳ ಮೂಲಕ ಅಕ್ರಮವಾಗಿ ಲಕ್ಷಾಂತರ ರುಪಾಯಿಗಳನ್ನು ನಗದು ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಕೆಲವು ವಿದ್ಯಾರ್ಥಿಗಳಿಂದ ಹೆಚ್ಚಿನ ಬೋಧನಾ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ ಎಂದು ರಮೇಶ್‌ನಾಯಕ್‌ ಅವರು ದೂರಿದ್ದಾರೆ.
2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಬೋಧನಾ ಶುಲ್ಕ ಮತ್ತು ಪ್ರವೇಶ ನೀತಿಯನ್ನು ರೂಪಿಸಿಲ್ಲ. ಖಾಸಗಿ ಕಾಲೇಜುಗಳು ಯಾವುದೇ ಅರ್ಹತಾ ಪಟ್ಟಿಯನ್ನು ತಯಾರಿಸಿಲ್ಲ. ಎಐಸಿಟಿಇ, ಯುಜಿಸಿ ಮಾನದಂಡಗಳನ್ನು ಅನುಸರಿಸಿಲ್ಲ. ಸ್ವೀಕರಿಸಿದ ಅರ್ಜಿಗಳಿಗೆ ಸ್ವೀಕೃತಿಯನ್ನೂ ನೀಡಿಲ್ಲ. ಹೀಗಾಗಿ 2022-23ನೇ ಶೈಕ್ಷಣಿಕ ವರ್ಷದ ಆಯ್ಕೆಪಟ್ಟಿಯೇ ಕಾನೂನುಬಾಹಿರ ಮತ್ತು ಅನೂರ್ಜಿತವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಬಿಎಂಎಸ್‌ ಶೈಕ್ಷಣಿಕ ಟ್ರಸ್ಟ್ ನಿರ್ವಹಿಸುವ 4 ಕಾಲೇಜುಗಳಲ್ಲಿ ಬಿಇ, ಮತ್ತು ಬಿಇ ಆರ್ಕಿಟೆಕ್ಚರ್‌ ಕೋರ್ಸ್‌ಗಳಿಗೆ ಜೂನ್ ಮೊದಲನೇ ವಾರದಿಂದ ತಾತ್ಕಾಲಿಕ ಸೀಟು ಹಂಚಿಕೆ ಪತ್ರಗಳನ್ನು ನೀಡಲಾಗುತ್ತಿದೆ. ಪಾರದರ್ಶಕವಾಗಿ ಮೆರಿಟ್ ಪಟ್ಟಿಯನ್ನು ತಯಾರಿಸದೆಯೇ ಅಕ್ರಮ ಬೋಧನಾ ಶುಲ್ಕವನ್ನು ಬಿಎಂಎಸ್‌ ಶೈಕ್ಷಣಿಕ ಖಾತೆಗೆ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

‘ಮೆರಿಟ್ ಲಿಸ್ಟ್ ಮಾಡದೆ ಸೀಟು ಹಂಚಿಕೆ ಮಾಡಲು ಏಜೆಂಟರ ಮೂಲಕ ಮತ್ತು ನೇರವಾಗಿ ಟ್ರಸ್ಟಿಗಳ ಮೂಲಕ ಅಕ್ರಮವಾಗಿ ಲಕ್ಷ ರೂಪಾಯಿ ನಗದು ಸಂಗ್ರಹಿಸಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳಿಂದ ಹೆಚ್ಚಿನ ಬೋಧನಾ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಬಿಎಂಎಸ್‌ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ವಾರ್ಷಿಕ 9.5 ಲಕ್ಷ ರೂ. ಬೋಧನಾ ಶುಲ್ಕ ಮತ್ತು ನಗದು ರೂ. 14 ಲಕ್ಷ., ಅದೇ ಸೀಟಿಗೆ ಬೋಧನಾ ಶುಲ್ಕವನ್ನು ಅಂದಾಜು 2.25 ಲಕ್ಷ ರು. ನಿಗದಿಪಡಿಸಲಾಗಿದೆ. ಆದರೆ 28 ಲಕ್ಷ ರು.ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ಮೂಲಕ ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ವಿವಿಧ ಆದೇಶಗಳು, ಎಐಸಿಟಿಯು, ಯುಜಿಸಿ ನಿಯಮಗಳನ್ನು ಉಲ್ಲಂಘಿಸಲಾಗಿದೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ತಯಾರಿಸದೆಯೇ ಆಡಳಿತ ಮಂಡಳಿ ಮತ್ತು ಎನ್‌ಆರ್‌ಐ ಕೋಟಾದಡಿಯಲ್ಲಿ ಲಕ್ಷಗಟ್ಟಲೆ ರೂಪಾಯಿ ನಗದು ಸಂಗ್ರಹಿಸಿ ಅಕ್ರಮವಾಗಿ ತಾತ್ಕಾಲಿಕ ಹಂಚಿಕೆ ಪತ್ರಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ರಮೇಶ್‌ನಾಯಕ್‌ ಅವರು ಸರ್ಕಾರದಿಂದ ಅನುಮೋದನೆಯಿಲ್ಲದೆಯೇ ಬೋಧನಾ ಶುಲ್ಕವನ್ನು ಸಂಗ್ರಹಿಸಿ ಅಪರಾಧ ಎಸಗುತ್ತಿದೆ. ವಿಟಿಯು ಉಪ ಕುಲಪತಿ ಮತ್ತು ರಾಜಕೀಯ ಮುಖಂಡರ ಶಿಫಾರಸ್ಸುಗಳಿಗೆ ಹಲವು ಸೀಟುಗಳನ್ನು ನೀಡಲಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

the fil favicon

SUPPORT THE FILE

Latest News

Related Posts