ಸಾಮಾಜಿಕ ಜಾಲತಾಣ ನಿರ್ವಹಣೆ ಇನ್ನೊಂದು ಮುಖ; ತಾಂತ್ರಿಕ ಪ್ರಸ್ತಾವನೆಯನ್ನೇ ಷರತ್ತುಗಳಾಗಿ ಮಾರ್ಪಾಡು

ಬೆಂಗಳೂರು; ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸಂಬಂಧಿಸಿದಂತೆ ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಯು ತಾಂತ್ರಿಕ ಪ್ರಸ್ತಾವನೆಯಲ್ಲಿ ನಮೂದಿಸಿದ್ದ ಷರತ್ತುಗಳನ್ನೇ ಯಥಾವತ್ತಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪಾಲಿಸಿ ಆದೇಶ ಹೊರಡಿಸಿರುವುದು ಆರ್‌ಟಿಐ ದಾಖಲೆಗಳು ಬಹಿರಂಗಪಡಿಸಿವೆ.

 

ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆ ಸಂಬಂಧ ಪಿ ಪೋಲ್‌ ಅನಾಲಿಟಿಕ್ಸ್‌ ಕಂಪನಿಯು 2021ರ ಅಕ್ಟೊಬರ್‌ 18ರಂದು ಸಲ್ಲಿಸಿದ್ದ ತಾಂತ್ರಿಕ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಎಳ್ಳಷ್ಟೂ ಬದಲಾಯಿಸದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021ರ ಅಕ್ಟೋಬರ್‌ 26ರಂದು ಕಾರ್ಯಾದೇಶ ಹೊರಡಿಸಿದೆ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಯ ತಾಂತ್ರಿಕ ಪ್ರಸ್ತಾವನೆಯಲ್ಲಿನ ಅಂಶಗಳನ್ನೇ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಕಾರ್ಯಾದೇಶದಲ್ಲಿ ಷರತ್ತುಗಳನ್ನಾಗಿಸಿದೆ. ಹೀಗಾಗಿ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆ ವಿಚಾರದಲ್ಲಿ ಮೊದಲೇ ಪೂರ್ವನಿರ್ಧರಿತ ಕಂಪನಿಗೆ ನೀಡಲಾಗಿದೆ ಎಂಬ ಆರೋಪಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ.

 

ತಾಂತ್ರಿಕ ಪ್ರಸ್ತಾವನೆಯಲ್ಲೇನಿತ್ತು?

 

ಸ್ಥಳೀಯ ವಿಚಾರಗಳ ಕುರಿತು ಪ್ರತಿ ದಿನವೂ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗುವುದು. ಸಚಿವರ ವರ್ಚಸ್ಸು ವೃದ್ಧಿಸುವುದು, ವಾರಕ್ಕೊಮ್ಮೆ ಸೃಜನಾತ್ಮಕ ವಿಡಿಯೋ ಸೃಷ್ಟಿ, ಸೃಜನಾತ್ಮಕ ವಿಷಯ, ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿ, ವಾರದ ಬೆಳವಣಿಗೆ, ಚಟುವಟಿಕೆಗಳ ಕುರಿತಾದ ಕಿರು ನೋಟ, ಫೇಸ್‌ಬುಕ್‌, ಟ್ವಿಟರ್‌, ಇನ್ಸ್‌ಟ್ರಾಗ್ರಾಂಗಳ ವೆರಿಫಿಕೇಷನ್‌ ಮತ್ತು ಬ್ಲೂ ಟಿಕ್‌ ಕೊಡಿಸುವುದು, ಚಾಲ್ತಿಯಲ್ಲಿರುವ ವಿಷಯಗಳನ್ನಷ್ಟೇ ಟ್ವಿಟರ್‌ನಲ್ಲಿ ಪ್ರಕಟಿಸುವುದು, ವೈಯಕ್ತಿಕ ಸಂದೇಶಗಳು, ಸಾಮಾಜಿಕ ಖಾತೆಯನ್ನು ಖುದ್ದು ನಿರ್ವಹಣೆ, ಅವಮಾನಕರ, ವೈಯಕ್ತಿಕ ನಿಂದನೆ ಟೀಕೆಗಳು, ಸಮಾಜಘಾತುಕ ಟೀಕಾತ್ಮಕಾ ಅಂಶಗಳನ್ನು ತೆಗೆದುಹಾಕುವುದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ತೊಡಗಿಸಿಕೊಳ್ಳುವಂತೆ ಮಾಡಲಾಗುವುದು ಎಂದು ತಾಂತ್ರಿಕ ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಯು ನೀಡಿರುವ ತಾಂತ್ರಿಕ ಪ್ರಸ್ತಾವನೆ ಪ್ರತಿ

 

ಈ ಪ್ರಸ್ತಾವನೆಯನ್ನೇ ಅನಾಮತ್ತಾಗಿ ತೆಗೆದುಕೊಂಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಇದರಲ್ಲಿನ ಅಂಶಗಳನ್ನು ಕಾರ್ಯಾದೇಶದಲ್ಲಿ ಷರತ್ತುಗಳನ್ನಾಗಿ ಪರಿವರ್ತಿಸಿದೆ.

 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ವಿಧಿಸಿರುವ ಷರತ್ತುಗಳ ಪ್ರತಿ

 

ಸಾಮಾಜಿಕ ಜಾಲತಾಣ ನಿರ್ವಹಣೆಯ ಭಾಗವಾಗಿರುವ ಕ್ರಿಯೇಟಿವ್‌ ಡಿಸೈನ್‌, ವಿಡಿಯೋ ಪೋಸ್ಟ್‌, ಕ್ಯಾಂಪೇನ್‌ ಪ್ಲಾನಿಂಗ್‌, ಕಂಟೆಂಟ್‌ ಕ್ರಿಯೇಟ್‌ ಗೆ ಒಟ್ಟು 80,000, , ಸಿಜಿಎಸ್‌ಟಿ 7,200, ಎಸ್‌ಜಿಎಸ್‌ಟಿ 7,200 ಸೇರಿ ಒಟ್ಟು 94,400 ರು. ವೆಚ್ಚವಾಗಲಿದೆ ಎಂದು ಆರ್ಥಿಕ ಪ್ರಸ್ತಾವನೆಯನ್ನೂ ಪಿ-ಪೋಲ್‌ ಅನಾಲಿಟಿಕ್ಸ್‌ ಕಂಪನಿಯು ಸಲ್ಲಿಸಿದೆ.

 

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಲ್ಲಿ ಯಾವುದೇ ಅನುದಾನ ನಿಗದಿಪಡಿಸದಿದ್ದರೂ ಇದೇ ಮೊದಲ ಬಾರಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಸಾಮಾಜಿಕ ಜಾಲತಾಣ ನಿರ್ವಹಣೆ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಯಾವುದೇ ದರ ಪಟ್ಟಿಯನ್ನು ಆಹ್ವಾನಿಸಿರಲಿಲ್ಲ. ಅಲ್ಲದೆ 5 ಲಕ್ಷ ರು ಮಿತಿ ದಾಟುತ್ತಿದ್ದರೂ ಇ-ಟೆಂಡರ್‌ ಆಹ್ವಾನಿಸದೆಯೇ ನಿರ್ದಿಷ್ಟ ಕಂಪನಿಗೇ 4 (ಜಿ) ವಿನಾಯಿತಿ ಪಡೆದು 11 ತಿಂಗಳವರೆಗೆ ಮಂಡಳಿಯು ಏಜೆನ್ಸಿ ನೀಡಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts