ಸಾವಿರಾರು ಕೋಟಿ ರು. ವಂಚನೆ; ಮರು ಲೆಕ್ಕಪರಿಶೋಧನೆಗೆ ಲೆಕ್ಕಪುಸ್ತಕಗಳ ಹಾಜರುಪಡಿಸದ ಸಿಇಒಗಳು

ಬೆಂಗಳೂರು; ಸಾವಿರಾರು ಕೋಟಿ ರುಪಾಯಿಗಳ ವಂಚಿಸಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಐಎಂಎ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಮತ್ತು ಸಾಲ ವಿತರಣೆಯೂ ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ ಅಕ್ರಮ ನಡೆಸಿದೆ ಎಂಬ ಆರೋಪ ಎದುರಿಸುತ್ತಿರುವ ಕಲ್ಬುರ್ಗಿ, ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಕಣ್ವ ಸೌಹಾರ್ದ ಕೋ ಆಪರೇಟಿವ್‌ ಕ್ರೆಡಿಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಮರು ಲೆಕ್ಕಪರಿಶೋಧನೆಗೆ ಲೆಕ್ಕದ ಪುಸ್ತಕಗಳನ್ನು ಹಾಜರುಪಡಿಸುತ್ತಿಲ್ಲ. ಎಂಬುದು ಇದೀಗ ಬಹಿರಂಗವಾಗಿದೆ.

 

ಸಹಕಾರ ಸಂಘಗಳ ಮತ್ತು ಬ್ಯಾಂಕ್‌ಗಳ ಮರು ಲೆಕ್ಕ ಪರಿಶೋಧನೆ , ಮರುಪರಿಶೀಲನೆಯ ಪ್ರಗತಿ ಸಂಬಂಧ 2021ರ ಡಿಸೆಂಬರ್‌ 1ರಂದು ನಡೆದಿದ್ದ ಸಭೆ ಅನುಸಾರ ಅನುಪಾಲನಾ ವರದಿಯನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರು 2022ರ ಜುಲೈ 19ರಂದು ಸಲ್ಲಿಸಿರುವ ವರದಿಯಲ್ಲಿ ಐಎಂಎ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಲೆಕ್ಕ ಪುಸ್ತಕಗಳನ್ನು ಸಲ್ಲಿಸದಿರುವುದು ಕುರಿತು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಈ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮರುಲೆಕ್ಕಪರಿಶೋಧನೆಗೆ ಲೆಕ್ಕ ಪುಸ್ತಕಗಳನ್ನು ಹಾಜರುಪಡಿಸದಿರುವ ಕಾರಣ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 109ರಂತೆ ಕ್ರಮಕೈಗೊಳ್ಳಲಾಗಿದೆ. ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರನ್ನೊಳಗೊಂಡಂತೆ ಒಟ್ಟು 12 ಜನರಿಗೆ ಕಲಂ 109ರಂತೆ ಕಾರಣ ಕೇಳಿ 2022ರ ಜೂನ್‌ 29ರಂದು ನೋಟೀಸ್‌ ಜಾರಿಮಾಡಲಾಗಿದೆ,’ ಎಂದು ಅನುಪಾಲನಾ ವರದಿಯಲ್ಲಿ ಮಾಹಿತಿ ಒದಗಿಸಲಾಗಿದೆ.

 

 

ಕಲ್ಬುರ್ಗಿ, ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 2011-2ರಿಂದ 2016-17ನೇ ಸಾಲುಗಳ ಮರು ಲೆಕ್ಕಪರಿಶೋಧನೆ ನಡೆಸಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಕುರಿತು 2022ರ ಮಾರ್ಚ್‌ 14ರಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಈ ಬ್ಯಾಂಕ್‌ನವರು ಲೆಕ್ಕಪುಸ್ತಕಗಳನ್ನು ಮರುಲೆಕ್ಕಪರಿಶೋಧನೆಗೆ ಹಾಜರುಪಡಿಸುತ್ತಿಲ್ಲ. ಹೀಗಾಗಿ ಈ ಬ್ಯಾಂಕ್‌ನಲ್ಲಿ ಮರುಲೆಕ್ಕಪರಿಶೋಧನೆ ಇನ್ನೂ ಆರಂಭವಾಗಿಲ್ಲ ಎಂಬುದು ಅನುಪಾಲನ ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಶ್ರೀ ಕಣ್ವ ಸೌಹಾರ್ದ ಕೋ ಆಪರೇಟಿವ್‌ ಕ್ರೆಡಿಟ್‌ ಸಹಕಾರಿ ಸಂಸ್ಥೆಯಲ್ಲಿ 2016-17ರಿಂದ 2018-19ನೇ ಸಾಲಿನವರೆಗೆ ಲೆಕ್ಕಪುಸ್ತಕಗಳ ಮರುಲೆಕ್ಕಪರಿಶೋಧನೆಗೆ ಆದೇಶ ಹೊರಡಿಸಲಾಗಿದೆ. ಆಧರೆ ಈ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯುಲ ಸಹ ಲೆಕ್ಕಪುಸ್ತಕಗಳನ್ನು ಹಾಜರುಪಡಿಸಿಲ್ಲ. ಹೀಗಾಗಿ ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕರ್ನಾಟಕ ಸೌಹಾರ್ದ ಸಂಘಗಳ ಕಾಯ್ದೆ 1997ರ ಕಲಂ 69 (ಎ)ರಂತೆ ಸಕ್ಷಮ ಪ್ರಾಧಿಕಾರಿಯಾಗಿರುವ ಸಹಕಾರ ಸಂಘಗಳ ನಿಬಂಧಕರಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಇದುವರೆಗೂ ಅನುಮತಿ ಆದೇಶ ಹೊರಡಿಸಿಲ್ಲ ಎಂದು ಗೊತ್ತಾಗಿದೆ.

 

ಇನ್ನು ಮಂಡ್ಯದ ಅಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೋಲಾರದಲ್ಲಿರುವ ಅರ್ಥಮೂವರ್ಸ್ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ, ವಿಜಯಪುರದ ನವಜೀವನ ಪತ್ತಿನ ಸಹಕಾರ ಸಂಘ, ಮಂಡ್ಯದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಗ, ಬೆಂಗಳೂರಿನ ವಿದ್ಯಾಗಿರಿ ಗೃಹ ನಿರ್ಮಾಣ ಸಹಕಾರ ಸಂಘಗಳೂ ಮರುಲೆಕ್ಕಪರಿಶೋಧನೆಗೆ ಲೆಕ್ಕಪುಸ್ತಕಗಳನ್ನು ಹಾಜರುಪಡಿಸಿಲ್ಲ. ಹೀಗಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 109 ಮತ್ತು ಕರ್ನಾಟಕ ಸೌಹಾರ್ದ ಸಂಘಗಳ ಕಾಯ್ದೆ 1997ರ ಕಲಂ 68ನಂತೆ ಕ್ರಮವಹಿಸಿದೆ.

 

ಹಾಗೆಯೇ ಧಾರವಾಡ ಜಿಲ್ಲೆಯ ಅಳಗವಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮೈಸೂರಿನ ಕೇಂದ್ರ ಶಿಕ್ಷಣ ಸಚಿವಾಲಯದ ನೌಕರರ ಸಹಕಾರ ಸಂಘ, ಯಲಬುರ್ಗಾ ಪಿಕಾರ್ಡ್‌ ಬ್ಯಾಂಕ್‌, ಶ್ರೀರಂಗಪಟ್ಟಣದ ದರಸಗುಪ್ಪೆ ಕೃಷಿ ಪತ್ತಿನ ಸಹಕಾರ ಸಂಘ, ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ, ಸಹ್ಯಾದ್ರಿ ಗಿರಿಜನ ದೊಡ್ಡಪ್ರಮಾಣದ ವಿವಿದೋದ್ದೇಶಗಳ ಸಹಕಾರ ಸಂಘ, ಚಿಕ್ಕೋಡಿಯ ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಮರುಲೆಕ್ಕಪರಿಶೋಧನೆ ಪ್ರಗತಿಯಲ್ಲಿದೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts