ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜಮೀನಿನ ಮೇಲೆ ರಾಷ್ಟ್ರೋತ್ಥಾನ ಪರಿಷತ್‌ ಕಣ್ಣು

ಬೆಂಗಳೂರು; ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಹೆಸರಿನಲ್ಲಿರುವ 20. 17 ಎಕರೆ ಜಮೀನಿನ ಪೈಕಿ 5 ಎಕರೆ ವಿಸ್ತೀರ್ಣದ ಜಮೀನನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ ಹೆಸರಿಗೆ ಮಂಜೂರು ಮಾಡಲು ರಾಜ್ಯ ಬಿಜೆಪಿ ಸರ್ಕಾರವು ಸದ್ದಿಲ್ಲದೇ ಪ್ರಕ್ರಿಯೆ ಆರಂಭಿಸಿದೆ.

 

ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಈಗಾಗಲೇ ಮಂಜೂರು ಮಾಡಿದ್ದ ಸಿ ಎ ನಿವೇಶನಕ್ಕೆ ರಿಯಾಯಿತಿ ದರ ನೀಡಲು ಸಚಿವ ಸಂಪುಟವು ಕೆಲ ದಿನಗಳ ಹಿಂದೆಯೆಷ್ಟೇ ಮಂಜೂರು ಮಾಡಿರುವ ಬೆನ್ನಲ್ಲೇ ಹೊಸಪೇಟೆ ತಾಲೂಕಿನಲ್ಲಿಯೂ ಅಂದಾಜು 10 ಕೋಟಿ ರು. ಬೆಲೆಬಾಳುವ 5 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲು ಹೊರಟಿದೆ.

 

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಪರಿಶಿಷ್ಟರ ಸರ್ಕಾರಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯು ಕಾಯ್ದಿರಿಸಿದ್ದ ನಿವೇಶನವನ್ನು ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯು ವರದಿ ಕೇಳಿತ್ತು. ಇದರ ಬೆನ್ನಲ್ಲೇ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆಂದು ಕಾಯ್ದಿರಿಸಿರುವ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲು ಮುಂದಾಗಿರುವುದು ವಿವಾದಕ್ಕೆ ದಾರಿಮಾಡಿಕೊಡಲಿದೆ. ಈ ಕುರಿತು ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ಜಂಬುನಾಥನಹಳ್ಳಿ ಗ್ರಾಮದ ಸರ್ವೆ ನಂಬರ್‌ 105ರಲ್ಲಿ ಒಟ್ಟು 28.17 ಎಕರೆ ವಿಸ್ತೀರ್ಣದ ಜಮೀನಿದೆ. ಈ ಪೈಕಿ ವಾಷಿಂಗ್‌ ಪ್ಲಾಂಟ್‌ ಉದ್ದೇಶಕ್ಕೆ 2010ರ ಏಪ್ರಿಲ್‌ 6ರಿಂದಲೇ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ (2020ರ ಮಾರ್ಚ್‌ 3ರ ಪ್ರಕಾರ) 6 ಎಕರೆ ಜಮೀನಿದೆ. ಇನ್ನುಳಿದ 20.17 ಎಕರೆ ಜಮೀನನನ್ನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಇಲಾಖೆಯ ಜಿಲ್ಲಾ ಅಧಿಕಾರಿಗಳ ಹೆಸರಿನಲ್ಲಿದೆ ಎಂದು ಭೂಮಿ ದಾಖಲೆಯಲ್ಲಿ ನಮೂದಾಗಿದೆ.

 

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಾಯ್ದಿರಿಸಿರುವ ಬಗೆಗಿನ ಭೂಮಿಯಲ್ಲಿರುವ ದಾಖಲೆ

 

ಒಟ್ಟು 28.17 ಎಕರೆ ಪೈಕಿ 5 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲು ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿರುವುದು ಲಭ್ಯವಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಕಾನೂನು ಇಲಾಖೆ ಅಸಮ್ಮತಿ

 

‘ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ಜಂಬುನಾಥನಹಳ್ಳಿ ಗ್ರಾಮದ ಸರ್ವೆ ನಂಬರ್‌ 105ರಲ್ಲಿ ಜಮೀನು ನಗರ ವ್ಯಾಪ್ತಿಯಲ್ಲಿರುವುದರಿಂದ ಮತ್ತು ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯಾಗಿರುವ ಕಾರಣ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2)ರ ಅನ್ವಯ ಪ್ರಸ್ತಾಪಿತ ಜಮೀನನ್ನು ಮಂಜೂರು ಮಾಡಲು ಅವಕಾಶವಿಲ್ಲ,’ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಉದ್ದೇಶಿತ ಜಮೀನು ಹೊಸಪೇಟೆ ನಗರದ 5 ಕಿ ಮೀ ವ್ಯಾಪ್ತಿಯೊಳಗೇ ಇರುವ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ಎಕರೆಯೊಂದಕ್ಕೆ ಗರಿಷ್ಠ 2 ಕೋಟಿ ರು ಬೆಲೆ ಇದೆ. ಇದರ ಪ್ರಕಾರ ಅಂದಾಜು 10 ಕೋಟಿ ರು. ಬೆಲೆಬಾಳುವ ಜಮೀನನ್ನು ಮಾರುಕಟ್ಟೆ ದರದ ಶೇ.25ರ ದರದ ರಿಯಾಯಿತಿ ದರದಲ್ಲಿ ಜಮೀನು ನೀಡಲು ಸಚಿವ ಆನಂದ್‌ಸಿಂಗ್‌ ಅವರು ಬಿರುಸಿನಿಂದ ಲಾಬಿ ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

ಸಚಿವ ಆನಂದ್‌ ಸಿಂಗ್‌ ಮತ್ತು ಆರ್‌ಎಸ್‌ಎಸ್‌ ಮಧ್ಯೆ ಹಲವು ಭಿನ್ನಾಭಿಪ್ರಾಯಗಳಿವೆ ಎಂದು ತಿಳಿದು ಬಂದಿದೆಯಲ್ಲದೆ ರಿಯಾಯಿತಿ ದರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರು ಮಾಡಿಸಿಕೊಡುವ ಮೂಲಕ ತಲೆದೋರಿರುವ ಭಿನ್ನಮತವನ್ನು ಕೊನೆಗಾಣಿಸಿ ಓಲೈಸುವ ತಂತ್ರಗಾರಿಕೆಯೂ ಇದರಲ್ಲಿ ಅಡಗಿದೆ ಎಂದೂ ಹೇಳಲಾಗುತ್ತಿದೆ.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಗೋಮಾಳ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೂ ಹುರುಳಿಚಿಕ್ಕನಹಳ್ಳಿಯಲ್ಲಿ 9 ಎಕರೆ ಗೋಮಾಳವನ್ನು ಮಂಜೂರು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರವು ಕಾನೂನು ಇಲಾಖೆಯ ಅಭಿಪ್ರಾಯವನ್ನು ಬದಿಗಿರಿಸಿದ್ದನ್ನು ಸ್ಮರಿಸಬಹುದು.

 

ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಆರ್‌ಎಸ್‌ ನಂ 597ರ ಪೈಕಿ 5.92 ಎಕರೆಯಲ್ಲಿ ನಾಗರಿಕ ಸೌಲಭ್ಯ ನಿವೇಶನದ ಅಳತೆ (ಬ್ಲಾಕ್‌ ನಂ 01ರಲ್ಲಿ) 20,093 ಚ ಮೀ, ಬ್ಲಾಕ್‌ 02ರಲ್ಲಿ 3,915.00 ಚ ಮೀ ಒಟ್ಟು 24.008 ಚ ಮೀ ವುಳ್ಳ ನಾಗರಿಕ ಸೌಲಭ್ಯ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲಾಗಿದ್ದು ಅದಕ್ಕೆ ಸಚಿವ ಸಂಪುಟವ ಸಭೆಯು ರಿಯಾಯಿತಿ ದರವನ್ನು ನಿಗದಿಪಡಿಸಲು ಅನುಮೋದಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts