ನೀರಾವರಿ ನಿಗಮದ 2 ಎಕರೆ ನಿವೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ; ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರ

ಬೆಂಗಳೂರು; ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಶಿವಮೊಗ್ಗದ ಅಲ್ಕೋಳದ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮವು ಮಂಜೂರು ಮಾಡಿರುವ 2 ಎಕರೆಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂದು ಭಾರತೀಯ ಜನತಾಪಾರ್ಟಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್‌ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.

 

ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿರುವ ಬೆನ್ನಲ್ಲೇ ಕರ್ನಾಟಕ ನೀರಾವರಿ ನಿಗಮವು 2022ರ ಏಪ್ರಿಲ್‌ 4ರಂದು ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿದ್ದ ಜಮೀನನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಮಾಡಿಕೊಡಬೇಕು ಎಂದು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಟಿ ಡಿ ಮೇಘರಾಜ್‌ ಅವರು ಬರೆದಿರುವ ಪತ್ರದ ಪ್ರತಿ ಮತ್ತು ನಿಗಮದ ಸಭೆಯ ನಡವಳಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಶಿವಮೊಗ್ಗ ನಗರದ ಸಾಗರ ರಸ್ತೆಗೆ (ಎನ್‌ ಎಚ್‌ 206) ಅಭಿಮುಖವಾಗಿರುವ ಅಲ್ಕೋಳ ಗ್ರಾಮದ ಸರ್ವೆ ನಂಬರ್‌ 36 ಮತ್ತು 37ರಲ್ಲಿ ರಾಜ್ಯ ಸರ್ಕಾರವು ಸುಮಾರು 2 ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ಪ್ರಶಿಕ್ಷಣ ಕೇಂದ್ರಕ್ಕೆ ಮಂಜೂರು ಮಾಡಿರುತ್ತದೆ. ಮಂಜೂರು ಮಾಡಿರುವಜಾಗವನ್ನು ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಜನತಾಪಾರ್ಟಿ ಈ ಹೆಸರಿಗೆ ಮಾಡಿಕೊಡಬೇಕು,’ ಎಂದು ಬಿಜೆಪಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್‌ ಅವರು 2022ರ ಮೇ 20ರಂದು ಪತ್ರ ಬರೆದಿದ್ದಾರೆ.

 

ಬಿಜೆಪಿಯ ಶಿವಮೊಗ್ಗ ಜಿಲ್ಲಾಧ್ಯಕ್ಷರುವ ಬರೆದಿರುವ ಪತ್ರದ ಪ್ರತಿ

 

ನಿಗಮದ ತಾತ್ವಿಕ ಅನುಮೋದನೆ

 

ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ ಸಂಶೋಧನೆ ಮತ್ತು ತರಬೇತಿಗಾಗಿ ಕೇಂದ್ರವನ್ನು ಸ್ಥಾಪಿಸಲು ಶಿವಮೊಗ್ಗ ನಗರದ ಅಲ್ಕೋಳ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಸರ್ವೇ ನಂಬರ್‌ 36 ಮತ್ತು 37ರಲ್ಲಿ ನಿಗಮದ ಒಟ್ಟು 2 ಎಕರೆಯನ್ನು ಮಂಜೂರು ಮಾಡಬೇಕು ಎಂದು ಜಲಸಂಪನ್ಮೂಲ ಇಲಾಖೆಯು 2022ರ ಫೆ.24ರಂದು ನಿಗಮಕ್ಕೆ ಪತ್ರ (ಜಸಂಇ 97 ಎಂಎಂಬಿ 2021, ದಿನಾಂಕ 24.02.2022) ಬರೆದಿತ್ತು. ಅದರಂತೆ ಸರ್ಕಾರದ ಪತ್ರವನ್ನು ಪರಿಶೀಲಿಸಿದ್ದ ನಿಗಮದ 98ನೇ ಸಭೆಯಲ್ಲಿ 2 ಎಕರೆ ಜಮೀನು ಮಂಜೂರು ಮಾಡಲು ತಾತ್ವಿಕ ಅನುಮೋದನೆ ನೀಡಿತ್ತು ಎಂಬುದು ನಿಗದಮ 98ನೇ ಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

ಈ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತಲ್ಲದೆ ಸರ್ಕಾರದ ನಿರ್ದೇಶನದಂತೆ ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿಗಾಗಿ ಕೇಂದ್ರವನ್ನು ಸ್ಥಾಪಿಸಲು ಶಿವಮೊಗ್ಗ ನಗರದ ಅಲ್ಕೋಳ ಗ್ರಾಮದಲ್ಲಿನ 2 ಎಕರೆ ವಿಸ್ತೀರ್ಣದ ನಿವೇಶನವನ್ನು ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಬಾಡಿಗೆ ದರ ನಿಗದಿ ಪಡಿಸಿತ್ತು. ಅಲ್ಲದೆ ಪ್ರಸ್ತಾಪಿಸಿರುವ ಷರತ್ತುಗಳನ್ನು ಪಾಲಿಸುವ ನಿಬಂಧನೆಗೆ ಒಳಪಟ್ಟು ಪ್ರತಿ 30 ವರ್ಷಕ್ಕೊಮ್ಮೆ ಲೀಜ್‌ ಅವಧಿಯನ್ನು ನವೀಕರಿಸುವ ಪ್ರಸ್ತಾವನೆಗೂ ಇದೇ ಸಭೆಯಲ್ಲಿ ಮಂಡಳಿಯು ಅನುಮೋದನೆ ನೀಡಿತ್ತು ಎಂಬುದು ಗೊತ್ತಾಗಿದೆ.

 

ಕರ್ನಾಟಕ ನೀರಾವರಿ ನಿಗಮದ ಸಭೆಯ ನಡವಳಿ ಪ್ರತಿ

 

ಮುಧೋಳ ನಗರದ ಮಂಟೂರು ರಸ್ತೆಯಲ್ಲಿ ಬಿಜೆಪಿ ಕಚೇರಿ ಕಟ್ಟಡಕ್ಕಾಗಿ ಗುರುತಿಸಿರುವ ಖಾಲಿ ನಿವೇಶನವು (ಆರ್‌ ಎಸ್‌ ನಂ 212 ಮತ್ತು ಸಿಟಿಎಸ್‌ ನಂ 2588, 134.00 ಚ ಮೀ) ಸಮಾಜ ಇಲಾಖೆಯ ಹೆಸರಿನಲ್ಲಿದೆ. ಅಲ್ಲದೆ ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದಿರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಈಗಾಗಲೇ ಕಂದಾಯ ಇಲಾಖೆಯ ಪತ್ರ ಮುಖೇನ ಗಮನಕ್ಕೆ ತಂದಿದ್ದಾರೆ.

 

ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts