ಬೆಂಗಳೂರು; ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಅಧಿಕಾರಾವಧಿ ತನಕ ಅವರ ಟ್ವಿಟರ್ ಖಾತೆ, ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಲ್ಲಿ ಯಾವುದೇ ಅನುದಾನ ನಿಗದಿಪಡಿಸದಿದ್ದರೂ ಇದೇ ಮೊದಲ ಬಾರಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.
ಹತ್ತನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮತ್ತು ಮೌಲ್ಯಮಾಪಕರಿಗೆ ಹೆಚ್ಚುವರಿ ಸಂಭಾವನೆ ನೀಡಿ ವಿವಾದಕ್ಕೆ ಕಾರಣವಾಗಿದ್ದರ ಬೆನ್ನಲ್ಲೇ ಯಾವುದೇ ಅನುದಾನ ಹಂಚಿಕೆಯಾಗದಿದ್ದರೂ ಸಚಿವ ಬಿ ಸಿ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ‘ದಿ ಫೈಲ್’ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಈ ಹಿಂದಿನ ಶಿಕ್ಷಣ ಸಚಿವರುಗಳಿಗೆ ಸಾಮಾಜಿಕ ಜಾಲತಾಣ ನಿರ್ವಹಣೆಗೆಂದು ಮಂಡಳಿಯು ಹಣ ವೆಚ್ಚ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಸಚಿವ ಬಿ ಸಿ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಮಂಡಳಿಯು ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವುದು ಕಡತದ ದಾಖಲೆಗಳಿಂದ ತಿಳಿದು ಬಂದಿದೆ.
ಅನುದಾನ ನಿಗದಿಯಾಗಿರಲಿಲ್ಲ
‘ಪ್ರಾಥಮಿಕ, ಪ್ರೌಢಶಿಕ್ಷಣ, ಸಕಾಲ ಸಚಿವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯು ಹೊಸ ಕಾರ್ಯಕ್ರಮವಾಗಿರುವುದರಿಂದ ಮಂಡಳಿಯ ಅನುದಾನ ಹಂಚಿಕೆಯಲ್ಲಿ ಅನುದಾನ ನಿಗದಿಪಡಿಸಲಾಗಿರುವುದಿಲ್ಲ,’ ಎಂದು ಮಂಡಳಿಯ ಶಾಖಾಧಿಕಾರಿಗಳು ಉಲ್ಲೇಖಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2021-22ನೇ ಸಾಲಿನಿಂದ ಸಚಿವ ಬಿ ಸಿ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಪಿ- ಪೋಲ್ ಅನಾಲಿಟಿಕ್ಸ್ ಕಂಪನಿಗೆ ತಿಂಗಳಿಗೆ 90,912 ರು.ನಂತೆ ಹಣ ಪಾವತಿಯಾಗುತ್ತಿದೆ.
ಮುಖ್ಯಮಂತ್ರಿ ಹೊರತುಪಡಿಸಿದರೆ ಉಳಿದ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸರ್ಕಾರದಿಂದ ನಯಾ ಪೈಸೆಯನ್ನೂ ವೆಚ್ಚ ಮಾಡುತ್ತಿಲ್ಲ. ಇತಿಹಾಸ ಪುರುಷರು, ರಾಜಕಾರಣಿಗಳ ಹುಟ್ಟುಹಬ್ಬ, ಇಲಾಖೆಯ ಮಹತ್ವದ ತೀರ್ಮಾನಗಳು, ಘೋಷಣೆಗಳು, ಕಾರ್ಯಕ್ರಮ ಉದ್ಘಾಟನೆ ಸೇರಿದಂತೆ ಇನ್ನಿತರೆ ಸಂಗತಿಗಳ ಕುರಿತು ಸಚಿವರುಗಳ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿಗಳನ್ನು ಪ್ರಕಟಿಸಲಾಗುತ್ತದೆ. ಈ ತಂಡಕ್ಕೆ ಖಾಸಗಿಯಾಗಿ ಹಣ ಪಾವತಿಯಾಗುತ್ತಿದೆಯೇ ಹೊರತು ಸರ್ಕಾರದಿಂದ ಯಾವುದೇ ಹಣವೂ ಪಾವತಿಯಾಗುತ್ತಿಲ್ಲ.
ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿರುವ ಖಾಸಗಿ ಕಂಪನಿಗೆ ಲಕ್ಷಾಂತರ ರುಪಾಯಿಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪಾವತಿಸುತ್ತಿರುವುದಕ್ಕೆ ಹಲವು ಆಕ್ಷೇಪಗಳು ವ್ಯಕ್ತವಾಗಿವೆ.