4,167 ನಕಲಿ ಕಂಪನಿಗಳಿಂದ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಹೂಡಿಕೆ; ಕೋಟ್ಯಂತರ ರು.ವಹಿವಾಟು

ಬೆಂಗಳೂರು; ಕಂಪನಿಗಳ ನೋಂದಣಿ ಇಲಾಖೆ (ಆರ್‌ಒಸಿ) ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಆಸ್ತಿಗಳನ್ನು ಅಡಗಿಸಿಡುವುದಕ್ಕೆ ಪೂರಕವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಗುರುತಿಸಲಾಗಿರುವ ಒಟ್ಟು ನಕಲಿ (ಶೆಲ್‌) ಕಂಪನಿಗಳ ಪೈಕಿ 4,167 ಕಂಪನಿಗಳು ವಾರ್ಷಿಕ ರಿಟರ್ನ್ಸ್‌ ಸಲ್ಲಿಸಿಲ್ಲ. ಅಲ್ಲದೆ ಈ ನಕಲಿ ಕಂಪನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಖಾತೆ ತೆರೆದು ಕೋಟ್ಯಂತರ ವಹಿವಾಟು ನಡೆಸಿವೆ ಎಂಬುದು ಇದೀಗ ಬಹಿರಂಗವಾಗಿದೆ.

 

ರಾಜ್ಯಮಟ್ಟದ ಸಮನ್ವಯ ಸಮಿತಿಯು 2022ರ ಜೂನ್‌ 27ರ ಇಂದು ನಡೆದ 56ನೇ ಸಭೆಗೆ ಸಲ್ಲಿಸಿರುವ ಕಾರ್ಯಸೂಚಿ ಪಟ್ಟಿಯಲ್ಲಿ ನಕಲಿ ಕಂಪನಿಗಳು ಆದಾಯ ತೆರಿಗೆ ಕುರಿತಾದ ವಿವರಗಳನ್ನು ಸಲ್ಲಿಸದಿರುವ ಕುರಿತು ಸೇರಿಸಲಾಗಿದೆ. ಜೂನ್‌ 27ರಂದು ನಡೆದ ಸಭೆಯ ಕಾರ್ಯಸೂಚಿ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹಲವು ನಕಲಿ ಕಂಪನಿಗಳು ಹೊಂದಿದ್ದ ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಲಾಗಿದ್ದರೂ ಇನ್ನೂ ಬಹುತೇಕ ಕಂಪನಿಗಳು ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ. ರಿಜಿಸ್ಟ್ರರ್‌ ಆಫ್‌ ಕಂಪನೀಸ್‌ ಮಾಹಿತಿ ಪ್ರಕಾರ ಶೆಲ್‌ ಕಂಪನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತಗೆ ತೆರೆದಿವೆ. ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌, ನಗರ ಸಹಕಾರಿ ಬ್ಯಾಂಕ್‌ಗಳಿಂದ ಮಾಹಿತಿಯನ್ನು ಬಯಸಿದೆ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ತಿಳಿದು ಬಂದಿದೆ.

 

ಎಸ್‌ಎಲ್‌ಸಿಸಿ (ಸ್ಟೇಟ್‌ ಲೆವೆಲ್‌ ಕೋ ಆರ್ಡಿನೇಷನ್ ಕಮಿಟಿ)ಯ 54ನೇ ಸಭೆಯಲ್ಲಿ ಕಂಪನಿಗಳ ಕೆವೈಸಿ ವಿವರಗಳ ಕ್ರೋಢೀಕೃತ ಮಾಹಿತಿ ಒದಗಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಬ್ಯಾಂಕ್‌ಗಳು ಈ ಮಾಹಿತಿಯನ್ನು ಆರ್‌ಬಿಐನೊಂದಿಗೆ ಹಂಚಿಕೊಂಡಿರಲಿಲ್ಲ. ಅಲ್ಲದೆ 55ನೇ ಎಸ್‌ಎಲ್‌ಸಿಸಿ ಸಭೆಯಲ್ಲಿ ಸೆಬಿಯ ಯಾವೊಬ್ಬ ಪ್ರತಿನಿಧಿಯು ಹಾಜರಿರಲಿಲ್ಲ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ಗೊತ್ತಾಗಿದೆ. ಅಲ್ಲದೆ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ನಕಲಿ ಕಂಪನಿಗಳು ಹೂಡಿಕೆ ಮಾಡಿವೆ ಎಂದು ಆರ್‌ಬಿಐ ಸರ್ಕಾರದ ಗಮನಕ್ಕೆ ತಂದಿದ್ದರೂ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಈ ಕುರಿತು ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

ಸಂಸತ್‌ ಅಧಿವೇಶನದಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕಂಪನಿ ವ್ಯವಹಾರಗಳ ಕೇಂದ್ರ ಸಚಿವಾಲಯವು ನೀಡಿದ್ದ ಮಾಹಿತಿ ಪ್ರಕಾರ ಆರ್‌ಒಸಿ ಬೆಂಗಳೂರು ವ್ಯಾಪ್ತಿಯಲ್ಲಿಯೇ 11,185 ಶೆಲ್‌ ಕಂಪನಿಗಳಿದ್ದವು. ಅಲ್ಲದೆ ದೇಶದಲ್ಲಿ 2018ರಿಂದ 2021ರ ಅವಧಿಯಲ್ಲಿ 2,38,223 ಶೆಲ್‌ ಕಂಪನಿಗಳಿವೆ ಎಂದು ಕೇಂದ್ರ ಸರ್ಕಾರವು ಗುರುತಿಸಿತ್ತು.

 

ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಪ್ರಕಾರ 2.26 ಲಕ್ಷ ಕಂಪನಿಗಳನ್ನು ನೋಂದಣಿ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ನಿರಂತರವಾಗಿ ಎರಡು ವರ್ಷಗಳ ಅವಧಿಯಲ್ಲಿ ವಾರ್ಷಿಕ ರಿಟರ್ನ್ಸ್‌ ಅಥವಾ ಫೈನಾನ್ಸಿಯಲ್‌ ಸ್ಟೇಟ್‌ಮೆಂಟ್‌ಗಳನ್ನು ಸಲ್ಲಿಸಲು ವಿಫಲವಾಗಿದ್ದ 2 ಲಕ್ಷಕ್ಕೂ ಅಧಿಕ ಕಂಪನಿಗಳನ್ನು ಮೊದಲ ಹಂತದಲ್ಲಿ ವಜಾ ಮಾಡಲಾಗಿತ್ತು.

 

ಸರಕಾರದ ನಿಯಮಗಳನ್ನು ಪಾಲಿಸದ ಕಂಪನಿಗಳ ಮಾನ್ಯತೆಯನ್ನು ರದ್ದುಗೊಳಿಸಲಾಗಿತ್ತು. ಇವುಗಳಲ್ಲಿ ಬಹುತೇಕ ಬೋಗಸ್‌ ಕಂಪನಿಗಳಿರುವುದು ಕಂಡು ಬಂದಿದ್ದವು. 400ಕ್ಕೂ ಅಧಿಕ ಕಂಪನಿಗಳು ಕೇವಲ ಒಂದೇ ಕೊಠಡಿಯಂಥ ವಿನ್ಯಾಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಸಂಸತ್‌ಗೆ ಹೇಳಿಕೆ ನೀಡಿತ್ತು.

 

ನಕಲಿ ಕಂಪನಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೆವೈಸಿ ದಾಖಲೆಗಳನ್ನು ಸಲ್ಲಿಸಲು ಕಂಪನಿಗಳ ನಿರ್ದೇಶಕರಿಗೆ ಈ ಹಿಂದೆಯೂ ಸೂಚನೆ ನೀಡಲಾಗಿತ್ತು. ದೇಶದ 33 ಲಕ್ಷ ನಿರ್ದೇಶಕರ ಪೈಕಿ 21 ಲಕ್ಷಕ್ಕೂ ಅಧಿಕ ಮಂದಿ ಕೆವೈಸಿ ವಿವರಗಳನ್ನು ದಾಖಲಿಸಿರಲಿಲ್ಲ. ಹೀಗಾಗಿ ಇಂಥವರ ನಿರ್ದೇಶಕತ್ವವು ರದ್ದಾಗಬೇಕಿತ್ತು. ಅಲ್ಲದೆ ಇವರು ‘ಡಮ್ಮಿ’ ನಿರ್ದೇಶಕರೇ ಎನ್ನುವ ನಿಟ್ಟಿನಲ್ಲಿ ಸರಕಾರ ತನಿಖೆ ನಡೆಸಬೇಕಿತ್ತು. ಗಡುವಿನಲ್ಲಿ ವಿವರ ಸಲ್ಲಿಸದ ನಿರ್ದೇಶಕರ ಹುದ್ದೆಯನ್ನು ನಿಷ್ಕ್ರಿಯಗೊಳಿಸಬೇಕಿತ್ತು. ಆದರೆ ಈ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

 

ಹಲವು ಕಂಪನಿಗಳು ಉದ್ಯಮವನ್ನೇ ಆರಂಭಿಸಿರಲಿಲ್ಲ. ಅಲ್ಲದೆ, ಹಲವು ಕಂಪನಿಗಳು ಕೇವಲ ಹೆಸರಿಗೆ ಮಾತ್ರ ವ್ಯವಹಾರ ನಡೆಸುತ್ತಿವೆ. ಆದರೆ, ಈ ಬಗ್ಗೆ ತನಿಖೆ ನಡೆಸಿದರೆ ಯಾವುದೇ ವ್ಯವಹಾರಗಳು ನಡೆದಿಲ್ಲ ಎಂಬುದು ತಿಳಿದು ಬಂದಿದೆ.

 

ನೋಟು ನಿಷೇಧದ ಬಳಿಕ ಬೇನಾಮಿ ವಹಿವಾಟು ನಡೆಸಿದ 5,800 ನಕಲಿ ಕಂಪನಿಗಳ ಮಾಹಿತಿಗಳನ್ನು 13 ಬ್ಯಾಂಕುಗಳು ಒದಗಿಸಿದ್ದವು. ನೋಟು ಅಮಾನ್ಯದ ಬಳಿಕ ಈ ಕಂಪನಿಗಳು 13,140 ಬ್ಯಾಂಕ್‌ ಖಾತೆಗಳಲ್ಲಿ 4,754 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಇರಿಸಿದ್ದವು. ಅಲ್ಲದೆ ಈ ಖಾತೆಗಳಿಂದ 4,552 ಕೋಟಿ ರೂ.ಗಳನ್ನು ಹಿಂಪಡೆದುಕೊಳ್ಳಲಾಗಿತ್ತು.

 

ಕಂಪನಿಗಳ ನೋಂದಣಿ ಇಲಾಖೆ (ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌) 2,09,032 ಸಂದೇಹಾಸ್ಪದ ಕಂಪನಿಗಳನ್ನು ಸ್ಥಗಿತಗೊಳಿಸಿ ಬ್ಯಾಂಕ್‌ ಖಾತೆಗಳನ್ನು ರದ್ದುಗೊಳಿಸಿತ್ತು. ಈ ಪೈಕಿ ಮೊದಲ ಕಂತಿನಲ್ಲಿ ಬ್ಯಾಂಕುಗಳು 5,800 ಕಂಪನಿಗಳ ವಹಿವಾಟು ವಿವರಗಳನ್ನು ಸರಕಾರಕ್ಕೆ ಒದಗಿಸಿದ್ದವು. ಈ ಕಂಪನಿಗಳು ತಮ್ಮ ಹೆಸರಿನಲ್ಲಿ 100ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇಂತಹ ಒಂದು ನಕಲಿ ಕಂಪನಿ 2,134 ಖಾತೆಗಳನ್ನು ಹೊಂದಿದೆ. ಉಳಿದವು 300ರಿಂದ 900ರಕ್ಕೂ ಅಧಿಕ ಖಾತೆಗಳನ್ನು ಹೊಂದಿದ್ದವು.

 

ಬ್ಯಾಂಕ್‌ಗಳು ಒದಗಿಸಿದ್ದ ಮಾಹಿತಿಗಳ ಪ್ರಕಾರ, ಈ ಕಂಪನಿಗಳು 2016ರ ನವೆಂಬರ್‌ 8ರಂದು ನೋಟು ನಿಷೇಧ ಪ್ರಕಟಿಸಿದ ದಿನದಂದು 22.05 ಕೋಟಿ ರೂ ಬಾಕಿ ಹೊಂದಿದ್ದವು. ಹಾಗಿದ್ದರೂ ಮರುದಿನದಿಂದಲೇ (ನವೆಂಬರ್‌ 9) ಕಂಪನಿಗಳನ್ನು ರದ್ದುಗೊಳಿಸಿದ ದಿನಾಂಕದವರೆಗೂ 4,573.87 ಕೋಟಿ ರೂ.ಗಳನ್ನು ಠೇವಣಿ ಇರಿಸಿದ್ದವು. 4,552 ಕೋಟಿ ರೂ.ಗಳನ್ನು ಹಿಂಪಡೆದಿದ್ದವು. ಸಾಲದ ಖಾತೆಗಳಲ್ಲಿ 80.79 ಕೋಟಿ ರೂಗಳ ಋಣಾತ್ಮಕ ಆರಂಭಿಕ ಮೊತ್ತವಿತ್ತು.

 

ಬಹುಸಂಖ್ಯೆಯ ಖಾತೆಗಳನ್ನು ಹೊಂದಿದ್ದ ಈ ಕಂಪನಿಗಳು ಒಂದೇ ಸಲಕ್ಕೆ ದೊಡ್ಡ ಮೊತ್ತಗಳನ್ನು ಋಣಾತ್ಮಕ ಬ್ಯಾಲೆನ್ಸ್‌ ಇದ್ದ ಖಾತೆಗಳಿಗೆ ತುಂಬಿ ಬಳಿಕ ಹಿಂಪಡೆದುಕೊಂಡಿದ್ದವು. ನಂತರ ಅಲ್ಪ ಮೊತ್ತದೊಂದಿಗೆ ಖಾತೆಯನ್ನು ವಹಿವಾಟು ರಹಿತವಾಗಿ ಬಿಡಲಾಗಿತ್ತು. ಕೆಲವು ಕಂಪನಿಗಳು ಮಾತ್ರ ಸ್ತಂಭನಗೊಂಡ ನಂತರವೂ ತಮ್ಮ ನಕಲಿ ಖಾತೆಗಳಿಗೆ ಠೇವಣಿ ಸಲ್ಲಿಕೆ ಮತ್ತು ಹಣ ಹಿಂತೆಗೆತದ ವ್ಯವಹಾರ ಮುಂದುವರಿಸಿದ್ದವು.

 

ನೋಟು ನಿಷೇಧದ ದಿನ ಶೂನ್ಯ ಬ್ಯಾಲೆನ್ಸ್‌ ಹೊಂದಿದ್ದ 429 ಕಂಪನಿಗಳು ಒಟ್ಟು 11 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಮಾಡಿ ಹಿಂತೆಗೆದುಕೊಂಡಿದ್ದವು. ಕಂಪನಿಗಳ ಸ್ತಂಭನದ ದಿನದಂದು ಒಟ್ಟಾರೆ 42,000 ರೂ ಬ್ಯಾಲೆನ್ಸ್‌ ಉಳಿಸಿಕೊಂಡಿದ್ದವು. 3 ಸಾವಿರಕ್ಕೂ ಹೆಚ್ಚು ಕಂಪನಿಗಳು ಬಹು ಸಂಖ್ಯೆಯ ನಕಲಿ ಖಾತೆಗಳನ್ನು ಹೊಂದಿರುವುದನ್ನು ಸರಕಾರ ಪತ್ತೆ ಮಾಡಿತ್ತು. 13 ಕೋಟಿ ರೂ.ಗಳ ಒಟ್ಟು ಬ್ಯಾಲೆನ್ಸ್‌ ಹೊಂದಿದ್ದ ಈ ಕಂಪನಿಗಳು ಸುಮಾರು 3,800 ಕೋಟಿ ರೂ.ಗಳನ್ನು ಠೇವಣಿ ಮಾಡಿದ ಬಳಿಕ ವಿತ್‌ಡ್ರಾ ಮಾಡಿಕೊಂಡಿದ್ದವು.

the fil favicon

SUPPORT THE FILE

Latest News

Related Posts