ಎಡಿಜಿಪಿ ಅಮೃತ್‌ಪೌಲ್‌, ಐಎಎಸ್‌ ಮಂಜುನಾಥ್‌ ಅಮಾನತು; ಬಂಧನದ ಬೆನ್ನಲ್ಲೇ ಹೊರಬಿದ್ದ ಆದೇಶ

photo credit-deccan hearald

ಬೆಂಗಳೂರು; ಅರ್ಜಿದಾರರ ಪರ ಆದೇಶ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಲಂಚ ಪಡೆದಿರುವ ಆರೋಪಕ್ಕೆ ಗುರಿಯಾಗಿ ಎಸಿಬಿ ಬಂಧನಕ್ಕೊಳಗಾಗಿರುವ ಐಎಎಸ್‌ ಅಧಿಕಾರಿ ಜೆ. ಮಂಜುನಾಥ್‌ ಮತ್ತು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಐಡಿ ಬಂಧನಕ್ಕೊಳಗಾಗಿರುವ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ಸರ್ಕಾರವು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 

ಎಸಿಬಿ ಡಿವೈಎಸ್‌ಪಿ ಕೆ. ರವಿಶಂಕರ್‌ ನೇತೃತ್ವದ ತಂಡ ಸೋಮವಾರ ಮಧ್ಯಾಹ್ನ 3 ಗಂಟೆಗೆ ಯಶವಂತಪುರದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರನ್ನು ಬಂಧಿಸಿದ್ದರು. ಅದೇ ರೀತಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ನಾಲ್ಕನೇ ಬಾರಿ ವಿಚಾರಣೆಗೆ ಕರೆದಿದ್ದ ಸಿಐಡಿ ಅಧಿಕಾರಿಗಳು, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಚಾರಣೆ ನಡೆಸಿ ಬಂಧಿಸಿದ್ದರು.

 

ಈ ಇಬ್ಬರೂ ಅಧಿಕಾರಿಗಳು ಬಂಧನಕ್ಕೊಳಗಾಗುತ್ತಿದ್ದಂತೆ ತತ್‌ಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವವರಿಂದ 5 ಲಕ್ಷ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರು ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮೇ 21ರಂದು ಬಂಧಿಸಿತ್ತು. ಇದರ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

 

ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ಮೂರು ಬಾರಿ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಇಂದು (ಜುಲೈ 4, 2022) ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಚಾರಣೆ ನಡೆಸಿ ಬಂಧಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಡಿಜಿಪಿ ದರ್ಜೆ ಅಧಿಕಾರಿಯೊಬ್ಬರನ್ನು ಬಂಧಿಸಿದಂತಾಗಿದೆ.

 

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಲಾಗಿತ್ತು. ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಹಲವು ನೌಕರರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts