ಬಿಎಸ್‌ವೈ ಸೇರಿ ಇತರರ ವಿರುದ್ಧದ ದೂರುಗಳ ವಿಚಾರಣೆ ನೆನೆಗುದಿಗೆ; ಲೋಕಾ ಬೆನ್ನುಬಿದ್ದ ಹೋರಾಟಗಾರರು

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರ ವಿರುದ್ಧದ ದೂರುಗಳ ಕುರಿತು ವಿಚಾರಣೆಯಲ್ಲಿ ವಿಳಂಬವಾಗಿದೆ ಎಂದು ‘ದಿ ಫೈಲ್‌’-ವಾರ್ತಾಭಾರತಿ ವರದಿ ಪ್ರಕಟಿಸುತ್ತಿದ್ದಂತೆ ನೈಜ ಹೋರಾಟಗಾರರ ವೇದಿಕೆಯು, ಲೋಕಾಯುಕ್ತ ಸಂಸ್ಥೆಯು 15 ವರ್ಷಗಳ ಕಾಲ ವಿಚಾರಣೆಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಖುದ್ದು ಲೋಕಾಯುಕ್ತರ ಗಮನಕ್ಕೆ ತಂದಿದೆ.

 

ಕೆ ಎಸ್‌ ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುರುಗೇಶ್‌ ನಿರಾಣಿ, ಆರ್‌ ಅಶೋಕ್‌, ಜೆ ಸಿ ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಪರಣ್ಣ ಮುನವಳ್ಳಿ ಸೇರಿದಂತೆ ಹಾಲಿ ಮತ್ತು ಮಾಜಿ ಸಚಿವರ ವಿರುದ್ಧದ ಆರೋಪಗಳ ಕುರಿತು ಸಲ್ಲಿಕೆಯಾಗಿದ್ದ ದೂರುಗಳು ಲೋಕಾಯುಕ್ತ ಸಂಸ್ಥೆಯಲ್ಲಿ ಹಲವು ವರ್ಷಗಳಿಂದಲೂ ತೆವಳುತ್ತಿರುವ ಕುರಿತು ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರನ್ನು ಭೇಟಿ ಮಾಡಿ ಪ್ರಕರಣಗಳ ಸ್ಥಿತಿಗತಿಯನ್ನು ವಿವರಿಸಿದೆ.

 

‘ಲೋಕಾಯುಕ್ತ ಸಂಸ್ಥೆಗೆ ಲೋಕಾಯುಕ್ತರು, ಉಪ ಲೋಕಾಯುಕ್ತರು, ರಿಜಿಸ್ಟ್ರಾರ್‌, ತನಿಖಾಧಿಕಾರಿ, ತಾಂತ್ರಿಕ ವಿಭಾಗ, ಪೊಲೀಸ್‌ ವಿಭಾಗ, ಸಿಬ್ಬಂದಿ ವರ್ಗದವರಿಗೆ ಸಂಬಳ, ಸಾರಿಗೆ, ಭತ್ಯೆ ರಜಾ ಸೌಲಭ್ಯ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರವು ಭರಿಸುತ್ತಿದೆ. ಆಧರೂ ಕೂಡ ತನಿಖೆ ಆಮೆಗತಿಯಲ್ಲಿ ಸಾಗಿ ನಂತರ ಕಡತಗಳು ನೆನೆಗುದಿಗೆ ಬಿದ್ದಿರುವುದಕ್ಕೆ ಕಾರಣವೇನು ಎಂಬ ಮಾಹಿತಿ ಒದಗಿಸಬೇಕು,’ ಎಂದು ನೈಜ ಹೋರಾಟಗಾರರ ವೇದಿಕೆಯು ಲೋಕಾಯುಕ್ತರಿಗೆ ಕೋರಿದೆ.

 

 

ಜನಪ್ರತಿನಿಧಿಗಳ ವಿರುದ್ಧ ಸಲ್ಲಿಕೆಯಾದ ದೂರುಗಳನ್ನು ಯಾವ ಕಾರಣಕ್ಕಾಗಿ ಇತ್ಯರ್ಥಪಡಿಸಿಲ್ಲ ಎಂದು ಲೋಕಾಯುಕ್ತರನ್ನು ಪ್ರಶ್ನಿಸಿರುವ ನೈಜ ಹೋರಾಟಗಾರರ ವೇದಿಕೆಯು ಈ ಎಲ್ಲಾ ಪ್ರಕರಣಗಳ ಕಡತಗಳನ್ನು, ದಾಖಲೆಗಳನ್ನು ಪರಿಶೀಲಿಸಿ ಯಾವ ಕಾರಣಕ್ಕಾಗಿ ತನಿಖೆಯು ಆಮೆಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಈ ಸಂಬಂಧ ವಿವರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಮನವಿ ಮಾಡಿದೆ.

 

ಚುನಾಯಿತ ಜನಪ್ರತಿನಿಧಿಗಳ ವಿರುದ್ಧದ ದೂರುಗಳ ಕುರಿತು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕಿದ್ದ ಲೋಕಾಯುಕ್ತ ಸಂಸ್ಥೆಯು ಉದ್ಧೇಶಪೂರ್ವಕವಾಗಿಯೇ ವಿಳಂಬ ದ್ರೋಹ ಎಸಗಿದೆ ಎಂಬ ಆರೋಪ ಕೇಳಿ ಬಂದಿತ್ತು.

 

ಮಾಜಿ ಶಾಸಕ ವೈ ಎಸ್‌ ವಿ ದತ್ತಾ, ವಿ ಎಸ್‌ ಉಗ್ರಪ್ಪ, ಬಿ ಎಲ್‌ ಶಂಕರ್‌ ಸೇರಿದಂತೆ ಹಲವರು ನೀಡಿದ್ದ ದೂರಿನ ವಿಚಾರಣೆಯು 11 ವರ್ಷವಾದರೂ ಪೂರ್ಣಗೊಂಡಿಲ್ಲ. ಈ ಪ್ರಕರಣಗಳ ಕುರಿತು ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಬಿ ಎಸ್‌ ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಹೊಸತರಲ್ಲೇ ವೈ ಎಸ್‌ ವಿ ದತ್ತಾ ಮತ್ತು ವಿ ಎಸ್‌ ಉಗ್ರಪ್ಪ ಅವರು ದೂರು ಸಲ್ಲಿಸಿದ್ದರು.

 

ಈ ದೂರುಗಳ ವಿಚಾರಣೆಯು 11 ವರ್ಷಗಳವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲವಲ್ಲದೆ ಇನ್ನೂ ಅಂತಿಮ ಪರಿಶೀಲನೆಯಲ್ಲಿದೆ. ಈ ಅವಧಿಯಲ್ಲಿ ಭಾಸ್ಕರರಾವ್‌ ಮತ್ತು ಪಿ ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಲೋಕಾಯುಕ್ತ ಸಂಸ್ಥೆಗೆ ಪೊಲೀಸ್‌ ಅಧಿಕಾರ ಇದ್ದಾಗಲೂ ದೂರುಗಳ ವಿಚಾರಣೆ, ತನಿಖೆಯು ವಿಳಂಬವಾಗಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

 

ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್‌ ಅವರು ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಲೋಕಾಯುಕ್ತರ ಪರಿಧಿಯೊಳಗೇ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಇನ್ನಿತರ ಪ್ರಮುಖರ ವಿರುದ್ಧದ ದೂರುಗಳ ವಿಚಾರಣೆಯು ಆಮೆಗತಿಯಲ್ಲಿ ಇರುವುದು ಮುನ್ನೆಲೆಗೆ ಬಂದಿದ್ದವು. ಈ ಕುರಿತು ‘ದಿ ಫೈಲ್‌’ 2022ರ ಜೂನ್‌ 23ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

ಬಿಎಸ್‌ವೈ,ಶೋಭಾ,ನಿರಾಣಿ,ಈಶ್ವರಪ್ಪ,ಅಶೋಕ್‌ ವಿರುದ್ಧದ ದೂರು; ಹತ್ತು ವರ್ಷವಾದರೂ ಮುಗಿಯದ ಲೋಕಾ ತನಿಖೆ

 

ಲೋಕಾಯುಕ್ತ ಸಂಸ್ಥೆಯು ತನ್ನ ಅಧಿಕೃತ ಜಾಲತಾಣದಲ್ಲಿಯೇ 2022ರ ಮಾರ್ಚ್‌ ಅಂತ್ಯಕ್ಕೆ ದೂರು, ಪ್ರಕರಣಗಳ ವಿಚಾರಣೆ ಹಂತದ ಕುರಿತು ಮಾಹಿತಿಯನ್ನು ಸಾರ್ವಜನಿಕವಾಗಿ ತೆರೆದಿಟ್ಟಿದೆ. ಇದರ ಪ್ರಕಾರ ಇದುವರೆಗೂ 2,228 ದೂರುಗಳು ದಾಖಲಾಗಿವೆ. 12(3) ಅಡಿಯಲ್ಲಿ ಜುಲೈ 2021ರಿಂದ ಮೇ 2022ರವರೆಗೆ ಒಟ್ಟು 370 ಪ್ರಕರಣಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

 

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ, ಟೆಂಡರ್‌ ಪ್ರಕ್ರಿಯೆಗಳಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿವೆ ಎಂದು ಜೆಡಿಎಸ್‌ನ ವೈ ಎಸ್‌ ವಿ ದತ್ತಾ ಅವರು ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಅವರ ವಿರುದ್ಧ ಅಧಿಕಾರ ದುರುಪಯೋಗ ಸಂಬಂಧ ಒಟ್ಟು 2 ದೂರುಗಳನ್ನು 2010ರ ನವೆಂಬರ್‌ 18ರಂದು ಸಲ್ಲಿಸಿದ್ದರು. ಈ ದೂರು 2011ರ ಫೆ.19ರವರೆಗೆ ಪ್ರಗತಿಯಾಗಿದ್ದರೆ ಅ ನಂತರ ಪ್ರಗತಿ ಕಂಡು ಬಂದಿಲ್ಲ. ಇದೀಗ 2022ರ ಜೂನ್‌ 22ರಂದು ವಿಚಾರಣಾಧಿಕಾರಿಗಳ ಮುಂದೆ (2022ರ ಜೂನ್‌ 19 ಅಂತ್ಯಕ್ಕೆ) ಬರಲಿದೆ.

 

ಈ ದೂರು ಸಲ್ಲಿಕೆಯಾದ ನಂತರ ಪ್ರತಿವಾದಿಗಳಿಂದ ವಿವರಣೆ ಪಡೆಯುವ ಪ್ರಕ್ರಿಯೆಉ 2010ರ ಡಿಸೆಂಬರ್‌ 1, ಡಿಸೆಂಬರ್‌ 28, 31, ಫೆ.19ರಂದು ನಡೆದಿತ್ತು. 10 ವರ್ಷಗಳಾದರೂ ಈ ದೂರಿನ ವಿಚಾರಣೆಯು ಇನ್ನು ಅಂತಿಮಗೊಂಡಿಲ್ಲ. ಸದ್ಯ ಅಂತಿಮ ಪರಿಶೀಲನೆಯು ಲೋಕಾಯುಕ್ತ ಪರಿಧಿಯೊಳಗೇ ಇದೆ ಎಂದು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ವಿವರಗಳಿವೆ.

 

ಅದೇ ರೀತಿ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದ ವಿ ಎಸ್‌ ಉಗ್ರಪ್ಪ, ಡಾ ಬಿ ಎಲ್‌ ಶಂಕರ್‌, ಅಪ್ಪಾಜಿ ಚನ್ನಬಸವರಾಜ ಶಂಕರರಾವ್‌ ನಾಡಗೌಡ ಅವರು 2010ರ ಡಿಸೆಂಬರ್‌ 3ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

 

ಬಿ ಎಸ್‌ ಯಡಿಯೂರಪ್ಪ, ಕೆ ಎಸ್‌ ಈಶ್ವರಪ್ಪ, ಬಿ ವೈ ರಾಘವೇಂದ್ರ, ಆರ್‌ ಅಶೋಕ್‌, ಮುರುಗೇಶ್‌ ನಿರಾಣಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ, ಹೇಮಚಂದ್ರ ಸಾಗರ್‌, ಎಂ ಪಿ ಕುಮಾರಸ್ವಾಮಿ, ವಿಧಾನಪರಿಷತ್‌ ಸದಸ್ಯರಾಗಿದ್ದ ಭಾರತಿ ಶೆಟ್ಟಿ, ಶೋಭಾ ಕರಂದ್ಲಾಜೆ ಅವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ವಿಚಾರಣೆಯು ಇನ್ನೂ ಅಂತಿಮಗೊಂಡಿಲ್ಲ. ಪ್ರತಿವಾದಿಗಳ ವಿವರಣೆ ಪಡೆದುಕೊಳ್ಳುವುದರಲ್ಲೇ ಲೋಕಾಯುಕ್ತ ಸಂಸ್ಥೆಯು ನಿರತವಾಗಿರುವುದು ಗೊತ್ತಾಗಿದೆ.

 

ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಆರೋಗ್ಯ ಸಚಿವರಾಗಿದ್ದ ಬಿ ಶ್ರೀರಾಮುಲು, ಡಾ ಕೆ ಸುಧಾಕರ್‌, ಹಿರಿಯ ಐಎಎಸ್‌ ಅಧಿಕಾರಿ ಜಾವೇದ್‌ ಅಖ್ತರ್‌, ಮಂಜುಶ್ರೀ, ಪಂಕಜ್‌ಕುಮಾರ್‌ ಪಾಂಡೆ ಅವರ ವಿರುದ್ಧ ನೀಡಿದ್ದ ದೂರುಗಳು 2 ವರ್ಷಗಳಾದರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ.

 

ಎಸ್‌ ಎನ್‌ ಮರಿಯಪ್ಪ ಎಂಬುವರು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿಗಳ ವಿರುದ್ಧ ಕಳೆದ ಒಂದು ವರ್ಷದ ಹಿಂದೆಯೇ ಸಲ್ಲಿಸಿದ್ದ ದೂರಿನ ಕುರಿತಾದ ವಿಚಾರಣೆಯು ಇದ್ದಲ್ಲೇ ಇದೆ. ಒಂದು ವರ್ಷದ ಬಳಿಕ ಪ್ರತಿವಾದಿಗಳಿಂದ ದೂರಿನ ಕುರಿತು ವಿವರಣೆ ಪಡೆಯಲು ನೋಟೀಸ್‌ ಜಾರಿಮಾಡಿತ್ತು.

 

ಹಾಗೆಯೇ ಸುರೇಂದ್ರ ಉಗಾರೆ ಎಂಬುವರು ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ, ಪ್ರಶಾಂತ ಘಾಟ್ಗೆ ವಿರುದ್ದ ನೀಡಿರುವ ದೂರಿನ ವಿಚಾರಣೆಯನ್ನು ಪೊಲೀಸ್‌ ತನಿಖೆಗೆ ಶಿಫಾರಸ್ಸು ಮಾಡಿದೆ. ಆದರೆ ವರದಿ ಇನ್ನೂ ಲೋಕಾಯುಕ್ತರ ಕೈ ಸೇರಿಲ್ಲ ಎಂದು ಗೊತ್ತಾಗಿದೆ.

 

ಹಾಗೆಯೇ ಸಿದ್ದಲಿಂಗೇಗೌಡ ಎಂಬುವರು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಐಎಎಸ್‌ ಅಧಿಕಾರಿ ಶಾಮಭಟ್‌ (ಬಿಡಿಎ ಆಯುಕ್ತರಾಗಿದ್ದರು), ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರ ವಿರುದ್ಧ ನೀಡಿದ್ದ ದೂರು 7 ವರ್ಷಗಳಿಂದಲೂ ಅಂತಿಮ ಪರಿಶೀಲನೆಯಲ್ಲಿಯೇ ಇದೆ ಎಂಬುದು ಲೋಕಾಯುಕ್ತ ಅಧಿಕೃತ ಜಾಲತಾಣದಿಂದ ಗೊತ್ತಾಗಿದೆ.

 

ಮೈಸೂರಿನ ಬಿ ಕರುಣಾಕರ್‌ ಎಂಬುವರು ಅಂದು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಎಸ್‌ ಎ ರಾಮದಾಸ್‌, ನಿಂಗಪ್ಪ ಗುಡಿ ಎಂಬುವರು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌, ಸಿದ್ದಲಿಂಗೇಗೌಡ ಎಂಬುವರು ಅಂದು ಸಚಿವರಾಗಿದ್ದ ಆರ್‌ ರಾಮಲಿಂಗಾರೆಡ್ಡಿ, ರಾಘವೇಂದ್ರ ಎಂಬುವರು ಶಾಸಕಿ ಶಾರದಾ ಮೋಹನ್‌ ಶೆಟ್ಟಿ, ಡಿ ಸಿ ಪ್ರಕಾಶ್‌ ಎಂಬುವರು ದೊಡ್ಡಬಳ್ಳಾಪುರ ಶಾಸಕರಾಗಿದ್ದ ಜೆ ನರಸಿಂಹಸ್ವಾಮಿ, ಎಲ್‌ ಶಿವಣ್ಣ ಎಂಬುವರು ಹಾಲಿ ಸಚಿವರಾಗಿರುವ ಮುನಿರತ್ನ ವಿರುದ್ಧ ದೂರುಗಳು ಇನ್ನೂ ಅಂತಿಮ ಪರಿಶೀಲನೆಯಲ್ಲಿಯೆ ತೆವಳುತ್ತಿದೆ.

 

ರವಿಕಿರಣ್‌ ಕಾಂಬ್ಳೆ ಎಂಬುವರು ಅಂದು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್‌ ಕೆ ಪಾಟೀಲ್‌, ಜಿ ವಿ ಕೃಷ್ಣರಾಜು, ಮಾಜಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌, ಗಂಗಾರಾಮ್‌ ಬಡೇರಿಯಾ, ಮುನೀಶ್‌ ಮೌದ್ಗಿಲ್‌, ಚಿಕ್ಕಣ್ಣಗೌಡರ್‌ ಎಂಬುವರ ವಿರುದ್ಧ 2016ರಲ್ಲಿಯೇ ದೂರು ನೀಡಿದ್ದರು. ಈ ದೂರು ಕೂಡ 6 ವರ್ಷಗಳಿಂದ ಅಂತಿಮ ಪರಿಶೀಲನೆಯಲ್ಲಿರುವುದು ಗೊತ್ತಾಗಿದೆ.

 

ಇನ್ನು, ಎಚ್‌ ಬಿ ನಾಗೇಶ್‌ ಎಂಬುವರು ಅಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ ಜೆ ಜಾರ್ಜ್‌, ಜಲಸಂಪನ್ಮೂಲ ಸಚಿವರಾಗಿದ್ದ ಎಂ ಬಿ ಪಾಟೀಲ್‌, ಇಂಧನ ಸಚಿವರಾಗಿದ್ದ ಡಿ ಕೆ ಶಿವಕುಮಾರ್‌, ಪಿಡಬ್ಲ್ಯೂಡಿ ಸಚಿವರಾಗಿದ್ದ ಎಚ್‌ ಸಿ ಮಹದೇವಪ್ಪ, ಶಾಸಕರಾಗಿದ್ದ ಆರ್‌ ವಿ ದೇವರಾಜ್‌, ವಿಧಾನಪರಿಷತ್‌ ಸದಸ್ಯರಾಗಿದ್ದ ಗೋವಿಂದರಾಜ್‌ ಅವರ ವಿರುದ್ಧ ನೀಡಿದ್ದ ದೂರು 5 ವರ್ಷದಿಂದಲೂ ವಿಚಾರಣೆ ಹಂತದಲ್ಲಿಯೇ ಇದೆ.

Your generous support will help us remain independent and work without fear.

Latest News

Related Posts