ಶಿಕ್ಷಣ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆ; ಖಾಸಗಿ ಕಂಪನಿಗೆ ಸರ್ಕಾರದ ಬೊಕ್ಕಸದಿಂದ ಲಕ್ಷಾಂತರ ರು.ಪಾವತಿ!

ಬೆಂಗಳೂರು; ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ ಅಧಿಕಾರಾವಧಿ ತನಕ ಅವರ ಟ್ವಿಟರ್‌ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಬೊಕ್ಕಸದಿಂದ ಲಕ್ಷಾಂತರ ರುಪಾಯಿ ವೆಚ್ಚವಾಗುತ್ತಿರುವುದು ಇದೀಗ ಬಹಿರಂಗವಾಗಿದೆ.

 

ರೋಹಿತ್‌ ಚಕ್ರತೀರ್ಥ ಸಮಿತಿಯು ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಯುತ್ತಿರುವ ಹೊತ್ತಿನಲ್ಲಿಯೇ ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣಕ್ಕೆ ಸರ್ಕಾರಿ ಸಂಸ್ಥೆಯೊಂದರಿಂದ ವೆಚ್ಚ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಈ ಸಂಬಂಧ ಸಚಿವ ಬಿ ಸಿ ನಾಗೇಶ್‌ ಅವರು ಹೊರಡಿಸಿರುವ ಟಿಪ್ಪಣಿ, 4 (ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು 2022ರ ಜೂನ್‌ 20ರಂದು ಹೊರಡಿಸಿರುವ ಅಧಿಸೂಚನೆ ಮತ್ತು  ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯು 2022ರ ಜೂನ್‌ 21ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ   ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೆ ಸಾಮಾಜಿಕ ಜಾಲತಾಣ ನಿರ್ವಹಿಸಲು ಯಾವುದೇ ಟೆಂಡರ್‌ ಪ್ರಕ್ರಿಯೆಯೂ ನಡೆದಿಲ್ಲ. ಮಾಸಿಕ 1 ಲಕ್ಷ ರು.ಮೊತ್ತ ಪಾವತಿ ಮಾಡಬೇಕಾದರೆ ಟೆಂಡರ್‌ ಪ್ರಕ್ರಿಯೆ ನಡೆಸಬೇಕು. ಆದರೆ ಟೆಂಡರ್‌ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಟೆಂಡರ್‌ ಮೊತ್ತವನ್ನು ಲಕ್ಷಕ್ಕೆ 6 ಸಾವಿರ ರು. ಕಡಿಮೆ ನಿಗದಿಗೊಳಿಸಿ ಟೆಂಡರ್‌ ಪ್ರಕ್ರಿಯೆ ನಡೆಸದೆಯೇ ಕೆಟಿಪಿಪಿ ಕಾಯ್ದೆ 4 (ಜಿ) ವಿನಾಯಿತಿ ಬಳಕೆ ಮಾಡಿಕೊಂಡಿದೆ.

 

ಹಾಗೆಯೇ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿರುವ ಖಾಸಗಿ ಕಂಪನಿ ಅವಧಿ ಪೂರ್ಣಗೊಂಡಿದ್ದರೂ 2023ರ ಮಾರ್ಚ್‌ವರೆಗೂ ಮುಂದುವರೆಸಲು ಸಚಿವ ಬಿ ಸಿ ನಾಗೇಶ್‌ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರು ಎಂಬುದು ತಿಳಿದು ಬಂದಿದೆ.

 

ವರ್ಷಕ್ಕೆ 11.38 ಲಕ್ಷ ರು

 

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಪಿ-ಪೋಲ್‌ ಅನಾಲಿಟಿಕ್ಸ್‌ ಎಲ್‌ಎಲ್‌ಪಿ ಸಂಸ್ಥೆಯು ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದೆ. ಪ್ರತಿ ತಿಂಗಳು 94,400 ರು. ಲೆಕ್ಕದಲ್ಲಿ ವರ್ಷಕ್ಕೆ 11,38,800 ರು. (ಜಿಎಸ್‌ಟಿ ಹೊರತುಪಡಿಸಿ) ಪಾವತಿಯಾಗುತ್ತಿದೆ ಎಂಬುದು ಗೊತ್ತಾಗಿದೆ.

 

ಸಾಮಾಜಿಕ ಜಾಲತಾಣಗಳ ನಿರ್ವಹಣೆ ಕಾರ್ಯಕ್ಕೆ ಪಿ-ಪೋಲ್‌ ಅನಾಲಿಟಿಕ್ಸ್‌ ಎಲ್‌ಎಲ್‌ಪಿ ಸಂಸ್ಥೆಯ ಸೇವೆಯನ್ನು ಮುಂದುವರೆಸಬೇಕು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರ ಸಚಿವ ಬಿ ಸಿ ನಾಗೇಶ್‌ ಅವರು ಸೂಚಿಸಿದ್ದರು. ಅದರಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ವಿನಾಯಿತಿ ಕೋರಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಕಡತ (ಇ-ಆಫೀಸ್‌ ಕಡತ ಸಂಖ್ಯೆ; ಕೆಎಸ್‌ಎಸ್‌ಇಬಿ/ಡಿಪಿಐಎಇ/ಬಿ1 (ಒಟಿಪಿ) 2022-ಬಿಎಸ್‌ಇಸಿ) ಸಲ್ಲಿಸಿತ್ತು ಎಂದು ತಿಳಿದು ಬಂದಿದೆ.

 

‘ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರ ಅಧಿಕಾರವಾಧಿ ತನಕ ಸಚಿವರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಕಾರ್ಯಕ್ಕೆ ಮಾಹೆಯಾನ 94,400 ರು.ಗಳಂತೆ 2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಒಂದು ವರ್ಷದ ಅವಧಿಗೆ 11,38,300 ರು. ವೆಚ್ಚದಲ್ಲಿ ಬೆಂಗಳೂರಿನ ಜೆ ಪಿ ನಗರದಲ್ಲಿರುವ ಪಿ-ಪೋಲ್‌ ಅನಾಲಿಟಿಕ್ಸ್‌ ಎಲ್‌ಎಲ್‌ಪಿ ಸಂಸ್ಥೆ ಸೇವೆಯನ್ನು ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶನತೆ ಅಧಿನಿಯ 1999ರ ಕಲಂ 4(ಜಿ) ವಿನಾಯಿತಿ ನೀಡಲಾಗಿದೆ,’ (ಆಇ 297 ವೆಚ್ಚ-12/2022 (ಇ-ಆಫೀಸ್‌ ಕಡತ- ದಿನಾಂಕ 20.06.2022) ಎಂದು ಗೊತ್ತಾಗಿದೆ.

 

4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಹೊರಡಿಸಿಸರುವ ಅಧಿಸೂಚನೆ ಪ್ರತಿ

 

 

ಆರ್ಥಿಕ ಇಲಾಖೆ ಹೊರಡಿಸಿದ ಒಂದೇ ದಿನದ ಅಂತರದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೂ ಸಹ ಈ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿಯು ವೆಚ್ಚ ಭರಿಸಬೇಕು ಎಂದು ಮಂಡಳಿಯ  ನಿರ್ದೇಶಕರಿಗೆ 2022ರ ಜೂನ್‌ 21ರಂದು ಪತ್ರ ಬರೆದಿದ್ದಾರೆ.

 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಬರೆದಿರುವ ಪತ್ರದ ಪ್ರತಿ

 

ಮುಖ್ಯಮಂತ್ರಿ ಹೊರತುಪಡಿಸಿದರೆ ಉಳಿದ ಸಚಿವರ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸರ್ಕಾರದಿಂದ ನಯಾ ಪೈಸೆಯನ್ನೂ ವೆಚ್ಚ ಮಾಡುತ್ತಿಲ್ಲ. ಬಿ ಸಿ ನಾಗೇಶ್‌ ಅವರನ್ನು ಹೊರತುಪಡಿಸಿದರೆ ಉಳಿದ ಸಚಿವರು ಸಾಮಾಜಿಕ ಜಾಲತಾಣ ನಿರ್ವಹಣೆಗೆಂದೇ ತಂಡವನ್ನು ನೇಮಿಸಿಕೊಂಡಿದ್ದಾರೆ.

 

ಇತಿಹಾಸ ಪುರುಷರು, ರಾಜಕಾರಣಿಗಳ ಹುಟ್ಟುಹಬ್ಬ, ಇಲಾಖೆಯ ಮಹತ್ವದ ತೀರ್ಮಾನಗಳು, ಘೋಷಣೆಗಳು, ಕಾರ್ಯಕ್ರಮ ಉದ್ಘಾಟನೆ ಸೇರಿದಂತೆ ಇನ್ನಿತರೆ ಸಂಗತಿಗಳ ಕುರಿತು ಸಚಿವರುಗಳ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿಗಳನ್ನು ಪ್ರಕಟಿಸಲಾಗುತ್ತದೆ. ಈ ತಂಡಕ್ಕೆ ಖಾಸಗಿಯಾಗಿ ಹಣ ಪಾವತಿಯಾಗುತ್ತಿದೆಯೇ ಹೊರತು ಸರ್ಕಾರದಿಂದ ಯಾವುದೇ ಹಣವೂ ಪಾವತಿಯಾಗುತ್ತಿಲ್ಲ.

 

ಆದರೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿರುವ ಖಾಸಗಿ ಕಂಪನಿಗೆ ಲಕ್ಷಾಂತರ ರುಪಾಯಿಗಳನ್ನು ಸರ್ಕಾರವೇ ಪಾವತಿಸುತ್ತಿರುವುದಕ್ಕೆ ಹಲವು ಆಕ್ಷೇಪಗಳು ವ್ಯಕ್ತವಾಗಿವೆ.

the fil favicon

SUPPORT THE FILE

Latest News

Related Posts