ಬೆಂಗಳೂರು; ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಶೀಲನಾ ಸಮಿತಿಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕನಕದಾಸರನ್ನು ಕೇವಲ ಒಂದೇ ಒಂದು ಸಾಲಿನಲ್ಲಿ ಪರಿಚಯಿಸಿರುವುದಕ್ಕೆ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಈಶ್ವರಾನಂದಪುರಿ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುವೆಂಪು ವಿರುದ್ಧ ಅವಹೇಳನ ಮಾಡಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಆದಿಚುಂಚನಗಿರಿ ಮಠ, ನಂಜಾವದೂತ ಶ್ರೀಗಳು ಸೇರಿದಂತೆ ನಾಡಿನೆಲ್ಲೆಡೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರ ಬೆನ್ನಲ್ಲೇ ಇದೀಗ ಪಠ್ಯದಲ್ಲಿ ಕನಕದಾಸರ ಕುರಿತಾದ ಮಾಹಿತಿಯನ್ನು ಸೀಮಿತಗೊಳಿಸಿರುವುದಕ್ಕೆ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠವು ಮೌನ ಮುರಿದಿರುವುದು ಪ್ರತಿರೋಧವನ್ನು ಬಲಪಡಿಸಿದಂತಾಗಿದೆ. ಕನಕ ಗುರುಪೀಠವು ಆಕ್ಷೇಪ ಎತ್ತಿದ್ದರೂ ಕರ್ನಾಟಕ ಪ್ರದೇಶ ಕುರುಬರ ಸಂಘವು ಇದುವರೆಗೂ ತುಟಿ ಬಿಚ್ಚಿಲ್ಲ.
ಅಲ್ಲದೆ ಈ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ತಕ್ಷಣವೇ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿರುವ ಮಠಾಧೀಶರ ಸಾಲಿಗೆ ಕಾಗಿನೆಲೆ ಕನಕ ಗುರುಪೀಠವೂ ಸೇರಿದೆ. ಪಠ್ಯ ಪರಿಷ್ಕರಣೆಯಲ್ಲಿ ಬಸವೇಶ್ವರರ ಕುರಿತು ತಪ್ಪು ಮಾಹಿತಿ ಸೇರಿಸಿದ್ದರೂ ಲಿಂಗಾಯತ ಮಠಗಳ ಮಠಾಧೀಶರು ತುಟಿ ಬಿಚ್ಚದಿರುವ ಹೊತ್ತಿನಲ್ಲಿ ಕನಕದಾಸರ ಕುರಿತು ಇದ್ದ ಮಾಹಿತಿಯನ್ನು ಒಂದೇ ಸಾಲಿಗೆ ಇಳಿಸಿರುವುದನ್ನು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠವು ದನಿ ಎತ್ತಿರುವುದು ಹೋರಾಟಕ್ಕೆ ಇಂಬುಕೊಟ್ಟಂತಾಗಿದೆ.
ಪಠ್ಯ ಪರಿಷ್ಕರಣೆಯಲ್ಲಿ ಕನಕದಾಸರ ಕುರಿತು ಮಾಹಿತಿ ಇಲ್ಲದಿರುವ ಕುರಿತು ಈಶ್ವರಾನಂದಪುರಿ ಶ್ರೀಗಳು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
2021-22ರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಭಕ್ತಿ ಪಂಥದ ಕುರಿತು ದಾಸ ಶ್ರೇಷ್ಠ ಕನಕದಾಸರ ಬಗ್ಗೆ ಒಂದು ಪುಟಕ್ಕೂ ಹೆಚ್ಚಿನ ಮಾಹಿತಿ ಇದ್ದು, ಈಗಿನ ಪರಿಷ್ಕರಣೆಯಲ್ಲಿ 2022-23ರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಭಕ್ತಿ ಪಂಥದಲ್ಲಿ ಕೇವಲ ಒಂದೇ ಒಂದು ಸಾಲಿನಲ್ಲಿ ಪರಿಚಯಿಸಿರುವ ಕಾರಣ ತಿಳಿಯುತ್ತಿಲ್ಲ. 16ನೇ ಶತಮಾನದಲ್ಲಿ ಸಾಮಾಜಿಕ ವೈರುಧ್ಯಗಳ ವಿರುದ್ಧ ಕಂದಾಚಾರಗಳ ವಿರುದ್ಧ, ಜಾತೀಯತೆ ಹೋಗಲಾಡಿಸಲು ಬಹುದೊಡ್ಡ ಕೊಡುಗೆಯನ್ನು ನೀಡಿದವರು.
ಕೀರ್ತನೆಗಳ ಮೂಲಕ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಕುರಿತು ಮಾಹಿತಿಯಿಲ್ಲದೇ ಇರುವುದು ಎಷ್ಟು ಸರಿ, ಈ ಎಲ್ಲಾ ವಿಚಾರಗಳನ್ನು ತಾವು ಮನಗಂಡು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವರಿಗೆ ಸೂಚನೆ ನೀಡಿ ಆಗಿರುವ ತಪ್ಪುಗಳನ್ನು ತಿದ್ದಿ ಕನಕದಾಸರನ್ನುಕುರಿತು ಸರಿಯಾದ ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ನೀಡಬೇಕು ಎಂದು ಈ ಮೂಲಕ ತಿಳಿಯಬಯಸುತ್ತೇನೆ.
ತಜ್ಞರಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಿ ಈಗಾಗಲೇ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕತೆಯಲ್ಲಿ ಇರುವ ಪಠ್ಯವನ್ನೇ ಮುಂದುವರೆಸಲು ತಿಳಿಯಬಯಸುತ್ತೇವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.