ಕೆಎಚ್‌ಬಿಗೆ 15.26 ಕೋಟಿ ನಷ್ಟ; ಬೈರತಿ ಬಸವರಾಜು ಆಪ್ತ ಕಾರ್ಯದರ್ಶಿ ಸಿ ನಾಗರಾಜು ಕರ್ತವ್ಯಲೋಪವೇ?

photo credit-deccanhearald

ಬೆಂಗಳೂರು; ಭೂ ಪರಿಹಾರ ನೀಡುವ ಸಂಬಂಧ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಸದ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಆಪ್ತ ಕಾರ್ಯದರ್ಶಿಯಾಗಿರುವ ಹಿರಿಯ ಕೆಎಎಸ್‌ ಅಧಿಕಾರಿ ಸಿ ನಾಗರಾಜ್‌ ಮತ್ತು ಇತರೆ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ 15.26 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿದೆ ಎಂಬುದು ಇದೀಗ ಬಹಿರಂಗವಾಗಿದೆ.

 

ಹಿರಿಯ ಕೆಎಎಸ್‌ ಅಧಿಕಾರಿ ಸಿ ನಾಗರಾಜ್‌ ಅವರು ಕರ್ನಾಟಕ ಗೃಹ ಮಂಡಳಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಜಮೀನಿನ ಪರಿಹಾರವನ್ನು ನಿಯಮಾನುಸಾರ ಜಮೀನು ಮಾಲೀಕರಿಗೆ ಪಾವತಿಸದೇ ಅಥವಾ ನ್ಯಾಯಾಲಯದಲ್ಲಿ ಠೇವಣಿಕರಿಸದೇ ಕರ್ತವ್ಯ ಲೋಪ ಎಸಗಿದ್ದರು ಆರೋಪ ಕೇಳಿಬಂದಿತ್ತು. ಭೂಪರಿಹಾರ ಧನ ಪಾವತಿಸುವಲ್ಲಿ ಮಂಡಳಿಗೆ 15.26 ಕೋಟಿ ನಷ್ಟವುಂಟಾಗಿದೆ ಎಂದು ಗೃಹ ಮಂಡಳಿ ಆಯುಕ್ತರು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಜೂನ್‌ 3ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಂಡಳಿಯಲ್ಲಿ ಸಿ ನಾಗರಾಜ್‌ ಅವರು ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿಯೇ 1 ಎಕರೆ 20 ಗುಂಟೆಗೆ ಸಂಬಂಧಿಸಿದಂತೆ 1,89,000 ರು. ಭೂಪರಿಹಾರ ಪಾವತಿಸಬೇಕಿತ್ತು. ಭೂಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡದ ಕಾರಣ ಇದೀಗ 1,89,000 ರು. ಬದಲಿಗೆ 15,26,40,000 ರು. ಸಂದಾಯ ಮಾಡಬೇಕಾದ ಸ್ಥಿತಿಯು ಎದುರಾಗಿರುವುದು ಆಯುಕ್ತರ ಪತ್ರದಿಂದ ತಿಳಿದು ಬಂದಿದೆ.

 

ಕರ್ನಾಟಕ ಗೃಹ ಮಂಡಳಿ ಆಯುಕ್ತರು ಬರೆದಿರುವ ಪತ್ರದ ಪ್ರತಿ

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ನಾಗರಾಜ್‌ ಅವರಿಗೆ ಮಂಡಳಿಯು ದೋಷಾರೋಪಣೆ ಪಟ್ಟಿಯನ್ನೂ ಜಾರಿಮಾಡಿತ್ತು. ಇದಕ್ಕೆ ಆಪಾದಿತ ಅಧಿಕಾರಿ ಸಿ ನಾಗರಾಜ್‌ ಅವರು ಪ್ರತಿರಕ್ಷಣಾ ಹೇಳಿಕೆಯನ್ನು ನೀಡಿದ್ದರು. ಇದನ್ನು ಪರಿಶೀಲಿಸಿದ್ದ ಮಂಡಳಿಯು ಸ್ಥಳ ತನಿಖಾ ವರದಿ ಸಲ್ಲಿಸಿತ್ತು. ಕರ್ತವ್ಯಲೋಪ ಎಸಗಿರುವುದು ಈ ವರದಿಯಲ್ಲಿಯೂ ಸಾಬೀತಾಗಿತ್ತು ಎಂಬುದು ಮಂಡಳಿಯ ಆಯುಕ್ತರು ಬರೆದಿರುವ ಪತ್ರದಿಂದ ಗೊತ್ತಾಗಿದೆ.

 

‘ವಿಶೇಷ ಭೂಸ್ವಾಧೀನಾಧಿಕಾರಿ ಸಿ ನಾಗರಾಜು, ಸಿಬ್ಬಂದಿಯಾದ ಅನುರಾಧ ಅವರು ಕರ್ತವ್ಯಲೋಪವೆಸಗಿದ್ದರಿಂದಾಗಿ ಈ ಜಮೀನಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ವ್ಯಾಜ್ಯಗಳ ಮೇಲೆ ವ್ಯಾಜ್ಯಗಳಾಗಿ ಅಂತಿಮವಾಗಿ ಕರ್ನಾಟಕ ಗೃಹ ಮಂಡಳಿಯು 1,89,000 ರು. ಬದಲಿಗೆ 15,26,40,000 ರು. ಸಂದಾಯ ಮಾಡುವ ಸಂದಿಗ್ಧ ಪರಿಸ್ಥಿಯನ್ನುಂಟುಮಾಡಲು ಕಾರಣಿಕರ್ತರಾಗಿರುತ್ತಾರೆ. ಈ ಕಾರಣಗಳಿಂದ ಇವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು,’ ಎಂದು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

 

 

ಪ್ರಕರಣದ ಹಿನ್ನೆಲೆ

 

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಗ್ರಾಮದ ಸರ್ವೆ ನಂಬರ್‌ 20/8ರಲ್ಲಿ 1.20 ಎಕರೆಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ರಿಟ್‌ (ಅರ್ಜಿ ಸಂಖ್ಯೆ 28022, 28955-61/2011) ಅರ್ಜಿ ದಾಖಲಾಗಿತ್ತು. ಈ ಅರ್ಜಿ 2011ರ ಸೆಪ್ಟಂಬರ್‌ 28ರಂದು ವಜಾಗೊಂಡಿತ್ತು. ಇದಾದ ನಂತರ ಜಮೀನಿನ ಪರಿಹಾರವನ್ನು ನಿಯಮಾನುಸಾರ ಜಮೀನು ಮಾಲೀಕರಿಗೆ 1,89,000 ರು. ಪಾವತಿಸದೇ ಅಥವಾ ನ್ಯಾಯಾಲಯದಲ್ಲಿಯೂ ಠೇವಣಿಕರಿಸಿರಲಿಲ್ಲ.

 

ಸ್ಥಳ ತನಿಖಾ ವರದಿಯಲ್ಲೇನಿದೆ?

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಹೊರವರ್ತುಲ ರಸ್ತೆ ಹಾಗೂ ವಿಶ್ವೇಶ್ವರಯ್ಯ ಬಡಾವಣೆ ರಸ್ತೆ ಇವರೆಡರ ಸಂಪರ್ಕ ರಸ್ತೆ ಮೂಲೆಯಲ್ಲಿ ಬರುತ್ತಿದ್ದು ಹಾಗೂ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾಗಿರುವ ಬಹುಮಹಡಿ ವಸತಿ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಇರುತ್ತದೆ.

 

ಈ ಜಮೀನಿನಲ್ಲಿ ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊರ ವರ್ತುಲ ರಸ್ತೆ ನಿರ್ಮಾಣವಾಗಿದ್ದು ರಸ್ತೆಯ ಎರಡೂ ಬದಿಗಳಲ್ಲಿ ಗೃಹ ಮಂಡಳಿಗೆ ಸೇರಿದ ಪ್ರದೇಶವಿರುತ್ತದೆ. ಈ ಜಮೀನು ಮಂಡಳಿಯ ಹಿತದೃಷ್ಟಿಯಿಂದ ಅತೀ ಪ್ರಮುಖವಾದ ಹಾಗೂ ಬೆಲೆಬಾಳುವ ವಾಣಿಜ್ಯೋಪಯೋಗಿ ಸ್ವತ್ತಾಗಿರುವುದರಿಂದ ಮತ್ತು ಇಂತಹ ಸ್ವತ್ತನ್ನು ಮಂಡಳಿಯ ವಶಕ್ಕೆ ಪುನಃ ಪಡೆಯುವ ಉದ್ಧೇಶದಿಂದ ಉಚ್ಛ ನ್ಯಾಯಾಲಯಕ್ಕೆ ಏಕಸದಸ್ಯ ಪೀಠದ ಆದೇಶದ ವಿರುದ್ಧ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸುವುದು ಸೂಕ್ತ ಹಾಗೂ ಅನಿವಾರ್ಯ ಎಂದು ಸ್ಥಳ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಅದೇ ಸರ್ವೆ ನಂಬರ್‌ 0-34 ಗುಂಟೆ ವಿಸ್ತೀರ್ಣದಲ್ಲಿ ರಸ್ತೆ ನಿರ್ಮಾಣವಾಗಿದೆ ಎಂಬುದನ್ನು ತಿಳಿಸಿರಲಿಲ್ಲ. ಅಲ್ಲದೆ ಪರಿಹಾರವನ್ನು ಪಾವತಿಸಬೇಕಾದ ಭೂಮಾಲೀಕರ ಜಮೀನು ನಿಖರವಾಗಿ ಯಾವ ಭಾಗಕ್ಕೆ ಬರುತ್ತದೆ ಎಂಬ ಬಗ್ಗೆ ಮಾಹಿತಿಯೂ ಕಡತದಲ್ಲಿ ಲಭ್ಯವಿರಲಿಲ್ಲ. 2015ರ ಅಕ್ಟೋಬರ್‌ 9ರಂದು ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ 1-20 ಎಕರೆ ಜಮೀನಿನ ಬಗ್ಗೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ವಾಸ್ತವಿಕ ವರದಿಯನ್ನು ಪಡೆದಿರಲಿಲ್ಲ.

 

ಅಲ್ಲದೆ ಅವರ ಅನುಪಸ್ಥಿತಿಯಲ್ಲಿ ಸ್ಥಳ ತನಿಖಾ ವರದಿಯನ್ನು ಸಿದ್ಧಪಡಿಸಿ ಈಗಿನ ಭೂ ಸ್ವಾಧೀನ ಕಾಯ್ದೆಯ ನಿಯಮದಂತೆ ಭೂಪರಿಹಾರವನ್ನು ಪಾವತಿಸಿ ಜಮೀನನನ್ನು ಮಂಡಳಿಗೆ ಉಳಿಸಿಕೊಳ್ಳುವ ಬಗ್ಗೆ ಸೂಕ್ತ ನಿರ್ಣಯಕ್ಕಾಗಿ ಸಭೆ ಟಿಪ್ಪಣಿ ಮಂಡಿಸಿ ಮಂಡಳಿಯನ್ನು ತಪ್ಪುದಾರಿಗೆ ಎಳೆದಿದ್ದರು ಎಂದು ಆಯುಕ್ತರ ಪತ್ರದಲ್ಲಿ ವಿವರಿಸಲಾಗಿದೆ.

 

ಹಾಲಿ ಮಾರ್ಗಸೂಚಿ ದರದಂತೆ ಚದರ ಅಡಿ ಆಧಾರದ ಮೇಲೆ 25, 91, 82,000 ರು.ಗಳನ್ನು ಪಾವತಿಸಿ ಕರಡು ಪತ್ರವನ್ನು ಅನುಮೋದನೆಗೆ ಮಂಡಿಸಲಾಗಿತ್ತು. ಹಾಗೂ ಈ ಹಂತದಲ್ಲಿ ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಸಿ ನಾಗರಾಜು ಅವರು ತಾವೇ ಲೆಕ್ಕಾಚಾರ ಮಾಡಿ ಅನುಮೋದನೆಗಾಗಿ ಟಿಪ್ಪಣಿ ಮಂಡಿಸಿರುವುದು ಕಂಡುಬರುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

ಮಂಡಳಿಯ ವಸತಿ ಯೋಜನೆಯ ಅನುಮೋದಿತ ಬಡಾವಣೆ ನಕ್ಷೆಯಲ್ಲಿ ರಸ್ತೆಗಾರಿ ಗುರುತಿಸಿರುವ ಸ್ಥಳದಲ್ಲಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಸ್ತೆಯನ್ನು ಅಭಿವೃದ್ಧಿಪಡಿಸಿರುವುರಿಂದ 0-34 ಗುಂಟೆ ವಿಸ್ತೀರ್ಣಕ್ಕೆ 25,91,82,000 ರು.ಗಳನ್ನು ಪಾವತಿಸುವಂತೆ ಕೋರಿದ್ದರು. ಅಲ್ಲದೆ ಈ ಬಗ್ಗೆ ಮಂಡಳಿ ಸಭೆಗೆ ಟಿಪ್ಪಣಿ ಮಂಡಿಸಿರುವುದು ಸಮಂಜಸವಾಗಿರಲಿಲ್ಲ. ಹೊಸ ಭೂ ಸ್ವಾಧೀನ ಕಾಯ್ದೆಯಂತೆ ಪರಿಹಾರ ಪಾವತಿ ಮಾಡುವ ಬಗ್ಗೆ ಜಾಯಿಂಟ್‌ ಮೆಮೋ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಸಮಂಜಸವಾಗಿರಲಿಲ್ಲ.

 

ನಿಯಮಾನುಸಾರ ಭೂಸ್ವಾಧೀನಪಡಿಸಿ ಭೂ ಸ್ವಾಧೀನ ಕಾಯ್ದೆ ಕಲಂ 16(2)ರಂತೆ ಜಮೀನನ್ನು ಮಂಡಳಿಯ ಸ್ವಾಧೀನಕ್ಕೆ ಪಡೆಯಲಾಗಿದ್ದ ಹಿನ್ನೆಲೆಯಲ್ಲಿ ಮೆರಿಟ್‌ ಆಧಾರದ ಮೇಲೆ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆಸಿದ್ದಲ್ಲಿ ಸಮಂಜಸವಾಗುತ್ತಿತ್ತು ಎಂದು ಅಭಿಪ್ರಾಯಪಡಲಾಗಿದೆ.

 

ಅದೇ ರೀತಿ ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿಗಳು 459, 460, 461ನೇ ಮಂಡಳಿ ಸಭೆಗಳಿಗೆ ಸರ್ವೆ ನಂಬರ್ 20/8ರ ಜಮೀನಿನ ಭೂಪರಿಹಾರದ ಪಾವತಿಗೆ ಸಂಬಂಧಿಸಿದಂತೆ ಘಟನೋತ್ತರ ಅನುಮೋದನೆ ಪಡೆಯುವ ಬಗ್ಗೆ ಟಿಪ್ಪಣಿ ಮಂಡಿಸಿದ್ದು ವಾಸ್ತವಾಂಶವನ್ನು ಟಿಪ್ಪಣಿಯಲ್ಲಿ ವಿವರಿಸಿರಲಿಲ್ಲ ಎಂಬುದು ಆಯುಕ್ತರ ಪತ್ರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts