ಬೆಂಗಳೂರು; ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ಪಠ್ಯಗಳೂ ಸೇರಿದಂತೆ ಇನ್ನಿತರೆ ವಿಷಯಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ವಿವಾದಕ್ಕೀಡಾಗಿರುವ ಬೆನ್ನಲ್ಲೇ ‘ತಪ್ಪುಗಳನ್ನು ಸರಿಪಡಿಸಿ ಮರುಮುದ್ರಣ ಮಾಡಲು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ. ಒಂದೊಮ್ಮೆ ಇಡೀ ಪಠ್ಯಪುಸ್ತಕಗಳನ್ನು ಮರು ಮುದ್ರಣ ಮಾಡಿದ್ದೇ ಆದಲ್ಲಿ 158.21 ಕೋಟಿ ರು. ಬೊಕ್ಕಸಕ್ಕೆ ಹೊರೆ ಬೀಳಲಿದೆ. ಇದರ ನೇರ ಹೊಣೆಗಾರಿಕೆಯನ್ನು ಸರ್ಕಾರ ಮತ್ತು ರೋಹಿತ್ ಚಕ್ರತೀರ್ಥ ಸಮಿತಿಯೇ ಹೊರಬೇಕಿದೆ!
ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್ ಮತ್ತು ರಾಜ್ಯಾದಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಅನುದಾನ ಇಲ್ಲವೆಂದು ಕೈಚೆಲ್ಲಿ ಅಸಹಾಯಕವಾಗಿರುವ ರಾಜ್ಯ ಸರ್ಕಾರ, ರೋಹಿತ್ ಚಕ್ರತೀರ್ಥ ಸಮಿತಿಯು ಮಾಡಿರುವ ಎಡವಟ್ಟಿನಿಂದಾಗಿ ಒಂದೊಮ್ಮೆ ಇಡೀ ಪಠ್ಯಪುಸ್ತಕಗಳನ್ನು ಮರುಮುದ್ರಣ ಮಾಡಿದ್ದೇ ಆದಲ್ಲಿ ಶಿಕ್ಷಣ ಇಲಾಖೆಯು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಬೀಳಲಿದೆ.
ಪಠ್ಯ ಪರಿಷ್ಕರಣೆ ಮತ್ತು ಮರು ಪರಿಷ್ಕರಣೆಯು ಕ್ರಮಬದ್ಧವಾಗಿದ್ದು ಮತ್ತು ವಿವಾದಕ್ಕೆ ಕಾರಣವಾಗದೇ ಇದ್ದಿದ್ದರೆ ಮರು ಮುದ್ರಣದ ಅಗತ್ಯತೆಯೇ ಕಂಡು ಬರುತ್ತಿರಲಿಲ್ಲ. ಅಲ್ಲದೆ 158.21 ಕೋಟಿ ಹೊರೆ ಅಥವಾ ನಷ್ಟದ ಮಾತೂ ಕೇಳಿ ಬರುತ್ತಿರಲಿಲ್ಲ. ಆದರೀಗ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ಪರಿಷ್ಕರಿಸಿರುವ ವಿವಾದಿತ ಪಠ್ಯಗಳನ್ನೇ 2022-23ನೇ ಶೈಕ್ಷಣಿಕ ಸಾಲಿಗೆ ಮುದ್ರಣ ಮಾಡಲಾಗಿದೆ. ಈಗಾಗಲೇ ಮರು ಪರಿಷ್ಕರಿಸಿರುವ ಪಠ್ಯಪುಸ್ತಕಗಳು ರಾಜ್ಯದ ಶೇ.50ರಷ್ಟು ಶಾಲೆಗಳಿಗೆ ಮಾತ್ರ ತಲುಪಿವೆ ಎಂದು ಗೊತ್ತಾಗಿದೆ.
ಸಮಿತಿ ಪರಿಷ್ಕರಿಸಿರುವ ಅಂಶಗಳನ್ನು ಒಪ್ಪಿಕೊಂಡಿರುವ ಸಚಿವ ಬಿ ಸಿ ನಾಗೇಶ್ ಕೂಡ ಆಕ್ಷೇಪಣೆಗಳನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಂತಿಮವಾಗಿ ಆಕ್ಷೇಪಣೆಗಳನ್ನು ಒಪ್ಪಿ ಪುನಃ ಪರಿಷ್ಕರಿಸಿ ಮುದ್ರಿಸಿದರೆ ಇದು ಅನಗತ್ಯ ವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಈ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಬಾರದು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಇನ್ನೂ ನಿಂತಿಲ್ಲ. ಈ ನಡುವೆ ತಪ್ಪುಗಳನ್ನು ಸರಿಪಡಿಸಿ ಇಡೀ ಪಠ್ಯಪುಸ್ತಕಗಳನ್ನೇ ಮರುಮುದ್ರಣ ಮಾಡಲು ಹೊರಟರೆ ಪುನಃ 158.21 ಕೋಟಿ ರು.ಗಳನ್ನು ವೆಚ್ಚ ಮಾಡಬೇಕಾದ ಅನಿವಾರ್ಯತೆಯೂ ಇದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 59.30 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲು 158.21 ಕೋಟಿ ರು. 2021ರ ಡಿಸೆಂಬರ್ 21ರಂದೇ ಬಿಡುಗಡೆಯಾಗಿತ್ತು. ಇದರಲ್ಲಿ 1ರಿಂದ 3ನೇ ತರಗತಿ ನಲಿ ಕಲಿ ಘಟಕಗಳಿಗೆ ಹವಾಮಾನ ನಕ್ಷೆ ಮತ್ತು ಪ್ರಗತಿ ನೋಟ, ವಿತರಿಸುವುದು ಮತ್ತು ಪಠ್ಯಪುಸ್ತಕ ರಚನಾ ಕಾರ್ಯಾಗಾರ, ಸಾಗಾಣಿಕೆ ವೆಚ್ಚಮತ್ತು ವೇತನೇತರ ವೆಚ್ಚವೂ ಒಳಗೊಂಡಿದೆ.
ಕುವೆಂಪು, ಬಸವೇಶ್ವರ, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕೈಬಿಟ್ಟಿರುವುದು ಮತ್ತು ತಪ್ಪು ಮಾಹಿತಿಗಳನ್ನು ಸೇರಿಸಿರುವ ಅಂಶಗಳನ್ನು ತೆಗೆದು ಹಿಂದಿನ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳಲ್ಲಿದ್ದ ಅಂಶಗಳನ್ನೊಳಗೊಂಡ ಕೇವಲ ಪುಟಗಳನ್ನಷ್ಟೇ ಮರು ಮುದ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಪುಟಗಳು ಕೇವಲ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತದೆಯೇ ವಿನಃ ಮಕ್ಕಳಿಗೆ ನೀಡುವುದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು. ಪಾಠಾಂಶವನ್ನು ಕೈಬಿಟ್ಟಿದೆ.
ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು. ಪಠ್ಯ ಪರಿಷ್ಕರಣೆಯಿಂದಾಗಿ 2.5 ಕೋಟಿ ರು. ನಷ್ಟವಾಗಿತ್ತು. ಅಲ್ಲದೆ 6.76 ಲಕ್ಷ ಪುಸ್ತಕಗಳು ಅನುಪಯುಕ್ತವಾಗಿದ್ದವಲ್ಲದೆ ಹರಾಜಿಗೂ ನಕಾರ ವ್ಯಕ್ತವಾಗಿತ್ತು.