ಕೈಕಾಲು ಸ್ವಾಧೀನ ಕಳೆದುಕೊಂಡ ಯುವಕನ ಪ್ರಕರಣ; ಕೋವ್ಯಾಕ್ಸಿನ್‌ ಲಸಿಕೆಯ ವ್ಯತಿರಿಕ್ತ ಪರಿಣಾಮವೇ?

ಬೆಂಗಳೂರು; ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮಧುಚಂದ್ರ ಎಂಬ ಯುವಕ ಕೈಕಾಲು ಸ್ವಾಧೀನ ಕಳೆದುಕೊಂಡಿರುವುದಕ್ಕೆ ಕೋವ್ಯಾಕ್ಸಿನ್‌ ಲಸಿಕೆ ಪಡೆದಿರುವುದು ಕಾರಣವೇ ಅಥವಾ ಇಲ್ಲವೇ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿರ್ಧರಿಸಿದೆ.

 

ರಾಜ್ಯದ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಹೊತ್ತಿನಲ್ಲಿಯೇ ಲಸಿಕೆಯ ಅಡ್ಡ ಮತ್ತು ವ್ಯತಿರಿಕ್ತ ಪರಿಣಾಮಗಳ ಕುರಿತು ನಿರ್ಣಯ ಕೈಗೊಳ್ಳುವ ಸಂಬಂಧ ರಾಷ್ಟ್ರಮಟ್ಟಕ್ಕೆ ರಾಜ್ಯದ ಪ್ರಕರಣವನ್ನು ಕೊಂಡೊಯ್ದಿರುವುದು ಮುನ್ನೆಲೆಗೆ ಬಂದಿದೆ.

 

ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರ ಕೈ ಕಾಲು ಸ್ವಾಧೀನ ಕಳೆದುಕೊಂಡಿರುವ ಪ್ರಕರಣದ ಕುರಿತು ಈಗಾಗಲೇ ಚರ್ಚಿಸಿರುವ ಜಿಲ್ಲಾ ಮತ್ತು ರಾಜ್ಯಮಟ್ಟದ ಎಇಎಫ್‌ಐ ಸಮಿತಿ ಸಭೆಯು ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ನಿಲುವು ತಳೆದಿದೆ. ಈ ಕುರಿತು ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮಧುಚಂದ್ರ ಬಿನ್ ಚಂದ್ರಾನಾಯ್ಕ ಎಂಬುವರು ಆನವಟ್ಟಿ ಪದವಿಪೂರ್ವ ಕಾಲೇಜಿನಲ್ಲಿ 2022ರ ಜನವರಿ 4ರಂದು ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದರು. ಆ ನಂತರ ಇವರಿಗೆ ಜ್ವರ ಕಾಣಿಸಿಕೊಂಡಿತ್ತು. ಅಲ್ಲದೆ ಕೈಕಾಲು ಸ್ವಾಧೀನ ಕಳೆದುಕೊಂಡಿದ್ದರು. ಇದಕ್ಕೆ ಕೋವ್ಯಾಕ್ಸಿನ್‌ ಲಸಿಕೆಯೇ ಕಾರಣ ಎಂದೂ ಹೇಳಲಾಗಿತ್ತು. ಈ ಪ್ರಕರಣದ ಕುರಿತು ಎಇಎಫ್‌ಐ ಸಮಿತಿ ಕೈಗೊಂಡಿರುವ ನಿರ್ಧಾರವನ್ನು ಸಚಿವ ಸುಧಾಕರ್‌ ಕೂಡ ಪರಿಶೀಲಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಈ ಸಂಬಂಧ ಚಂದ್ರಾನಾಯ್ಕ ಎಂಬುವರು 2022ರ ಫೆ.14ರಂದು ದೂರು ನೀಡಿದ್ದರು. ಇದನ್ನು ತನಿಖೆ ನಡೆಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ವರದಿಯನ್ನೂ ಸಲ್ಲಿಸಿದ್ದಾರೆ ಎಂದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಆರಂಭದಲ್ಲಿ ಸಿಮ್ಸ್‌ (ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದನ್ನು ಸಿವಿಎ – ರೈಟ್‌ ಸೈಡೆಡ್‌ ಹೆಮಿಪ್ಯಾರಾಸಿಸ್‌ ರೋಗ ಎಂದು ನಿರ್ಣಯಿಸಲಾಗಿತ್ತು. ನಂತರ ಪರಿಸ್ಥಿತಿ ಉಲ್ಬಣಗೊಂಡ ಕಾರಣ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು ಎಂಬುದು ಗೊತ್ತಾಗಿದೆ.

 

ತದನಂತರ ಬಿಡುಗಡೆಗೊಂಡು ಮನೆಯಲ್ಲೇ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಹಂತಗಳಲ್ಲೂ ಸರ್ಕಾರದ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣದ ಕುರಿತು ಜಿಲ್ಲಾ ಎಇಎಫ್‌ಐ ಸಭೆಯಲ್ಲಿ Acute Ischmemic Stroke ಎಂದು ನಿರ್ಣಯಿಸಿದ ಹಿನ್ನೆಲೆಯಲ್ಲಿ ಚರ್ಚಿಸಿ ನಂತರ ರಾಜ್ಯಮಟ್ಟದ ಎಇಎಫ್‌ಐ ಸಮಿತಿ ಸಭೆ ನಡೆಸಿತ್ತು.

 

ಸಮಿತಿಯು ಈ ಪ್ರಕರಣವನ್ನು Acute Ischmemic Stroke Secondary to 1) Prothrombotic state inheritable , 2) Vasculitis with Anemia ಎಂಬ ರೋಗ ನಿರ್ಣಯವನ್ನಾಧರಿಸಿ B1, C (B-1Temporal relationship is consistent but there is insufficient definitive evidence for vaccine causing event (may be new Vaccine lilnked event) 3) coincidental-underlying or emerging condition or conditions caused by exposure to something other than vaccine ಎಂದು ಎಇಎಫ್‌ಐ ವರ್ಗಿಕರಿಸಿತ್ತು.

 

‘ಈ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು. ಆದ್ದರಿಂದ ಲಭ್ಯವಿರುವ ಮಾಹಿತಿಯ ಅನ್ವಯ ಪ್ರಕರಣದ ಪ್ರಾಥಮಿಕ ವರದಿ ಸಲ್ಲಿಸಿದೆ. ರಾಷ್ಟ್ರಮಟ್ಟದಿಂದ ಅಂತಿಮ ನಿರ್ಣಯ ಬಂದ ನಂತರ ಅಂತಿಮ ವರದಿ ಸಲ್ಲಿಸಲಾಗುವುದು,’ ಎಂದು ತಿಳಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಆರೋಗ್ಯ ಇಲಾಖೆಯ ಟಿಪ್ಪಣಿ ಪ್ರತಿ

 

ಮೈಸೂರಿನ ಅಶೋಕಪುರಂನ ನಿವಾಸಿ ಸುರೇಶ್ (39) ಎಂಬಾತ ಕೂಡ ಲಸಿಕೆ ಪಡೆದುಕೊಂಡ ನಂತರ ಮೃತಪಟ್ಟಿದ್ದ. ಆದರೆ ವೈದ್ಯರು ಇದನ್ನು ನಿರಾಕರಿಸಿದ್ದರು. ಮೃತ ವ್ಯಕ್ತಿಗೆ ಯಾವುದೇ ಕಾಯಿಲೆ ಇರಲಿಲ್ಲ, ಆರೋಗ್ಯವಾಗಿದ್ದರು. ವೈದ್ಯರು ಕಟ್ಟುಕತೆ ಹೇಳುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.

 

ಅದೇ ರೀತಿ ಹಾಸನದ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಸಮೀಪದ ಬೋರನಕೊಪ್ಪಲು ತಾಂಡ್ಯದ ವಸಂತ್ ನಾಯಕ್(35) ಕೋವಿಡ್-19 ಚುಚ್ಚುಮದ್ದು ಹಾಕಿಸಿಕೊಂಡಿದ್ದ ನಂತರ ಸಾವನ್ನಪ್ಪಿದ್ದರು. ಇದಕ್ಕೆ ಲಸಿಕೆಯೇ ಕಾರಣ ಎಂದು ಪೋಷಕರು ಆರೋಪಿಸಿದ್ದರು.

 

ಕೋವಿಡ್-19 ಲಸಿಕೆ ಪಡೆದುಕೊಂಡ ನಂತರ ತಕ್ಷಣ ದೇಹದಲ್ಲಿ ವ್ಯತಿರಿಕ್ತ ಪರಿಣಾಮವುಂಟಾದುದರ ಬಗ್ಗೆ ಮರುಪರೀಕ್ಷೆ ನಡೆಸಲು ರಾಷ್ಟ್ರೀಯ ತಂಡವೊಂದು ಮುಂದಾಗಿತ್ತು. ಭಾರತದಲ್ಲಿ ಕೋವಿಡ್-19 ಲಸಿಕೆ ಪಡೆದುಕೊಂಡ ನಂತರ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅದು ಲಸಿಕೆ ಪಡೆದುಕೊಂಡ 1ರಿಂದ 5 ದಿನಗಳೊಳಗೆ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ತಾನ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ಒಡಿಶಾಗಳಲ್ಲಿ ವರದಿಯಾಗಿದ್ದವು. ಮೃತಪಟ್ಟ 10 ಕೇಸುಗಳಲ್ಲಿ ಕೂಡ ಲಸಿಕೆಯಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಜಿಲ್ಲಾ ಎಇಎಫ್ಐ ಸಮಿತಿಗಳು ತಳ್ಳಿಹಾಕಿದ್ದನ್ನು ಸ್ಮರಿಸಬಹುದು.

 

ಲಸಿಕೆ ಪಡೆದು ಮೃತಪಟ್ಟ 10 ಮಂದಿ ಆರೋಗ್ಯ ವಲಯ ಕಾರ್ಯಕರ್ತರು 25ರಿಂದ 56 ವರ್ಷದೊಳಗಿನವರಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ರಾಷ್ಟ್ರೀಯ ಎಇಎಫ್ಐ ಸಮಿತಿಯ ಸಲಹೆಗಾರ ಎನ್ ಕೆ ಅರೊರ ತಿಳಿಸಿದ್ದರು. ತಕ್ಷಣಕ್ಕೆ ಇದು ಕೋವಿಡ್-19 ಲಸಿಕೆಯಿಂದ ಎಂದು ಕಂಡುಬಂದಿಲ್ಲ. ರಾಷ್ಟ್ರೀಯ ತಜ್ಞರ ತಂಡವೊಂದು ಸಾವಿಗೆ ನಿಖರ ಕಾರಣವನ್ನು ಮತ್ತೊಮ್ಮೆ ಪರಿಶೀಲಿಸಲಿದೆ. ವೈಜ್ಞಾನಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಅಲ್ಗಾರಿತಮ್ ನಿರ್ಧರಿಸಲಿದೆ ಎಂದೂ ಹೇಳಿಕೆ ನೀಡಿದ್ದರು.

the fil favicon

SUPPORT THE FILE

Latest News

Related Posts