ಶಾಲೆ ಆರಂಭವಾದ ಬೆನ್ನಲ್ಲೇ ಕೋವಿಡ್‌ ಸೋಂಕು ಹೆಚ್ಚಳ ಭೀತಿ; ಆನ್‌ಲೈನ್‌ ಬೋಧನೆಗೆ ಸಜ್ಜಾಗಲು ಕೋರ್‌ಕಮಿಟಿ

photo credit;republicworld

ಬೆಂಗಳೂರು; ಕೋವಿಡ್‌ ಸಾಂಕ್ರಾಮಿಕ ಹರಡುವಿಕೆ ನಡುವೆಯೂ ಶಾಲಾ ಕಾಲೇಜುಗಳು ಆರಂಭವಾಗಿವೆಯಾದರೂ ಸೋಂಕು ಹೆಚ್ಚಳದ ಭೀತಿ ಸರ್ಕಾರವನ್ನು ಕಾಡಲಾರಂಭಿಸಿದೆ. ಸೋಂಕು ಹೆಚ್ಚಳವಾದಲ್ಲಿ ರಾಜ್ಯದ ಇತರೆಡೆಯೂ ಶಾಲೆಗಳ ತರಗತಿಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಉಂಟಾಗಬಹುದು ಎಂದು ಚಿಂತಿಸಿರುವ ಶಿಕ್ಷಣ ಇಲಾಖೆಯು ಆನ್‌ಲೈನ್‌ ಬೋಧನೆಯತ್ತ ಈಗಿನಿಂದಲೇ ಸಜ್ಜಾಗುತ್ತಿದೆ.

 

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಯುಕ್ತರ ಅಧ್ಯಕ್ಷತೆಯಲ್ಲಿ ಕೋರ್‌ ಕಮಿಟಿಯನ್ನು ರಚಿಸಿ ಆದೇಶ ಹೊರಡಿಸಿದೆ. (2022ರ ಮೇ 17) ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯದಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾದಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನೇರ ಬೋಧನೆ ಚಟುವಟಿಕೆಗಳು ನಡೆಯದೇ ಇದ್ದ ಸನ್ನಿವೇಶದಲ್ಲಿ ಆನ್‌ಲೈನ್‌ ಬೋಧನೆ, ದೂರದರ್ಶನ ಮತ್ತು ಆಕಾಶವಾಣಿ ಪಾಠಗಳ ಪ್ರಸಾರ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಅಳೆಯಲು ನಿರಂತರ ಮೌಲ್ಯಮಾಪನ ವ್ಯವಸ್ಥೆಗಳನ್ನು ಅಗತ್ಯತೆಗೆ ತಕ್ಕಂತೆ ನಿರ್ಧರಿಸಿ ಅನುಷ್ಠಾನಗೊಳಿಸಬೇಕು,’ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕರು 2022ರ ಫೆ.18ರಂದೇ ಪತ್ರ ಬರೆದಿದ್ದರು.

 

ಈ ಪತ್ರವನ್ನಾಧರಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರಧಾನ ಸಮಿತಿ (ಕೋರ್ ಕಮಿಟಿ)ಯನ್ನು ರಚಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಜಿಲ್ಲಾದ್ಯಂತ ಇರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳು ಈ ಕಮಿಟಿಯ ಸದಸ್ಯರಾಗಿದ್ದಾರೆ.

 

‘ಕೋವಿಡ್‌ ಹೊರತಾಗಿಯೂ ಇತರೆ ಎಂಡೆಮಿಕ್‌ (ಕ್ಯಾಸನೂರು ಕಾಯಿಲೆ) ಪ್ಯಾಂಡಮಿಕ್‌ ಮತ್ತು ನೈಸರ್ಗಿಕ ವಿಕೋಪಗಳಲ್ಲಿಯೂ ತುರ್ತು ಸಭೆ ಕರೆದು ಅಗತ್ಯ ತೀರ್ಮಾನ ಕೈಗೊಳ್ಳಲು ಕೋರ್‌ ಕಮಿಟಿ ರಚಿಸಲಾಗಿದೆ,’ ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಸಮಿತಿಯ ಕರ್ತವ್ಯಗಳೇನು?

 

ಪ್ಯಾಂಡಮಿಕ್‌ ಅವಧಿಯಲ್ಲಿ ಅಗತ್ಯವಿದ್ದಾಗ ಅಥವಾ ಪ್ರತಿ ತಿಂಗಳಿಗೆ ಎರಡು ಬಾರಿ ಸಭೆ ಸೇರಬೇಕು. ಪ್ಯಾಂಡಮಿಕ್‌ ಸನ್ನಿವೇಶ, ಉಲ್ಬಣ ಪ್ರದೇಶಗಳ ವಿವರದ ದತ್ತಾಂಶಗಳನ್ನು ಸಂಗ್ರಹಿಸುವುದು, ಶಾಲೆ, ತರಗತಿ ಪ್ರಕ್ರಿಯೆಗಳು, ಶಾಲಾ ಕೇಂದ್ರೀತ ರಜೆ ನೀಡುವ ಕುರಿತು ಮಾನದಂಡಗಳನ್ನು ರೂಪಿಸಬೇಕು. ಸರ್ಕಾರದ ಅನುಮತಿ ಅಗತ್ಯವಿದ್ದಲ್ಲಿ ಶಿಫಾರಸ್ಸು ಮಾಡುವುದು ಅಥವಾ ಅಂತಹ ಮಾನದಂಡಗಳನ್ನು ಜಾರಿಗೊಳಿಸುವ ಆದೇಶವನ್ನು ಅಧ್ಯಕ್ಷರ ಮೂಲಕ ನೀಡಬೇಕು.

 

ಪೋಷಕರು ಮತ್ತು ಮಕ್ಕಳು ಪ್ಯಾಂಡಮಿಕ್‌ ಅವಧಿಗಳಲ್ಲಿ ಅನಿಶ್ಚತೆಯಿಂದಿರದಂತೆ ಸರ್ಕಾರದ ತೀರ್ಮಾನಗಳನ್ನು ಪ್ರತಿ ತಿಂಗಳೂ ಐದನೆಯ ತಾರೀಖಿನಂದು ಪತ್ರಿಕಾ ಪ್ರಕಟಣೆಯನ್ನು ಸಚಿವರ ಮೂಲಕ ನೀಡಬೇಕು. ಈ ಬಗ್ಗೆ ವಿವರವಾದ ಸುತ್ತೋಲೆಯನ್ನುಇಲಾಖೆಯೊಳಗೆ ಆಂತರಿಕವಾಗಿ ಹೊರಡಿಸಬೇಕು.

 

ಪ್ರತಿ ಎರಡು ತಿಂಗಳಿಗೆ ಅಗತ್ಯವಾದ ನೇರ ಅಥವಾ ಪರ್ಯಾಯ ಪಾಠ ನಿರ್ವಹಣೆಯ ವಿವರವನ್ನು ನಿರ್ಧರಿಸಬೇಕಕು. ಕಲಿಕಾ ದಿನಗಳು, ಶೈಕ್ಷಣಿಕ ವರ್ಷ, ರಜೆ ಅವಧಿಯ ಅಂಶಗಳನ್ನು ತೀರ್ಮಾನಿಸಬೆಕು. ಆನ್‌ಲೈನ್‌ ತರಗತಿಗಳಿಗೆ ಲಭ್ಯ ಸಾಧನಗಳ ದತ್ತಾಂಶಗಳನ್ನು ಸಂಗ್ರಹಿಸಭೆಕು. ದೂರದರ್ಶನ, ರೇಡಿಯೋ ಪಾಠ, ಗ್ರಾಮೀಣ ಪ್ರದೇಶ ಕಡಿಮೆ ಮಕ್ಕಳಿರುವ ಪ್ರದೇಶದಲ್ಲಿ ನೇರ ಕಲಿಸುವಿಕೆ, ಪರ್ಯಾಯ ಕಲಿಸುವ ಮಾರ್ಗಗಳ ಆಲೋಚನೆ, ಶಾಲೆಗಳನ್ನು ವಿನಿಮಯ ಕೇಂದ್ರಗಳನ್ನಾಗಿಸಬೇಕು. ವಿದ್ಯಾಗಮ, ಜಗುಲಿ ಕಲಿಸುವಿಕೆ, ಪೋಷಕರ ಮೂಲಕ ಮಾಹಿತಿ ಹಂಚಿಕೆಯಂತಹ ವಿವಿಧ ಉಪಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕಾಗಿ ಅಗತ್ಯ ನಿರ್ದೇಶನ ನೀಡಬೇಕು.

 

ಮುಖ್ಯವಾಗಿ ಹತ್ತು ಮತ್ತುಹನ್ನೆರಡನೆಯ ತರಗತಿ ಮಕ್ಕಳ ಪರೀಕ್ಷೆಗಳ ತೀರ್ಮಾನ, ಮಕ್ಕಳ ಪ್ರಗತಿ ದತ್ತಾಂಶಗಳ ಸಂಗ್ರಹ, ಬದಲಾದ ಸನ್ನಿವೇಶದಲ್ಲಿ ಕಲಿಕಾಂಶಗಳ ಕಡಿತಕ್ಕನುಗುಣವಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು. ಅದೇ ರೀತಿ ಈ ತರಗತಿ ಮಕ್ಕಳ ಪರೀಕ್ಷೆಗಳನ್ನು ಅಗತ್ಯ ಹಂತಗಳಲ್ಲಿ ನಡೆಸಬೇಕು. (ವರ್ಷಕ್ಕೆ ಒಮ್ಮೆ ಎಂಬುದುರ ಬದಲು ಎರಡು ಅಥವಾ ಮೂರು ಬಾರಿ ನಡೆಸುವುದು)
ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಮುಂದುವರೆದ ಭಾಗವಾಗಿ ಶಾಲಾಧಾರಿತ ಮೌಲ್ಯಾಂಕನ ಕಾರ್ಯವನ್ನು ಶಿಕ್ಷಕರಿಗೆ ಪರಿಚಯಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕು.

 

ಸ್ಥಳೀಯ ಎಸ್‌ಡಿಎಂಸಿ, ಸ್ಥಳೀಯ ಸಂಸ್ಥೆ ಮತ್ತು ಶಿಕ್ಷಕರು ಕೈಗೊಳ್ಳಬಹುದಾದ ತೀರ್ಮಾನಗಳನ್ನು ಶಾಲಾ ಪೋಷಕ-ಶಿಕ್ಷಕ ಸಂಘಗಳು ಕೈಗೊಳ್ಳಬೇಕು. ಪೋಷಕರಿಗೆ, ಮಕ್ಕಳಿಗೆ ನಿರ್ಧಾರಗಳನ್ನು ತಲುಪಿಸಲು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ತಲುಪಿಸುವ ಯೋಜನೆಗಳನ್ನು ಚಿಂತಿಸಬೇಕು ಎಂದು ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts