ಬೆಂಗಳೂರು; ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಲು ಅತ್ಯಾಸಕ್ತಿ ವಹಿಸಿದ್ದ ರಾಜ್ಯ ಸರ್ಕಾರವು 2022-23ನೇ ಶೈಕ್ಷಣಿಕ ವರ್ಷವು ಆರಂಭವಾಗಲು ಇನ್ನು ಐದು ದಿನಗಳು ಬಾಕಿ ಇದ್ದರೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಮೂರು ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆ ಮಾಡಿಲ್ಲ. ಸಮವಸ್ತ್ರ ಖರೀದಿ ಮತ್ತು ಪೂರೈಕೆ ಸಂಬಂಧ ಸರ್ಕಾರವು ಇನ್ನೂ ಟೆಂಡರ್ ಪ್ರಕ್ರಿಯೆಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೆ ಇಂಧನ, ಕಚ್ಛಾ ಸಾಮಗ್ರಿ, ಪೂರಕ ವಸ್ತು ಮತ್ತು ಸೇವೆಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಮಧ್ಯೆ ನಡೆದಿರುವ ಪತ್ರ ವ್ಯವಹಾರಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
2021-22ನೇ ಸಾಲಿನ ಮೊದಲನೇ ಜೊತೆ ಸಮವಸ್ತ್ರ ಖರೀದಿ ಮತ್ತು ಪೂರೈಕೆಗೆ ಕರೆದಿದ್ದ ಇ- ಟೆಂಡರ್ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ್ದ ದರವು ಎರಡನೇ ಜೊತೆಗೆ ನಮೂದಿಸಿದ್ದ ಅಂದಾಜು ದರದಲ್ಲಿ ಶೇ.30ರಷ್ಟು ಹೆಚ್ಚಾಗಿದೆ. 2021-22ನೇ ಸಾಲಿನ ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ 2ನೇ ಜೊತೆ ಸಮವಸ್ತ್ರ ಸರಬರಾಜು ಸಂಬಂಧಿಸಿದಂತೆ ಮೂಲ ದರಗಳನ್ನು ಪುನರ್ ನಿಗದಿ ಮಾಡಿ ಅಲ್ಪಾವಧಿಗೆ ಮರು ಟೆಂಡರ್ ಆಹ್ವಾನಿಸಿತ್ತು.
ಬಿಡ್‌ದಾರರೊಂದಿಗೆ ನಡೆದ ದರ ಸಂಧಾನ ನಂತರ ಅಂತಿಮವಾಗಿ 99.15 ಕೋಟಿ ರು.ಗೆ ಅಂತಿಮಗೊಳಿಸಿದ್ದ ಸರ್ಕಾರವು ಈ ಅನುದಾನವನ್ನು ಮಂಜೂರು ಮಾಡಿತ್ತು. ಆದರೆ ಹಿಂದಿನ ಟೆಂಡರ್‌ಗೆ ಹೋಲಿಸಿದರೆ 7.3 ಕೋಟಿ ರು. ಅಧಿಕವಾಗಿತ್ತು ಎಂಬ ಅಂಶವು ಲಭ್ಯವಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಹಿಂದಿನ ಟೆಂಡರ್ ಮೊತ್ತ ಮತ್ತು ಹೊಸದಾಗಿ ಕರೆದಿರುವ ಟೆಂಡರ್ ಮೊತ್ತ ಅಧಿಕವಾಗಲು ಇಂಧನ ಬೆಲೆ ಸೇರಿದಂತೆ ಇನ್ನಿತರೆ ಕಾರಣಗಳನ್ನು ಇಲಾಖೆಯು ಒದಗಿಸಿದೆ. ‘ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಧನಗಳು, ಕಚ್ಚಾ ಸಾಮಗ್ರಿಗಳು, ವೇತನ ಮತ್ತು ಇನ್ನಿತರೆ ಪೂರಕ ವಸ್ತುಗಳ ಹಾಗೂ ಸೇವೆಗಳ ಬೆಲೆ ಹೆಚ್ಚಾಗಿರುತ್ತದೆಯಲ್ಲದೆ ಕೊರತೆಯೂ ಇದೆ. ಸರ್ಕಾರದ ಶಾಲೆಗಳಲ್ಲಿ ಸುಮಾರು ಮೂರು ಲಕ್ಷ ಮಕ್ಕಳ ದಾಖಲಾತಿ ಹೆಚ್ಚಾಗಿರುತ್ತದೆ. ಆದ್ದರಿಂದ ಸಮವಸ್ತ್ರದ ಬಟ್ಟೆಯ ಪರಿಮಾಣವು ಸುಮಾರು 124 ಲಕ್ಷ ಮೀಟರ್‌ನಿಂದ 136 ಲಕ್ಷ ಮೀಟರ್ ಅಧಿಕವಾಗಿದೆ. 2021-22ನೇ ಸಾಲಿನ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ ದರವು ಅಂದಾಜು ದರಗಳಿಗಿಂತ ಶೇ. 17.41 ಕಡಿಮೆ ಇರುತ್ತದೆ. ಅಂದಾಜು ದರವು 47.00 ಕೋಟಿ ರು. ಆಗಿರುತ್ತದೆ,’ ಎಂದು ಅಧಿಕಾರಿಗಳು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2021-22ನೇ ಸಾಲಿನ ಮೊದಲನೆ ಜೊತೆ ಸಮವಸ್ತ್ರದ ಟೆಂಡರ್ ದರಗಳು ಅಂದಿನ ಸನ್ನಿವೇಶಗಳಿಗೆ (ಕೊರೋನ ಸಮಯ) ಸೀಮಿತವಾಗಿ ಕಡಿಮೆ ಆಗಿದೆ. ಆದರೀಗ ಎರಡನೇ ಬಾರಿಗೆ ಕರೆಯಲಾಗಿದ್ದ ಅಲ್ಪಾವಧಿ ಟೆಂಡರ್‌ನಲ್ಲಿ ಹೊರಹೊಮ್ಮಿದ ಅಂತಿಮ ಟೆಂಡರ್ ದರಗಳು ಮತ್ತುಇನ್ನಿತರೆ ವೆಚ್ಚಗಳು ಸೇರಿ 99.15 ಕೋಟಿ ರು. ಆಗಿದೆ. ಈ ಮೊತ್ತವು ಮಂಜೂರಾಗಿರುವ ಅನುದಾನಕ್ಕಿಂತ 7.30 ಕೋಟಿ ರು. ಹೆಚ್ಚುವರಿಯಾಗಿದೆ.
‘2022-23ನೇ ಶೈಕ್ಷಣಿಕ ವರ್ಷವು 2022ರ ಮೇ 16ರಿಂದ ಪ್ರಾರಂಭವಾಗಲಿದ್ದು ಮಕ್ಕಳಿಗೆ ಸಮವಸ್ತ್ರ ಒದಗಿಸಲು ಕೂಡಲೇ ಕ್ರಮವಹಿಸಬೇಕಾಗಿದೆ. 2021-22ನೇ ಸಾಲಿನ ಎರಡನೆ ಜೊತೆ ಉಚಿತ ಸಮವಸ್ತ್ರ ಸರಬರಾಜಿಗೆ 99.15 ಕೋಟಿ ರು. ಭರಿಸಲು ಅರ್ಥಿಕ ಇಲಾಖೆ ಅನುಮೋದನೆ ಪಡೆಯಬಹುದಾಗಿದೆ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋರಿದೆ.
2021ರ ಡಿಸೆಂಬರ್ 31ರಂದು ಕರೆದಿದ್ದ ಟೆಂಡರ್‌ನಲ್ಲಿ ಅರವಿಂದ್ ಕೋಟ್ಸ್ ಇಂಡಿಯಾ ಲಿಮಿಟೆಡ್, ಪದಂಚಂದ್ ಮಿಲಾಪ್‌ಚಂದ್‌ಜೈನ್ ಭಾಗವಹಿಸಿದ್ದರು. ಇದರಲ್ಲಿ ಅರವಿಂದ್ ಕೋಟ್ಸ್ 2ನೇ ಮತ್ತು ಪದಂಚಂದ್ 3ನೇ ಬಿಡ್‌ದಾರರಾಗಿ ಹೊರಹೊಮ್ಮಿದ್ದರು. ಪ್ಯಾಕೇಜ್ 1 ಮತ್ತು 2ರ ಐಟಂ ಸಂಖ್ಯೆ 1,2 ಮತ್ತು 3ರ ಕನಿಷ್ಠ ದರಗಳಿಗೆ ಇಳಿಸಲು ಈ ಬಿಡ್‌ದಾರರು ಸಹಮತಿ ಸೂಚಿಸಿರಲಿಲ್ಲ.
ಹೀಗಾಗಿ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದ್ದ 91.85 ಕೋಟಿ ರು.ಗೆ 7 ಲಕ್ಷ ಅಧಿಕ ಸೇರ್ಪಡೆಗೊಂಡು ಒಟ್ಟು 91.92 ಕೋಟಿ ರು. ಆಗಿತ್ತು. ಕೆಟಿಪಿಪಿ ಕಾಯ್ದೆ 2000 ನಿಯಮ 12(5)ರ ಪ್ರಕಾರ ಶೇ. 25ರಷ್ಟು ಹೆಚ್ಚುಕಡಿಮೆ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪ್ಯಾಕೇಜ್‌ಗಳನ್ನು ಪದಂಚಂದ್ ಮಿಲಾಪ್‌ಚಂದ್ ಜೈನ್ ಅವರಿಗೆ ಒಟ್ಟು 71.55 ಕೋಟಿ ರು. ವೆಚ್ಚದಲ್ಲಿ ಸಮವಸ್ತ್ರ ಬಟ್ಟೆ ಒದಗಿಲು ಆದೇಶ ನೀಡಲು ಆಯುಕ್ತರು ಕೋರಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.