ಕಾರ್ಯಭಾರ ಒತ್ತಡವಿಲ್ಲದಿದ್ದರೂ ಇಂಜಿನಿಯರ್‌ ಹುದ್ದೆಗಳ ಸೃಷ್ಟಿ; ಜಲಮಂಡಳಿಯಲ್ಲಿ ಮುಂಬಡ್ತಿ ವ್ಯವಹಾರ!

ಬೆಂಗಳೂರು; ಕಾರ್ಯಭಾರದ ಒತ್ತಡವಿಲ್ಲದಿದ್ದರೂ ಬೆಂಗಳೂರು ಜಲಮಂಡಳಿಯಲ್ಲಿ 28ಕ್ಕೂ ಹೆಚ್ಚು ಇಂಜಿನಿಯರ್‌ ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರವು ಮುಂದಾಗಿದೆ. ಹೊಸದಾಗಿ ಹುದ್ದೆ ಸೃಜಿಸಲು ಆರ್ಥಿಕ ಇಲಾಖೆಯು ಇನ್ನೂ ಒಪ್ಪಿಗೆ ನೀಡದಿದ್ದರೂ ಬಿಡಬ್ಲ್ಯೂಎಸ್‌ಎಸ್‌ಬಿಯ ಆಡಳಿತ ಮಂಡಳಿಯು ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಇದರ ಹಿಂದೆ ಕೋಟ್ಯಂತರ ರುಪಾಯಿ ಕೈ ಬದಲಾಗಿದೆ ಎಂಬ ಗುರುತರ ಆರೋಪವೂ ಕೇಳಿ ಬಂದಿದೆ.

 

ಮುಂಬಡ್ತಿ ಪಡೆಯುವ ಉದ್ದೇಶದಿಂದಲೇ ಆತುರಾತುರವಾಗಿ ಹುದ್ದೆಗಳನ್ನು ಸೃಜಿಸಿ ಮಂಜೂರು ಮಾಡಿಸಿಕೊಳ್ಳಲು ನಿರ್ದಿಷ್ಟ ಇಂಜಿನಿಯರ್‌ಗಳ ಗುಂಪೊಂದು ಸರ್ಕಾರದಲ್ಲಿ ಬಿರುಸಿನಿಂದ ಲಾಬಿಗಿಳಿದಿದೆ ಎಂದು ತಿಳಿದು ಬಂದಿದೆ.

 

ಬಡ್ತಿಗಾಗಿ ಹುದ್ದೆ ಸೃಷ್ಟಿಸುವ ಮೂಲಕ ಆಡಳಿತ ಇಲಾಖೆಗಳಲ್ಲೇ ಬಿಳಿಯಾನೆಗಳನ್ನು ಸೃಷ್ಟಿಸಲು ಹೊರಟ ಅಧಿಕಾರಶಾಹಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗಷ್ಟೇ ಕುಟುಕಿದ್ದರು. ಆದರೀಗ ಬೆಂಗಳೂರು ಜಲಮಂಡಳಿಯಲ್ಲಿ ಯಾವುದೇ ಕಾರ್ಯಭಾರದ ಒತ್ತಡವಿಲ್ಲದೇ ಇದ್ದರೂ 28ಕ್ಕೂ ಹೆಚ್ಚು ಹುದ್ದೆಗಳನ್ನು ಸೃಜಿಸುವುದರಿಂದ ಮಂಡಳಿಯ ಬೊಕ್ಕಸಕ್ಕೆ ಅತೀವ ಹೊರೆ ಬೀಳಲಿದೆ ಎಂದು ಗೊತ್ತಾಗಿದೆ.

 

‘ಬಿಬಿಎಂಪಿಯಷ್ಟೇ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬೆಂಗಳೂರು ಜಲಮಂಡಳಿಯು ತನ್ನ ಜವಾಬ್ದಾರಿಯನ್ನು ನಾಗರಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಲಿ ಇರುವ ಕಾರ್ಯವ್ಯವಸ್ಥೆಯನ್ನು ಪ್ರಸ್ತುತ ಸ್ಥಿತಿಗೆ ತಕ್ಕಂತೆ ಹಾಗೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ತಾಂತ್ರಿಕ ವಿಭಾಗವನ್ನು ವಲಯವಾರು ಪುನರ್‌ ವಿನ್ಯಾಸಗೊಳಿಸಿರುವಂತೆ ಮಂಡಳಿಯು ತನ್ನ ಕಾರ್ಯವ್ಯಾಪ್ತಿಯನ್ನು ಪುನರ್‌ ವಿನ್ಯಾಸಗೊಳಿಸಲು ಹೊಸದಾಗಿ ಹುದ್ದೆಗಳನ್ನು ಮಂಡಳಿಯು 2022ರ ಮಾರ್ಚ್‌ 25ರಂದು ಅನುಮೋದಿಸಿದೆ.

 

ಜಲಮಂಡಳಿ ಅನುಮೋದಿಸಿರುವ ಪ್ರತಿ

 

ನಿರ್ವಹಣಾ ವಲಯದಲ್ಲಿ ಪೂರ್ವ, ಶ್ಚಿಮ, ಉತ್ತರ ಮತ್ತು ದಕ್ಷಿಣ ವಲಯದಲ್ಲಿ 4 ಮುಖ್ಯ ಅಭಿಯಂತರರು, 9 ಅಪರ ಮುಖ್ಯ ಅಭಿಯಂತರರು, 17 ಕಾರ್ಯನಿರ್ವಾಹಕ ಅಭಿಯಂತರರು, ತ್ಯಾಜ್ಯ ನೀರು ನಿರ್ವಹಣಾ ವಲಯದಲ್ಲಿ 2 ಮುಖ್ಯ ಅಭಿಯಂತರರು, 6 ಅಪರ ಮುಖ್ಯ ಅಭಿಯಂತರರು, 12 ಕಾರ್ಯನಿರ್ವಾಹಕ ಅಭಿಯಂತರರು, ಕಾವೇರಿ ವಲಯದಲ್ಲಿ 2 ಮುಖ್ಯ ಅಭಿಯಂತರರು, 4 ಅಪರ ಮುಖ್ಯ ಅಭಿಯಂತರರು, 8 ಕಾರ್ಯನಿರ್ವಾಹಕ ಅಭಿಯಂತರರು, ವಿನ್ಯಾಸ  ಮತ್ತು ಗುಣ ಆಶ್ವಾಸನೆ ವಲಯದಲ್ಲಿ 1 ಮುಖ್ಯ ಅಭಿಯಂತರರ ಹುದ್ದೆಯನ್ನು ಹೊಸದಾಗಿ ಸೃಜಿಸಲು ಮಂಡಳಿಯು ಪ್ರಸ್ತಾಪಿಸಿದೆ.

 

‘ಮಂಡಳಿಯಲ್ಲಿ 4 ಮುಖ್ಯ ಅಭಿಯಂತರರು, 12 ಅಪರ ಮುಖ್ಯ ಅಭಿಯಂತರರು, 12 ಕಾರ್ಯಪಾಲಕ ಅಭಿಯಂತರ ಹುದ್ದೆಗಳನ್ನು ಸೃಜಿಸಲಾಗುತ್ತಿದೆ. ಒಬ್ಬೊಬ್ಬ ಮುಖ್ಯ ಅಭಿಯಂತರ, ಅಪರ ಮುಖ್ಯ ಅಭಿಯಂತರ, ಕಾರ್ಯಪಾಲಕ ಅಭಿಯಂತರ ಹುದ್ದೆಗೂ ಸೇರಿ 12 ಪ್ರತ್ಯೇಕ ವಿಭಾಗ ಸೃಜನೆ, ಮೂಲ ಸೌಕರ್ಯ ಮತ್ತು ಸಿಬ್ಬಂದಿ ವೆಚ್ಚವೇ ಪ್ರತಿ ತಿಂಗಳು ಏನಿಲ್ಲವೆಂದರೂ ತಿಂಗಳಿಗೆ 48 ಕೋಟಿ ರು. ಆಡಳಿತಾತ್ಮಕ ವೆಚ್ಚ ಭರಿಸಬೇಕಿದೆ,’ ಎಂದು ವಿವರಿಸುತ್ತಾರೆ ಜಲಮಂಡಳಿಯ ಉನ್ನತ ಅಧಿಕಾರಿಯೊಬ್ಬರು.

 

ಕಾವೇರಿ 4ನೇ ಹಂತದ 2ನೇ ಘಟ್ಟದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡ ನಂತರ 198 ವಾರ್ಡ್‌ಗಳಿಗೆ ಹಾಗೂ 110 ಹಳ್ಳಿಗಳಿಗೆ ಕುಡಿಯುವ ನೀರು, ತ್ಯಾಜ್ಯ ನೀರು ಸಂಸ್ಕರಣೆ ವ್ಯವಸ್ಥೆ ಸುಗಮವಾಗಿ ನಡೆಯಲು 3,500 ಖಾಯಂ ಮತ್ತು 1,700 ಹೊರಗುತ್ತಿಗೆ ಸಿಬ್ಬಂದಿ ಜತೆಯಲ್ಲಿಯೇ 1,081 ಹುದ್ದೆಗಳನ್ನು ಹೆಚ್ಚುವರಿಯಾಗಿ 2019ರ ಡಿಸೆಂಬರ್‌ 13ರಂದು ಮಂಜೂರು ಮಾಡಿದೆ. ಇದೇ ಮಂಜೂರಾತಿಯಲ್ಲಿ ಹೆಚ್ಚುವರಿಯಾಗಿ 2 ಮುಖ್ಯ ಅಭಿಯಂತರರ ಹುದ್ದೆಗಳೂ ಸೇರಿವೆ. ಆದರೆ ಬೇರೆ ಹುದ್ದೆಗಳನ್ನು 8 ಹೊಸದಾಗಿ ಸೃಜಿಸಲು ಆರ್ಥಿಕ ಇಲಾಖೆಯು ಒಪ್ಪಿಗೆಯನ್ನೇ ನೀಡಿಲ್ಲ ಎಂದು ತಿಳಿದು ಬಂದಿದೆ.

 

ಬೆಂಗಳೂರು ಜಲಮಂಡಳಿಯು ಮೂಲತಃ ಒಂದು ಸೇವಾ ಸಂಸ್ಥೆ. ಮುಖ್ಯಮಂತ್ರಿಗಳ ಅಧೀನದಲ್ಲಿ ಬರುವ ಈ ಮಂಡಳಿಯು ನಗರಾಭಿವೃದ್ಧಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮಂಡಳಿಗೆ 12 ವರ್ಷಗಳ ಹಿಂದೆಯೇ 3,500 ಖಾಯಂ ಹುದ್ದೆಗಳು, 1,700 ಹೊರಗುತ್ತಿಗೆ ಸಿಬ್ಬಂದಿಯಿದ್ದಾರೆ. ಈ ಎಲ್ಲಾ ಹುದ್ದೆಗಳಿಗಳು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.

 

ಇಷ್ಟೆಲ್ಲಾ ಹುದ್ದೆಗಳು ಇದ್ದರೂ ಮಂಡಳಿಯಲ್ಲಿ ಅನೇಕ ಅಭಿಯಂತರರಿಗೆ ಯಾವುದೇ ಕಾರ್ಯಭಾರವಿಲ್ಲ. ಕಾವೇರಿ 5ನೇ ಹಂತ ಜಾರಿಯಾದರೆ ಆ ವಲಯದಲ್ಲಿ ಕೆಲಸದ ಒತ್ತಡವೇ ಇರುವುದಿಲ್ಲ. ಅದೇ ರೀತಿ ಇತರೆ ಮುಖ್ಯ ಅಭಿಯಂತರರ ವಲಯಗಳಲ್ಲೂ ಸಹ ಕಾರ್ಯಭಾರವಿಲ್ಲದೇ ಪುಕ್ಕಟ್ಟೆ ವೇತನ ನೀಡಬೇಕಾದ ಸ್ಥಿತಿ ಎದುರಾಗಲಿದೆ. ಇದರ ಮಧ್ಯೆಯೇ ಹೆಚ್ಚುವರಿಯಾಗಿ ಹುದ್ದೆಗಳನ್ನು ಸೃಜಿಸಿದರೆ ಮಂಡಳಿಯು ಆರ್ಥಿಕ ದಿವಾಳಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಹೇಳುತ್ತಾರೆ ಮಂಡಳಿಯ ಇನ್ನೊಬ್ಬ ಅಧಿಕಾರಿ.

 

ಆದರೆ ಮಂಡಳಿಯ ನೀರಿನ ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಕಾರ್ಯವ್ಯಾಪ್ತಿ ವಿಸ್ತರಣೆಗೊಂಡಾಗ ಹಾಗೂ ಮುಂದೆ ಬೃಹತ್‌ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಕುರಿತು ಯೋಜಿಸಲಾಧ ಯೋಜನೆಗಳ ಅನುಸಾರ ಮಂಡಳಿಗೆ ಅವಶ್ಯಕವಿರುವ ಹೆಚ್ಚುವರಿ ಹುದ್ದೆಗಳ ಸೃಜನೆ ಕುರಿತು ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಮಂಡಳಿಯು ವಾದಿಸುತ್ತಿದೆ.

 

ಪ್ರಸ್ತುತ ಬೃಹತ್‌ ಬೆಂಗಳೂರಿನ ವಿಸ್ತರಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ನಿರ್ಮಲೀಕರಣ ವ್ಯವಸ್ಥೆಯ ಜಾಲವನ್ನು ಅಳವಡಿಸುವ ಕಾರ್ಯ ಬಹುತೇಕ ಅಂತಿಮ ಘಟ್ಟದಲ್ಲಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ನೀರಿನ ಸಂಪರ್ಕ ಮಂಜೂರು ಮಾಡಿ ಕುಡಿಯುವ ನೀರಿನ ಪೂರೈಕೆ ಕಾರ್ಯವು ಭಾಗಶಃ ಪ್ರಾರಂಭವಾಗಿದೆ.

 

ಮಂಡಳಿಯು ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳನ್ನು ಹೊಂದಿರುತ್ತದೆ. ವಿಸ್ತರಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ನೀರಿನ ಸಂಪರ್ಕಗಳ ಸಂಖ್ಯೆ ಬಹುತೇಕ ಹೆಚ್ಚಳವಾಗುತ್ತದೆ ಎಂದು ವಿವರಿಸಿರುವುದು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts