ಬೆಂಗಳೂರು; ಕಪ್ಪು ಪಟ್ಟಿ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್‌ಗೆ ಸಾರಿಗೆ ಇಲಾಖೆಯ ಬಹುದೊಡ್ಡ ಟೆಂಡರ್‌ನಲ್ಲಿ ಬಿಡ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಲ್ಲದೆ ಎಲ್ 1 ಆಗಿ ಹೊರಹೊಮ್ಮಲು ಸಾರಿಗೆ ಇಲಾಖೆಯ ಟೆಂಡರ್ ಸಕ್ಷಮ ಪ್ರಾಧಿಕಾರ ಮತ್ತು ತಾಂತ್ರಿಕ ಮೌಲ್ಯಮಾಪನ ಸಮಿತಿ ಅಧಿಕಾರಿಗಳು ನೆರವು ನೀಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.
ಅಲ್ಲದೆ ಟೆಂಡರ್‌ನಲ್ಲಿ ಬಿಡ್ ಮಾಡಿದ್ದ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ., ತನ್ನ ಮೇಲಿನ ಗುರುತರ ಆರೋಪಗಳನ್ನು ಘೋಷಣಾ ಪತ್ರದಲ್ಲಿ ಬಹಿರಂಗೊಳಿಸದೇ ಮುಚ್ಚಿಟ್ಟಿರುವ ಆರೋಪಕ್ಕೆ ಗುರಿಯಾಗಿದ್ದರೂ ಟೆಂಡರ್ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಇದನ್ನು ಗಮನಿಸದೆಯೇ ಬಿಡ್ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಇದಷ್ಟೇ ಅಲ್ಲ, ಕಪ್ಪು ಪಟ್ಟು ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪದ ನಂತರ ಟೆಂಡರ್‌ನ್ನು ರದ್ದುಗೊಳಿಸಲಾಗಿತ್ತಾದರೂ ಸಾರಿಗೆ ಇಲಾಖೆಯು ಹೊಸದಾಗಿ ಕರೆದಿದ್ದ ಟೆಂಡರ್‌ನಲ್ಲಿಯೂ ಇದೇ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ., ತನ್ನದೇ ಅಂಗ ಸಂಸ್ಥೆಯಾಗಿರುವ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜೀಸ್ ಮೂಲಕ ಬಿಡ್ ಮಾಡಿತ್ತು ಎಂಬುದು ಕೂಡ ಇದೀಗ ಮುನ್ನೆಲೆಗೆ ಬಂದಿದೆ.
ಮರು ಟೆಂಡರ್‌ನಲ್ಲಿಯೂ ಎಲ್ 1 ಆಗಿ ಹೊರಹೊಮ್ಮಿರುವ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿಸ್ ಕಂಪನಿಗೆ ಕಾರ್ಯಾದೇಶ ನೀಡಬೇಕೇ ಬೇಡವೇ ಎಂಬ ಬಗ್ಗೆ ಸಾರಿಗೆ ಇಲಾಖೆಯು ಅಡ್ವೋಕೇಟ್ ಜನರಲ್ ಅವರ ಮೊರೆ ಹೊಕ್ಕಿದೆ.
ಈ ಸಂಬಂಧ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ವಿವರವಾಗಿ ಉತ್ತರವನ್ನು ಒದಗಿಸಿದ್ದಾರಲ್ಲದೇ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್‌ನ್ನು ಟೆಂಡರ್‌ನಲ್ಲಿ ಬಿಡ್ ಮಾಡಲು ಅವಕಾಶ ಕಲ್ಪಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಒಂದೇ ಒಂದು ಕ್ರಮ ಜರುಗಿಸಿಲ್ಲ ಎಂಬುದನ್ನೂ ಉತ್ತರದಲ್ಲಿ ಬಹಿರಂಗಪಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಲುವಾಗಿ 2019ರ ಮಾರ್ಚ್ 6ರಂದು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ ಬಿಡ್‌ದಾರರನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಪರಿಶೀಲನೆ ನಡೆಸಿ ಎಲ್ 1 ಮತ್ತು ಎಲ್ 2 ಬಿಡ್‌ದಾರರನ್ನು ಅಂತಿಮಗೊಳಿಸಲಾಗಿತ್ತು.
ಎಲ್ 1 ಬಿಡ್‌ದಾರರಾದ ಮೆ ಮಣಿಪಾಲ್ ಟೆಕ್ನಾಲಜೀಸ್ ಅವರು ಈ ಹಿಂದೆ ಮಹಾರಾಷ್ಟ್ರ ರಾಜ್ಯದಲ್ಲಿ ಟೆಂಡರ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗಿದ್ದರ ವಿಷಯವನ್ನು ಟೆಂಡರ್ ಘೋಷಣಾ ಪತ್ರದಲ್ಲಿ ಬಹಿರಂಗಪಡಿಸಿಲ್ಲವಾದ್ದರಿಂದ 2021ರ ಫೆ.19ರಂದು ಈ ಟೆಂಡರ್‌ನ್ನು ರದ್ದುಗೊಳಿಸಲಾಗಿತ್ತು ಎಂಬುದು ಸಚಿವ ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಟೆಂಡರ್ ಪ್ರಸ್ತಾವನೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮುಖ್ಯ ಕಾನೂನು ಅಧಿಕಾರಿ ಅಭಿಪ್ರಾಯ ಪಡೆದು ಎಂಸಿಟಿ ಕಾರ್ಡ್ಸ್ ಮತ್ತು ಟೆಕ್ನಾಲಜಿ ಲಿಮಿಟೆಡ್ ಅವರನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಮುಂದುವರೆಸಲಾಗಿದೆ.
ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಲುವಾಗಿ 2021ರ ಅಕ್ಟೋಬರ್ 25ರಂದು ಪುನಃ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಗೆ ಸಂಬಂಧಿಸಿದಂತೆ ತಾಂತ್ರಿಕ ಮೌಲ್ಯಮಾಪನ ಸಮಿತಿಯು ಕೈಗೊಂಡ ನಿರ್ಣಯದಂತೆ ಟೆಂಡರ್‌ಗೆ ಅರ್ಜಿ ಸಲ್ಲಿಸಿದ ಇಬ್ಬರು ಬಿಡ್‌ದಾರರಾದ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಪ್ರೈ ಲಿ., ಮತ್ತು ಎವಿಎಲ್ ಇಂಡಿಯಾ ಪ್ರೈ ಲಿಮಿಟೆಡ್ ಅವರು ತಾಂತ್ರಿಕವಾಗಿ ಅರ್ಹತೆ ಪಡೆದಿದ್ದರು.
2021ರ ನವೆಂಬರ್ 19ರಂದು ತಾಂತ್ರಿಕ ಮೌಲ್ಯಮಾಪನದಲ್ಲಿ ಅರ್ಹತೆ ಡೆದ ಇಬ್ಬರು ಬಿಡ್‌ದಾರರು ಪರಿಕಲ್ಪನೆಯ ಪುರಾವೆ ಸಂಬಂಧ ವಾಯು ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಸಮಿತಿಯ ಮುಂದೆ ಪ್ರದರ್ಶಿಸಿದ್ದರು. 2021ರ ಡಿಸೆಂಬರ್ 1ರಂದು ತಾಂತ್ರಿಕ ಮೌಲ್ಯಮಾಪನ ಮತ್ತು ಅರ್ಹ ಬಿಡ್‌ದಾರರದಿಂದ ಪರಿಕಲ್ಪನೆ ಪುರಾವೆಯಲ್ಲಿ ಅರ್ಹತೆ ಪಡೆದ ಬಿಡ್‌ದಾರರು ಸಲ್ಲಿಸಿದ್ದ ಹಣಕಾಸಿನ ಪ್ರಸ್ತಾಪವನ್ನು ಅಂತಿಮಗೊಳಿಸುವ ಸಂಬಂಧ ಸಭೆ ನಡೆಸಿ ಅಂಕಗಳನ್ನು ಲೆಕ್ಕಚಾರ ಮಾಡಿತ್ತು. ಇದಾದ ನಂತರ ಎಂಸಿಟಿ ಕಾರ್ಡ್ ಅಂಡ್ ಟೆಕ್ನಾಲಜಿ ಪ್ರೈ ಲಿ, ಮಣಿಪಾಲ್ ಇವರು ಅತಿ ಕಡಿಮೆ ದರ ನಮೂದು ಮಾಡಿರುವುದರಿಂದ ಎಲ್ 1 ಬಿಡ್‌ದಾರರು ಎಂದು ಸಮಿತಿಯು ತೀರ್ಮಾನಿಸಿತ್ತು ಎಂಬುದು ಉತ್ತರದಿಂದ ತಿಳಿದು ಬಂದಿದೆ.
‘ಈ ಟೆಂಡರ್‌ನಲ್ಲಿನ ಭಾಗವಹಿಸಿದ್ದ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಪ್ರೈ ಲಿಮಿಟೆಡ್ ಅವರು ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ., ಅವರ ಅಂಗ ಸಂಸ್ಥೆಯಾಗಿರುವುದು ಕಂಡು ಬರುತ್ತದೆ. 2021ರ ಡಿಸೆಂಬರ್ 2ರಂದು ವಿಧಾನಪರಿಷತ್ತಿನ ಅರ್ಜಿ ಸಮಿತಿ ಸಭೆಯಲ್ಲಿ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜೀಸ್ ಪ್ರೈ ಲಿ., ಅವರು ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ.ನ ಅಂಗ ಸಂಸ್ಥೆಯಾಗಿರುವ ಕಾರಣ ಇವರಿಗೆ ಕಾರ್ಯಾದೇಶ ನೀಡುವ ಬಗ್ಗೆ ಕಾನೂನು ಇಲಾಖೆಯ ಹಾಗೂ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದುವರೆಯಲು ಸೂಚಿಸಿದ್ದಾರೆ,’ಎಂದು ಶ್ರೀರಾಮುಲು ಅವರು ಉತ್ತರ ಒದಗಿಸಿದ್ದಾರೆ.
ದೂರು ನೀಡಿದ್ದ ಎವಿಎಲ್ ಇಂಡಿಯಾ ಪ್ರೈ ಲಿ.,
ಮಣಿಪಾಲ್ ಟೆಕ್ನಾಲಜೀಸ್ ಮತ್ತು ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಕಂಪನಿ ವಿರುದ್ಧ ಎವಿಎಲ್ ಇಂಡಿಯಾ ಪ್ರೈ ಲಿ., 2021ರ ಡಿಸೆಂಬರ್ 8ರಂದು ಸರ್ಕಾರಕ್ಕೆ ದೂರು ಸಲ್ಲಿಸಿತ್ತು. ‘2019ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಂಬಂಧ ಕರೆಯಲಾದ ಟೆಂಡರ್‌ನಲ್ಲಿ ಎಲ್ 1 ಬಿಡ್‌ದಾರರಾಗಿ ಆಯ್ಕೆಯಾದ ಮಣಿಪಾಲ್ ಟೆಕ್ನಾಲಜೀಸ್ ಅವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವುದನ್ನು ಮರೆಮಾಚಿರುವುದರಿಂದ ಅನರ್ಹಗೊಂಡಿರುತ್ತಾರೆ. ಮತ್ತು ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಪ್ರೈ ಲಿ.,ನಲ್ಲಿ ಶೇ. 80ರಷ್ಟು ಷೇರನ್ನು ಹೊಂದಿರುತ್ತಾರೆ. ಹಾಗೂ ಅದರ ಅಂಗ ಸಂಸ್ಥೆಯಾಗಿದೆ,’ ಎಂದು ಗಮನಕ್ಕೆ ತಂದಿತ್ತು.
ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಪ್ರೈ ಲಿ., ಅವರು ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಂಬಂಧ ಯಾವುದೇ ಯೋಜನೆಯಲ್ಲಿ ಅನುಭವ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಟೆಂಡರ್‌ನಲ್ಲಿ ಭಾಗವಹಹಿಸಿರುವ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಪ್ರೈ ಲಿ., ಅವರನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದರು ಎಂಬುದು ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
ಕರ್ನಾಟಕ ರಾಜ್ಯದಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಂಬಂಧ ಪ್ರಸ್ತುತ ಕರೆಯಲಾಗಿರುವ ಟೆಂಡರ್‌ನಲ್ಲಿ ಎಲ್ 1 ಬಿಡ್ದಾರರಾದ ಎಂಸಿಟಿ ಕಾರ್ಡ್ಸ್ ಅಂಡ್ ಟೆಕ್ನಾಲಜಿ ಪ್ರೈ ಲಿ.ರಲ್ಲಿ ಶೆ. 80ರಷ್ಟು ಷೇರನ್ನು ಹೊಂದಿದ್ದು ಅದರ ಅಂಗ ಸಂಸ್ಥೆಯಾಗಿದೆ. ಇವರನ್ನು ಪರಿಗಣಿಸುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಗಿದ್ದು ಅಡ್ವೋಕೇಟ್ ಜನರಲ್ ಅಭಿಪ್ರಾಯ ಕೋರಲಾಗಿದೆ ಎಂದು ಸದನಕ್ಕೆ ಸಚಿವ ಶ್ರೀರಾಮುಲು ಅವರು ಮಾಹಿತಿ ಒದಗಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದಿದ್ದ 2,400 ಪೋಸ್ಟ್‌ಮನ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಕ್ಷಪಾತ ಎಸಗಿರುವುದು ಮತ್ತು ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪಗಳಡಿಯಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ.,ನ ಪಿ ವಿ ಮಲ್ಯ ಮತ್ತು ಇತರ ನಿರ್ದೇಶಕರ ವಿರುದ್ಧ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು 2015ರಲ್ಲೇ ಎಫ್‌ಐಆರ್ ದಾಖಲಿಸಿದ್ದನ್ನು ಸ್ಮರಿಸಬಹುದು.