ಶಾಸಕರ ಖರೀದಿಗೆ 25 ಕೋಟಿ ರು. ಆಮಿಷ;10 ವರ್ಷಗಳ ನಂತರ ಮುನ್ನೆಲೆಗೆ ಬಂದ ಸಚಿವ ಅಶೋಕ್‌ ಹೆಸರು

photo credit;bangaloremirror

ಬೆಂಗಳೂರು; ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ಶಾಸಕರಾಗಿದ್ದ ಸುರೇಶ್‌ಗೌಡ ಅವರು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್‌ ಅವರಿಗೆ 10 ವರ್ಷಗಳ ಹಿಂದೆ 25 ಕೋಟಿ ಹಣದ ಆಮಿಷ ಒಡ್ಡಿದ್ದ ಪ್ರಕರಣದಲ್ಲಿ ಇದೀಗ ಅಂದಿನ ಸಾರಿಗೆ ಹಾಗೂ ಗೃಹ ಸಚಿವರಾಗಿದ್ದ ಆರ್‌ ಅಶೋಕ್‌ ಅವರ ಪಾತ್ರವಿತ್ತು ಎಂಬ ವಿಚಾರ 10 ವರ್ಷಗಳ ನಂತರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

 

ಶಾಸಕರ ಖರೀದಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷವು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರನ್ನು ತನ್ನತ್ತ ಸೆಳೆಯಲು ಭಾರೀ ಪ್ರಮಾಣದಲ್ಲಿ ಹಣದ ಆಮಿಷ ಒಡ್ಡಿದ್ದರು ಎಂಬ ಕುರಿತಂತೆ ಸಿಡಿಯೊಂದು ಬಹಿರಂಗಗೊಂಡ ನಂತರ ಶಿವಮೊಗ್ಗ ಮೂಲದ ಗೋವಿಂದಪ್ಪ ರಮೇಶ್‌ಗೌಡ ಎಂಬುವರು ಲೋಕಾಯುಕ್ತರಿಗೆ 2010ರ ಅಕ್ಟೋಬರ್‌ 25ರಂದು ನೀಡಿದ್ದ ದೂರು ನೀಡಿದ್ದರು.

 

ಈ ದೂರಿನ ಕುರಿತು ಬೆಂಗಳೂರಿನಲ್ಲಿರುವ 81ನೇ ಅಪರ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಗೋವಿಂದಪ್ಪ ರಮೇಶ್‌ಗೌಡ ಅವರು 2022ರ ಏಪ್ರಿಲ್‌ 7ರಂದು  ಸಾಕ್ಷಿ ನುಡಿದಿದ್ದಾರೆ. ಈ ಸಾಕ್ಷ್ಯದಲ್ಲಿ ಅಂದಿನ ಗೃಹ ಸಚಿವ ಹಾಗೂ ಸಾರಿಗೆ ಸಚಿವರಾಗಿದ್ದ ಆರ್‌ ಅಶೋಕ್‌ ಅವರ ಹೆಸರು ಪ್ರಸ್ತಾಪವಾಗಿದೆ. ಗೋವಿಂದಪ್ಪ ಅವರು ಸಾಕ್ಷ್ಯ ನುಡಿದಿರುವುದನ್ನು ನ್ಯಾಯಾಲಯವು ದಾಖಲಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

 

ವಿಚಾರಣೆ ವೇಳೆ ಸಾಕ್ಷ್ಯ ನುಡಿದಿರುವ ಬಗ್ಗೆ ದಾಖಲಾದ ನಡವಳಿ ಪ್ರತಿ

 

ವಿಶೇಷವೆಂದರೆ ಗೋವಿಂದಪ್ಪ ರಮೇಶ್‌ಗೌಡ ಅವರು ಈ ಪ್ರಕರಣದ ಕುರಿತು ನೀಡಿದ್ದ ದೂರು ಕಳೆದ 10 ವರ್ಷಗಳಿಂದಲೂ ವಿಚಾರಣೆ ನಡೆಯುತ್ತಲೇ ಇದೆ. 2016ರ ಜೂನ್‌ 21ರಂದು ತುಮಕೂರಿನಲ್ಲಿರುವ ಲೋಕಾಯುಕ್ತ ಸಂಸ್ಥೆಯ ಕಚೇರಿಗೆ ಹಾಜರಾಗಿದ್ದ ಗೋವಿಂದಪ್ಪ ರಮೇಶ್‌ಗೌಡ ಅವರು ಲೋಕಾಯುಕ್ತ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದರು.

 

‘ಆಗಿನ ಗೃಹ ಸಚಿವರು ಮತ್ತು ಸಾರಿಗೆ ಸಚಿವರಾದ ಅಶೋಕ್‌ ಅವರ ಮಾರ್ಗದರ್ಶನದ ಮೇರೆಗೆ ಸುರೇಶ್‌ಗೌಡ ಅವರು ಗುಬ್ಬಿ ಶಾಸಕ ಶ್ರೀನಿವಾಸ್‌ ಅವರಿಗೆ ಆಮಿಷ ಒಡ್ಡಿದ್ದಾರೆ ಎದು ಸಿ.ಡಿ.ಯಲ್ಲಿ ಸಂಭಾಷಣೆ ಕಂಡು ಬಂದಿತು. ಈ ವಿಚಾರವನ್ನು ನನ್ನ ಹೇಳಿಕೆ ಕೊಡುವಾಗ ಹೇಳಿದ್ದೇನೆ. ಶ್ರೀನಿವಾಸಗೌಡ ಮತ್ತು ಸುರೇಶ್‌ಗೌಡರನ್ನು ನೋಡಿದರೆ ಗುರುತಿಸುತ್ತೇನೆ,’ ಎಂದು 2022ರ ಏಪ್ರಿಲ್‌ 7ರಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆಯಲ್ಲಿ ಉಚ್ಛರಿಸಿದ್ದಾರೆ.

 

 

ಆರೋಪಿಯನ್ನು ಗುರುತಿಸುವ ಬಗ್ಗೆ ವಕೀಲ ಮನೀಷ್‌ ಯಾವುದೇ ತಕರಾರು ಇಲ್ಲ ಎಂದು ಹೇಳಿರುವುದು ನ್ಯಾಯಾಲಯದ ದಾಖಲೆಯಿಂದ ತಿಳಿದು ಬಂದಿದೆ. ಅಲ್ಲದೆ ಆರೋಪಿ ಪರ ವಕೀಲರ ಪಾಟೀ ಸವಾಲಿಗೆ ನ್ಯಾಯಾಲಯವು ಕಾಲವಕಾಶವನ್ನು ನೀಡಿದೆ.

 

‘ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್‌ ಅವರು ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡರು ತಮಗೆ 25 ಕೋಟಿ ಹಣದ ಆಮಿಷ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಮಿಷ ಒಡ್ಡಿ ನನ್ನನ್ನು ಭಾರತೀಯ ಜನತಾಪಕ್ಷಕ್ಕೆ ಸೇರುವಂತೆ ಒತ್ತಾಯಿಸಿದ್ದರೆಂದು ದೃಶ್ಯ ಮಾಧ್ಯಮದಲ್ಲಿ ಹೇಳಿರುತ್ತಾರೆ. ಅವರು ತನಗೆ 25 ಕೋಟಿ ರೂಪಾಯಿ ಹಣದ ಆಮಿಷ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಮಿಷ ಒಡ್ಡಿದ್ದ ದೃಶ್ಯಗಳನ್ನು ಮತ್ತು ಧ್ವನಿಯನ್ನು ಚಿತ್ರಿಕರಿಸಿದ್ದೇನೆ ಎಂದು ದೃಶ್ಯ ಮಾಧ್ಯಮಗಳಲ್ಲಿ ಹೇಳಿದ್ದರು.

 

 

ಜನ ಮತವನ್ನು ಮಾರುವ ಮತ್ತು ಕೊಳ್ಳುವ ಪ್ರಯತ್ನ ನಡೆಸಿರುವುದನ್ನು ಮಾಧ್ಯಮಗಳಲ್ಲಿ ಒಪ್ಪಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನವೆಸಗಿ ಮತದಾರರಿಗೆ ದ್ರೋಹ ಮಾಡಿದದ್ದಾರೆಂದು ನನಗೆ ಕಂಡು ಬಂತು,’ ಎಂದು ಸಾಕ್ಷ್ಯ ಸಂದರ್ಭದಲ್ಲಿ ಗೋವಿಂದಪ್ಪ ರಮೇಶ್‌ಗೌಡ ಅವರು ಹೇಳಿರುವುದು ನ್ಯಾಯಾಲಯದ ದಾಖಲೆಯಿಂದ ಗೊತ್ತಾಗಿದೆ.

 

ಪ್ರಕರಣದ ಕುರಿತು 2010ರ ನವೆಂಬರ್‌ 9ರಂದು ಲೋಕಾಯುಕ್ತರು ಗೋವಿಂದಪ್ಪ ರಮೇಶ್‌ಗೌಡ ಅವರಿಗೆ ನೋಟೀಸ್‌ ನೀಡಿದ್ದರು. ಇದಾದ ನಂತರ 2010ರ ನವೆಂಬರ್‌ 15ರಂದು ತುಮಕೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಹೋಗಿದ್ದರು. ಅಲ್ಲಿ ಕೇಳಿದ್ದ ಹೆಚ್ಚಿನ ಮಾಹಿತಿಯನ್ನು ಒದಗಿಸಿ ಕೊಟ್ಟಿದ್ದರು ಎಂಬ ಅಂಶ ನ್ಯಾಯಾಲಯದ ದಾಖಲೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts