ಪೌರ ಕಾರ್ಮಿಕರಿಗೆ ಬಿಸಿಯೂಟ; ಇಂದಿರಾ ಕ್ಯಾಂಟೀನ್‌ ಬದಲು ಇಸ್ಕಾನ್‌-ಟಚ್‌ಸ್ಟೋನ್‌ ಫೌಂಡೇಷನ್‌ಗೆ ಗುತ್ತಿಗೆ

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಬಿಸಿಯೂಟ ಯೋಜನೆಗೆ ಸಂಬಂಧಿಸಿದಂತೆ ಇಸ್ಕಾನ್‌ನ ಸಹ ಸಂಸ್ಥೆ ಟಚ್‌ ಸ್ಟೋನ್‌ ಫೌಂಡೇಷನ್‌ಗೆ 4(ಜಿ) ವಿನಾಯಿತಿ ನೀಡಲು ಆರಂಭದಲ್ಲಿ ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯು ನಂತರ ಹಿರಿಯ ಐಎಎಸ್‌ ಅಧಿಕಾರಿಯ ಒತ್ತಡಕ್ಕೆ ಮಣಿದು ತನ್ನ ನಿಲುವನ್ನೇ ಬದಲಿಸಿರುವುದು ಇದೀಗ ಬಹಿರಂಗವಾಗಿದೆ.

 

4(ಜಿ) ವಿನಾಯಿತಿ ನೀಡಲು 2021ರ ಜುಲೈ 26ರಂದು ಪತ್ರ ಬರೆದು ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯು ಕೇವಲ ಮೂರೇ ಮೂರು ತಿಂಗಳಲ್ಲಿ ಅಂದರೆ 2021ರ ಅಕ್ಟೋಬರ್‌ 22ರಂದು 4(ಜಿ) ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿ ಒತ್ತಡಕ್ಕೆ ಮಣಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣದಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರು ಅತ್ಯಾಸಕ್ತಿ ವಹಿಸಿದ್ದರ ಪರಿಣಾಮವೇ ಆರ್ಥಿಕ ಇಲಾಖೆಯು ತನ್ನ ನಿಲುವನ್ನೇ ಬದಲಿಸಲು ಕಾರಣ ಎಂದು ತಿಳಿದು ಬಂದಿದೆ.

 

ಆರ್‌ ಆರ್‌ ನಗರ ಮತ್ತು ಮಹದೇವಪುರ ಹೊರತುಪಡಿಸಿ ಬಿಬಿಎಂಪಿಯ ಉಳಿದ 4 ವಲಯಗಳ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಬಿಸಿಯೂಟ ಒದಗಿಸಲು 4(ಜಿ) ವಿನಾಯಿತಿ ನೀಡಿದೆ. ಈ ಸಂಸ್ಥೆಯು ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ನೀಡುವುದನ್ನು ಕಡ್ಡಾಯವಾಗಿ ದೃಢಪಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ 2022ರ ಜನವರಿ 17ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟಚ್‌ ಸ್ಟೋನ್‌ ಫೌಂಡೇಷನ್‌ಗೆ 4 ಜಿ ವಿನಾಯಿತಿ ನೀಡಿರುವ ಆದೇಶದ ಪ್ರತಿ

 

ಆರ್ಥಿಕ ಇಲಾಖೆ ಜುಲೈನಲ್ಲಿ ಹೇಳಿದ್ದೇನು?

 

ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸದರಿ ಪ್ರಸ್ತಾವನೆಯಲ್ಲಿ ಟಚ್‌ ಸ್ಟೋನ್‌ ಫೌಂಡೇಷನ್‌ ರವರಿಂದಲೇ ಪ್ರಸ್ತಾಪಿತ ಬಿಸಿಯೂಟವನ್ನು ಪಡೆಯಲು ಏಕೆ ಉದ್ದೇಶಿಸಲಾಗಿದೆ, ಇದರ ಗುಣಮಟ್ಟವನ್ನು ಹೇಗೆ ಪರಿಶೀಲಿಸಲಾಗಿದೆ, ಟೆಂಡರ್‌ ಪ್ರಕ್ರಿಯೆ ಮೂಲಕ ಏಕೆ ಬಿಸಿಯೂಟ ಒದಗಿಸುವ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ ಎಂಬುದರ ಕುರಿತು ಯಾವುದೇ ಮಾಹಿತಿ ಒದಗಿಸಿರುವುದಿಲ್ಲ,’ ಎಂದು ಆರ್ಥಿಕ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ 2021ರ ಜುಲೈ 26ರಂದು ಪತ್ರವನ್ನು ಬರೆದಿತ್ತು.

 

ಇಸ್ಕಾನ್‌ ಅಕ್ಷಯ ನಿಧಿ ಪ್ರತಿಷ್ಠಾನ, ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಂತಹ ಸಂಸ್ಥೆಗಳು ಬಿಸಿಯೂಟವನ್ನು ಒದಗಿಸಲು ಮುಂದೆ ಬರಲಿವೆ. ಆಡಳಿತ ಇಲಾಖೆಯು ಟೆಂಡರ್‌ ಕರೆದಲ್ಲಿ ಇನ್ನೂ ಹೆಚ್ಚಿನ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸುವ ಅವಕಾಶ/ಸಾಧ್ಯತೆಗಳು ಇರುತ್ತವೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು ಎಂದು ಗೊತ್ತಾಗಿದೆ.

 

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬಿಸಿಯೂಟವನ್ನು ಒದಗಿಸುವ ಸೇವೆಯನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ಕೈಗೊಳ್ಳಬೇಕು,’ ಎಂದು ಆಡಳಿತ ಇಲಾಖೆಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಬಿಬಿಎಂಪಿಯು ಆರ್ಥಿಕ ಇಲಾಖೆಯ ಸಹಮತಿ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸುವ ಮುನ್ನವೇ ಅಕ್ಷಯ ನಿಧಿ ಫೌಂಡೇಷನ್‌ನ ಮತ್ತೊಂದು ಅಂಗ ಸಂಸ್ಥೆ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಕಾರ್ಯಾದೇಶ ನೀಡಲು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

 

ಇದೇ ಪ್ರಸ್ತಾವನೆಯನ್ನು ಒಪ್ಪಿರುವ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮುಖ್ಯ ಆಯುಕ್ತರು ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಿಂದ ಬಿಸಿಯೂಟ ಪಡೆದುಕೊಳ್ಳಲು ಮತ್ತು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದ್ದರು.

 

ಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿದ್ದ ರೈಸ್‌ಬಾತ್‌, ಪಲಾವ್‌ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ ಸಾಂಬರ್,‌ ಕರಿ, ಉಪ್ಪಿನಕಾಯಿಯನ್ನು 20 ರು. ದರದಲ್ಲಿಯೇ ವಿತರಿಸಲು ಅಕ್ಷಯ ನಿಧಿ ಫೌಂಡೇಷನ್‌ಗೆ ಬಿಬಿಎಂಪಿ ಷರತ್ತು ವಿಧಿಸಿತ್ತು. ಆದರೀಗ ದರದಲ್ಲಿ 3 ರು. ಹೆಚ್ಚಳ ಮಾಡಿ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಗುತ್ತಿಗೆ ನೀಡಲು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿರುವುದನ್ನು ಸ್ಮರಿಸಬಹುದು.

 

‘ಅಕ್ಷಯ ನಿಧಿ ಫೌಂಡೇಷನ್‌ನ ಬದಲಾಗಿ ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶವನ್ನು ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಕಚ್ಛಾ ವಸ್ತುಗಳು, ಅಡುಗೆ ಅನಿಲ ಹಾಗೂ ಇಂಧನ ವೆಚ್ಚವು ಅಧಿಕವಾಗಿರುವ ಕಾರಣ ಸಾರಿಗೆ ವೆಚ್ಚವೂ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿ ಊಟಕ್ಕೆ 20 ರು.ಗಳಿಂದ 22 ರು.ಗಳಿಗೆ ಹೆಚ್ಚಿಸಲು ಕೋರಿರುತ್ತಾರೆ’ ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿರುವುದು ದಾಖಲೆಯಿಂದ ಗೊತ್ತಾಗಿತ್ತು.

 

 

ಪ್ರತಿ ಊಟಕ್ಕೆ 22 ರು.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಕೋರಿದ್ದ ಬಿಬಿಎಂಪಿಯು ‘ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯವರು ವಾರದ ಎಲ್ಲಾ 7 ದಿನಗಳಲ್ಲಿಯೂ ವೈವಿಧ್ಯಮಯವಾದ ಊಟ ನೀಡಲು ಸಿದ್ಧರಾಗಿರುವುದರಿಂದ ಪ್ರತಿ ಊಟಕ್ಕೆ ರು.22ಕ್ಕಿಂತ ಹೆಚ್ಚಿನ 1 ರು. ಗಳನ್ನು ಅಂದರೆ 23 ರು.ಗಳನ್ನು ಪಾವತಿಸಲು ಕೋರಿರುವುದು,’ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

‘ಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿರುವ ರೈಸ್‌ ಬಾತ್‌, ಪಲಾವ್‌ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ, ಸಾಂಬರ್‌, ಕರಿ, ಉಪ್ಪಿನಕಾಯಿಯನ್ನು ಪಡೆದುಕೊಳ್ಳವುದು. ಈ ಕುರಿತು ಪರ್ಯಾಯವಾಗಿ ಟೆಂಡರ್‌ ಆಹ್ವಾನಿಸಿ ಸಮಂಜಸ ದರಗಳನ್ನು ನಿರ್ಧರಿಸಿ ಸರಬರಾಜುದಾರರನ್ನು ಆಯ್ಕೆ ಮಾಡಬೇಕು. ಈ ಹಿಂದೆ ಅಕ್ಷಯ ನಿಧಿ ಫೌಂಡೇಷನ್‌ನಿಂದ ಸರಬರಾಜು ಪಡೆಯಲಾದಂತೆ ಸರ್ಕಾರದ ಅನುಮೋದನೆ ಪಡೆದು ಪುನಃ ಅಕ್ಷಯ ನಿಧಿ ಫೌಂಡೇಷನ್‌ನಿಂದಲೇ ಸರಬರಾಜು ಪಡೆದುಕೊಳ್ಳಬೇಕು’ ಎಂದು 2020ರ ಜುಲೈ 28ರಂದು ನಡೆದಿದ್ದ ಬಿಬಿಎಂಪಿಯ ಕೌನ್ಸಿಲ್‌ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು. ಅದರಂತೆ ಸರ್ಕಾರದ ಅನುಮೋದನೆ ಪಡೆದು ಇಸ್ಕಾನ್‌ ಅಕ್ಷಯ ನಿಧಿ ಫೌಂಡೇಷನ್‌ನಿಂದ ಬಿಸಿಯೂಟ ಪಡೆದುಕೊಳ್ಳಲು ಬಿಬಿಎಂಪಿಯು ತೀರ್ಮಾನಿಸಿತ್ತು.

 

ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು 2016ರ ನವೆಂಬರ್‌ 8ರಂದು ರಂದು ನಡೆದಿದ್ದ ಬಿಬಿಎಂಪಿಯು ಅಕ್ಷಯ ನಿಧಿ ಫೌಂಡೇಷನ್‌ ಜತೆ ಒಡಂಬಡಿಕೆಯನ್ನು ಮಾಡಿಕೊಂಡಿತ್ತು. ಪಾಲಿಕೆಯ 8 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ, ಗುತ್ತಿಗೆ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಚಾಲಕರಿಗೆ, ವಾಹನ ಸಹಾಯಕರು, ಮೇಲ್ವಿಚಾರಕರಿಗೆ 2018ರ ಜುಲೈ 31ರವರೆಗೆ ಬಿಸಿಯೂಟ ಸರಬರಾಜು ಮಾಡಲು 2016ರ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು.

 

ಒಡಂಬಡಿಕೆ ಮುಕ್ತಾಯಗೊಂಡ ನಂತರ ಪಾಲಿಕೆಯು ಬಿಸಿಯೂಟ ವ್ಯವಸ್ಥೆಯನ್ನು ಸರಬರಾಜು ಮಾಡುತ್ತಿದ್ದ ಅಕ್ಷಯ ನಿಧಿ ಫೌಂಡೇಷನ್‌ನಿಂದ ಸ್ಥಗಿತಗೊಳಿಸಿ ಇಂದಿರಾ ಕ್ಯಾಂಟಿನ್‌ ಮೂಲಕ ಬಿಸಿಯೂಟ ಸರಬರಾಜು ಮಾಡಲು 2018ರ ಫೆ.19ರಂದು ಪಾಲಿಕೆಯ ಸಾಮಾನ್ಯ ಸಭೆ ತೀರ್ಮಾನಿಸಿತ್ತು. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20 ಇಂದಿರಾ ಕ್ಯಾಂಟಿನ್‌ ಅಡಿಗೆ ಮನೆಗಳನ್ನು ತೆರೆಯಲಾಗಿತ್ತು.

 

ಅಡಿಗೆ ಮನೆಗಳಿಂದ ಪಾಲಿಕೆಯ ಎಲ್ಲಾ 198 ವಾರ್ಡ್‌ಗಳಲ್ಲಿ (173 ಇಂದಿರಾ ಕ್ಯಾಂಟೀನ್‌ ಮತ್ತು 25 ಮೊಬೈಲ್‌ ಕ್ಯಾಂಟೀನ್‌) ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಸರಬರಾಜು ಮಾಡಲಾಗುತ್ತಿತ್ತು. ಒಟ್ಟು 198 ವಾರ್ಡ್‌ಗಳಲ್ಲಿನ 04 ವಲಯಗಳ 111 ವಾರ್ಡ್‌ಗಳಿಗೆ (ದಕ್ಷಿಣ, ಆರ್‌ ಆರ್‌ ನಗರ, ದಾಸರಹಳ್ಳಿ, ಪಶ್ಚಿಮ ವಲಯಗಳಲ್ಲಿನ 90 ಇಂದಿರಾ ಕ್ಯಾಂಟೀನ್‌, 20 ಮೊಬೈಲ್‌ ಕ್ಯಾಂಟೀನ್‌) ರೂರಲ್‌ ಎನ್ವಿರಾಮೆಂಟ್‌ ವಾಟರ್‌ ಅಸೆಟ್ಸ್‌ ರಿಪ್ರೊಡಕ್ಟೀವ್‌ ಮೂಲಕ ಮಹದೇವಪುರ, ಪೂರ್ವ, ಬೊಮ್ಮನಹಳ್ಳಿ, ಯಲಹಂಕ ವಲಯಗಳ 83 ಇಂದಿರಾ ಕ್ಯಾಂಟೀನ್‌ ಮತ್ತು 5 ಮೊಬೈಲ್‌ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಒದಗಿಸಲು ಹೊರಗುತ್ತಿಗೆ ನೀಡಲಾಗಿತ್ತು.

 

ಇಂದಿರಾ ಕ್ಯಾಂಟೀನ್‌ ಮೂಲಕ ಕೆಲ ವಾರ್ಡ್‌ಗಳಿಗೆ ಸರಬರಾಜಾದ ಊಟವು ಸೇವನೆಗೆ ಯೋಗ್ಯವಾಗಿರಲಿಲ್ಲ ಮತ್ತು ಊಟ ಸರಬರಾಜುದಾರರು ಪೌರ ಕಾರ್ಮಿಕರೊಂದಿಗೆ ಒರಟಾಗಿ ನಡೆದುಕೊಂಡಿರುವುದು, ಅಡುಗೆ ಮಾಡುವ ಪಾತ್ರೆಗಳ ಗುಣಮಟ್ಟವು ಸರಿಯಾಗಿಲ್ಲ ಎಂಬ ಕಾರಣಗಳನ್ನು ಮುಂದಿಡಲಾಗಿತ್ತು.

 

ಅಕ್ಷಯ ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್‌ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು 2020ರ ಅಕ್ಟೋಬರ್‌ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಸುಗತ ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು. ಅಲ್ಲದೆ ಇದನ್ನಾಧರಿಸಿ ವಿಧಾನಪರಿಷತ್‌ ಸದಸ್ಯ ಲೆಹರ್‌ಸಿಂಗ್ ಅವರು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts