ಬೆಂಗಳೂರು; ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಿನಪೂರ್ತಿ ಅಲ್ಲಿಯೇ ಮೊಕ್ಕಂ ಹೂಡಿ ಬಾಕಿ ಉಳಿದ ಕಡತಗಳ ವಿಲೇವಾರಿ ಅಭಿಯಾನ ನಡೆಸಲಾಗುವುದು ಎಂದು ಪ್ರಕಟಿಸಿದ್ದ ಕಂದಾಯ ಸಚಿವ ಆರ್ ಅಶೋಕ್ ಅವರು 60 ದಿನಗಳಿಂದಲೂ 130 ಕಡತಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯಾದ್ಯಂತ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಂಡು ಸ್ವತಃ ತಾವೇ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ತೆರಳಿ ಬಾಕಿ ಉಳಿದ ಕಡತಗಳನ್ನು ಇತ್ಯರ್ಥ ಮಾಡುವುದಾಗಿ ಹೇಳಿಕೆ ನೀಡಿದ್ದ ಸಚಿವ ಅಶೋಕ್ ಅವರು ತಮ್ಮ ಬಳಿಯೇ 60 ದಿನಗಳಿಗೂ ಮೀರಿದ ಕಡತಗಳನ್ನು ವಿಲೇವಾರಿ ಮಾಡದೇ ಬಾಕಿ ಇರಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ಏಪ್ರಿಲ್ ತಿಂಗಳಿಗೆ ಇ-ಆಫೀಸ್‌ನಲ್ಲಿರುವ ಕಡತಗಳ ವಿಲೇವಾರಿ ಗುರಿ ನಿಗದಿಪಡಿಸುವ ಸಂಬಂಧ ಕಂದಾಯ ಇಲಾಖೆಯು ಸಭೆ ನಡೆಸಿದೆ. ಈ ಸಂಬಂಧ ಇಲಾಖೆಯ ವಿಭಾಗಗಳಾದ ಭೂಸ್ವಾಧೀನ, ಭೂ ಮಂಜೂರಾತಿ, ಭೂಮಿ ಘಟಕ , ಭೂ ಸುಧಾರಣೆ, ಮುಜುರಾಯಿ ಸೇರಿದಂತೆ ವಿವಿಧ ವಿಭಾಗಳ ಸರ್ಕಾರದ ಉಪ ಕಾರ್ಯದರ್ಶಿಗಳಿಗೆ 2022ರ ಏಪ್ರಿಲ್ 8ರಂದು ಇಲಾಖೆಯ ನಿರ್ದೇಶಕ ಡಾ ರಾಜೇಂದ್ರಪ್ರಸಾದ್ ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕಂದಾಯ ಇಲಾಖೆಯ ಇ-ಆಫೀಸ್ ತಂತ್ರಾಂಶದಲ್ಲಿ 60 ದಿವಸಗಳ ಮೇಲ್ಪಟ್ಟು ಇತ್ಯರ್ಥಪಡಿಸಲು ಒಟ್ಟು 1,700 ಕಡತಗಳು ಬಾಕಿ ಇವೆ. ಹೀಗಾಗಿ 60 ದಿನಗಳ ಮೇಲ್ಪಟ್ಟು ಬಾಕಿ ಇರುವ ಕಡತಗಳನ್ನು ಏಪ್ರಿಲ್ ತಿಂಗಳಿನಲ್ಲೇ ವಿಲೇವಾರಿ ಮಾಡಲು ನಿಗದಿಪಡಿಸಿರುವ ಗುರಿಯನ್ನು ಸಾಧಿಸಬೇಕು,’ ಎಂದು ನಿರ್ದೇಶಕ ಡಾ ರಾಜೇಂದ್ರಪ್ರಸಾದ್ ಅವರು ಇಲಾಖೆಯ ಉಪ ಕಾರ್ಯದರ್ಶಿಗಳಿಗೆ ಕೋರಿದ್ದಾರೆ.
ಕಡತಗಳ ವಿಲೇವಾರಿಯನ್ನು ತ್ವರಿತಗೊಳಿಸಲು ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದರೂ ಎರಡರಿಂದ ಮೂರು ತಿಂಗಳವರೆಗೂ ಕಡತಗಳು ಅಧಿಕಾರಿಗಳ ಬಳಿಯೇ ಧೂಳು ತಿನ್ನುತ್ತಿವೆ. ಹೀಗಾಗಿ ಇ-ಆಫೀಸ್ ತಂತ್ರಾಂಶದ ಉದ್ದೇಶವೇ ನಿಷ್ಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಲ್ಲದೆ ಕಡತಗಳು 15 ದಿನಗಳಿಗಿಂತಲು ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದ ಕಡತಗಳ ಕುರಿತು 2022ರ ಫೆ.18ರಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ‘ 15 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದ ಕಡತಗಳ ಕುರಿತು ಚರ್ಚಿಸಲಾಗಿದೆ. ಸೇವೆಗಳು (3) ಶಾಖೆಯಲ್ಲಿ 403, ಭೂ ಮಂಜೂರಾತಿ ಶಾಖೆಯಲ್ಲಿ 314, ಭೂ ಸುಧಾರಣೆ ಶಾಖೆಯಲ್ಲಿ 288 ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಡತಗಳು ಬಾಕಿ ಇದೆ. ಅದರಂತೆ 30 ದಿನಗಳಿಗಿಂತಲೂ ಹೆಚ್ಚು ಕಾಲ ಕ್ರಮ ಕೈಗೊಳ್ಳದೇ ಇರುವ ಕಡತಗಳ ಪೈಕಿ ಸೇವೆಗಳು(3) ಶಾಖೆಯಲ್ಲಿವೆ,’ ಎಂಬ ವಿವರವು ಸಭೆ ನಡವಳಿಯಿಂದ ತಿಳಿದು ಬಂದಿದೆ.
ಅಲ್ಲದೆ ಇ-ಆಫೀಸ್ ತಂತ್ರಾಂಶದಲ್ಲಿ ಶಾಖೆಯಲ್ಲಿನ ಕಡತ ಹಾಗೂ ಪತ್ರಗಳು ಯಾವ ಅಧಿಕಾರಿ, ಸಿಬ್ಬಂದಿಯ ಲಾಗಿನ್‌ನಲ್ಲಿ ಎಷ್ಟು ಅವಧಿಯಿಂದ ಬಾಕಿ ಇದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ ಸಂಗತಿಯು ಸಭೆಯ ನಡವಳಿಯಿಂದ ಗೊತ್ತಾಗಿದೆ.
ಇನ್ನು ಕಂದಾಯ ಇಲಾಖೆಯಲ್ಲಿ 11,221 ಕಡತಗಳು ವಿಲೇವಾರಿಯಾಗದೇ ಬಾಕಿ ಇವೆ. ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರವಿದೆ. ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯಗಳಲ್ಲಿ ಉಳಿಸಿಕೊಳ್ಳಲಾಗಿದೆ. ಅಭಿವೃದ್ಧಿ ಮಾಯವಾಗಿದೆ, ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೂ 41 ಆಡಳಿತ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟಾರೆ 2,17,015 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ ಎಂದು ‘ದಿ ಫೈಲ್-ವಾರ್ತಾಭಾರತಿ’ ವರದಿ ಮಾಡಿದ್ದನ್ನು ಸ್ಮರಿಸಬಹುದು.
ಬೇರೆ ಬೇರೆ ಇಲಾಖೆಗಳಿಗೆ ಕಳಿಸಿರುವ 1,31,470 ಕಡತಗಳ ಪೈಕಿ ಎಫ್‌ಎಂಎಸ್‌ನಲ್ಲಿ 43,516 ಕಡತಗಳು ಎಫ್‌ಎಂಎಸ್‌ನಲ್ಲಿದ್ದರೆ ಇ-ಆಫೀಸ್‌ನಲ್ಲಿ 87,954 ಕಡತಗಳು ಬಾಕಿ ಇವೆ. ಇಲಾಖೆ ಹಂತದಲ್ಲೇ ಇರುವ 85,545 ಕಡತಗಳ ಪೈಕಿ 43,516 ಕಡತಗಳು ಎಫ್‌ಎಂಎಸ್‌ನಲ್ಲಿ ಬಾಕಿ ಇದ್ದರೆ ಇನ್ನುಳಿದ 42,209 ಕಡತಗಳು ಇ-ಆಫೀಸ್ ನಲ್ಲಿ ಇಲಾಖಾ ಹಂತದಲ್ಲೇ ಬಾಕಿ ಉಳಿದಿವೆ.
ಅಭಿಪ್ರಾಯ, ಸಹಮತ, ಅನುಮೋದನೆಗೆಂದು ಕಳಿಸಿರುವ ಕಡತಗಳಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿದೆ. 2022ರ ಏಪ್ರಿಲ್ 7ರ ಅಂತ್ಯಕ್ಕೆ ಈ ಇಲಾಖೆಯಲ್ಲಿ 12,465 ಕಡತಗಳು ಬಾಕಿ ಇವೆ. ಅದೇ ರೀತಿ ಎರಡನೇ ಸ್ಥಾನದಲ್ಲಿರುವ ಕಂದಾಯ ಇಲಾಖೆಯಲ್ಲಿ 11,221 ಕಡತಗಳು ಬಾಕಿ ಇವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 10,366, ಒಳಾಡಳಿತ ಇಲಾಖೆಯಲ್ಲಿ 8,317, ಆರ್ಥಿಕ ಇಲಾಖೆಯಲ್ಲಿ 7,364, ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ 8,362, ಜಲ ಸಂಪನ್ಮೂಲ ಇಲಾಖೆಯಲ್ಲಿ 6,018, ವಾಣಿಜ್ಯ ಕೈಗಾರಿಕೆ ಇಲಾಖೆಯಲ್ಲಿ 5,564, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 5,431, ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 5,972 ಕಡತಗಳು ಬಾಕಿ ಇವೆ.