ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ,ಹಿಂಸಾಚಾರ; ಒಂದೇ ವರ್ಷದಲ್ಲಿ 330 ಪ್ರಕರಣ ಹಿಂಪಡೆದ ಸರ್ಕಾರ

photo credit;newsbytes

ಬೆಂಗಳೂರು; ಧಾರ್ಮಿಕ ಸೌಹಾರ್ದತೆಗೆ ಧಕ್ಕೆ, ಕೋಮು ಸೌಹಾರ್ದವನ್ನು ಹಾಳುಗೆಡವುದು, ಸಾರ್ವಜನಿಕರಲ್ಲಿ ದ್ವೇಷ ಭಾವನೆ ಮೂಡಿಸಿರುವುದು, ಸುಳ್ಳು, ಪ್ರಚೋದಕ ಮತ್ತು ವಿಡಿಯೋ ತುಣುಕುಗಳನ್ನು ಬದಲಿಸಿ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವುದು ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿರುವಂತಹ ಗುರುತರ ಆರೋಪ ಮತ್ತು ಹಲವು ಗಂಭೀರ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿರುವ ಪ್ರಕರಣಗಳೂ ಸೇರಿದಂತೆ ಕಳೆದ ಒಂದೇ ವರ್ಷದಲ್ಲಿ ಒಟ್ಟು 330 ಪ್ರಕರಣಗಳನ್ನು ಅಭಿಯೋಜನೆಯಿಂದಲೇ ಹಿಂಪಡೆಯಲಾಗಿದೆ.

 

2013-14ರಿಂದ 2022ರ ಫೆಬ್ರುವರಿವರೆಗಿನ ಅವಧಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಪ್ರಕರಣಗಳನ್ನು ಹಿಂಪಡೆದಿರುವ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 251 ಕ್ಕೂ ಹೆಚ್ಚು ದಾಖಲೆಗಳನ್ನು ಪಡೆದುಕೊಂಡಿದೆ. ವಿಶೇಷವೆಂದರೆ 2019- 2020ರ ಅವಧಿಯಲ್ಲಿ ಹಿಂಪಡೆದಿರುವ ಪ್ರಕರಣಗಳ ಮಾಹಿತಿಯನ್ನಷ್ಟೇ ಒದಗಿಸಿರುವ ಒಳಾಡಳಿತ ಇಲಾಖೆಯು 2021ರಿಂದ 2022ರವರೆಗೆ ಹಿಂಪಡೆದಿರುವ ಪ್ರಕರಣಗಳ ಮಾಹಿತಿ ಒದಗಿಸಿಲ್ಲ.

 

2013-14ರಿಂದ 2017-18ರವರೆಗೆ 600 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿದೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಸೇರಿದ ಯಾರೊಬ್ಬರ ಪ್ರಕರಣವನ್ನು ಹಿಂಪಡೆದಿರುವುದಿಲ್ಲ ಎಂಬುದು ಆರ್‌ಟಿಐ ಅಡಿ ನೀಡಿರುವ ದಾಖಲೆಗಳಿಂದ ಗೊತ್ತಾಗಿದೆ. ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಒಂದೇ ಒಂದು ವರ್ಷದಲ್ಲಿ 330 ಪ್ರಕರಣಗಳನ್ನು ಹಿಂಪಡೆದಿದೆ.

 

ಹೆಚ್ಚಿನ ಪ್ರಕರಣಗಳಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಉತ್ತರ ಕನ್ನಡ ಹಿಂದೂ ಬಳಗ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳಾಗಿದ್ದಾರೆ. ಕಾವೇರಿ ನೀರಿನ ಗಲಾಟೆ, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಹಿಂಪಡೆದಿದ್ದಾರಾದರೂ ಈ ಸಂಖ್ಯೆ ಬೆರಳಣಿಕೆಯಷ್ಟಿವೆ.

 

ರೈತರ, ನಕ್ಸಲರ, ಕನ್ನಡ ಪರ ಹೋರಾಟಗಾರರ ವಿರುದ್ಧ ಹಿಂದಿನ ಕಾಂಗ್ರೆಸ್‌ ಸರ್ಕಾರವು ಮೊಕದ್ದಮೆಗಳನ್ನು ಹಿಂಪಡೆಯಲಾಗಿತ್ತೇ ವಿನಃ ಕೋಮು ಸೌಹಾರ್ದ ಹಾಳುಗೆಡವಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿರಲಿಲ್ಲ. ಆದರೆ ಹಿಂದಿನ ಅವಧಿಯಲ್ಲಿ ಕೋಮು ಮತ್ತು ಧಾರ್ಮಿಕ ಸೌಹಾರ್ದ ಹಾಳುಗೆಡವಿರುವ ಪ್ರಕರಣಗಳನ್ನು ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿಯೋಜನೆಯಿಂದ ಹಿಂಪಡೆದಿರುವುದು ದಾಖಲೆಯಿಂದ ಗೊತ್ತಾಗಿದೆ.

 

ಅದೇ ರೀತಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿಯೂ (2018ರ ಆಗಸ್ಟ್‌ 7) 98 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ, ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಸಂದರ್ಭದಲ್ಲಿ ಜೈ ಶ್ರೀರಾಮ್‌ ಎಂದು ಘೋಷಣೆಗಳೊಂದಿಗೆ ಕೋಳಿ ಅಂಗಡಿ (ಪುತ್ತೂರು)ಗೆ ನುಗ್ಗಿ, ಕಲ್ಲು ತೂರಾಟ ನಡೆಸಿದ್ದ ಪ್ರಕರಣವೂ ಈ ಪಟ್ಟಿಯಲ್ಲಿತ್ತು.

 

ಕನ್ನಯ್ಯಕುಮಾರ್‌ ಮತ್ತು ವೇಮುಲ ಕುಮಾರ್‌ ಪರ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದ ಸಂದರ್ಭದಲ್ಲಿ ಎಬಿವಿಪಿ, ಆರ್‌ಎಸ್‌ಎಸ್‌ ಸಂಘಟನೆಯವರು ಎಂದು ಹೇಳಿಕೊಂಡಿದ್ದವರು ಕರಪತ್ರ ಹಂಚುತ್ತಿದ್ದವರಿಗೆ ಕೈಗಳಿಂದ ಮತ್ತು ಹೆಲ್ಮಟ್‌ಗಳಿಂದ ಹೊಡೆದು ಹಲ್ಲೆ ಮಾಡಿದ್ದ ಪ್ರಕರಣವನ್ನೂ ಕೈ ಬಿಡಲಾಗಿತ್ತು.

 

2020ರ ಫೆ.11ರಂದು 47, ಮಾರ್ಚ್‌ 5ರಂದು 46, ಮೇ 5ರಂದು 125, ಜೂನ್‌ 18ರಂದು 51, ಆಗಸ್ಟ್‌ 31ರಂದು 61 ಸೇರಿ ಒಟ್ಟು 330 ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದಿದೆ. ಈ ಅವಧಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಎಲ್ಲಾ ಪ್ರಕರಣಗಳು ಸಿಆರ್‌ಪಿಸಿ ಕಲಂ 321 ಅಡಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದವು.

 

125 ಪ್ರಕರಣಗಳನ್ನು ಹಿಂಪಡೆದಿರುವ ಕುರಿತು ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ

 

ಮೈಸೂರು, ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ, ಚಿಕ್ಕಮಗಳೂರು, ಶಿರಸಿ, ಕೊಡಗು, ವಿರಾಜಪೇಟೆ, ಬಾಳೂರು, ಆಲ್ದೂರು, ಜಯಪುರ, ಕೊಪ್ಪಳ, ಗಂಗಾವತಿ, ಬಳ್ಳಾರಿ, ಬೆಳಗಾವಿ, ಹೊನ್ನಾಳಿ, ನ್ಯಾಮತಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ನಗರ, ಪಟ್ಟಣಗಳಲ್ಲಿ ಕೋಮು ಸೌಹಾರ್ದತೆ ಹಾಳುಗೆಡುವಲು ಯತ್ನಿಸಿರುವ ಪ್ರಕರಣಗಳು ದಾಖಲಾಗಿದ್ದವು. ಇಲ್ಲಿನ ಬಹುತೇಕ ಪ್ರಕರಣಗಳಲ್ಲಿ ಆರೋಪಿತರ ವಿರುದ್ಧದ ಅಪರಾಧದ ಕೃತ್ಯಗಳು ತನಿಖೆ ವೇಳೆಯಲ್ಲಿ ಸಾಬೀತಾಗಿದ್ದವು. ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತಲ್ಲದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದವು. ಆದರೂ ಅಭಿಯೋಜನೆಯಿಂದ ಹಿಂಪಡೆದಿದೆ.

 

ಗಂಗಾವತಿ ನಗರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇಕ್ಬಾಲ್‌ ಅನ್ಸಾರಿಯವರು ಹಿಂದೂಗಳಿಗೆ ಹೆದರಿದ್ದಾರೆ. ಈ ಸಲ ರಾಮ ಮತ್ತು ಅಲ್ಲ ನಡುವೆ ನಡೆಯುತ್ತಿರುವ ಯುದ್ದ, ಹಿಂದೂಗಳು ಇಕ್ಬಾಲ್‌ ಅನ್ಸಾರಿಯವರಿಗೆ ಮತ ಹಾಕಬಾರದು ಎಂದು ಕೋಮು ದ್ವೇಷದ ಭಾವನೆ ತರುವ ಹೇಳಿಕೆ ನೀಡಿ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತಂದಿರುವ ಅಪರಾಧ ಎಸಗಿರುವ ಚೈತ್ರಾ ಕುಂದಾಪುರ ಪ್ರಕರಣವನ್ನೂ 2020ರ ಮೇ5ರಂದು ಅಭಿಯೋಜನೆಯಿಂದ ಹಿಂಪಡೆದಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಚೈತ್ರಾ ಕುಂದಾಪುರ ಅವರ ವಿರುದ್ಧದ ಪ್ರಕರಣವನ್ನು ಹಿಂಪಡೆದಿರುವ ಆದೇಶದ ಪ್ರತಿ

 

 

ಬೆಳಗಾವಿ ಶಾಸಕರಾಗಿದ್ದ ಸಂಜಯ್‌ ಪಾಟೀಲ್‌, ವಿಶ್ವಹಿಂದೂಪರಿಷತ್‌ನ ಪ್ರಧಾನ ಕಾರ್ಯದರ್ಶಿ ಟಿಪ್ಪು ಜಯಂತಿ, ಸಿದ್ದರಾಮಯ್ಯ ಮೀನು ತಿಂದು ಮಂಜುನಾಥನ ದರ್ಶನಕ್ಕೆ ಹೋಗ್ತಿ, ನೀನು ಮೈಸೂರಲ್ಲಿ ಹುಟ್ಟಿದಿಯೋ, ಪಾಕಿಸ್ತಾನದಲ್ಲಿ ಹುಟ್ಟಿದ್ದೀಯೋ ಎಂದು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ಎರಡು ಧರ್ಮದ ನಡುವೆ ದ್ವೇಷ, ವೈರಭಾವನೆ ಮೂಡುವಂತಹ ಭಾಷಣ ಮಾಡಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನ ಮಾಡಿದ ಅಪರಾಧ ಪ್ರಕರಣವನ್ನು ಹಿಂತೆಗೆದುಕೊಳ್ಳಲಾಗಿದೆ.

 

ಹಾಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ವಿರುದ್ಧದ ಪ್ರಕರಣವನ್ನೂ 2020ರ ಮೇ 5ರಂದು ಹಿಂಪಡೆದಿದೆ. 43 ಜನರೊಂದಿಗೆ ಅಕ್ರಮ ಗುಂಪು ಕಟ್ಟಿಕೊಂಡು ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿಸಿ ಸಾರ್ವಜನಿಕ ರಸ್ತೆಗಳನ್ನು ಬಂದ್‌ ಮಾಡಿದ್ದಲ್ಲದೆ ಪೊಲೀಸನವರು ಮಧ್ಯ ಬರಬಾರದು ಆಚೆ ಹೋಗಿ ಎಂದು ಏರು ಧ್ವನಿಯಲ್ಲಿ ಕೂಗಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಟಯರ್‌ಗಳಿಗೆ ಬೆಂಕಿ ಹಚ್ಚಿರುವ ಅಪರಾಧ ರೇಣುಕಾಚಾರ್ಯರ ಮೇಲಿತ್ತು.

 

ರೇಣುಕಾಚಾರ್ಯ ವಿರುದ್ಧದ ಪ್ರಕರಣವನ್ನು ಹಿಂಪಡೆದಿರುವ ಆದೇಶದ ಪ್ರತಿ

 

ವಿಧಾನನಪರಿಷತ್‌ ಸದಸ್ಯ ವೈ ಎ ನಾರಾಯಣಸ್ವಾಮಿ ಅವರು 50 ಜನ ಬೆಂಬಲಿಗರೊಂದಿಗೆ ಅಕ್ರಮ ಗುಂಪು ಕಟ್ಟಿಕೊಂಡು ಶಾಂತಿಯುತ ಮತದಾನಕ್ಕೆ ಭಂಗ ತಂದಿರುವ ಅಪರಾಧ ಎಸಗಿ ಸಿಆರ್‌ಪಿಸಿ ಕಲಂ 144 ಕಾಯ್ದೆ ಉಲ್ಲಂಘಿಸಿರುವ ಪ್ರಕರಣವನ್ನೂ ಹಿಂಪಡೆಯಲಾಗಿದೆ.

 

ಪ್ರಕರಣಗಳ ವಿವರ

 

ಟಿಪ್ಪು ಜಯಂತಿ, ಹನುಮ ಜಯಂತಿ ವೇಳೆಯಲ್ಲಿ ನಡೆದ ಗಲಭೆಗಳು, ಮಸೀದಿಯಿಂದ ಪ್ರಾರ್ಥನೆ ಮುಗಿಸಿಕೊಂಡು ಬರುವಾಗ ನಡೆದ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದು, ಬಿಜೆಪಿ ಪಕ್ಷದವರು ಅಕ್ರಮ ಕೂಟ ಕಟ್ಟಿಕೊಂಡು ಪೊಲೀಸರ ಮೇಲೆ ಕಬ್ಬಿಣದ ರಾಡುಗಳಿಂದ ಹಾಗೂ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದು, ಕೆಎಸ್‌ಆರ್‌ಟಿಸಿ ಬಸ್‌ ಅಡ್ಡಗಟ್ಟಿ ಸಾರ್ವಜನಿಕ ಸ್ವತ್ತಿಗೆ ನಷ್ಟ, ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ ಎಂದು ಫೇಸ್‌ಬುಕ್‌ ಖಾತೆ ಮೂಲಕ ಬಜರಂಗದಳ ಕಾರ್ಯಕರ್ತರು ಬೆದರಿಕೆ ಒಡ್ಡಿರುವುದು, ಪ್ರಚೋದಿತ ಘೋಷಣೆ ಪ್ರಿಂಟ್‌ ಮಾಡಿಸಿ ಹಂಚಿರುವುದು, ಪರೇಶ್‌ ಮೇಸ್ತಾ ಸಾವಿನ ಸಂದರ್ಭದಲ್ಲಿ ಪ್ರತಿಭಟನೆ ವೇಳೆಯಲ್ಲಿ ನಡೆದ ಹಿಂಸಾಚಾರ, ಮದರಸ ಹಾಗೂ ಮುಸ್ಲಿಂ ಧರ್ಮದವರ ಕೋಮು ಸೌಹಾರ್ದತೆಗೆ ಧಕ್ಕೆ, ನಮಾಜು ಮಾಡುವ ಸ್ಥಳದಲ್ಲಿ ಬಟ್ಟೆ ಸುಟ್ಟು ಹಾನಿ ಪಡಿಸಿರುವುದು, ಸಾರ್ವಜನಿಕರಲ್ಲಿ ದ್ವೇಷ ಭಾವನೆ ಹುಟ್ಟುಹಾಕುವ ಪ್ರಚೋದನಕಾರಿ ಭಾಷಣ ಮಾಡಿರುವುದು, ಮತೀಯ ಭಾವನೆಗಳಿಗೆ ಧಕ್ಕೆ, ದುಡಿಯಲು ಬಂದ ಅಸ್ಸಾಂ ಜನರನ್ನು ಹಿಡಿದು ಕೆಳಗೆ ಕೆಡವಿಕೊಂಡು ಆಯಕಟ್ಟಿನ ಜಾಗಗಳಿಗೆ ತುಳಿದು ನೆಲಕ್ಕೆ ಚಚ್ಚಿರುವುದು, ಮುಸ್ಲಿಂ ಯುವತಿಯರು ಬುರ್ಕಾ ಧರಿಸಿರುವ ಭಾವಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿ ಅಶ್ಲೀಲವಾಗಿ ನಿಂದಿಸಿ ಅವಮಾನಿಸಿರುವುದು, ಹೇಗಿದೆ ಹೊಸ ಟೈಪ್‌ ಬುರ್ಕಾ, ಅಲ್ಲಾನು ಖುಷ್‌, ಅಬ್ದುಲ್ಲಾನೂ ಖುಷ್‌ ಹಾಗೇ ಒಂದು ಲೈಕ್‌ ಒತ್ತಿ ಉರ್ಕೊಂಡು ಸಾಯಿಸಿ ಬಡ್ಡಿ ಮಕ್ಳು ಎಂದು ಟೈಪ್‌ ಮಾಡಿ ಫೋಟೋ ಪೋಸ್ಟ್‌ ಮಾಡಿರುವುದು, ಅಕ್ರಮ ಕೂಟ ಕಟ್ಟಿಕೊಂಡು ಮುಸ್ಲಿಂ ಜನಾಂಗಕ್ಕೆ ಧಿಕ್ಕಾರ ಕೂಗಿರುವುದು, ವಿಡಿಯೋ ತುಣುಕನ್ನು ಬದಲಾಯಿಸಿ ಕೋಮು ಪ್ರಚೋದಕ ಸುಳ್ಳು ಮಾಹಿತಿಯನ್ನು ಪತ್ರಕರ್ತರಿಗೆ ನೀಡಿ ಹಿಂದೂ, ಮುಸ್ಲಿಂ ಧರ್ಮದವರ ನಡುವೆ ವೈಮನಸ್ಸು ತಂದಿರುವುದು, ಲವ್‌ ಜಿಹಾದ್ ಮಾಡಲು ಹಣ ನೀಡಿರುತ್ತಾರೆಂದು ಎಂದು ಆಧಾರ ರಹಿತ ಹೇಳಿಕೆ ನೀಡಿ ಕೋಮು ಸೌಹಾರ್ದತೆ ಕದಡಿರುವುದು, ಹಿಂದೂಗಳು ಇಕ್ಬಾಲ್‌ ಅನ್ಸಾರಿಗೆ ಮತ ಹಾಕಬಾರದು ಎಂದು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತಂದಿರುವುದು, ನಿಮ್ಮ ಮಕ್ಕಳನ್ನು ಮುಸ್ಲಿಂ ಮತಾಂತರ ಮಾಡಲಾಗುತ್ತಿದೆ ಎಂದು ಚೈತನ್ಯ ಟೆಕ್ನೋ ಶಾಲೆ ವಿರುದ್ಧ ಆಧಾರರಹಿತ ಆರೋಪ ಮಾಡಿರುವುದು, ಮಸೀದಿಗೆ ಅಳವಡಿಸಿದ್ದ ಗಾಜುಗಳನ್ನು ಹೊಡೆದು ಅನ್ಯ ಧರ್ಮೀಯರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರುವ ಪ್ರಕರಣಗಳನ್ನೂ ಅಭಿಯೋಜನೆಯಿಂದ ಹಿಂಪಡೆದಿರುವುದು ಆರ್‌ಟಿಐನಿಂದ ಪಡೆದಿರುವ ದಾಖಲೆಗಳಿಂದ ಗೊತ್ತಾಗಿದೆ.

 

ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವವರ ಪೈಕಿ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 4 ತಿಂಗಳಲ್ಲಿ ಒಟ್ಟು 43 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ.

 

ಸಚಿವ ಸಿ ಟಿ ರವಿ, ಪ್ರಭು ಬಿ ಚವ್ಹಾಣ, ಕೆ ಜಿ ಬೋಪಯ್ಯ, ಸುನೀಲ್ ಬಿ ನಾಯ್ಕ, ಸಿ ಎಂ ಉದಾಸಿ, ರೂಪಾಲಿ ನಾಯ್ಕ, ಡಿ ವೇದವ್ಯಾಸ ಕಾಮತ್, ಕಳಕಪ್ಪ ಜಿ ಬಂಡಿ, ಅರಗ ಜ್ಞಾನೇಂದ್ರ, ನೆಹರು ಓಲೆಕಾರ, ಹರೀಶ್ ಪೂಂಜಾ, ಎ ಎಸ್ ಜಯರಾಮ್, ಕರಡಿ ಸಂಗಣ್ಣ, ಪರಣ್ಣ ಈಶ್ವರಪ್ಪ ಮುನವಳ್ಳಿ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಯು ಬಿ ಬಣಕಾರ, ಅರವಿಂದ ಚಂದ್ರಕಾಂತ ಬೆಲ್ಲದ ಸೇರಿದಂತೆ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಗೊತ್ತಾಗಿದೆ.

SUPPORT THE FILE

Latest News

Related Posts