ವಿಧಾನಸೌಧ, ವಿಕಾಸಸೌಧ ಆವರಣದಲ್ಲೇ ಧಾರ್ಮಿಕ ಚಟುವಟಿಕೆ; ಆದೇಶ ಹೊರಡಿಸಿಲ್ಲವೆಂದ ಸರ್ಕಾರ

Photo- the file

ಬೆಂಗಳೂರು;  ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿರುವ ಅರಳಿಮರದ ಬಳಿ ಧಾರ್ಮಿಕ ಕಾರ್ಯ ಚಟುವಟಿಕೆ ನಡೆಸಲು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಕಾರಿ ಶಾಖೆಯು ಆರ್‌ಟಿಐ ಅರ್ಜಿಗೆ ಉತ್ತರ ಒದಗಿಸಿದೆ.

 

ತುಮಕೂರು ಮೂಲದ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿ ಕೇಳಿದ್ದ ಪ್ರಶ್ನೆಗೆ ‘ ವಿಧಾನಸೌಧ ಮತ್ತು ವಿಕಾಸ ಸೌಧ ಮಧ್ಯೆ ಇರುವ ಅರಳಿ ಮರದ ಬಳಿ ಧಾರ್ಮಿಕ ಕಾರ್ಯ ಚಟುವಟಿಕೆ ನಡೆಸಲು ಯಾವುದೇ ಆದೇಶವಾಗಿರುವುದಿಲ್ಲ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಕಾರಿ ಶಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್‌ ನರಸಿಂಹಯ್ಯ ಅವರು 2022ರ ಫೆ.22ರಂದು ಉತ್ತರ ಒದಗಿಸಿದ್ದಾರೆ.

 

ವಿಧಾನಸೌಧ ಮತ್ತು ವಿಕಾಸಸೌಧ ಆವರಣದೊಳಗೇ ಇರುವ ಅರಳಿಮರಕ್ಕೆ ಹೊಂದಿಕೊಂಡಂತೆ ಶ್ರೀ ಅರಳಿಕಟ್ಟೆ ಮುನೇಶ್ವರಸ್ವಾಮಿ ಹೆಸರಿನಲ್ಲಿ ದೇಗುಲ ಹಲವು ವರ್ಷಗಳಿಂದಲೂ ಪೂಜೆ, ಪುನಸ್ಕಾರ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಹಲವು ವರ್ಷಗಳಿಂದಲೂ ನಡೆಯುತ್ತಿವೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ಇದೇ ದೇಗುಲದ ಮುಂಭಾಗದಲ್ಲಿ ಧಾರ್ಮಿಕ ಗುರುತುಗಳನ್ನು ಬಿಂಬಿಸುವ ತ್ರಿಶೂಲ, ಗಂಟೆಗಳನ್ನು ಇರಿಸಲಾಗಿದೆ. ಪ್ರತಿ ದಿನವೂ ಒಂದಲ್ಲ ಒಂದು ಧಾರ್ಮಿಕ ಪೂಜಾ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಸರ್ಕಾರದ ಯಾವುದೇ ಆದೇಶವಿಲ್ಲದೆ ಕಳೆದ ಹಲವು ವರ್ಷಗಳಿಂದಲೂ ಧಾರ್ಮಿಕ ಚಟುವಟಿಕೆ ನಡೆಯುತ್ತಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಕಾರಿ ಶಾಖೆ ಮತ್ತು ಲೋಕೋಪಯೋಗಿ ಇಲಾಖೆಯು ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಈ ಕುರಿತು ‘ದಿ ಫೈಲ್‌’ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಕಾರ್ಯಕಾರಿ ಶಾಖೆ) ಉಪ ಕಾರ್ಯದರ್ಶಿಯನ್ನು ಭೇಟಿ ಮಾಡಿತು. ಈ ಸಂಬಂಧ ಪ್ರತಿಕ್ರಿಯಿಸಿದ ಉಪ ಕಾರ್ಯದರ್ಶಿ ಶಶಿಧರ್‌ ಅವರು ‘ ಅರಳಿಕಟ್ಟೆ ಬಳಿ ಧಾರ್ಮಿಕ ಚಟುವಟಿಕೆ ನಡೆಸಲು ನಮ್ಮ ಶಾಖೆಯಿಂದ ಯಾವುದೇ ಆದೇಶ ಹೊರಡಿಸಿಲ್ಲ. ಈ ಸಂಬಂಧ ಆರ್‌ಟಿಐಗೆ ಉತ್ತರ ಒದಗಿಸಲಾಗಿದೆ,’ ಎಂದಷ್ಟೇ ಪ್ರತಿಕ್ರಿಯಿಸಿದರು.

 

ವಿಕಾಸ ಸೌಧ ನಿರ್ಮಾಣವಾಗುವ ಮುನ್ನ ಅರಳಿ ಮರವೊಂದು ರಸ್ತೆ ಬದಿಯಲ್ಲಿದ್ದ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಿತ್ತು. ಇದಕ್ಕೆ ಹೊಂದಿಕೊಂಡಂತೆ ಸರ್ಕಾರಿ ಮುದ್ರಣಾಲಯವೂ ಇತ್ತು. ವಿಕಾಸ ಸೌಧ ನಿರ್ಮಾಣವಾದ ನಂತರ ಅರಳಿಕಟ್ಟೆ ಮರ ಮತ್ತು ಸುತ್ತಮುತ್ತಲಿನ ಜಾಗವು ವಿಕಾಸಸೌಧದ ಆವರಣದೊಳಗೆ ಸೇರ್ಪಡೆಯಾಯಿತು. ಆರಂಭದಲ್ಲಿ ಯಾವುದೇ ದೇಗುಲವಿರಲಿಲ್ಲ. ಕ್ರಮೇಣ ಅರಳಿ ಮರಕ್ಕೆ ಸುತ್ತಲೂ ಕಟ್ಟೆ ಕಟ್ಟಲಾಯಿತಲ್ಲದೆ ಅರಳಿಕಟ್ಟೆ ಮುನೇಶ್ವರಸ್ವಾಮಿ ಎಂಬ ದೇಗುಲವೂ ಎದ್ದಿತು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು.

 

ಸರ್ಕಾರಿ ಕಟ್ಟಡವಾಗಿರುವ ವಿಧಾನಸೌಧ ಮತ್ತು ವಿಕಾಸಸೌಧದ ಆವರಣದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಗುಡಿಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿರುವುದು ಸಂವಿಧಾನದ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾದ ನಿಲುವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

the fil favicon

SUPPORT THE FILE

Latest News

Related Posts