ರಷ್ಯಾ-ಉಕ್ರೇನ್‌ ಯುದ್ಧ ಪರಿಣಾಮ; ಅಡುಗೆ ಎಣ್ಣೆ ಹೆಚ್ಚಳ ದರ ನೀಡದೇ ಶಿಕ್ಷಕರ ಜೇಬಿಗೆ ಕೈಹಾಕಿದ ಸರ್ಕಾರ?

Photo Credit; Financial Express

ಬೆಂಗಳೂರು; ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಯುದ್ಧ ಆರಂಭವಾದ ನಂತರ ಸೂರ್ಯಕಾಂತಿ ಎಣ್ಣೆ ಬೆಲೆ ಏರಿಕೆಯು ರಾಜ್ಯದ ಶಾಲೆಗಳಲ್ಲಿ ಜಾರಿಯಾಗಿರುವ ಮಧ್ಯಾಹ್ನ ಬಿಸಿಯೂಟದ ಯೋಜನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

 

ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಗೆ ಸೂರ್ಯಕಾಂತಿ ಎಣ್ಣೆ ಸರಬರಾಜಿನಲ್ಲಿ ವ್ಯತ್ಯಯವಾಗುವುರಿಂದ ಅಗತ್ಯ ಪರಿವರ್ತನಾ ವೆಚ್ಚವನ್ನು ಬಳಸಿಕೊಂಡು ಬಿಸಿಯೂಟದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸೂಚಿಸಿದೆಯಾದರೂ ಯುದ್ಧದ ಪರಿಣಾಮದಿಂದಾಗಿ ಮಾರುಕಟ್ಟೆಯಲ್ಲಿ ಏರಿಕೆಯಾಗಲಿರುವ ಸೂರ್ಯಕಾಂತಿ ಎಣ್ಣೆಯ ದರದಲ್ಲಿ ಆಗಲಿರುವ ಹೆಚ್ಚಳ ದರವನ್ನು ಮುಖ್ಯ ಶಿಕ್ಷಕರೇ ತಮ್ಮ ಜೇಬಿನಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

 

ಸೂರ್ಯಕಾಂತಿ ಎಣ್ಣೆ ಸರಬರಾಜಿನಲ್ಲಿ ವ್ಯತ್ಯಯವಾದರೂ ಬಿಸಿಯೂಟ ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ ವಿಶಾಲ್‌ ಆರ್‌ ಅವರು 2022ರ ಮಾರ್ಚ್‌ 7ರಂದು ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. ಜ್ಞಾಪನ ಪತ್ರ ಹೊರಡಿಸುವುದಕ್ಕೆ ಸಚಿವ ಬಿ ಸಿ ನಾಗೇಶ್‌ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಜ್ಞಾಪನ ಪತ್ರದಲ್ಲೇನಿದೆ?

 

2021-22ನೇ ಸಾಲಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಫೆ.22, ಮಾರ್ಚ್‌ 22, ಏಪ್ರಿಲ್‌ 22ರ ತಿಂಗಳಿಗೆ ಅವಧಿಗೆ ಜಿಲ್ಲಾವಾರು ಆಹಾರ ಬೇಡಿಕೆಯಂತೆ ಸೂರ್ಯಕಾಂತಿ ಎಣ್ಣೆಯ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ. ಕಾರಣಾಂತರಗಳಿಂದಾಗಿ ಸೂರ್ಯಕಾಂತಿ ಎಣ್ಣೆ ಜಿಲ್ಲಾವಾರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು ಶಾಲೆಗಳಲ್ಲಿ ಬಿಸಿಯೂಟ ನಡೆಸಲು ಅಡುಗೆ ಎಣ್ಣೆಯ ವ್ಯತ್ಯಯ ಉಂಟಾದಲ್ಲಿ ಕೂಡಲೇ ಶಾಲೆಯಲ್ಲಿ ಲಭ್ಯವಿರುವ ಪರಿವರ್ತನಾ ವೆಚ್ಚವನ್ನು ಬಳಸಿಕೊಂಡು ನಿಯಮಾನುಸಾರ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವ ಖಾದ್ಯ ತೈಲ ಅಡುಗೆ ಎಣ್ಣೆಯನ್ನು ನಿಯಮಾನಸುರಾರ ಖರೀದಿಸಿ ( ಒಂದು ಮಗುವಿಗೆ ಲಭ್ಯವಿರುವ ಅಡುಗೆ ಎಣ್ಣೆಯ ಘಟಕ ವೆಚ್ಚ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ರೂ.0.42 , ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 0.67 ದರಕ್ಕೆ ಅನುಗುಣವಾಗಿ ಪಡೆದುಕೊಂಡು ಬಿಸಿಯೂಟ ನಿಲ್ಲದಂತೆ ನಿರಂತರವಾಗಿ ನಡೆಸುವಂತೆ ಮುಂದಿನ ಆದೇಶದವರೆಗೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿರುವುದು ಜ್ಞಾಪನ ಪತ್ರದಿಂದ ತಿಳಿದು ಬಂದಿದೆ.

 

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಜ್ಞಾಪನ ಪತ್ರ

 

ಅಲ್ಲದೆ ಈ ಅವಧಿಯ ಅಗತ್ಯ ಪರಿವರ್ತನಾ ವೆಚ್ಚವನ್ನು (ಅಡುಗೆ ಎಣ್ಣೆ ಖರೀದಿ ಮೊತ್ತ ಸೇರಿದಂತೆ) ಶಾಲೆಗಳಿಗೆ ಬಿಡುಗಡೆಗೊಳಿಸುವ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಪಂಚಾಯತ್‌ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಿಗೆ ಹಾಗೂ ತಾಲೂಕು ಪಂಚಾಯ್ತಿಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ. ‘ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ ವಿಶಾಲ್‌ ಆರ್‌ ಜ್ಞಾಪನ ಪತ್ರದಲ್ಲಿ ನಿರ್ದೇಶಿಸಿದ್ದಾರೆ.

 

ಮುಖ್ಯ ಶಿಕ್ಷಕರು ಮಾರುಕಟ್ಟೆ ಹೆಚ್ಚಳ ದರ ಭರಿಸಬೇಕೇ?

 

ಬಿಸಿಯೂಟದಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಜ್ಞಾಪನ ಪತ್ರವು ಗೊಂದಲಕ್ಕೆ ದಾರಿಮಾಡಿಕೊಟ್ಟಿದೆ ಎಂಬ ಅಭಿಪ್ರಾಯ ಮುಖ್ಯ ಶಿಕ್ಷಕರ ವಲಯದಿಂದ ಕೇಳಿ ಬಂದಿದೆ. ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್‌ಗೆ ಮಾರುಕಟ್ಟೆಯಲ್ಲಿ ಪ್ರಸ್ತುತ 200 ರು. ಇದೆ. ಪಾಮ್‌ ಆಯಿಲ್‌ ಪ್ರತಿ ಲೀಟರ್‌ಗೆ 175 ರು. ಇದೆ. ಶೇಂಗಾ ಎಣ್ಣೆ ದರವು ಸೂರ್ಯಕಾಂತಿ ಎಣ್ಣೆ ದರಕ್ಕಿಂತಲೂ ಹೆಚ್ಚಿದೆ ಎನ್ನಲಾಗಿದೆ.

 

‘ಸಾರ್ವಜನಿಕ ಶಿಕ್ಷಣ ಇಲಾಖೆಯು ಜ್ಞಾಪನ ಪತ್ರದಲ್ಲಿ ತಿಳಿಸಿರುವ ಪ್ರಕಾರ ಒಂದು ಮಗುವಿಗೆ ಲಭ್ಯವಿರುವ ಅಡುಗೆ ಎಣ್ಣೆಯ ಘಟಕ ವೆಚ್ಚ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ರೂ.0.42 , ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 0.67 ದರದಂತೆ ಅಗತ್ಯ ಪರಿವರ್ತನಾ ವೆಚ್ಚ ಬಳಸಿಕೊಳ್ಳಬೇಕು. ಇದರಂತೆ ಒಂದು ಲೀಟರ್‌ಗೆ 86. 00 ರು. ದರವಾಗುತ್ತದೆ. ಒಂದು ಶಾಲೆಗೆ ಪ್ರತಿ ತಿಂಗಳಿಗೆ ಅಂದಾಜು 35 ಲೀಟರ್‌ ಅಡುಗೆ ಎಣ್ಣೆ ಬೇಕು. ಮಾರುಕಟ್ಟೆಯಲ್ಲಿ ಸದ್ಯ ಇರುವ ದರಕ್ಕೆ ಹೋಲಿಸಿದರೆ ಶಾಲೆಯ ಮುಖ್ಯ ಶಿಕ್ಷಕರು ಅಗತ್ಯ ಪರಿವರ್ತನಾ ವೆಚ್ಚದ ಜತೆಗೇ ಹೆಚ್ಚಿಗೆ 114 ರು.ಗಳನ್ನು ಭರಿಸಬೇಕು. ಆದರೆ ಈ ಹೆಚ್ಚುವರಿ 114 ರು.ಗಳ ಭರಿಸುವಿಕೆ ಬಗ್ಗೆ ಜ್ಞಾಪನ ಪತ್ರದಲ್ಲಿ ಉಲ್ಲೇಖಿಸಿಲ್ಲ ಮತ್ತು ಪ್ರಸ್ತಾಪಿಸಿಲ್ಲ. ಇದರ ಪ್ರಕಾರ 300 ವಿದ್ಯಾರ್ಥಿಗಳು ಇರುವ ತಲಾ ಶಾಲೆಯ ಮುಖ್ಯ ಶಿಕ್ಷಕರು ಒಂದು ಲೀಟರ್‌ಗೆ 114 ರು. ಹೆಚ್ಚಳ ದರದಂತೆ 3,900 ರು.ಗಳನ್ನು ಭರಿಸಬೇಕು. ಈ ಹೆಚ್ಚುವರಿ ಹಣವನ್ನು ಭರಿಸುವ ಬಗ್ಗೆ ಜ್ಞಾಪನ ಪತ್ರದಲ್ಲಿ ಸ್ಪಷ್ಟವಾಗಿ ಹೇಳದ ಕಾರಣ ಮುಖ್ಯ ಶಿಕ್ಷಕರೇ ಭರಿಸಬೇಕಾದ ಅನಿವಾರ್ಯತೆ ಇದೆ,’ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಮುಖ್ಯ ಶಿಕ್ಷಕರೊಬ್ಬರು.

 

ಅಡುಗೆ ಎಣ್ಣೆಯು ಏಪ್ರಿಲ್‌ 10ರವರೆಗೂ ಬೇಕಿದೆ. ಈಗಾಗಲೇ ಶಾಲೆಗಳಿಗೆ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡಲು ಸರ್ಕಾರ ಅದಾನಿ ವಿಲ್ಮಾರ್‌, ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಒಕ್ಕೂಟ (ಸಫಲ್‌)ಕ್ಕೆ ಗುತ್ತಿಗೆ ನೀಡಲಾಗಿದೆ. ರಷ್ಯಾ ಮತ್ತು ಉಕ್ರೇನ್‌ ಯುದ್ಧದಿಂದಾಗುವ ಪರಿಣಾಮವನ್ನೇ ನೆಪವಾಗಿರಿಸಿಕೊಂಡು ಖಾಸಗಿ ಏಜೆನ್ಸಿಗಳು ಸೂರ್ಯಕಾಂತಿ ಎಣ್ಣೆ ಆಮದಾಗುತ್ತಿಲ್ಲ ಅಥವಾ ದಾಸ್ತಾನಿಲ್ಲ ಎಂದು ನೆಪವೊಡ್ಡಿ ಸರಬರಾಜದು ಮಾಡದೆಯೂ ಇರಬಹುದು ಎಂದೂ ವಿವರಿಸುತ್ತಾರೆ ಹೆಸರು ಹೇಳಲು ಇಚ್ಛಿಸದ ಮುಖ್ಯ ಶಿಕ್ಷಕರೊಬ್ಬರು.

 

ಖಾದ್ಯ ತೈಲ ಉತ್ಪಾದಕ ಕಂಪನಿಗಳಲ್ಲೊಂದಾದ ಅದಾನಿ ವಿಲ್ಮಾರ್‌ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 11 ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಹಕಾರಿ ವಲಯದ ಸಂಸ್ಥೆಗಳನ್ನು ಹಿಂದಕ್ಕೆ ತಳ್ಳಿ ಸಿಂಹಪಾಲು ಪಡೆದಿದೆ.

the fil favicon

SUPPORT THE FILE

Latest News

Related Posts