ನಕಲಿ ಜಾತಿ ಪ್ರಮಾಣ ಪತ್ರ ಆರೋಪ; ಉಪ ಕಾರ್ಯದರ್ಶಿ ವಿರುದ್ಧ ಕ್ರಮಕೈಗೊಳ್ಳದ ಹೊರಟ್ಟಿ

ಬೆಂಗಳೂರು; ವಿಧಾನಪರಿಷತ್‌ನ ಉಪ ಕಾರ್ಯದರ್ಶಿ ಬಿ ಎ ಬಸವರಾಜು ಎಂಬುವರು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬೆರಳಚ್ಚುಗಾರರ ಹುದ್ದೆಗೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ನೇಮಕವಾಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದಾರೆ.

 

ಅಲ್ಲದೆ, ಬಸವರಾಜು ಅವರಿಗೆ ಪದನ್ನೋತಿ ನೀಡುವ ಸಂದರ್ಭದಲ್ಲಿಯೂ ಅನ್ಯ ಸಿಬ್ಬಂದಿಗಳ ಸೇವಾ ಹಿರಿತನವನ್ನು ಬದಿಗೊತ್ತಿ ಪರಿಶಿಷ್ಟ ಜಾತಿ ರೋಸ್ಟರ್ ಬಿಂದುವಿನಲ್ಲಿ ಶೀಘ್ರಲಿಪಿಗಾರರಾಗಿ ಪದೋನ್ನತಿ ನೀಡಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.

 

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬೆರಳಚ್ಚುಗಾರ ಹುದ್ದೆಗೆ ನೇಮಕವಾಗಿರುವ ಬಿ ಎ ಬಸವರಾಜು ಅವರು ಪದನ್ನೋತಿಯನ್ನೂ ಇದೇ ಮೀಸಲು ವರ್ಗದ ಬಿಂದುವಿನಡಿಯಲ್ಲಿ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಸೇವಾ ಪುಸ್ತಕ ಮತ್ತು ಜೇಷ್ಠತಾ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಾಗಬೇಕಿತ್ತಾದರೂ, ನಂತರದ ದಿನಗಳಲ್ಲಿ ಸಾಮಾನ್ಯ ವರ್ಗದವರೆಂದು ಗುರುತಿಸಿ ಕೊಂಡಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ. ಹೀಗಾಗಿ ಬಿ ಎ ಬಸವರಾಜು ಅವರು ನಿರ್ದಿಷ್ಟವಾಗಿ ಯಾವ ಪ್ರವರ್ಗಕ್ಕೆ ಸೇರಿದ್ದಾರೆ ಎಂಬುದು ನಿಗೂಢವಾಗಿದೆ.

 

ಅಲ್ಲದೆ ಬಿ ಎ ಬಸವರಾಜು ಅವರು ನೇಮಕಗೊಳ್ಳುವಾಗ ಸಲ್ಲಿಸಿದ್ದ ಮೂಲ ಅರ್ಜಿಯನ್ನೇ ಬದಲಾಯಿಸಲಾಗಿದೆ ಮತ್ತು ಸೇವಾ ಪುಸ್ತಕದಲ್ಲಿಯೂ ತಿದ್ದಲಾಗಿದೆ ಎಂಬ ಗುರುತರವಾದ ಆಪಾದನೆಯೂ ಕೇಳಿ ಬಂದಿದೆ.

 

ಈ ಸಂಬಂಧ ವಿಧಾನಪರಿಷತ್ ಸಚಿವಾಲಯದ ಅಧೀನ ಕಾರ್ಯದರ್ಶಿ ಕೆ. ಎನ್. ಶಾಂತ ಎಂಬುವರು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ 2021ರ ನವೆಂಬರ್ 15ರಂದು ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸಿ 4 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ. ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

 

‘ಬಿ ಎ ಬಸವರಾಜು ಎಂಬುವರು ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗೆ ನೇಮಕಗೊಂಡಿರುತ್ತಾರೆ. ಅಲ್ಲದೆ ಶೀಘ್ರಲಿಪಿಗಾರರ ಹುದ್ದೆಗೆ ರೋಸ್ಟರ್ ಮುಖಾಂತರ ಪದನ್ನೋತಿಯನ್ನು ಪಡೆದಿರುತ್ತಾರೆ. ಆದರೆ ಪರಿಶಿಷ್ಟ ಜಾತಿಗೆ ಸೇರಿರುವುದಕ್ಕೆ ಸಂಬಂಧಿಸಿದ ದಾಖಲಾತಿಯನ್ನು ಸೇವಾ ಪುಸ್ತಕದಿಂದ ತೆಗೆದುಹಾಕಿರುವುದು ಕಂಡು ಬಂದಿರುತ್ತದೆ. ಈ ವಿಷಯವಾಗಿ ಹಲವು ಬಾರಿ ಮನವಿ ಜೊತೆಗೆ ದಾಖಲೆಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದು ಹೊರಟ್ಟಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

 

 

ಕೆ ಎನ್‌ ಶಾಂತ ಅವರು ಹೊರಟ್ಟಿ ಅವರಿಗೆ ಬರೆದಿರುವ ಪತ್ರ

ಸೇವೆಯಲ್ಲಿ ನನಗೆ ಕಿರಿಯರಾಗಿದ್ದರೂ ಪರಿಶಿಷ್ಟ ಜಾತಿ ಎಂಬುದಾಗಿ ಪದೋನ್ನತಿಯನ್ನು ಪಡೆದಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಕೆ. ಎನ್. ಶಾಂತ ಅವರು ಪತ್ರದಲ್ಲಿ ಮನವಿ ಮಾಡಿರುವುದು ಗೊತ್ತಾಗಿದೆ.

 

ಸಭಾಪತಿ ಹೊರಟ್ಟಿ ಅವರು ಈ ಬಗ್ಗೆ ಪೂರ್ಣ ವಿವರದೊಂದಿಗೆ ಕಡತವನ್ನು ಮಂಡಿಸಲು ಸೂಚಿಸಿದ್ದರೂ ಸಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಿಲ್ಲ. ಬದಲಿಗೆ ಸಭಾಪತಿಯವರ ಕಾಲಾವಧಿ ಕಡಿಮೆಯಿರುವ ಕಾರಣ ಹೇಗಾದರೂ ಅವಧಿ ಮುಗಿಯುವವರೆಗೆ ಪ್ರಕರಣವನ್ನು ಮುಂದೂಡಲು ಯತ್ನಿಸಿದ್ದಾರೆ. ಪರಿಷತ್ ಸಚಿವಾಲಯದ ಹಿರಿಯ ಅಧಿಕಾರಿಗಳ ಗುಂಪೊಂದು ಸಭಾಪತಿಗಳನ್ನೇ ದಾರಿ ತಪ್ಪಿಸುತ್ತಿದೆ.

 

ಬಿ. ಎ. ಬಸವರಾಜು ಅವರ ನೇಮಕಾತಿ ಹಾಗೂ ಪದೋನ್ನತಿಯ ಬಗ್ಗೆ ವಿಧಾನಸಭೆ ಸಚಿವಾಲಯದಿಂದಲೂ ಮಾಹಿತಿ, ದಾಖಲೆಗಳನ್ನು ಪಡೆದಿದ್ದರೂ ಸಭಾಪತಿ ಹೊರಟ್ಟಿ ಅವರ ಗಮನಕ್ಕೆ ತರದೇ ಮುಚ್ಚಿಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಕರ್ನಾಟಕ ವಿಧಾನಮಂಡಲದ ಸಚಿವಾಲಯದ ಅಧಿಸೂಚನೆ ( ಎಡಿಎಂ-1/237/ಎಫ್ಪಿ/91-13.08-1991) ಅನ್ವಯ ಬಿ. ಎ. ಬಸವರಾಜು ಅವರು ಪರಿಶಿಷ್ಟ ಜಾತಿ ಮೀಸಲಾತಿ ಬಿಂದುವಿನಡಿಯಲ್ಲಿ ನೇಮಕಗೊಂಡಿರುತ್ತಾರೆ. ಅಧಿಕೃತ ಜ್ಞಾಪನ ಸಂಖ್ಯೆ (ಎಡಿಎಂ-1/237/ಎಫ್ಪಿಪಿ/91 ದಿನಾಂಕ 29-11-1991) ನೇಮಕಾತಿ ಷರತ್ತಿಗೆ ಸಂಬಂಧಿಸಿದಂತೆ ಪುಟ ಸಂಖ್ಯೆ 2 (ಬಿ) ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಮೂಲ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು ಎಂದು ತಿಳಿಸಲಾಗಿತ್ತು ಎಂಬುದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರು ಪರಿಷತ್ ಸಚಿವಾಲಯಕ್ಕೆ ನೀಡಿರುವ ಮಾಹಿತಿಯಿಂದ ಗೊತ್ತಾಗಿದೆ.

 

 

ನೇಮಕಾತಿ ಹೊಂದುವ ಸಂದರ್ಭದಲ್ಲಿ ಮೂಲ ಜಾತಿ ಪ್ರಮಾಣ ಕೊಡದಿದ್ದರೂ ಪರಿಶಿಷ್ಟ ಜಾತಿ ಬಿಂದುವಿನಡಿ ನೇಮಕಾತಿ ಮಾಡಿಕೊಂಡಿರುವುದು ಹಾಗೂ ಯಾವುದೇ ಪರಿಶೀಲನೆ ಮಾಡದೆ ಶೀಘ್ರಲಿಪಿಗಾರರಾಗಿ ಪದೋನ್ನತಿಯನ್ನೂ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

 

‘ಬಿ.ಎ. ಬಸವರಾಜು ಅವರು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬೆರಳಚ್ಚುಗಾರ ಹುದ್ದೆಗೆ ನೇಮಕಗೊಂಡಿದ್ದಾರೆ. ಹಾಗೂ ನೇಮಕಾತಿಗೊಂಡ ನಂತರ ಸಚಿವಾಲಯವು ಮೂಲ ಜಾತಿ ಪ್ರಮಾಣಪತ್ರವನ್ನು ನೀಡುವಂತೆ ಸೂಚಿಸಿರುತ್ತದೆ ಎಂಬುದಾಗಿ ವಿಧಾನ ಸಭೆ ಸಚಿವಾಲಯವು ನೀಡಿರುವ ದಾಖಲೆಗಳಲ್ಲಿ ಸ್ಪಷ್ಟವಾಗಿರುತ್ತದೆ. ಆದರೆ ಮೂಲ ಜಾತಿ ಪ್ರಮಾಣ ಪತ್ರವನ್ನು ಬಿ ಎ ಬಸವರಾಜುರವರು ಸಚಿವಾಲಯಕ್ಕೆ ನೀಡಿದ್ದಾರೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿರುವುದಿಲ್ಲ. ಹಾಗೆಯೇ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸದಿದ್ದಲ್ಲಿ ಅಥವಾ ಸಿಂಧುತ್ವವನ್ನು ಪರಿಶೀಲಿಸದಿದ್ದಲ್ಲಿ ಸಾಮಾನ್ಯ ನೇಮಕಾತಿ ನಿಯಮಗಳ ರೀತ್ಯಾ ನೇಮಕಾತಿಯನ್ನು ರದ್ದುಗೊಳಿಸಬೇಕಾಗಿರುತ್ತದೆ. ಆದರೆ ನೇಮಕಾತಿ ಊರ್ಜಿತವಾಗಿರುವುದನ್ನು ಗಮನಿಸಿದಲ್ಲಿ ಈ ಎಲ್ಲಾ ಪ್ರಕ್ರಿಯೆಗಳು ನಡೆದಿವೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಿಂದಲೇ ಬೆಳಕಿಗೆ ಬರಬೇಕಿದೆ ಎನ್ನುತ್ತಾರೆ  ಪರಿಷತ್ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು.

 

ಈ ಮಧ್ಯೆ ಬಿ ಎ ಬಸವರಾಜು ಅವರು ಈ ಎಲ್ಲಾ ಆರೋಪವನ್ನು ನಿರಾಕರಿಸಿದ್ದಾರೆ. ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿರುವ ಅವರು ‘ಪರಿಶಿಷ್ಟ ಜಾತಿ ಬಿಂದುವಿಗೆ ಎದುರಾಗಿ ಮುಂಬಡ್ತಿ ನೀಡಲಾಗಿರುತ್ತದೆ. ಕಾರಣವೆಂದರೆ ಆ ವರ್ಗದ ಅರ್ಹ ಅಭ್ಯರ್ಥಿಯು ಲಭ್ಯವಿಲ್ಲದ ಕಾರಣ ಈ ಗೊಂದಲ ಉಂಟಾಗಿದೆ. ಶಾಂತ ಅವರು ದೂರಿನಲ್ಲಿ ಪ್ರಸ್ತಾಪಿಸಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ,’ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ, ಆದರೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ನೇಮಕಾತಿ ಪಡೆದಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ.

SUPPORT THE FILE

Latest News

Related Posts