2 ಸಾವಿರ ಕೋಟಿ ಸಾಲ ಮಂಜೂರಾತಿ ಹಗರಣ; ಮೂರು ವರ್ಷವಾದರೂ ಶುರುವಾಗದ ತನಿಖೆ

Photo Credit;thehansindia

ಬೆಂಗಳೂರು; ಮಾಜಿ ಶಾಸಕ ಕೆ ಎನ್‌ ರಾಜಣ್ಣ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಸಕರು ಮತ್ತು ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್‌ ಬ್ಯಾಂಕ್‌ ಮೂಲಕ ಸಾಲ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾಗಿರುವ 2 ಸಾವಿರ ಕೋಟಿ ರು. ಹಗರಣ ತನಿಖೆ ನಡೆಸಬೇಕು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಎನ್‌ ಎಸ್‌ ಪ್ರಸನ್ನಕುಮಾರ್‌ ಅವರು 3 ವರ್ಷದ ಹಿಂದೆ ಬರೆದಿದ್ದ ಗೌಪ್ಯ ಪತ್ರ ಆಧರಿಸಿ ಸಹಕಾರ ಇಲಾಖೆಯು ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ.

 

ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ‘ದಿ ಫೈಲ್‌’ ಆರ್‌ಟಿಐಯಡಿ ಅರ್ಜಿ ಸಲ್ಲಿಸಿತ್ತು.  ಸಹಕಾರ ಇಲಾಖೆಯು ‘ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಡತವು (ಸಂಖ್ಯೆ ಸಿಒ 196ಸಿಎಲ್‌ಎಸ್‌ 2018) ಕಡತದಲ್ಲಿ ವ್ಯವಹರಿಸುತ್ತಿದ್ದು, ಕಡತವು ಪರಿಶೀಲನೆಯಲ್ಲಿರುವುದರಿಂದ ಮಾಹಿತಿ ಹಕ್ಕು ಅಧಿನಿಯ 2005ರ ಕಲಂ 8(1)(ಹೆಚ್‌) ಪ್ರಕಾರ ಮಾಹಿತಿಯನ್ನು ಪ್ರಸ್ತುತ ಒದಗಿಸಲು ಸಾಧ್ಯವಿರುವುದಿಲ್ಲ,’ ಎಂದು ಹಿಂಬರಹ ನೀಡಿದೆ. ಆದರೆ ಈ ಕಡತವು ಇನ್ನೂ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಕಚೇರಿಯಲ್ಲಿ ತಳವೂರಿದೆ ಎಂದು ತಿಳಿದು ಬಂದಿದೆ.

 

ಸಹಕಾರ ಇಲಾಖೆ ನೀಡಿರುವ ಹಿಂಬರಹದ ಪ್ರತಿ

 

ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿರುವ ಕೋಟ್ಯಂತರ ರುಪಾಯಿಗಳ ಅವ್ಯವಹಾರಗಳ ಸಂಬಂಧ ಈವರೆವಿಗೂ ನಡೆದಿರುವ ಎಲ್ಲಾ ವಿದ್ಯಮಾನಗಳ ಬಗ್ಗೆ ಸಿಬಿಐ ಮುಖೇನ ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್‌ನ ಶಾಸಕ ಸಾ ರಾ ಮಹೇಶ್‌ ಅವರು 351ರ ನಿಯಮದ ಮೇರೆಗೆ ಸೂಚನೆ ಸಲ್ಲಿಸಿರುವ ಬೆನ್ನಲ್ಲೇ ಸಹಕಾರ ಇಲಾಖೆಯ ನಿಬಂಧಕರು ಬರೆದಿದ್ದ ಗೌಪ್ಯ ಪತ್ರವು ಮುನ್ನೆಲೆಗೆ ಬಂದಿದೆ. ಈ ಗೌಪ್ಯ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಹಕಾರ ಸಂಘಗಳ ನಿಬಂಧಕರು ಬರೆದಿದ್ದ ಗೌಪ್ಯ ಪತ್ರದ ಪ್ರತಿ

ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್‌ ಬ್ಯಾಂಕ್‌ ನಿಯಮಬಾಹಿರವಾಗಿ ನೀಡಿರುವ 2,000 ಕೋಟಿ ರು. ಸಾಲದ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಬೇಕು ಎಂದು  ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟವು 2019ರ ಫೆ.4ರಂದು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿದ್ದ ದೂರು ಸಲ್ಲಿಸಿದ್ದರು.

‘ದೂರಿನಲ್ಲಿ ಹೇಳಿರುವ ಅಂಶಗಳು ಗಂಭೀರ ಸ್ವರೂಪದಲ್ಲಿವೆ. ಶಾಸಕರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ದಾಖಲೆಗಳಿಲ್ಲದೆಯೇ 2,000 ಕೋಟಿ ರು.ಮೊತ್ತದ ಸಾಲ ನೀಡಲಾಗಿದೆ. ನೀಡಿರುವ ಸಾಲ ವಸೂಲಿಯಾಗಿಲ್ಲ. ಬ್ಯಾಂಕ್‌ನ ಹಾಲಿ ಅಧ್ಯಕ್ಷ ರಾಜಣ್ಣ, ಬ್ಯಾಂಕ್‌ನ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್‌, ಮುಖ್ಯ ವ್ಯವಸ್ಥಾಪಕ ಜಂಗಮಪ್ಪ ಮತ್ತು ಇತರ ನಿರ್ದೇಶಕರು ಇದರಲ್ಲಿ ಭಾಗಿ ಆಗಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ವಿಸ್ತೃತವಾಗಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧಕರು, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರು ನಬಾರ್ಡ್‌ ಪ್ರತಿನಿಧಿಯನ್ನೊಳಗೊಂಡ ಸಮಿತಿ ರಚಿಸಿ ನವೆಂಬರ್‌30ರೊಳಗೆ ವರದಿ ಸಲ್ಲಿಸಲು ಸೂಚಿಸಬೇಕು,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಎನ್‌ ನಾಗಾಂಬಿಕಾದೇವಿ ಅವರಿಗೆ ಪತ್ರದಲ್ಲಿ ಕೋರಿದ್ದರು.

ಸಕ್ಕರೆ ಕಾರ್ಖಾನೆಗಳಿಗೆ ನಿಯಮಬಾಹಿರವಾಗಿ ಸಾಲ ನೀಡಿದೆ ಎಂದು ಅಪೆಕ್ಸ್‌ ಬ್ಯಾಂಕ್‌ ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟವು ಕೇಂದ್ರ ಹಣಕಾಸು ಸಚಿವಾಲಯ, ನಬಾರ್ಡ್‌ಮತ್ತು ಭಾರತೀಯ ರಿಸರ್ವ್‌ಬ್ಯಾಂಕ್‌ಗೆ 2019ರ ಫೆ. 4ರಂದು ದೂರು ಸಲ್ಲಿಸಿತ್ತು.

 

 

ಈ ದೂರು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಿಸರ್ವ್‌ಬ್ಯಾಂಕ್‌, ನಬಾರ್ಡ್‌ನ ಮುಖ್ಯ ವ್ಯವಸ್ಥಾಪಕರಿಗೆ 2019ರ ಏಪ್ರಿಲ್‌8 ರಂದು ಪತ್ರ ಮುಖೇನ ಸೂಚಿಸಿದ್ದರು.

 

ಆದರೆ ಹಿಂದಿನ ಮೈತ್ರಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

 

 

ಹಾಗೆಯೇ ‘ ಅಕ್ರಮ ಹಣ ವರ್ಗಾವಣೆ, ಅನುದಾನ ದುರುಪಯೋಗ, ಯೋಜನಾ ಸಾಲ ಮಂಜೂರು ಮಾಡುವಲ್ಲಿ ನಡೆದಿರುವ ನಿಯಮಬಾಹಿರ ಚಟುವಟಿಕೆಗಳು, ಸಕ್ಕರೆ ಕಾರ್ಖಾನೆಗಳಿಗೆ ನೀಡಿರುವ ಸಾಲ ವಸೂಲಾಗದಿರುವುದು, ಸಾಲದ ಮುಂಗಡಗಳನ್ನು ನೀಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು,’ ಎಂದು ಕೇಂದ್ರ ಹಣಕಾಸು ಸಚಿವಾಲಯವೂ 2019ರ ಏಪ್ರಿಲ್‌ 2ರಂದು ಭಾರತೀಯ ರಿಸರ್ವ್‌ಬ್ಯಾಂಕ್‌ಗೆ ಸೂಚಿಸಿತ್ತು.

 

 

ನಿಯಮಬಾಹಿರವಾಗಿ ಸಕ್ಕರೆ ಕಾರ್ಖಾನೆಗಳಿಗೆ 2,000 ಕೋಟಿ ರು.ಮೊತ್ತದಲ್ಲಿ ಸಾಲ ನೀಡಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್‌ ಬ್ಯಾಂಕ್‌ ಸೂಚಿಸಿತ್ತಾದರೂ ಸಹಕಾರ ಸಂಘಗಳ ಹಿಂದಿನ ರಿಜಿಸ್ಟ್ರಾರ್‌ಗಳು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.

 

ಕೆ ಎನ್ ರಾಜಣ್ಣ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಅಪೆಕ್ಸ್‌ ಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಮತ್ತು ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವು ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ನೂರಾರು ಕೋಟಿ ರು.ಮೊತ್ತದಲ್ಲಿ ಸಾಲ ವಿತರಣೆಯಾಗಿದೆ.

 

ಅದರಲ್ಲೂ ತುಂಬಾ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ವೊಂದೇ 1 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ಸಾಲ ಮಂಜೂರು ಮಾಡಿದೆ. ಮಂಜೂರಾಗಿದ್ದ ಒಟ್ಟು ಸಾಲ ಮೊತ್ತದ ಪೈಕಿ ಶೇ.50ರಷ್ಟು ಮೊತ್ತ ಅಪೆಕ್ಸ್‌ ಬ್ಯಾಂಕ್‌ಮಧ್ಯಸ್ಥಿಕೆ ಮತ್ತು ಖಾತರಿ ಮೇರೆಗೆ ನೀಡಲಾಗಿದೆ.

 

ರಾಜಣ್ಣ ಅವರು ಅಧ್ಯಕ್ಷರಾಗಿದ್ದ ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಕಾಂಗ್ರೆಸ್‌ ಮತ್ತು ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರದ ಅವಧಿಯಲ್ಲಿ ಸೂಪರ್‌ಸೀಡ್‌ ಆಗಿತ್ತು. ಈ ನಿರ್ಧಾರ ರಾಜಕೀಯಕರಣಗೊಂಡಿತ್ತಲ್ಲದೆ, ಕೆ ಎನ್‌ರಾಜಣ್ಣ ದಿಢೀರ್‌ಎಂದು ಕಾಂಗ್ರೆಸ್‌ ಪಾಳೆಯದಿಂದ ಜಿಗಿದು ಯಡಿಯೂರಪ್ಪ ಬಣದೊಂದಿಗೆ ಗುರುತಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

the fil favicon

SUPPORT THE FILE

Latest News

Related Posts