ಸಚಿವ ಮಾಧುಸ್ವಾಮಿ ಬೆಂಗಾವಲಿಗೆ ಸಂದೇಹಾಸ್ಪದ ನಡವಳಿಕೆ ಹೊಂದಿರುವ ಇನ್ಸ್‌ಪೆಕ್ಟರ್‌ ನಿಯೋಜನೆ

photo credit-vijayakarnataka

ಬೆಂಗಳೂರು; ಸಂದೇಹಾಸ್ಪದ ನಡವಳಿಕೆ ಹೊಂದಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಒಳಗಾಗಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ ಟಿ ರಮೇಶ ಅವರನ್ನು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರಿಗೆ ಬೆಂಗಾವಲು, ಭದ್ರತಾ ವ್ಯವಸ್ಥೆಗೆ ನಿಯೋಜಿಸಿರುವುದು ಇದೀಗ ಬಹಿರಂಗವಾಗಿದೆ.

 

ಪ್ರಕರಣವೊಂದರಲ್ಲಿ ಅರ್ಜಿದಾರರ ಸ್ನೇಹಿತರೊಬ್ಬರಿಂದ 2 ಲಕ್ಷ ರು.ಗಳನ್ನು ನೇರವಾಗಿ ಪಡೆದು ಮಾಲು ಪಟ್ಟಯಲ್ಲಿ ನಮೂದಿಸದೆಯೇ ಬೇರೊಬ್ಬರ ಕಡೆಯಿಂದ ಹಾಜರುಪಡಿಸಿ ಅಮಾನತ್ತು ಪಡಿಸುವ ಮೂಲಕ ಕೆ ಟಿ ರಮೇಶ್‌ ಅವರು ಸಂದೇಹಾಸ್ಪದ ನಡವಳಿಕೆ ಪ್ರದರ್ಶಿಸಿದ್ದರು ಎಂದು ನಾಗರಿಕ ಹಕ್ಕುಗಳ ಜಾರಿ ನಿದೇಶನಾಲಯದ ಪೊಲೀಸ್‌ ಅಧೀಕ್ಷಕ ಕೆ ಪರಶುರಾಮ ಅವರು 2021ರ ಡಿಸೆಂಬರ್‌ ನಲ್ಲಿ ಪತ್ರ ಬರೆದಿದ್ದರು.

 

ಈ ಪತ್ರ ಬರೆದು ವರ್ಷವಾದರೂ ಪೊಲೀಸ್‌ ಇಲಾಖೆ ಇದುವರೆಗೂ ಕ್ರಮ ವಹಿಸಿಲ್ಲ. ಆದರೆ ಇದೇ ಪೊಲೀಸ್‌ ಇನ್ಸ್‌ಪೆಕ್ಟರ್‌ ರಮೇಶ್‌ ಅವರನ್ನು ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ ಅವರಿಗೆ ಬೆಂಗಾವಲು ಮತ್ತು ಭದ್ರತಾ ವ್ಯವಸ್ಥೆಗೆ ನಿಯೋಜಿಸಿರುವುದು ಅಚ್ಚರಿ ಮೂಡಿಸಿದೆ.

 

ಈ ಕುರಿತು ಲಂಚಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ಭಟ್ಟರಹಳ್ಳಿ ಎಂಬುವರು ಮುಖ್ಯಮಂತ್ರಿ, ಗೃಹ ಸಚಿವ, ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವರಿಗೆ ದೂರರ್ಜಿ ಸಲ್ಲಿಸಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲಂಚಮುಕ್ತ ಕರ್ನಾಟಕ ವೇದಿಕೆ ನೀಡಿರುವ ದೂರಿನ ಪ್ರತಿ

 

‘ಸಂದೇಹಾಸ್ಪದ ಮತ್ತು ನಿಯಮಬಾಹಿರವಾಗಿ ಕರ್ತವ್ಯ ನಿರ್ವಹಿಸಿರುವ ನಡವಳಿಕೆ ಇರುವ, ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯತನದಿಂದ ಪೊಲೀಸ್‌ ಇಲಾಖೆಯ ಘನತೆಗೆ ಕುಂದುಂಟು ಮಾಡಿರುವ ಕೆ ಟಿ ರಮೇಶ್‌ ಅವರು ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದರೂ ನಿಯಮಬಾಹಿರವಾಗಿ ಪೊಲೀಸ್‌ ಸೇವೆಯಲ್ಲಿ ಮುಂದುವರೆಸಲಾಗಿದೆ,’ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿ ಪ್ರವಾಸದ ಸಂದರ್ಭದಲ್ಲಿ ಕೆ ಟಿ ರಮೇಶ್‌ ಅವರು ಬೆಂಗಾವಲು ರಕ್ಷಣೆಗೆ ನಿಯೋಜಿಸಿರುವುದು ಅತಿ ದೊಡ್ಡ ಭದ್ರತಾ ಲೋಪವಾಗಿದೆ ಎಂದು ದೂರಿನಲ್ಲಿ ಆರೋಪಿಸಿರುವ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಈ ಅಧಿಕಾರಿಯನ್ನು ಸರ್ಕಾರಿ ಸೇವೆಯಿಂದಲೇ ವಜಾಗೊಳಿಸಬೇಕು ಮತ್ತು ಸಚಿವರಿಗೆ ಸೂಕ್ತ ಬದಲಿ ಭದ್ರತಾ ವ್ಯವಸ್ಥೆಗೆ ನಿಯೋಜಿಸಬೇಕು ಎಂದು ದೂರಿನಲ್ಲಿ ಹೇಳಿದ್ದಾರೆ.

 

ಅಲ್ಲದೆ ಇದೇ ಕೆ ಟಿ ರಮೇಶ್‌ ಅವರ ವಿರುದ್ಧದ ಲಂಚ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ಮಾಡಿದ್ದರು. ಆ ಸಂದರ್ಭದಲ್ಲಿ ಹುಳಿಯಾರು ಠಾಣೆಯ 2021ರ ಆಗಸ್ಟ್‌ 4ರಂದು ಎಫ್‌ಐಆರ್‌ (ನಂ 08/2021) ದಾಖಲಾಗಿತ್ತು. ಈತನ ವಿರುದ್ಧ ಸೂಕ್ತ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿಯು ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದು 7 ತಿಂಗಳಾದರೂ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಕೇಂದ್ರ ವಲಯದ ಐಜಿಪಿ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂಬ ಸಂಗತಿಯು ದೂರರ್ಜಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts