ಲೆಕ್ಕಪರಿಶೋಧನೆಗೆ ಕುಲಪತಿಗಳಿಂದಲೇ ಅಸಹಕಾರ, ಬೇಜವಾಬ್ದಾರಿ; ಕಾಗದಪತ್ರಗಳ ಸಮಿತಿ ವರದಿ

ಬೆಂಗಳೂರು; ವಿಶ್ವವಿದ್ಯಾಲಯಗಳಿಗೆ ನೀಡಿರುವ ಕೋಟ್ಯಂತರ ರು ಮೊತ್ತದ ಅನುದಾನವು ಸದ್ಬಳಕೆಯಾಗಿದೆಯೇ ಇಲ್ಲವೇ ಎಂಬ ಕುರಿತು ಲೆಕ್ಕ ಪರಿಶೋಧನೆ ಮಾಡಲು ತೆರಳುವ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿಗಳಿಗೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಅಸಹಕಾರ ತೋರುತ್ತಿದ್ದಾರೆ. ಮತ್ತು ಕೆಲ ವಿಶ್ವವಿದ್ಯಾಲಯಗಳು ಲೆಕ್ಕಪತ್ರಗಳನ್ನು ತಪಾಸಣೆಗೆ ನೀಡದೇ ಬೇಜವಾಬ್ದಾರಿಯಿಂದ ವರ್ತಿಸಿರುವುದು ಇದೀಗ ಬಹಿರಂಗವಾಗಿದೆ.

 

ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಬೆಂಗಳೂರು, ತುಮಕೂರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯವು ತನ್ನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ವಿಧಾನಮಂಡಲಕ್ಕೆ ಸಕಾಲದಲ್ಲಿ ಸಲ್ಲಿಸದೆಯೇ ವಿಳಂಬ ಧೋರಣೆ ಪ್ರದರ್ಶಿಸಿವೆ.

 

ಈ ಕುರಿತು ಕರ್ನಾಟಕ ವಿಧಾನಸಭೆಯ ವಿಧಾನಮಂಡಲದ ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿಯು 2020-21ನೇ ಸಾಲಿಗೆ ಸಂಬಂಧಿಸಿದ ಸಲ್ಲಿಸಿರುವ 37ನೇ ವರದಿಯಲ್ಲಿ ವಿಶ್ವವಿದ್ಯಾಲಯಗಳ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಾಗದಪತ್ರಗಳ ಸಮಿತಿ ವರದಿ

 

ತುಮಕೂರು ವಿ ವಿ ಕುಲಪತಿ ಅಸಹಕಾರ

 

2016-17ರಿಂದ 2019-20ರವರೆಗಿನ ಲೆಕ್ಕ ಪರಿಶೋಧನೆ ನಡೆಸಲು ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಅಸಹಕಾರ ತೋರಿಸಿದ್ದರು ಎಂಬ ಅಂಶ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 2017-18ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಅಂತಿಮಗೊಳಿಸಲು ಕೆಲವೊಂದು ಆಂತರಿಕ ಸಮಸ್ಯೆಗಳು ಉಂಟಾಗಿವೆ ಎಂದು ಹೇಳಿದ್ದ ಲೆಕ್ಕಕಪತ್ರ ಇಲಾಖೆಯ ಹೆಚ್ಚುವರಿ ನಿರ್ದೇಶಕರು 2019ರ ಜುಲೈ 19ರಂದು ತೆರಳಿದ್ದ ವೇಳೆಯಲ್ಲಿ ಉಪ ಕುಲಪತಿಗಳು ಸಹಕಾರ ನೀಡಲಿಲ್ಲ. ಅವರು ಯಾವುದೇ ಕಾರಣ ನೀಡದೇ ಸಭೆಯಿಂದ ನಿರ್ಗಮಿಸಿದರು ಎಂಬ ಅಂಶವು ವರದಿಯಲ್ಲಿ ವಿವರಿಸಲಾಗಿದೆ.

 

‘2017-18ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಕೈಗೊಂಡಿರುವ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ತಿಳಿಸಿ ಹೋಗಿದ್ದರು. ಆದರೂ ವಿಶ್ವವಿದ್ಯಾಲಯ ಉಪ ಕುಲಪತಿಗಳು ಅಸಹಕಾರ ಮಾಡಿರುತ್ತಾರೆ. ಈ ಕುರಿತು ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು 2017-18ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಮಾಡಲು ಹೋಗಿದ್ದಾಗ ಎದುರಾಗಿದ್ದ ತೊಡಕನ್ನು ಸಮಿತಿ ಮುಂದೆ ತೋಡಿಕೊಂಡಿದ್ದಾರೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ವಿಶ್ವವಿದ್ಯಾಲಯ ಉಪ ಕುಲಪತಿಗಳು ಅಸಹಕಾರ ನಡವಳಿ ಕುರಿತು ಗಂಭೀರವಾಗಿ ಪರಿಗಣಿಸಿರುವ ಸಮಿತಿಯು ರಾಜ್ಯಪತ್ರ ಲೆಕ್ಕಪತ್ರ ಇಲಾಖೆಯವರು ಲೆಕ್ಕ ಪರಿಶೋಧನೆ ಮಾಡಲು ತೆರಳಿದಾಗ ಅಸಹಕಾರ ನೀಡುವುದು ವಿಶ್ವವಿದ್ಯಾಲಯಕ್ಕೆ ಶೋಭೆ ತರುವಂತಹದ್ದಲ್ಲ. ಈ ರೀತಿಯ ನಡವಳಿಕೆ ಸೂಕ್ತ ಹಾಗೂ ಸಮಂಜಸವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ಲೆಕ್ಕಪತ್ರಗಳ ತಪಾಸಣೆಗೆ ನೀಡದ ಮಂಗಳೂರು ವಿವಿ

 

ಮಂಗಳೂರು ವಿಶ್ವವಿದ್ಯಾಲಯವು 2020-21ನೇ ಸಾಲಿನ ವಾರ್ಷಿಕ ವರದಿ ಮತ್ತು 2017-18ರಿಂದ 2020-21ನೇ ಸಾಲಿನವರೆಗಿನ ಲೆಕ್ಕಪರಿಶೋಧನಾ ವರದಿಗಳನ್ನು ವಿಧಾನಮಂಡಲಕ್ಕೆ ಸಲ್ಲಿಸದಿರುವ ಕುರಿತು ಸಮಿತಿಯು ಇಲಾಖಾಧಿಕಾರಿಗಳಿಂದ ಚರ್ಚಿಸಿದೆ. ‘2018-19ನೇ ಸಾಲಿನ ಲೆಕ್ಕಪತ್ರಗಳನ್ನು ಪುನರ್‌ ಪರಿಶೀಲನೆ ಮಾಡಲಾಗುತ್ತಿದೆ. 2019-20ನೇ ಸಾಲಲಿನ ಲೆಕ್ಕಪತ್ರಗಳನ್ನು ಮಂಗಳೂರು ವಿಶ್ವವಿದ್ಯಾಲಯದವರು ನೀಡಿರುತ್ತಾರೆ. ಆದರೆ 2020-21ನೇ ಸಾಲಿನ ಲೆಕ್ಕಪತ್ರಗಳನ್ನು ತಪಾಸಣೆತೆ ನೀಡಿರುವುದಿಲ್ಲ,’ ಎಂದು ಸಭೆಯಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆಯವರು ಸಮಿತಿಗೆ ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯವು ಕಳೆದ 4 ವರ್ಷಗಳ ವಾರ್ಷಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ. ಇದು ವಿಶ್ವವಿದ್ಯಾಲಯದ ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿಯು ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಸಲ್ಲಿಸುವುದು ಇಲಾಖಾಧಿಕಾರಿಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ. ಬಾಕಿ ಇರುವ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ಇಲಾಖಾಧಿಕಾರಿಗಳು ಸಮಿತಿಯಲ್ಲಿ ಒಪ್ಪಿಕೊಂಡಂತೆ 3 ತಿಂಗಳೊಳಗಾಗಿ ವಿಧಾನಮಂಡಲಕ್ಕೆ ಸಲ್ಲಿಸಬೇಕು ಎಂದು ಸಮಿತಿಯು ಸೂಚಿಸಿದೆ.

the fil favicon

SUPPORT THE FILE

Latest News

Related Posts