ಬೆಂಗಳೂರು; ಕೋವಿಡ್ ಸಂದರ್ಭದಲ್ಲಿ ರಾಜ್ಯವು ಶೇ 7.2ರಷ್ಟು ದರದಲ್ಲಿ ಬೆಳವಣಿಗೆ ಸಾಧಿಸಿದೆಯಾದರೂ ಇದೇ ಅವಧಿಯಲ್ಲಿ ಕೈಗಾರಿಕೆ ವಲಯವು ಸೇವೆ ಮತ್ತು ಕೃಷಿ ವಲಯಕ್ಕೆ ಹೋಲಿಸಿದರೆ ಸಾಕಷ್ಟು ಹಿಂದೆ ಬಿದ್ದಿದೆ ಎಂದು 2021-22ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆ ವಿಶ್ಲೇಷಿಸಿದೆ.
ಕೋವಿಡ್-19 ಸಾಂಕ್ರಾಮಿಕದ ಪ್ರಭಾವವನ್ನು ರಾಜ್ಯದ ಆರ್ಥಿಕ ವ್ಯವಸ್ಥೆಯ ಎಲ್ಲಾ ವಲಯಗಳ ಮೇಲೂ ಕಾಣಬಹುದು ಎಂದು ವಿವರಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಆರೋಗ್ಯ ಸೇವೆಯ ಹೆಚ್ಚಿನ ಖರ್ಚುಗಳು, ಉಳಿತಾಯದ ಹಣದ ಕರಗುವಿಕೆ ಮತ್ತು ಅನಿರೀಕ್ಷಿತ ಖರ್ಚುಗಳು ನಾಗರಿಕರನ್ನು ಸಾಕಷ್ಟು ಹೈರಾಣಾಗಿಸಿರುತ್ತವೆ ಎಂದು ಹೇಳಿದೆ.
ಕೈಗಾರಿಕೆ ವಲಯದಲ್ಲಿ ಕರ್ನಾಟಕ ಸಾಕಷ್ಟು ಹಿಂದುಳಿದಿದೆ ಎಂದು ಅಂಕಿ ಅಂಶಗಳನ್ನು ಒದಗಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಕರ್ನಾಟಕದ ಉದ್ಯೋಗ ಬೆಳವಣಿಗೆ ದರ ತೀವ್ರ ಕುಸಿತವನ್ನು ಕಂಡಿರುತ್ತದೆ ಎಂದು ವಿವರಿಸಿದೆ. ಕಳೆದ 5 ವರ್ಷಗಳ ಬೆಳವಣಿಗೆಯು ಶೇ. 6.1 ಸಿಎಜಿಆರ್ ಇದ್ದು ಇದೇ ಅವಧಿಯಲ್ಲಿ ಕೃಷಿ ಶೇ. 16.6ಷ್ಟು ಇದ್ದು ಸಿಎಜಿಆರ್ ಮತ್ತು ಸೇವಾ ವಲಯವು ಶೇ. 11.6ರಷ್ಟು ಸಿಎಜಿಆರ್ ಹೊಂದಿದೆ. ಉದ್ಯೋಗ ಕುಸಿತಕ್ಕೆ ಇದು ಕೂಡ ಒಂದು ಪ್ರಮುಖ ಕಾರಣ ಎಂದು ವಿಶ್ಲೇಷಿಸಿದೆ.
ಕರ್ನಾಟಕದ ಜಿಎಸ್‌ವಿಎಯಲ್ಲಿ ಕೈಗಾರಿಕೆ ಶೇ. 20.3ರಷ್ಟು ಕೊಡುಗೆಯನ್ನು ನೀಡಿದರೆ ಗುಜರಾತ್ ರಾಜ್ಯದಲ್ಲಿ ಇದರ ಕೊಡುಗೆ ಶೇ. 48.2, ತಮಿಳುನಾಡಿನಲ್ಲಿ ಶೇ. 33ರಷ್ಟು ಮತ್ತು ಮಹಾರಾಷ್ಟ್ರ ದಲ್ಲಿ ಶೇ. 28.4ರಷ್ಟಿದೆ. ಹಾಗಾಗಿ ಸೇವಾ ವಲಯದಲ್ಲಿ ಉತ್ತಮವಾದ ಸಾಧನೆ ನಾವು ನೋಡುತ್ತಿದ್ದರೂ ಕೈಗಾರಿಕೆ ವಲಯದಲ್ಲಿ ಗಮನಾರ್ಹವಾದ ಸಾಧನೆಯಾಗಿಲ್ಲ ಎಂಬ ಅಂಶ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
‘ರಾಜ್ಯದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಪ್ರಸ್ತುತ ಸ್ಥಿತಿ ಮತ್ತು ಕೈಗಾರಿಕೆಗಳ ಮೇಲೂ ಕೋವಿಡ್ ವ್ಯತಿರಿಕ್ತ ಪರಿಣಾಮ ಬೀರಿದೆ. ಬಂಡವಾಳ ಅಲಭ್ಯತೆ, ಹೆಚ್ಚಿನ ಬಡ್ಡಿಯೊಂದಿಗೆ ಸಾಲ, ಸಾಲ ನೀಡುವಿಕೆಯಲ್ಲಿ ಕನಿಷ್ಠ ಆದ್ಯತೆ, ಅಸಮರ್ಪಕ ಷೇರು ಬಂಡವಾಳ, ಕನಿಷ್ಠ ಉತ್ಪಾದಕತೆ ಹಾಗೂ ಈಡ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕದಡಿ 2019ರಲ್ಲಿ 17ಕ್ಕೆ ಶ್ರೇಣಿ ಇಳಿಕೆ ಮುಂತಾದ ಸವಾಲುಗಳನ್ನು ಎದುರಿಸುತ್ತಿರುವ ಈ ಉದ್ದಿಮೆಗಳಿಗೆ ಪುನಶ್ಚೇತನ ನೀಡಲು ಹೊಸ ಆಯಾಮಗಳೊಂದಿಗೆ ಚಿಂತನೆ ಅಗತ್ಯವಿದೆ,’ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
‘ಕೋವಿಡ್ ಸಂದರ್ಭದಲ್ಲಿ ಕೈಗಾರಿಕೆ ವಲಯವು ಸೇವೆ ಮತ್ತು ಕೃಷಿ ವಲಯಕ್ಕೆ ಹೋಲಿಸಿದರೆ ಸಾಕಷ್ಟು ಹಿಂದೆ ಬಿದ್ದಿದೆ. ಈ ವಲಯವು ಶೇ. 6.1ರ ಸಿಎಜಿಆರ್ ಹೊಂದಿದೆ. ಈ ವಲಯಕ್ಕೆ ನೀಡಿರುವ ಬೆಂಬಲ ಮತ್ತು ಸಹಾಯ ಅಸಮರ್ಪಕವಾಗಿರುವುದನ್ನು ಕಾಣಬಹುದು. ಕೃಷಿ ವಲಯದಲ್ಲಿರುವ ಹೆಚ್ಚುವರಿ ಕಾರ್ಮಿಕರನ್ನು ಕೌಶಲ್ಯವನ್ನು ನೀಡಿ ಕೈಗಾರಿಕೆ ವಲಯಕ್ಕೆ ವರ್ಗಾಯಿಸುವ ಮತ್ತು ಕೈಗಾರಿಕೆ ವಲಯಕ್ಕೆ ಅಗತ್ಯವಿರುವ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಅಗತ್ಯವಿದೆ,’ ಎಂದು ಅಭಿಪ್ರಾಯಿಸಿದೆ.
ಕೋವಿಡ್ 19 ಸಾಂಕ್ರಾಮಿಕದ ಪೂರ್ವದಲ್ಲಿ ಅಂದರೆ 2019-20ನೇ ಸಾಲಿನಲ್ಲಿ ಸೇವಾ ವಲಯವು ಶೇ.66.3ರಷ್ಟು, ಕೈಗಾರಿಕೆ ವಲಯವು ಶೇ. 21.3ರಷ್ಟು ಮತ್ತು ಕೃಷಿ ವಲಯವು ಶೇ. 12.3ರಷ್ಟು ಕೊಡುಗೆ ನೀಡಿರುತ್ತದೆ. ಕೋವಿಡ್ 19ರ ಸಾಂಕ್ರಾಮಿಕದಿಂದಾಗಿ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಕೈಗಾರಿಕೆ ವಲಯದ ಮೇಲಾಗಿದೆ. 2020-21ನೇ ಸಾಲಿನಲ್ಲಿ ಕೈಗಾರಿಕೆ ವಲಯದ ಪಾಲು ಶೇ. 19.4ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಸೇವಾ ವಲಯದ ಪಾಲು ಶೇ. 66.3 ಮತ್ತು ಕೃಷಿ ವಲಯದ ಪಾಲು ಶೇ. 14.3ಕ್ಕೆ ಏರಿಕೆಯಾಗಿದೆ.
20.5 ಲಕ್ಷ ಕೋಟಿಗೇರುವ ಆಂತರಿಕ ಉತ್ಪನ್ನ
2020-21ನೇ ಸಾಲಿನಲ್ಲಿ ತಲಾವಾರು ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು 2.6 ಲಕ್ಷದಿಂದ ಶೇ. 17.4ರ ಬೆಳವಣಿಗೆಯೊಂದಿಗೆ 2021-22ನೇ ಸಾಲಿಗೆ 3.05 ಲಕ್ಷಕ್ಕೆ ಏರಿಕೆಯಾಗಿದೆ. ಈ ಬೆಳವಣಿಗೆಯು 2020-21ನೇ ನೆ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶೇ. 6.5ಕ್ಕೆ ಇಳಿಕೆಯಾಗಿದೆ. 2021-22ನೇ ಸಾಲಿನ ಮುನ್ಸೂಚನಾ ಅಂದಾಜುಗಳಂತೆ ರಾಜ್ಯದ ಒಟ್ಟು ಅಂತರಿಕ ಉತ್ಪನ್ನ ಪ್ರಸಕ್ತ ಬೆಲೆಗಳಲ್ಲಿ 2020-21ನೇ ಸಾಲಿನ 17.31 ಲಕ್ಷ ಕೋಟಿಗಳಿಗೆ ಹೋಲಿಸಿದರೆ 2021-22ನೇ ಸಾಲಿಗೆ 20.5 ಲಕ್ಷ ಕೋಟಿಗಳಾಗುವ ನಿರೀಕ್ಷೆ ಇದೆ.
ಇದು ಭಾರತದ ಒಟ್ಟು ಆಂತರಿಕ ಉತ್ಪನ್ನವಾದ 232.15 ಲಕ್ಷ ಕೋಟಿಗೆ ಶೇ.8.8ರಷ್ಟು ಕೊಡುಗೆ ನೀಡಿದೆ. 2020-21ನೇ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿ ರಾಜ್ಯವು ಶೇ. 7.2ರಷ್ಟು ದರದಲ್ಲಿ ಬೆಳವಣಿಗೆಯನ್ನು ಪ್ರಸಕ್ತ ಬೆಲೆಗಳಲ್ಲಿ ಸಾಧಿಸಿದೆ. ಆಧರೆ ಇದೇ ಸಂರ್ಭದಲ್ಲಿ ಭಾರತದ ಮುನ್ಸೂಚನಾ ಅಂದಾಜುಗಳಂತೆ ಶೇ. (-) 3ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕುಸಿತದಿಂದಾಗಿ 17.31 ಲಕ್ಷ ಕೋಟಿ ಇದ್ದ ಅರ್ಥ ವ್ಯವಸ್ಥೆಯು 2021-22ನೇ ಸಾಲಿನಲ್ಲಿ ಶೇ. 18.4 ಬೆಳವಣೀಗೆಯೊಂದಿಗೆ 29.49 ಲಕ್ಷ ಕೋಟಿಗಳಾಗುತ್ತವೆ. 2016-17ನೇ ಸಾಲಿನಲ್ಲಿ ಶೇ. 15.5, 2017-18ರಲ್ಲಿ ಶೇ. 10.4, 2018-19ರಲ್ಲಿ ಸೇ. 10.7, 2019-20ರಲ್ಲಿ ಶೇ. 10ರ ಒಳೆ ಅಂದರೆ ಶೇ. 9.4ರಷ್ಟು ಬೆಳವಣಿಗೆ ಹೊಂದಿರುತ್ತದೆ. 2017-22ರ 5 ವರ್ಷದ ಅವಧಿಯಲ್ಲಿ ರಾಜ್ಯದ ಆಂತರಿಕ ಉತ್ಪನ್ನವು ಶೇ.11.2ರಷ್ಟು ಸಿಎಜಿಆರ್ ಹೊಂ ದಿದೆ ಎಂಬ ಅಂಶ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
‘2021ರ ಕೊನೆಯಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಂಡು 2022ರಲ್ಲಿ ಅದೇ ನಡೆಯನ್ನು ಮುಂದುವರೆಸಿದೆ. ಆದರೂ ಈಗಾಗಲೇ ನಿಗದಿಗೊಳಿಸಿಕೊಳ್ಳಲಾಗಿದ್ದ ಆರ್ಥಿಕ ಗುರಿಗಳು ಹಿಂಜರಿಕೆ ಅನುಭವಿಸಿರುವುದರಿಂದ ರಾಜ್ಯದ ಬಜೆಟ್‌ನ್ನು ಮರು ಹೊಂದಾಣಿಕೆ ಮಾಡಿಕೊಂಡು ಲಭ್ಯವಿರುವ ದುಡಿಯುವ ವರ್ಗದ ಶ್ರಮವನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ದಶಕದಲ್ಲಿ 1 ಟ್ರಿಲಿಯನ್ ಯುಎಸ್‌ಡಿ ಅರ್ಥ ವ್ಯವಸ್ಥೆ ಸಾಧಿಸಲು ಕಾರ್ಯಪ್ರವೃತ್ತವಾಗಬೇಕಿದೆ,’ ಎಂದು ಅಭಿಪ್ರಾಯಿಸಿದೆ.