ಬೆಂಗಳೂರು; 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯಲ್ಲಿ ಪ್ರಶ್ನೆಪತ್ರಿಕೆ ಮುದ್ರಣ, ಗೌಪ್ಯ ಕಾರ್ಯ ವೆಚ್ಚದ ಹೆಸರಿನಲ್ಲಿ 10,01,98,217 ರು. ವೆಚ್ಚ ಮಾಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಗೌಪ್ಯ ವೆಚ್ಚಗಳ ಪಾವತಿಗೆ ಸಂಬಂಧಿಸಿದಂತೆ ಶಾಸನಬದ್ಧ ಕಟಾವಣೆ ಹೊರತುಪಡಿಸಿ 9,78,31,883 ರು ಪಾವತಿಯಾಗಿರುವ ಬಿಲ್‌ಗಳು ನಿಖರವಾಗಿಲ್ಲ ಎಂಬ ಅಂಶವನ್ನು ಲೆಕ್ಕಪರಿಶೋಧಕರು ಬಹಿರಂಗಪಡಿಸಿದ್ದಾರೆ.
2020-21ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿಯ ಲೆಕ್ಕಪರಿಶೋಧನೆ ವರದಿಯು ಮಂಡಳಿಯು ಮಾಡಿರುವ ಹಲವು ವೆಚ್ಚಗಳಿಗೆ ಸಂಬಂಧಿಸಿದಂತೆ ಪಾವತಿಯಾಗಿರುವ ಬಿಲ್‌ಗಳ ನಿಖರತೆ ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ. ಈ ಅವಧಿಯಲ್ಲಿ ಎಸ್ ಸುರೇಶ್‌ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದರು.
ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಗೌಪ್ಯ ಕಾರ್ಯಗಳ ವೆಚ್ಚಕ್ಕೆ ಸಂಬಂಧಿಸಿದಂತೆ 2020ರ ಜುಲೈ 8ಕ್ಕೆ ಕ್ರಮ ಸಂಖ್ಯೆ 1ರಲ್ಲಿ 7,26,08, 754 ರು. ಇದ್ದರೆ ಈ ಪೈಕಿ ಜಿಎಸ್‌ಟಿ 14,52,176 ಮತ್ತು ಟಿಡಿಎಸ್ 14,52,176 ರು ಕಡಿತಗೊಳಿಸಿದ ನಂತರ 6, 97, 04, 402 ರು. ನಿವ್ವಳ ಮೊತ್ತವಿತ್ತು. ಅದೇ ರೀತಿ ಕ್ರಮ ಸಂಖ್ಯೆ 2ರಲ್ಲಿ 2020ರ ಜುಲೈ 8ರಂದು 91,32,440 ರು.ಗೆ 1,82,650 ರು. ಜಿಎಸ್‌ಟಿ ಮತ್ತು 1,82,650 ರು ಟಿಡಿಎಸ್ ಭರಿಸಿದ ನಂತರ 87,67,140 ನಿವ್ವಳ ಮೊತ್ತವಿತ್ತು. 2020ರ ಆಗಸ್ಟ್ 26ರಂದು 46,72,883 ರು.ಗೆ ಸಂಬಂಧಿಸಿದಂತೆ 93,458 ರು. ಜಿಎಸ್‌ಟಿ ಮತ್ತು 83,458 ರು. ಟಿಡಿಎಸ್ ಕಡಿತಗೊಳಿಸಿದ ನಂತರ 44,85,967 ರು. ನಿವ್ವಳ ಮೊತ್ತವಿತ್ತು. 2020ರ ಅಕ್ಟೋಬರ್ 1ರಂದು 1,54,94,140 ರು.ಗೆ 3,09,983 ರು ಜಿಎಸ್‌ಟಿ, 3,09,983 ರು. ಟಿಡಿಎಸ್ ಕಡಿತಗೊಳಿಸಿದ ನಂತರ 1,48, 74, 373 ರು.ನಿವ್ವಳ ಮೊತ್ತವಿತ್ತು ಎಂಬುದು ಲೆಕ್ಕಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
‘ಗೌಪ್ಯ ಕಾರ್ಯಗಳಿಗೆ ಮಾಡಿರುವ ವೆಚ್ಚಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಲೆಕ್ಕಪರಿಶೋಧನೆಯಿಂದ ವಿನಾಯಿತಿ ಇರುವುದರಿಂದ ಲೆಕ್ಕ ತನಿಖೆಗೆ ಮಂಡಳಿಯು ಕೋರಿತ್ತು. ಈ ಗೌಪ್ಯ ವೆಚ್ಚಗಳ ಪಾವತಿಗೆ ಸಂಬಂಧಿಸಿದಂತೆ ಶಾಸನಬದ್ಧ ಕಟಾವಣೆಗಳನ್ನು ಹೊರತುಪಡಿಸಿ ಬಾಕಿ ಮೊತ್ತ 9,78,31,983 ರು ಪಾವತಿಯಾಗಿರುವ ಬಿಲ್‌ಗಳ ಪಾವತಿಯ ಬಗ್ಗೆ ನಿಖರತೆ ಸ್ಪಷ್ಟಪಡಿಸಲು ಸಾಧ್ಯವಾಗಿರುವುದಿಲ್ಲ,’ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇನ್ನು 2020-21ನೇ ಸಾಲಿಗೆ ಸಂಬಂಧಿಸಿದಂತೆ ಎಸ್‌ಎಸ್‌ಎಲ್‌ಸಿ ಮಂಡಳಿಯು ಸ್ವೀಕರಿಸಿರುವ ಶುಲ್ಕ (ಬ್ಯಾಂಕ್ ಚಲನ್) ಹಾಗೂ ಪರೀಕ್ಷೆ ಕಟ್ಟಿರುವ ವಿದ್ಯಾರ್ಥಿಗಳ ಸಂಖ್ಯೆ, ಶಾಲೆ ವಿವರಗಳನ್ನು ಮಂಡಳಿಯು ತಾಳೆ ಮಾಡುತ್ತಿಲ್ಲ ಮತ್ತು ಸಮನ್ವಯಗೊಳಿಸುತ್ತಿಲ್ಲ ಎಂಬ ಅಂಶ ಲೆಕ್ಕಪರಿಶೋಧನೆ ವರದಿಯಿಂದ ಗೊತ್ತಾಗಿದೆ.
‘ಮಂಡಳಿಯಲ್ಲಿ ಲೆಕ್ಕವಿಭಾಗ ಮತ್ತು ಕಂಪ್ಯೂಟರ್ ವಿಭಾಗಗಳು ಪ್ರತ್ಯೇಕ ರೀತಿ ಕಾರ್ಯನಿರ್ವಹಿಸುತ್ತಿದೆ. ಹಾಗೂ ವ್ಯತ್ಯಾಸಗಳು ಕಂಡು ಬರುತ್ತದೆ. ಸ್ವೀಕೃತಿ ಮೊತ್ತ, ವಿದ್ಯಾರ್ಥಿಗಳ ಸಂಖ್ಯೆ, ವಿವರಗಳ ಸಮನ್ವಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ, ಶುಲ್ಕ ಕಟ್ಟಿದ , ಮರು ಪಾವತಿ ಬಗ್ಗೆ ವಿವರಗಳ ಬಗ್ಗೆ ಪೂರ್ಣ ಮಾಹಿತಿ ದೊರಕಿರುವುದಿಲ್ಲ, ; ಎಂದು ವರದಿಯಲ್ಲಿ ಹೇಳಲಾಗಿದೆ.
ಹಾಗೆಯೇ ಮುಖ್ಯ ಪರೀಕ್ಷೆ, ಪೂರಕ ಪರೀಕ್ಷೆಗಳಿಗೆ ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆ, ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಸಂಖ್ಯೆ, ಸಾಮಾನ್ಯ ವರ್ಗ (ಶುಲ್ಕ ವಸೂಲಾತಿ), ಎಸ್‌ಸಿ ಎಸ್ ಟಿ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ವಿವರಗಳನ್ನು ಸರಿಯಾಗಿ ದಾಖಲಿಸಿಲ್ಲ. ಗಣಕ ಯಂತ್ರ ವಿಭಾಗದಿಂದ ನೋಂದಣಿಯಾದ ವಿದ್ಯಾರ್ಥಿಗಳ ಮತ್ತು ಶಾಲೆ ವಿವರಗಳ ಮಾಹಿತಿಯನ್ನು ಪೂರ್ಣರೀತಿಯಲ್ಲಿ ನಿರ್ವಹಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಮೌಲ್ಯಮಾಪಕರಿಗೆ ಸಂಭಾವನೆ, ದಿನಭತ್ಯೆ, ಪ್ರಯಾಣ ಭತ್ಯೆಗಳನ್ನು ವಿತರಿಸುವಾಗಲೂ ಹಲವು ನ್ಯೂನತೆಗಳನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ. ಮಂಡಳಿಯ ಅಧಿಕಾರಿಗಳು, ನೌಕರರುಗಳೀಗೆ ಪ್ರಯಾಣ ಭತ್ಯೆ, ದಿನಭತ್ಯೆ, ಸಂಭಾವನೆ ಪಾವತಿಯ ಕ್ಲೇಮ್ ಮಾಡುತ್ತಿರುವ ಕಿ.ಮೀ. ದೂರಕ್ಕೆ ಸಂಬಂಧಿಸಿದಂತೆ ನಿಗದಿತ ದೂರದ ಬಗ್ಗೆ ವಾಸ್ತವಾಂಶದ ಬಗ್ಗೆ ತಿಳಿಯಲು ಸಾಧ್ಯವಾಗಿಲ್ಲ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ತಿಳಿಸಿದ್ದಾರೆ.
‘ಕೆಲವು ಮೌಲ್ಯಮಾಪಕ ವೇತನ ಪ್ರಮಾಣ ಪತ್ರ ಮತ್ತು ಬಿಡುಗಡೆ ಆದೇಶದ ಪತ್ರ ಇರುವುದಿಲ್ಲ. ಇದರಿಂದ ಅವರ ಪ್ರಯಾಣ ಭತ್ಯೆ ನೀಡುವ ವರ್ಗದ ಬಗ್ಗೆ ತಿಳಿಯಲು ಸಾಧ್ಯವಾಗಿರುವುದಿಲ್ಲ. ಕೆಲವೊಂದು ಬಿಲ್‌ಗಳಲ್ಲಿ ಪ್ರವಾಸ ತಂಗುವಿಕೆಯ ದಿನಾಂಕ ಮತ್ತು ವೇಳೆಯನ್ನು ಸವಿವರವಾಗಿ ನಮೂದಿಸಿಲ್ಲ. ಹೀಗಾಗಿ ವಾಸ್ತವವಾಗಿ ಇವರಿಗೆ ನೀಡಬೇಕಿರುವ ದಿನಭತ್ಯೆ, ಪ್ರವಾಸ ಭತ್ಯೆಗಳ ಲೆಕ್ಕಾಚಾರ ಮಾಡಲು ಸಾಧ್ಯವಾಗಿಲ್ಲ,’ ಎಂದು ಲೆಕ್ಕಪರಿಶೋಧಕರು ಅಭಿಪ್ರಾಯಿಸಿದ್ದಾರೆ.
ಇನ್ನು ಹಲವು ಬಿಲ್‌ಗಳಲ್ಲಿ ಮೌಲ್ಯಮಾಪಕರು ಯಾವ ಶಾಲೆಯಿಂದ ಹಾಗೂ ಯಾವ ಸ್ಥಳದಿಂದ ಆಗಮಿಸಿದ್ದಾರೆ ಎಂಬುದಕ್ಕೆ ಯಾವುದೇ ದೃಢೀಕರಣವಿರುವುದಿಲ್ಲ. ಇದರಿಂದ ಯಾವ ಆಧಾರದ ಮೇಲೆ ಮೌಲ್ಯಮಾಪಕರಿಗೆ ಸ್ಥಳೀಯ ಭತ್ಯೆ ನೀಡಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಅಂಶವು ವರದಿಯಲ್ಲಿದೆ.